7 ಮಂದಿ ಸೆರೆ, ಒಬ್ಬನಿಗೆ ಗುಂಡು

7

7 ಮಂದಿ ಸೆರೆ, ಒಬ್ಬನಿಗೆ ಗುಂಡು

Published:
Updated:

ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಬೆಂಗಳೂರು: ನಗರದ ಜ್ಞಾನಭಾರತಿ ಬಳಿ ನೇಪಾಳ ಮೂಲದ ಕಾನೂನು ವಿದ್ಯಾರ್ಥಿನಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ಭೇದಿಸಿರುವ ನಗರದ ಪಶ್ಚಿಮ ವಿಭಾಗದ ಪೊಲೀಸರು, ಒಟ್ಟು ಏಳು ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ ರಾಮ ಎಂಬಾತ ಶನಿವಾರ ಸಂಜೆ ಪೊಲೀಸ್ ಗುಂಡೇಟಿನಲ್ಲಿ ಗಾಯಗೊಂಡಿದ್ದಾನೆ.ರಾಮನಗರ ಜಿಲ್ಲೆ ಕೈಲಂಚ ಹೋಬಳಿಯ ಮೆಟಾರೆದೊಡ್ಡಿ ಗ್ರಾಮದ ಮಲ್ಲೇಶ್ (20), ಮದ್ದೂರ (20), ಶಿವಣ್ಣ (20), ಈರಯ್ಯ ಉರುಫ್ ಈರ (20), ಎಲಿಯಯ್ಯ ಅಲಿಯಾಸ್ ಕುಮಾರ (23), ರಾಮ (21) ಮತ್ತು ಮೈಸೂರು ಜಿಲ್ಲೆಯ ದೊಡ್ಡಈರಯ್ಯ (19) ಬಂಧಿತರು.`ಕಾಡಿನಲ್ಲಿ ಸೌದೆ ಹಾಗೂ ಶ್ರೀಗಂಧ ಮರಗಳನ್ನು ಕಡಿದು ಮಾರಾಟ ಮಾಡುವುದನ್ನೇ ಆರೋಪಿಗಳು ವೃತ್ತಿ ಮಾಡಿಕೊಂಡಿದ್ದರು. ಮತ್ತೊಬ್ಬ ಆರೋಪಿ ರಾಜ ಎಂಬಾತ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ ಮೊಬೈಲ್ ಮತ್ತು ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾಗಿ ಬಂಧಿತರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಶೀಘ್ರವಾಗಿ ಪ್ರಕರಣ ಭೇದಿಸಿರುವ ಸಿಬ್ಬಂದಿಗೆ ಒಂದು ಲಕ್ಷ ನಗದು ಬಹುಮಾನ ನೀಡಲಾಗುತ್ತದೆ~ ಎಂದರು.ಪತ್ತೆಯಾಗಿದ್ದು ಹೀಗೆ:
ದೂರು ಕೊಟ್ಟಿದ್ದ ಯುವತಿ ಪೊಲೀಸರಿಗೆ ಆರೋಪಿಗಳ ಮುಖಚರ್ಯೆ ಮತ್ತು ಲಕ್ಷಣಗಳ ಮಾಹಿತಿ ನೀಡಿದ್ದಳು.  `ಆರೋಪಿಗಳು ಕುಡುಗೋಲು, ಗರಗಸ, ಸುತ್ತಿಗೆಯಂತಹ ವಸ್ತುಗಳನ್ನು ಇಟ್ಟುಕೊಂಡಿದ್ದರು. ಅವರಲ್ಲಿ ಒಬ್ಬನ ಹಲ್ಲುಗಳು ಉಬ್ಬಾಗಿದ್ದವು, ಮತ್ತೊಬ್ಬ ಹರಿದ ಬಟ್ಟೆ ಹಾಕಿಕೊಂಡಿದ್ದ.ಇನ್ನೊಬ್ಬನ ತಲೆಗೂದಲು ಗುಂಗುರಾಗಿದ್ದವು~ ಎಂದು ವಿವರ ನೀಡಿದ್ದಳು. ಈ ಮಾಹಿತಿ ಆಧರಿಸಿ ರೇಖಾಚಿತ್ರ ಸಿದ್ಧಪಡಿಸಲಾಯಿತು. ಅಲ್ಲದೇ, ಈ ಹಿಂದೆ ಇದೇ ರೀತಿಯ ಅಪರಾಧ ಕೃತ್ಯಗಳನ್ನು ಎಸಗಿದ್ದ 600ಕ್ಕೂ ಹೆಚ್ಚು ಆರೋಪಿಗಳ ಭಾವಚಿತ್ರಗಳನ್ನು ಯುವತಿಗೆ ತೋರಿಸಲಾಯಿತು.`ಯುವತಿ ನೀಡಿದ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಿದಾಗ ಶ್ರೀಗಂಧ ಮರ ಕಳವು ಮಾಡುವ ದುಷ್ಕರ್ಮಿಗಳ ಗುಂಪು ಈ ಕೃತ್ಯ ಎಸಗಿರಬಹುದೆಂಬ ಶಂಕೆ ಮೂಡಿತು. ರಾಮನಗರ ಜಿಲ್ಲೆ ದಾಸೇಗೌಡನದೊಡ್ಡಿ ಗ್ರಾಮದ ಬಳಿಯ ಇರುಳಿಗರ ಕಾಲೊನಿಯಲ್ಲಿನ ಬುಡಕಟ್ಟು ಜನಾಂಗದವರು ಕಾಡಿನಿಂದ ಗಂಧದ ಮರಗಳ್ಳತನ ಮಾಡುವ ಬಗ್ಗೆ ಮಾಹಿತಿ ಇತ್ತು. ಈ ಸುಳಿವು ಆಧರಿಸಿ ರಾಮನಗರ ತಹಶೀಲ್ದಾರ್ ಕಚೇರಿಗೆ ತೆರಳಿ, ಇರುಳಿಗರ ಕಾಲೊನಿಯ ಮತದಾರರ ಗುರುತಿನ ಚೀಟಿಯ ನಕಲು ಪ್ರತಿಗಳನ್ನು ಸಂಗ್ರಹಿಸಲಾಯಿತು. ನಂತರ ಅದನ್ನು ಯುವತಿಗೆ ತೋರಿಸಿದಾಗ ಆಕೆ, ಆರೋಪಿ ಶಿವಣ್ಣನನ್ನು ಗುರುತು ಹಿಡಿದಳು. ಆತನನ್ನು ವಶಕ್ಕೆ ತೆಗೆದುಕೊಂಡು ಇತರೆ ಆರೋಪಿಗಳನ್ನು ಬಂಧಿಸಲಾಯಿತು~ ಎಂದು ತನಿಖಾ ತಂಡದಲ್ಲಿದ್ದ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.`ಅತ್ಯಾಚಾರ ಘಟನೆ ನಡೆದ ದಿನ (ಅ.13) ಆರೋಪಿಗಳು ಗಂಧದ ಮರ ಕಡಿದು ಸಾಗಿಸುವ ಉದ್ದೇಶಕ್ಕಾಗಿ ರಾತ್ರಿ 8.30ರ ಸುಮಾರಿಗೆ ಜ್ಞಾನಭಾರತಿ ಆವರಣಕ್ಕೆ ಬಂದಿದ್ದರು. ಅವರು ಗಂಧದ ಮರಗಳನ್ನು ಹುಡುಕುತ್ತಾ ಆವರಣದಲ್ಲಿ ಅಡ್ಡಾಡುತ್ತಿದ್ದಾಗ, ಯುವತಿ ಮತ್ತು ಆಕೆಯ ಸ್ನೇಹಿತ ಕಣ್ಣಿಗೆ ಬಿದ್ದಿದ್ದರು. ಈ ವೇಳೆ ಆರೋಪಿಗಳು ಯುವತಿಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ, ಆಕೆಯನ್ನು ಸ್ವಲ್ಪ ದೂರ ಎಳೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದರು~ ಎಂದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ (ಪಶ್ಚಿಮ) ಪ್ರಣವ್ ಮೊಹಾಂತಿ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಬಿ.ಬಾಲರಾಜು ಮತ್ತು ಸಿಬ್ಬಂದಿ ಪ್ರಕರಣ ಭೇದಿಸಿದ್ದಾರೆ.

ಆರೋಪಿಗೆ ಗುಂಡೇಟು

ಪ್ರಕರಣದ ಏಳು ಮತ್ತು ಎಂಟನೇ ಆರೋಪಿಗಳಾದ ರಾಮ ಹಾಗೂ ರಾಜ, ಶನಿವಾರ ಸಂಜೆ ಆರು ಗಂಟೆ ಸುಮಾರಿಗೆ ಗಂಧದ ಮರ ಕಡಿಯಲು ಜ್ಞಾನಭಾರತಿ ಆವರಣಕ್ಕೆ ಬರುತ್ತಾರೆ ಎಂದು ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಅವರ ಬಂಧನಕ್ಕೆ ಏಳು ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಆವರಣದಲ್ಲಿರುವ ಸೂಕ್ಷ್ಮಜೀವವಿಜ್ಞಾನ ವಿಭಾಗದ ಬಳಿ ನಾಲ್ಕು ಮಂದಿ ಮರ ಕಡಿಯುತ್ತಿರುವುದನ್ನು ಸಿಬ್ಬಂದಿ ಪತ್ತೆ ಹಚ್ಚಿ ಶರಣಾಗುವಂತೆ ಸೂಚಿಸಿದರು. ಆರೋಪಿಗಳನ್ನು ಬಂಧಿಸಲು ಮುಂದಾದ ಕಾನ್‌ಸ್ಟೇಬಲ್ ರಾಮಚಂದ್ರಪ್ಪ ಅವರ ಮೇಲೆ ರಾಮ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ. ಈ ಸಂದರ್ಭದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಸತ್ಯನಾರಾಯಣ ಮತ್ತು ಮಾಲತೇಶ್ ಅವರು ರಾಮನ ಕಾಲಿಗೆ ಗುಂಡು ಹಾರಿಸಿದರು.ರಾಮನಿಗೆ ಗುಂಡೇಟು ಬಿದ್ದಿದ್ದನ್ನು ಕಂಡು ಗಾಬರಿಯಾದ ಇತರೆ ಆರೋಪಿಗಳು ಪರಾರಿಯಾದರು. ಗಾಯಾಳು ರಾಮನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾನ್‌ಸ್ಟೇಬಲ್ ರಾಮಚಂದ್ರಪ್ಪ ಅವರ ಎಡಗೈಗೆ ಗಾಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry