ಮಂಗಳವಾರ, ನವೆಂಬರ್ 19, 2019
29 °C

72ರ ಹರೆಯದ ಮೋರೆ ಅಖಾಡಕ್ಕೆ

Published:
Updated:

ಧಾರವಾಡ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟು ತಿಂಗಳುಗಳಿಂದ `ಪೂರಕ ಸಿದ್ಧತೆ' ನಡೆಸಿದ್ದ ನಾಗರಾಜ ಛಬ್ಬಿ ಅವರ ಪ್ರಯತ್ನದ ಹೊರತಾಗಿಯೂ ಟಿಕೆಟ್ ಗಿಟ್ಟಿಸಿಕೊಂಡು ಮಾಜಿ ಸಚಿವ, 72ರ ಹರೆಯದ ಹಿರಿಯ ರಾಜಕಾರಣಿ ಎಸ್.ಆರ್.ಮೋರೆ ಮಂಗಳವಾರ ಇಲ್ಲಿಯ ತಾ.ಪಂ. ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.ಮಧ್ಯಾಹ್ನ ಕಲಾಭವನ ಮೈದಾನದಿಂದ ಭಾರಿ ಮೆರವಣಿಗೆ ಮೂಲಕ ಆಗಮಿಸಿದ ಮೋರೆ ಅವರೊಂದಿಗೆ ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕ ಹಾಗೂ ಧಾರವಾಡ ಕ್ಷೇತ್ರದ ಅಭ್ಯರ್ಥಿ ವಿನಯ ಕುಲಕರ್ಣಿ, ಪಾಲಿಕೆ ಸದಸ್ಯ ರಘು ಲಕ್ಕಣ್ಣವರ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಸದಸ್ಯರು ಜೊತೆಯಲ್ಲಿದ್ದು ಒಗ್ಗಟ್ಟು ಪ್ರದರ್ಶಿಸಿದರು.ಎಲ್ಲರೂ ನಾಮಪತ್ರ ಸಲ್ಲಿಸಲು ಹಾಜರಿರಬೇಕು ಎಂದು ಹಂಬಲಿಸಿದ ಮುಖಂಡರನ್ನು ಬ್ಯಾರಿಕೇಡ್ ಕಟ್ಟಿ ನಿಯಂತ್ರಿಸಲು ಪೊಲೀಸರು ಹೆಣಗಾಡಬೇಕಾಯಿತು. ಒಂದು ಹಂತದಲ್ಲಿ ನೂಕು ನುಗ್ಗಲು ಉಂಟಾದಾಗ ವಯೋವೃದ್ಧ ಮೋರೆ ಅವರೂ ಸಿಲುಕಿ ಕೊಂಡಿದ್ದರು. ಪೊಲೀಸರು ಅವರನ್ನು ಈಚೆಗೆ ಕರೆತಂದರು.ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಮೋರೆ, `ರಾಷ್ಟ್ರೀಯ ಪಕ್ಷ ಎಂದ ಮೇಲೆ ಹಲವು ಜನ ಆಕಾಂಕ್ಷಿಗಳ ಇರುವುದು ಸಹಜ. ತಂತ್ರಗಾರಿಕೆ ಹಾಗೂ ಸೋಷಿಯಲ್ ಎಂಜಿನಿಯರಿಂಗ್ ಮಾಡಲು ಸಮಯ ಹಿಡಿದಿದ್ದರಿಂದ ಟಿಕೆಟ್ ಘೋಷಣೆ ತಡವಾಗಿದೆ.ನನಗೆ ವಯಸ್ಸಾಗಿದೆ ಎಂದು ಹಲವರು ಟೀಕಿಸಿದ್ದಾರೆ. ವಯಸ್ಸು ದೇಹಕ್ಕೆ ಆಗಿದೆಯೇ ಹೊರತು ಮನಸ್ಸಿಗಲ್ಲ. ಪಕ್ಕದ ಕ್ಷೇತ್ರದಲ್ಲೇ ಯುವಕ ವಿನಯ ಕುಲಕರ್ಣಿ ಇದ್ದಾರೆ. ಅವರೊಂದಿಗೆ ಕೂಡಿಕೊಂಡು ಅಭಿವೃದ್ಧಿ ಕೆಲಸ ಮಾಡಿಸುತ್ತೇವೆ' ಎಂದರು.`ನನ್ನ ಎದುರಾಳಿ ಇನ್ನೊಂದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿ. ಈ ಬಾರಿ ಪಕ್ಷಕ್ಕೆ ಗೆಲುವು ಖಚಿತವಾಗಲಿದೆ. ಎಷ್ಟು ಮತಗಳ ಅಂತರ ಎಂಬುದನ್ನು ಈಗಲೇ ಹೇಳಲಾಗದು. ನಾಮಪತ್ರ ಸಲ್ಲಿಕೆ ಮಾಡುವ ಮಾಹಿತಿ ತಿಳಿದೇ ಈಗ ಸಾವಿರಾರು ಮಂದಿ ಬಂದಿದ್ದಾರೆ. ನನಗೆ ಬೆಂಬಲ ಇರುವುದು ಇದರಿಂದ ಸಾಬೀತಾಗುತ್ತದೆ' ಎಂದು ಹೇಳಿದರು.

ಪ್ರತಿಕ್ರಿಯಿಸಿ (+)