ಭಾನುವಾರ, ಆಗಸ್ಟ್ 18, 2019
22 °C
ಸರಗಳ್ಳರ ಕೈ ಚಳಕ, ಮಹಿಳೆಯರಲ್ಲಿ ಆತಂಕ

7 ತಿಂಗಳ ಅಂತರದಲ್ಲಿ 45 ಸರ ಕಳವು

Published:
Updated:

ತುಮಕೂರು: ನಗರ ಹಾಗೂ ಜಿಲ್ಲೆಯಲ್ಲಿ ಸರಗಳ್ಳರ ಕಾಟ ಹೆಚ್ಚಾಗಿದೆ. ಜನನಿಬಿಡ ಪ್ರದೇಶಗಳಲ್ಲಿ ಹಾಡಹಗಲೇ ಸರಗಳ್ಳರು ಕೈಚಳಕ ತೋರುತ್ತಿದ್ದು, ಮಹಿಳೆಯರು ಉಸಿರು ಬಿಗಿ ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.2012ರಲ್ಲಿ 29 ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷದ ಜನವರಿಯಿಂದ ಜುಲೈವರೆಗೆ 45 ಕಡೆಗಳಲ್ಲಿ ಸರ ಕಳವು ನಡೆದಿದೆ. ಅಂದರೆ ತಿಂಗಳಿಗೆ 6ಕ್ಕೂ ಹೆಚ್ಚು ಕಡೆಗಳಲ್ಲಿ ಕಳವು ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷವೇ ಸರಗಳ್ಳತನ ಪ್ರಕರಣಗಳು ಹೆಚ್ಚಿರುವುದು ಅಂಕಿಅಂಶಗಳಿಂದ ತಿಳಿಯುತ್ತದೆ. ಪೊಲೀಸ್ ಬಿಗಿಭದ್ರತೆಯ ನಡುವೆಯೂ ಸರಗಳ್ಳತನ ಸರಾಗವಾಗಿ ನಡೆದಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ. ಪಾರ್ಕ್, ರಸ್ತೆಗೆ ಸೀಮಿತವಾಗಿದ್ದ ಸರಗಳ್ಳತನ ಈಗ ಮನೆ ಬಾಗಿಲವರೆಗೂ ಬಂದಿದೆ.ವಿಳಾಸ, ನೀರು ಕೆಳುವ ನೆಪದಲ್ಲಿ ಮಹಿಳೆಯರನ್ನು ಯಾಮಾರಿಸಿ ಸರ ಕಸಿಯುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ನಗರದ ಹೊಸ ಬಡಾವಣೆ ವ್ಯಾಪ್ತಿ ಒಂದರಲ್ಲೇ ಅತಿ ಹೆಚ್ಚು ಸರಗಳ್ಳತನ ನಡೆದಿದೆ. ಈ ಠಾಣೆ ವ್ಯಾಪ್ತಿಯಲ್ಲಿ 2012ರಲ್ಲಿ 4 ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷ 13 ಪ್ರಕರಣಗಳು ವರದಿಯಾಗಿವೆ. ಹೊಸ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ 69ಕ್ಕೂ ಹೆಚ್ಚು ಬಡಾವಣೆಗಳಿದ್ದು, ಕಳ್ಳತನ ನಿಯಂತ್ರಣ ಪೊಲೀಸರಿಗೆ ತ್ರಾಸದಾಯಕವಾಗಿದೆ.ಎಲ್ಲೆಲ್ಲಿ ಎಷ್ಟು ಪ್ರಕರಣ: ಕಳೆದ ಜವರಿಯಿಂದ ಈಚೆಗೆ ಜಿಲ್ಲೆಯಾದ್ಯಂತ 45 ಪ್ರಕರಣಗಳು ದಾಖಲಾಗಿವೆ. ತುಮಕೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 3, ನಗರ ಠಾಣೆ 4, ಕ್ಯಾತ್ಸಂದ್ರ 4, ಹೊಸಬಡಾವಣೆ 14, ಚಿಕ್ಕನಾಯಕನಹಳ್ಳಿ 3, ಹೆಬ್ಬೂರು 1, ತಿಲಕ್‌ಪಾರ್ಕ್ 2, ಗುಬ್ಬಿ 2, ಚೇಳೂರು 1, ತಿಪಟೂರು ನಗರ 2, ಗ್ರಾಮಾಂತರ 2, ಕೆ.ಜಿ. ಹಳ್ಳಿ 1, ಕುಣಿಗಲ್ 2, ಮಿಡಿಗೇಶಿ, ತಾವರೇಕೆರೆ, ಶಿರಾ ನಗರ ಠಾಣೆಯಲ್ಲಿ ತಲಾ 1 ಪ್ರಕರಣ ದಾಖಲಾಗಿದೆ.ಹೆಚ್ಚುವರಿ 40 ಸಿಬ್ಬಂದಿ ಬಳಕೆ: ನಗರದಲ್ಲಿ ಸರಗಳ್ಳರಿಗೆ ಕಡಿವಾಣ ಹಾಕಲು ಜಿಲ್ಲೆಯ ವಿವಿಧೆಡೆ 40 ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಜನನಿಬಿಡ ಪ್ರದೇಶಗಳಲ್ಲಿ ನಾಕಾಬಂದಿ ಹಾಕಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್‌ಗುಪ್ತ ತಿಳಿಸಿದರು.ತುಮಕೂರು ನಗರದಲ್ಲಿ ಹೆದ್ದಾರಿ ಹಾದುಹೋಗಿದ್ದು, ಸಂಪರ್ಕ ರಸ್ತೆಗಳು ಹೆಚ್ಚಾಗಿರುವುದರಿಂದ ಸರಗಳ್ಳರು ಸುಲಭವಾಗಿ ಪರಾರಿಯಾಗುತ್ತಿದ್ದಾರೆ. ಸರ ಕಳೆದುಕೊಂಡವರು ಹಾಗೂ ಸಾರ್ವಜನಿಕರಿಂದ ಸರಿಯಾದ ಸಹಕಾರ ಸಿಗದೆ ಆರೋಪಿಗಳ ಪತ್ತೆ ವಿಳಂಬವಾಗಿದೆ ಎಂದರು.ಜಿಲ್ಲಾ ಪೊಲೀಸ್ ವ್ಯವಸ್ಥೆ ಬಿಗಿಗೊಳಿಸಲು ಇನ್ನಷ್ಟು ಪೊಲೀಸ್ ಠಾಣೆಗಳ ಸ್ಥಾಪನೆ ಹಾಗೂ ಸಿಬ್ಬಂದಿಯ ನೇಮಕಾತಿಯ ಅವಶ್ಯಕತೆ ಇದೆ. ಸರಗಳ್ಳರ ಬಗ್ಗೆ ಪ್ರಮುಖ ರಸ್ತೆಗಳಲ್ಲಿ ಜನಜಾಗೃತಿ ಮೂಡಿಸುವ ಫಲಕಗಳನ್ನು ಹಾಕಲಾಗಿದೆ ಎಂದು ತಿಳಿಸಿದರು.

ಸಿಬ್ಬಂದಿ ಕೊರತೆ: ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿಂದಾಗಿ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವುದು ವಿಳಂಬವಾಗುತ್ತಿದೆ.ಶರವೇಗದಲ್ಲಿ ಬೆಳೆಯುತ್ತಿರುವ ತುಮಕೂರು ನಗರದಲ್ಲಿ ಸದ್ಯ 250 ಮಂದಿ ಪೊಲೀಸ್ ಸಿಬ್ಬಂದಿ ಇದ್ದು, ಇವರಲ್ಲಿ 40ಕ್ಕೂ ಹೆಚ್ಚು ಮಂದಿ ಸಂಚಾರ ಪೊಲೀಸರಾಗಿದ್ದಾರೆ. ಉಳಿದ ಸಿಬ್ಬಂದಿಯನ್ನು ಠಾಣಾವಾರು ಹಂಚಿಕೆ ಮಾಡಲಾಗಿದೆ. ಆದರೆ ಒಂದೊಂದು ಠಾಣೆ ವ್ಯಾಪ್ತಿಯಲ್ಲಿ ಹೆಚ್ಚು ಬಡಾವಣೆಗಳು ಕೇಂದ್ರೀಕೃತವಾಗಿರುವುದರಿಂದ ಅಪರಾಧಗಳ ನಿಯಂತ್ರಣ ಕಷ್ಟವಾಗಿದೆ ಎನ್ನುತ್ತವೆ ಪೊಲೀಸ್ ಮೂಲಗಳು.ಪೊಲೀಸ್ ಕಾಯ್ದೆಯ ನಿಯಮದಂತೆ ಪ್ರತಿ ಲಕ್ಷ ಜನರಿಗೆ 150 ಪೊಲೀಸರು ಇರಬೇಕು. ಆದರೆ ನಗರದ ಜನಸಂಖ್ಯೆ 3 ಲಕ್ಷ ದಾಟಿದ್ದರೂ ನಮ್ಮಲ್ಲಿ 250 ಮಂದಿ ಪೊಲೀಸರಿದ್ದಾರೆ. ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

Post Comments (+)