715 ಕಲಾವಿದರಿಗೆ ಜಾನಪದ ಪ್ರಶಸ್ತಿ: ಕೆಂಪಯ್ಯ

7

715 ಕಲಾವಿದರಿಗೆ ಜಾನಪದ ಪ್ರಶಸ್ತಿ: ಕೆಂಪಯ್ಯ

Published:
Updated:

ಮಂಡ್ಯ: ಅಕಾಡೆಮಿಯು ಇಲ್ಲಿಯವರೆಗೆ 715 ಕಲಾವಿದರಿಗೆ ಹಾಗೂ 100 ಕ್ಷೇತ್ರ ತಜ್ಞರಿಗೆ ಜಾನಪದ ಪ್ರಶಸ್ತಿ ನೀಡಿದೆ. ಅತ್ಯುತ್ತಮ 76 ಜಾನಪದ ಗ್ರಂಥಗಳಿಗೆ ಪುಸ್ತಕ ಬಹುಮಾನ ನೀಡಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಬಾನಂದೂರು ಕೆಂಪಯ್ಯ ತಿಳಿಸಿದರು.ಕಲಾವಿದರಿಗೆ ಅನಾರೋಗ್ಯ ಮತ್ತು ಅಪಘಾತವಾದಾಗ ಅನುಕೂಲವಾಗಲೆಂದು ಹೊಸದಾಗಿ ಕಲಾವಿದರ ಕ್ಷೇಮ ನಿಧಿ ಯೋಜನೆ ಆರಂಭಿಸಲಾಗಿದೆ. ಸರ್ಕಾರವು ಇದಕ್ಕಾಗಿ ಈಗಾಗಲೇ 20 ಲಕ್ಷ ರೂ ಬಿಡುಗಡೆ ಮಾಡಿದೆ. ನಿಧಿಯ ಮೊತ್ತವನ್ನು ಮುಂದಿನ ದಿನಗಳಲ್ಲಿ ಒಂದು ಕೋಟಿ ರೂಪಾಯಿಗೆ ಏರಿಸುವ ಆಶಯ ಇದೆ. ಇದರಿಂದ ತೊಂದರೆಯಲ್ಲಿರುವ ಕಲಾವಿದರಿಗೆ ಅನುಕೂಲವಾಗಲಿದೆ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.ಜಾನಪದದಲ್ಲಿ ಅಧ್ಯಯನ ಮಾಡುವಂತ ಐವರು ಅಭ್ಯರ್ಥಿಗಳಿಗೆ ಅಕಾಡೆಮಿ ವತಿಯಿಂದ ಈ ವರ್ಷ ಫೆಲೋಶಿಪ್ ನೀಡಲಾಗುವುದು. ಅಧ್ಯಯನ ಪೂರ್ಣಗೊಂಡ ನಂತರ, ಅವರ ಅಧ್ಯಯನ ಕುರಿತು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು ಎಂದರು.ಶತಮಾನೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಂ.ಎಸ್. ಶ್ರೀಕಂಠಕೇಶಗೌಡ ಹಾಗೂ ಅರ್ಚಕ ರಂಗಸ್ವಾಮಿ ಭಟ್ ಅವರನ್ನೂ ಗೌರವಿಸಲಾಗುವುದು ಎಂದು ಹೇಳಿದರು. ರಾಜ್ಯದ ಮೂಲೆ, ಮೂಲೆಯಲ್ಲಿ ವೈವಿಧ್ಯಮಯ ನೂರಾರು ಜನಪದ ಕಲೆಗಳಿದ್ದು, ಈ ಜನಪದ ಕಲೆಗಳಲ್ಲಿಬಳಕೆಯಾಗುವ ವಿಭಿನ್ನ ಚರ್ಮವಾದ್ಯಗಳು ಜಾಗತೀಕರಣ ಭರಾಟೆಯಲ್ಲಿ ನಶಿಸಿ ಹೋಗುತ್ತಿದ್ದು, ಇವುಗಳಿಗೆ ಪುನರುಜ್ಜೀವನ ನೀಡುವ ಅವಶ್ಯ ಇದೆ.ಜನಪದ ವಾದ್ಯಗಳ ಪರಿಚಯ, ತಯಾರಿಕೆ ಹಾಗೂ ಚರ್ಮವಾದ್ಯಗಳ ಪ್ರಾತ್ಯಕ್ಷಿಕೆಯನ್ನು ಶೀಘ್ರದಲ್ಲಿಯೇ ಏರ್ಪಡಿಸಲಾಗುವುದು ಎಂದರು. ಅಕಾಡೆಮಿಯ ಬಿ.ಎನ್.ಪರಡ್ಡಿ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry