70ರಲ್ಲೂ 20ರ ಉತ್ಸಾಹ

7

70ರಲ್ಲೂ 20ರ ಉತ್ಸಾಹ

Published:
Updated:
70ರಲ್ಲೂ 20ರ ಉತ್ಸಾಹ

ಹಲವು ಕಡೆಗಳಲ್ಲಿ ಭಾರಿ ಮಳೆ. ಆದರೆ ಕೆಲವೆಡೆ ಮಾತ್ರ ಮೂರ್ನಾಲ್ಕು ವರ್ಷಗಳಿಂದ ಮಳೆಯಿಲ್ಲ. ಅಂತರ್ಜಲ ಸಾವಿರ ಅಡಿ ದಾಟಿದೆ. ಎಷ್ಟೇ ಕೊಳವೆ ಬಾವಿಗಳನ್ನು ತೆಗೆಸಿದರೂ ಒಳ್ಳೇ ನೀರು ಸಿಗಲ್ಲ. ಸ್ವಲ್ಪ ಜಮೀನಿದೆ. ಕಷ್ಟಪಟ್ಟು ಏನಾದ್ರೂ ಬೆಳೆಯೋಣ ಅಂದ್ರೆ ಗುಣ ಮಟ್ಟದ ಬೀಜ ಸಿಗಲ್ಲ. ಸಮಯಕ್ಕೆ ಸರಿಯಾಗಿ ಗೊಬ್ಬರ ಸಿಗಲ್ಲ. ಮಾಹಿತಿ ಕೊರತೆ. ಸಾಲ ಮಾಡಿ ಬೆಳೆ ಬೆಳೆದರೂ ಸೂಕ್ತ ಬೆಲೆ ಸಿಗಲ್ಲ. ಇದರಿಂದಾಗಿ ಬದುಕಲು ಊರು ತೊರೆಯಬೇಕಾದ ದುಃಸ್ಥಿತಿ...ಇಂಥ ಪರಿಸ್ಥಿತಿಯ ನಡುವೆಯೇ ಊರಿನಲ್ಲೇ ಇದ್ದು, ಕೃಷಿಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದ್ದಾರೆ ತುಮಕೂರಿನಿಂದ 14 ಕಿ.ಮೀ ದೂರದಲ್ಲಿರುವ ದೊಮ್ಮನಕುಪ್ಪೆಯಲ್ಲಿನ ರೈತ ಮರಿಗಂಗಯ್ಯ. ಯುವಕರನ್ನೂ ನಾಚಿಸುವಂತಹ ಕೆಲಸ ಮಾಡಿ ಸದಾ ಹುರುಪಿನಲ್ಲಿ ಇರುವ ಮರಿಗಂಗಯ್ಯ ಅವರ ವಯಸ್ಸು ಸುಮಾರು 70. ‘ರೈತರು ಅಂದ್ರೆ ಯಾವಾಗಲೂ ವ್ಯವಸಾಯ ಮಾಡಬೇಕು. ಜೀವನವನ್ನು ಪ್ರೀತಿಸುವ ಹಾಗೆ ಕೃಷಿಯನ್ನೂ ಪ್ರೀತಿಸಬೇಕು, ಆರಾಧಿಸಬೇಕು. ದುಡಿಯುತ್ತಿದ್ದರೇನೇ ದೇವರು ಮೆಚ್ಚೋದು’ ಎನ್ನುತ್ತಾ ತಮ್ಮಷ್ಟಕ್ಕೆ ತಾವು ಕೃಷಿ ಕೆಲಸದಲ್ಲಿ ನಿರತರಾಗುತ್ತಾರೆ. ಮುಂಜಾನೆ ಐದಕ್ಕೆ ಆರಂಭವಾಗುವ ಇವರ ದಿನಚರಿ ರಾತ್ರಿ ಒಂಬತ್ತಾದರೂ ನಿರಂತರ. ಇದು ಒಂದು ದಿನದ ಕಾಯಕವಲ್ಲ. ಮಳೆಯಿರಲಿ, ಚಳಿಯಿರಲಿ, ನೆತ್ತಿ ಸುಡುವ ಕೆಂಡದಂಥ ಬಿಸಿಲಿರಲಿ, ಮರಿಗಂಗಯ್ಯ ಮಾತ್ರ ಸದಾ ತರಕಾರಿ ತೋಟದಲ್ಲಿ.ಎಂಟು ಎಕರೆ ಜಮೀನಿದೆ. ಮೂರು ಎಕರೆಯಲ್ಲಿ ತೆಂಗಿನ ಬೆಳೆಯಿದೆ. ಉಳಿದ ಐದು ಎಕರೆ ತರಕಾರಿ ಬೆಳೆಗೆ ಸೀಮಿತ. ಕೂಲಿ ಕಾರ್ಮಿಕರ ಅವಲಂಬನೆ ಕಡಿಮೆ. ಮುಯ್ಯಾಳು ಪದ್ಧತಿ ಉಳಿಸಿಕೊಂಡಿದ್ದಾರೆ. ಇವರ ಎಲ್ಲ ಕೆಲಸಕ್ಕೂ ಪತ್ನಿ ಸರೋಜಮ್ಮ ಅವರ ಸಾಥ್. ಹೆಚ್ಚಿನ ಕೆಲಸವಿದ್ದಾಗ ಸಮೀಪದ ಮತ್ತೊಂದು ತೋಟದಲ್ಲಿರುವ ಮಗ ಆನಂದನೂ ಕೈ ಜೋಡಿಸುತ್ತಾನೆ. ಮನೆ ಕೆಲಸ ಮುಗಿಸಿಕೊಂಡ ತಕ್ಷಣ ಪತಿ ಎಲ್ಲಿ ಕೆಲಸ ಮಾಡುತ್ತಿರುತ್ತಾರೆ ಅಲ್ಲಿಗೆ ತೆರಳುವ ಸರೋಜಮ್ಮನೂ ಕೆಲಸದಲ್ಲಿ ತಲ್ಲೆನ.ವರ್ಷ ಪೂರ್ತಿ ದುಡಿಮೆ

ವರ್ಷದ ಎಲ್ಲ ದಿನಗಳಲ್ಲೂ ಬಿಡುವಿಲ್ಲದ ದುಡಿಮೆ. ಒಂದಲ್ಲ ಒಂದು ತರಕಾರಿ ಬೆಳೆ ಇವರ ಜಮೀನಿನಲ್ಲಿರುತ್ತದೆ. ಬೆಲೆ ಏರಿಳಿತ, ಗೊಬ್ಬರಕ್ಕಾಗಿ ತಪ್ಪದ ಅಲೆದಾಟ, ಸಿಗದ ಗುಣಮಟ್ಟದ ಬೀಜ... ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಮರಿಗಂಗಯ್ಯ ದುಡಿಮೆಗಷ್ಟೇ ಒತ್ತು ನೀಡುತ್ತಾರೆ. ಶ್ರಮ ನನ್ನದು. ಫಲಾಫಲ ದೇವರಿಗೆ ಬಿಟ್ಟಿದ್ದು. ಎಲ್ಲ ಬೆಳೆಯಲ್ಲೂ ಲಾಭ-ನಷ್ಟ ಇದ್ದಿದ್ದೇ. ಅದಕ್ಕೆ ಅಂಜಿ ಕಾಯಕ ನಿಲ್ಲಿಸಲು ಆಗುತ್ತಾ ಎಂಬ ಪ್ರಶ್ನೆ ಇವರದ್ದು.ಟೊಮೆಟೊ, ಹೀರೆಕಾಯಿ, ಹುರುಳಿಕಾಯಿ, ಬೆಂಡೆಕಾಯಿ, ಬದನೆಕಾಯಿ, ಜವಳಿ ಕಾಯಿ, ತೊಗರಿ, ಅಲಸಂದೆ, ಅವರೆಕಾಯಿ ಸೇರಿದಂತೆ ವಿಧ ವಿಧ ತರಕಾರಿಗಳನ್ನು ಆಯಾ ಕಾಲಕ್ಕೆ ತಕ್ಕಂತೆ ಬೆಳೆಯುವುದು ಇವರಿಗೆ ರೂಢಿಗತ. ತೋಟದ ಸುತ್ತ ಹರಳು, ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ. ಗಂಡ-ಹೆಂಡತಿ ಇಬ್ಬರೇ ಊರಿನಿಂದ ಮೂರು ಕಿಲೋ ಮೀಟರ್ ದೂರವಿರುವ ತೋಟದಲ್ಲೇ ವಾಸವಾಗಿದ್ದು, ಕೃಷಿಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ.ಮೂರು ಎಕರೆಯಲ್ಲಿ ತೆಂಗು ಬೆಳೆ ನಡುವೆಯೂ ನೇರಳೆ, ಸೀಬೆ, ನುಗ್ಗೆ ಮರಗಳ ಸಾಲೇ ಇದೆ. ಇನ್ನೂ ಮನೆ ಅಂಗಳದಲ್ಲಿ ಕನಕಾಂಬರ, ದಾಸವಾಳ, ಮಲ್ಲಿಗೆ, ದುಂಡುಮಲ್ಲಿಗೆ, ಗುಲಾಬಿ ಸೇರಿದಂತೆ ಪರಿಮಳ ಬೀರುವ ಹೂವಿನ ಅಂಗಳವಿದೆ. ಸಮಯಕ್ಕೆ ಸರಿಯಾಗಿ ಗೊಬ್ಬರ, ಗುಣಮಟ್ಟದ ಬೀಜ ಸಿಕ್ಕರೆ ಬಂಪರ್ ಬೆಳೆಗೆ ಮೋಸವಿಲ್ಲ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕರೆ ಮನಸ್ಸಿಗೆ ತೃಪ್ತಿ ಸಿಗುತ್ತದೆ ಎನ್ನುತ್ತಾರೆ ಮರಿಗಂಗಯ್ಯ. ಸಂಪರ್ಕ ಸಂಖ್ಯೆ-9972321568. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry