ಸೋಮವಾರ, ಅಕ್ಟೋಬರ್ 21, 2019
23 °C

7-8ರಂದು ಶ್ರೀನಿವಾಸ ಕಲ್ಯಾಣೋತ್ಸವ

Published:
Updated:

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನದ ಧಾರ್ಮಿಕ ಮಂಡಳಿಯು ಯಶಸ್ವಿನಿ ಚಾರಿಟಬಲ್ ಟ್ರಸ್ಟ್‌ನ ಸಹ ಯೋಗದಲ್ಲಿ ಇದೇ 7 ಹಾಗೂ 8ರಂದು ನಗರದ ಮಹಾಲಕ್ಷ್ಮಿ ಬಡಾವಣೆಯ ಕಮಲಮ್ಮನಗುಂಡಿ ಆಟದ ಮೈದಾನದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಂಡಿದೆ. ಕಲ್ಯಾಣೋತ್ಸವದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಇದೇ 5ರೊಳಗೆ ಹೆಸರು ನೋಂದಾಯಿಸಬಹುದು.ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಿರುಮಲ ತಿರುಪತಿ ದೇವಸ್ಥಾನದ ಧಾರ್ಮಿಕ ಮಂಡಳಿ ಸದಸ್ಯ ಡಾ.ಎ. ರಾಧಾಕೃಷ್ಣ ರಾಜು, `ತಿರುಮಲದಲ್ಲಿ ಕಲ್ಯಾಣೋತ್ಸವದಲ್ಲಿ ಪಾಲ್ಗೊಳ್ಳಬೇಕಾದರೆ ಸುಮಾರು ಒಂದು ವರ್ಷ ಕಾಯಬೇಕು. ಭಕ್ತರ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ ಮೂರನೇ ಬಾರಿಗೆ ಕಲ್ಯಾಣೋತ್ಸವ ಏರ್ಪಡಿಸಲಾಗಿದೆ.ತಿರುಮಲದಿಂದಲೇ ದೇವರ ಮೂರ್ತಿಗಳನ್ನು ತರಲಾಗುತ್ತಿದ್ದು, ಇದೇ 7ರಂದು ಮೂರ್ತಿಗಳು ನಗರ ತಲುಪಲಿವೆ. ಮೇಯರ್ ಪಿ. ಶಾರದಮ್ಮ ಹಾಗೂ ಇತರೆ ಗಣ್ಯರು ಮೂರ್ತಿಗಳ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ~ ಎಂದು ಹೇಳಿದರು.`ಉತ್ಸವಕ್ಕೆ ಸುಮಾರು 90 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಒಂದು ಲಕ್ಷ ಮಂದಿ ಭಕ್ತರಿಗೆ ಉಚಿತವಾಗಿ ಲಾಡು ಮತ್ತು ಪ್ರಸಾದ ವಿತರಿಸಲಾಗುವುದು. ಶಾಸಕ ಎಸ್.ಎನ್. ಕೃಷ್ಣಯ್ಯಶೆಟ್ಟಿ ಅವರು 50,000 ಲಾಡುಗಳನ್ನು ನೀಡುತ್ತಿದ್ದಾರೆ. ಸುಮಾರು 2,000 ದಂಪತಿಗೆ ಕಲ್ಯಾಣೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.ಕಲ್ಯಾಣೋತ್ಸವದಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿಲ್ಲ. ಈ ಸೇವೆ ಸಂಪೂರ್ಣ ಉಚಿತ. ಈವರೆಗೆ ಸುಮಾರು 1600 ದಂಪತಿ ಹೆಸರು ನೋಂದಣಿ ಮಾಡಿದ್ದಾರೆ~ ಎಂದರು.ಆಯೋಜಕರಾದ ಉಮಾಪತಿ ನಾಯ್ಡು, `ಕಲ್ಯಾಣೋತ್ಸವಕ್ಕೆ 40 ಅಡಿ ಉದ್ದ, 80 ಅಡಿ ಅಗಲದ ವೇದಿಕೆ ನಿರ್ಮಿಸಲಾಗುತ್ತಿದೆ. ವಿಶಾಲವಾದ ಸಭಾಂಗಣ ತಲೆಯೆತ್ತಲಿದೆ. ಕಲ್ಯಾಣೋತ್ಸವದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಇದೇ 5ರೊಳಗೆ ಹೆಸರು ನೋಂದಣಿ ಮಾಡಿಕೊಳ್ಳಬಹುದು~ ಎಂದು ಹೇಳಿದರು.ಯಶಸ್ವಿನಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಎಸ್.ಎ. ಚಿನ್ನೇಗೌಡ, `ದೇಶದ ಜನತೆಗೆ ಶಾಂತಿ- ನೆಮ್ಮದಿ ಸಿಗಲಿ ಎಂದು ಆಶಿಸಿ ಉತ್ಸವ ಆಯೋಜಿಸಲಾಗಿದೆ. ಕಲ್ಯಾಣೋತ್ಸವವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ~ ಎಂದರು.ತಿರುಮಲ ತಿರುಪತಿ ದೇವಸ್ಥಾನ ಧಾರ್ಮಿಕ ಮಂಡಳಿ ಸದಸ್ಯ ಶ್ರೀನಿವಾಸರಾವ್ ಕಸಬೆ ಉಪಸ್ಥಿತರಿದ್ದರು.

ಹೆಸರು ನೋಂದಣಿಗೆ ಸಂಪರ್ಕ ದೂರವಾಣಿ ಸಂಖ್ಯೆ- 39396969.

 

Post Comments (+)