7.28 ಲಕ್ಷ ಕುಟುಂಬಕ್ಕೆ ರೂ.1ಕ್ಕೆ ಅಕ್ಕಿ

ಗುರುವಾರ , ಜೂಲೈ 18, 2019
24 °C

7.28 ಲಕ್ಷ ಕುಟುಂಬಕ್ಕೆ ರೂ.1ಕ್ಕೆ ಅಕ್ಕಿ

Published:
Updated:

ಬೆಳಗಾವಿ: ಬಡತನ ರೇಖೆಗಿಂತಲೂ ಕೆಳಗಿನವರಿಗೆ 1 ರೂಪಾಯಿ ಬೆಲೆಯಲ್ಲಿ ಅಕ್ಕಿಯನ್ನು ವಿತರಿಸುವ ಪಡಿತರ ಯೋಜನೆಗೆ ಜುಲೈ 10ರಂದು ಚಾಲನೆ ದೊರೆಯಲಿದ್ದು, ಜಿಲ್ಲೆಯಲ್ಲಿ ಸುಮಾರು 7.28 ಲಕ್ಷ ಕುಟುಂಬಗಳು ಇದರ ಸೌಲಭ್ಯವನ್ನು ಪಡೆಯಲಿವೆ.ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನದಂದೇ ಸಿದ್ದರಾಮಯ್ಯ ಅವರು ಬಿಪಿಎಲ್ ಕುಟುಂಬಗಳಿಗೆ ಜೂನ್ ತಿಂಗಳಿನಲ್ಲಿ ಪ್ರತಿ ಕೆ.ಜಿ.ಗೆ 1 ರೂಪಾಯಿಯಂತೆ ಒಟ್ಟು 30 ಕೆ.ಜಿ. ಅಕ್ಕಿಯನ್ನು ನೀಡುವುದಾಗಿ ಘೋಷಿಸಿದ್ದರು. ಆದರೆ, ಅಕ್ಕಿಯ ಕೊರತೆ ಎದುರಿಸಿದ್ದರಿಂದ ಜುಲೈ ತಿಂಗಳಿನಿಂದ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಯಿತು.ಆರಂಭದಲ್ಲಿ ಒಂದು ಕುಟುಂಬಕ್ಕೆ ಒಟ್ಟು 30 ಕೆ.ಜಿ. ಅಕ್ಕಿ ನೀಡಲಾಗುವುದು ಎಂದು ಸರ್ಕಾರ ಘೋಷಿಸಿತ್ತು. ಆದರೆ, ಬಳಿಕ ಯೂನಿಟ್ ಆಧಾರದಲ್ಲಿ ಒಬ್ಬ ಸದಸ್ಯನಿಗೆ 10 ಕೆ.ಜಿ. ಅಕ್ಕಿ, ಇಬ್ಬರು ಸದಸ್ಯರಿದ್ದರೆ 20 ಕೆ.ಜಿ. ಮೂವರು ಸದಸ್ಯರು ಹಾಗೂ ಅದಕ್ಕಿಂತ ಹೆಚ್ಚಿಗೆ ಇದ್ದರೆ ಗರಿಷ್ಠ 30 ಕೆ.ಜಿ. ಅಕ್ಕಿಯನ್ನು ನೀಡುವುದಾಗಿ ಹೇಳಿತು. ಹೀಗಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳಲ್ಲಿ ಯೋಜನೆ ಬಗ್ಗೆ ಗೊಂದಲ ಮೂಡಿತ್ತು.ಆದರೆ, ಮಂಗಳವಾರವಷ್ಟೇ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಆದೇಶ ಬಂದಿದ್ದು, ಅಂತ್ಯೋದಯ ಕಾರ್ಡ್‌ಗೆ 1 ರೂಪಾಯಿ ದರದಲ್ಲಿ 29 ಕೆ.ಜಿ. ಹಾಗೂ ಬಿಪಿಎಲ್ ಕಾರ್ಡ್‌ಗಳಿಗೆ ಯೂನಿಟ್ ಆಧಾರದಲ್ಲಿ 1 ರೂಪಾಯಿಗೆ ಅಕ್ಕಿಯನ್ನು ವಿತರಿಸುವಂತೆ ಸೂಚಿಸಿದೆ. ಜುಲೈ 10ರಂದು ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಆ ಬಳಿಕ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಅಕ್ಕಿ ವಿತರಿಸಲಾಗುತ್ತದೆ.ಜೂನ್ ತಿಂಗಳ ಅಂತ್ಯದವರೆಗೆ ಜಿಲ್ಲೆಯಲ್ಲಿ ಒಟ್ಟು 83,072 ಅಂತ್ಯೋದಯ ಪಡಿತರ ಚೀಟಿ ಹಾಗೂ 6,45,860 ಬಿಪಿಎಲ್ ಪಡಿತರ ಚೀಟಿಗಳು ಇವೆ. ಇದುವರೆಗೆ ಅಂತ್ಯೋದಯ ಕಾರ್ಡ್‌ಗೆ ಪ್ರತಿ ಕೆ.ಜಿ.ಗೆ 3 ರೂಪಾಯಿಯಲ್ಲಿ 29 ಕೆ.ಜಿ.ವರೆಗೆ ಅಕ್ಕಿ ನೀಡಲಾಗುತ್ತಿತ್ತು.ಬಿಪಿಎಲ್ ಕಾರ್ಡ್‌ಗೆ ಯೂನಿಟ್ ಆಧಾರದಲ್ಲಿ ಒಬ್ಬ ಸದಸ್ಯರಿಗೆ 4 ಕೆ.ಜಿ.ಯಂತೆ ಅಥವಾ ಗರಿಷ್ಠ 20 ಕೆ.ಜಿ.ವರೆಗೆ ಅಕ್ಕಿಯನ್ನು ಪ್ರತಿ ಕೆ.ಜಿ.ಗೆ 3 ರೂಪಾಯಿ ಬೆಲೆಯಲ್ಲಿ ನೀಡಲಾಗುತ್ತಿತ್ತು. ಜೂನ್ ತಿಂಗಳಿನಲ್ಲಿ ಅಂತ್ಯೋದಯ ಚೀಟಿಗಳಿಗಾಗಿ ಒಟ್ಟು 24,091.17 ಕ್ವಿಂಟಲ್ ಅಕ್ಕಿ ಹಾಗೂ 4984.38 ಕ್ವಿಂಟಲ್ ಗೋಧಿಯನ್ನು ಬಿಡುಗಡೆ ಮಾಡಲಾಗಿತ್ತು. ಬಿಪಿಎಲ್ ಚೀಟಿಗಳಿಗಾಗಿ 83,871.63 ಅಕ್ಕಿ ಹಾಗೂ  13,241.13 ಕ್ವಿಂಟಲ್ ಗೋಧಿಯನ್ನು ನೀಡಲಾಗಿತ್ತು.ಇದೀಗ ಒಂದು ಯೂನಿಟ್‌ನ ಪ್ರಮಾಣವನ್ನು 10 ಕೆ.ಜಿ.ಗೆ ಹಾಗೂ ಗರಿಷ್ಠ ಪ್ರಮಾಣವನ್ನು 30 ಕೆ.ಜಿಗೆ ನಿಗದಿಗೊಳಿಸಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಈಗಿರುವ 64,5860 ಬಿಪಿಎಲ್ ಕಾರ್ಡ್ ಹಾಗೂ 83072 ಅಂತ್ಯೋದಯ ಕಾರ್ಡ್‌ಗಳಿಗೆ ತಲಾ 30 ಕೆ.ಜಿ.ಯಂತೆ ಅಕ್ಕಿ ವಿತರಿಸಿದರೆ, ಅಂದಾಜು ಒಟ್ಟು 2.15 ಲಕ್ಷ ಕ್ವಿಂಟಲ್ ಅಕ್ಕಿ ಅಗತ್ಯವಿದೆ ಎನ್ನಲಾಗಿದೆ.`1 ರೂಪಾಯಿ ಬೆಲೆಯಲ್ಲಿ ಒಬ್ಬ ಸದಸ್ಯನಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ಯೂನಿಟ್ ಆಧಾರದಲ್ಲಿ ವಿತರಿಸುವಂತೆ ರಾಜ್ಯ ಸರ್ಕಾರದಿಂದ ಆದೇಶ ಬಂದಿದೆ. ಜುಲೈ 10ರಂದು ಸಾಂಕೇತಿಕವಾಗಿ ಜಿಲ್ಲಾ ಮಟ್ಟದಲ್ಲಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.ಸರ್ಕಾರದ ಆದೇಶದ ಬಗ್ಗೆ ತಹಸೀಲ್ದಾರರಿಗೆ ಮಾಹಿತಿ ನೀಡಲಾಗಿದ್ದು, ನ್ಯಾಯಬೆಲೆ ಅಂಗಡಿಗಳಿಗೆ ಸೂಚಿಸಲಾಗುವುದು. ಹೆಚ್ಚುವರಿ ಆಹಾರ ಧಾನ್ಯವು ಇನ್ನೂ ಭಾರತೀಯ ಆಹಾರ ನಿಗದ (ಎಫ್‌ಸಿಐ)ದಿಂದ ಬಂದು ತಲುಪಿಲ್ಲ. ಒಂದು ವಾರದೊಳಗೆ ತಲುಪುವ ನಿರೀಕ್ಷೆ ಇದೆ' ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಎಂ.ಸಿ. ಶ್ರೀನಿವಾಸಯ್ಯ `ಪ್ರಜಾವಾಣಿ'ಗೆ ತಿಳಿಸಿದರು.ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry