74 ವಿಷಯಕ್ಕೆ ಸದಸ್ಯರ ಅನುಮೋದನೆ!

7

74 ವಿಷಯಕ್ಕೆ ಸದಸ್ಯರ ಅನುಮೋದನೆ!

Published:
Updated:

ಚಿತ್ರದುರ್ಗ: ದಿಢೀರ್ ಒಗ್ಗಟ್ಟು ಪ್ರದರ್ಶಿಸಿದ ನಗರಸಭೆ ಸದಸ್ಯರು ಸುಮಾರು 74 ವಿಷಯಗಳಿಗೆ ಅನುಮೋದನೆ ನೀಡಿದ ಪ್ರಸಂಗ ಗುರುವಾರ ನಡೆದ ಸಾಮಾನ್ಯಸಭೆಯಲ್ಲಿ ನಡೆಯಿತು.ಬಹುತೇಕ ಕೊನೆಯ ಸಾಮಾನ್ಯ ಸಭೆ ಇದಾಗಲಿದ್ದು, ನಗರದ ಮಧ್ಯ ಭಾಗದಲ್ಲಿರುವ ಮಾರುಕಟ್ಟೆಯಲ್ಲಿ ಇನ್ನೂ ಉಳಿದಿರುವ ಕೊಠಡಿಗಳನ್ನು ತೆರವುಗೊಳಿಸುವ ಮೂಲಕ ಶೀಘ್ರವಾಗಿ ಅಲ್ಲಿ ಕಾಮಗಾರಿ ಆರಂಭಿಸಬೇಕು. ಅದೇ ರೀತಿ ಸಂತೆ ಹೊಂಡದ ಪಕ್ಕದಲ್ಲಿರುವ ಜಟಕಾ ನಿಲ್ದಾಣದ ಮಾರುಕಟ್ಟೆಯ ಜಾಗದಲ್ಲಿ ನೂತನ ಕಾಂಪ್ಲೆಕ್ಸ್ ನಿರ್ಮಿಸುವುದು ಸೇರಿದಂತೆ ಹಲವಾರು ವಿಷಯಗಳಿಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.ಕೆಲವು ವಿಷಯ ಹೊರತುಪಡಿಸಿ ಬಹುತೇಕ ವಿಷಯಗಳಿಗೆ ಸದಸ್ಯರು ಯಾವುದೇ ಚರ್ಚೆ ಇಲ್ಲದೆ ಒಪ್ಪಿಗೆ ಸೂಚಿಸಿದರು.

ಮಾರುಕಟ್ಟೆ ಕೆಡವಿ ಇನ್ನೂ ನಿರ್ಮಾಣ ಕಾರ್ಯ ಪ್ರಾರಂಭ ಮಾಡದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಮಾರುಕಟ್ಟೆ ಕೆಡವಲು ತೋರಿದ ಉತ್ಸಾಹವನ್ನು ನೂತನ ಮಾರುಕಟ್ಟೆ ನಿರ್ಮಿಸಲು ತೋರಿಸುತ್ತಿಲ್ಲ ಎಂದು ನುಡಿದರು.ಈ ಬಗ್ಗೆ ಅಧ್ಯಕ್ಷೆ ಸುನಿತಾ ಮಾತನಾಡಿ, ಹೊಸ ಮಾರುಕಟ್ಟೆ ನಿರ್ಮಿಸಲು ನಗರಸಭೆ ಉತ್ಸಾಹ ಕಳೆದು ಕೊಂಡಿಲ್ಲ. ಆದರೆ, ಕೆಲವು ಜನ ನ್ಯಾಯಾಲಯದ ಮೊರೆ ಹೋಗಿರುವುದರಿಂದ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ನಗರಸಭೆ ನೇಮಿಸಿರುವ ಹೈಕೋರ್ಟ್ ವಕೀಲರಿಗೆ ಶೀಘ್ರ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಿ ಸಭೆಗೆ ತಿಳಿಸಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಸದಸ್ಯರಾದ ರವಿಶಂಕರ್ ಬಾಬು, ಪ್ರಕಾಶ್, ಈಗಿರುವ ವಕೀಲ ಮಹೇಶ್ ನಗರಭೆ ಪರ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅವರನ್ನು ಬದಲಾಯಿಸಿ ಬೇರೆಯವರನ್ನು ನೇಮಕ ಮಾಡುವ ಮೂಲಕ ನನೆಗುದಿಗೆ ಬಿದ್ದಿರುವ ಪ್ರಕರಣಗಳನ್ನು ಶೀಘ್ರವಾಗಿ ಪೂರೈಸುವಂತೆ ಸಲಹೆ ನೀಡಿದರು.ಮಾರುಕಟ್ಟೆಯಲ್ಲಿರುವ ಕೊಠಡಿಗಳು ಶಿಥಿಲವಾಗಿದ್ದು, ಯಾವುದೇ ಸಮಯದಲ್ಲಾದರೂ ಕುಸಿಯಬಹುದು. ಇಂತಹ ಅನಾಹುತಕ್ಕೆ ನಗರಸಭೆ ಹೊಣೆ ಅಲ್ಲ. ಈ ಬಗ್ಗೆ ವ್ಯಾಪಾರಿಗಳಿಗೆ ನೋಟಿಸ್ ನೀಡುವಂತೆ ಸದಸ್ಯರು ಸೂಚಿಸಿದರು.ಪ್ರತಿಮೆಗಳು ಒಂದೆಡೆ ಇರಲಿ: ನಗರದ ಎಸ್‌ಬಿಎಂ ಎದುರಿನ ವೃತ್ತದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಕಂಚಿನ ಪ್ರತಿಮೆಯನ್ನು ಸ್ಥಾಪಿಸುವ ವಿಷಯ ಚರ್ಚೆಗೆ ಗ್ರಾಸವಾಯಿತು.ನಗರದ ರಸ್ತೆಗಳು ಚಿಕ್ಕದಾಗಿ ಇರುವುದರಿಂದ ಯಾವುದೇ ಜನಾಂಗದ ಪ್ರತಿಮೆಗಳ ನಿರ್ಮಿಸುವುದು ಬೇಡ. ಅದರ ಬದಲಿಗೆ ಎಲ್ಲ ನಾಯಕರ ಪ್ರತಿಮೆಗಳನ್ನು ಜಿಲ್ಲಾಧಿಕಾರಿ ಕಚೇರಿ ಮುಂದಿನ ಆವರಣದ ಜಾಗದಲ್ಲಿ ಸ್ಥಾಪಿಸುವುದರಿಂದ ಅಲ್ಲಿ ಯಾವುದೇ ಗಲಾಟೆ ಆಗಲು ಸಾಧ್ಯವಿಲ್ಲ ಎಂದು ಸದಸ್ಯ ರವಿಶಂಕರ್ ಅಭಿಪ್ರಾಯಪಟ್ಟರು. ಈ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಅಧ್ಯಕರು ತಿಳಿಸಿದರು.ಈ ಬಗ್ಗೆ ಮಾತನಾಡಿದ ಸದಸ್ಯೆ ರುದ್ರಾಣಿ ಗಂಗಾಧರ್, ನಗರದಲ್ಲಿನ ಹಲವಾರು ಪ್ರತಿಮೆಗಳಿಗೆ ಅನುಮೋದನೆ ನೀಡಿರುವುದರಿಂದ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಸ್ಥಾಪಿಸಲು ಅನುಮೋದನೆ ನೀಡಬೇಕು ಎಂದು ಕೋರಿದರು.ತಕ್ಷಣ ಗೇಲಿ ಮಾಡಿದ ಅಧ್ಯಕ್ಷೆ ಸುನೀತಾ, ಈ ವಿಷಯ `ರಾಣಿ'ಯವರಿಂದಲೇ ಬರಲಿ ಎಂದು ಕಾಯುತ್ತಿದ್ದೆ. `ರುದ್ರಾಣಿ'ಯಲ್ಲಿಯೇ `ರಾಣಿ' ಇಲ್ಲವೇ ಎಂದು ಲೇವಡಿ ಮಾಡಿ ಈ ವಿಷಯಕ್ಕೂ ಒಪ್ಪಿಗೆ ನೀಡುತ್ತೇವೆ ಎಂದು ಹೇಳಿದರು.

ಫ್ಲೆಕ್ಸ್ ಹಾವಳಿ ನಿಲ್ಲಿಸಿ: ನಗರದಲ್ಲಿ ಯಾವುದೇ ಕಾರಣಕ್ಕೂ ಫ್ಲೆಕ್ಸ್‌ಗಳನ್ನು ಅಳವಡಿಸಬಾರದು ಎನ್ನುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.ಫ್ಲೆಕ್ಸ್ ಕಾರಣದಿಂದ ನಗರದಲ್ಲಿ ಗಲಾಟೆಗಳು ನಡೆಯುತ್ತಿದೆ. ನಗರದಲ್ಲಿ ಅಶಾಂತಿಯ ವಾತಾವರಣ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫ್ಲೆಕ್ಸ್ ಹಾಕಲು ಅನುಮತಿ ನೀಡಬಾರ ಎಂದು ಸದಸ್ಯ ಅಲ್ಲಾಭಕ್ಷಿ ಸಭೆಯ ಗಮನ ಸೆಳೆದಾಗ ಇದಕ್ಕೆ ಧ್ವನಿಯಾಗಿ ಮಾತನಾಡಿದ ರವಿಶಂಕರ್‌ಬಾಬು, ಫ್ಲೆಕ್ಸ್‌ಗಳಲ್ಲಿ ನಗರಸಭೆ ಮತ್ತು ಸರ್ಕಾರದಿಂದ ಜನತೆಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನಗರದಲ್ಲಿ ನೀಡುವ ಮಾಹಿತಿಯನ್ನು ಪ್ರಚುರಪಡಿಸುವಂತೆ ಸಲಹೆ ನೀಡಿದರು.ನೂತನ ಕಟ್ಟಡ

ನೂತನವಾಗಿ ನಿರ್ಮಿಸುತ್ತಿರುವ ನಗರಸಭೆ ನೂತನ ಕಟ್ಟಡವನ್ನು ಡಿ. 25ರ ಒಳಗೆ ಪೂರ್ಣಗೊಳಿಸಿ ಬಿಟ್ಟು ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ನಗರಸಭೆಯ ಈ ಹಿಂದಿನ 50 ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಲಾಗುವುದು ಎಂದು ಸುನೀತಾ ತಿಳಿಸಿದರು.ನಗರದಲ್ಲಿನ ಕೆಲವು ಶಿಕ್ಷಣ ಸಂಸ್ಥೆಗಳು ಶಾಲಾ ನಿರ್ಮಾಣಕ್ಕೆ ಜಾಗ ಕೋರಿದ್ದಾರೆ ಎಂದು ಅಧಿಕಾರಿಗಳು ವಿಷಯ ಮಂಡಿಸಿದಾಗ ಸದಸ್ಯರು ಮಾತನಾಡಿ, ಸ್ಥಳ ಪರಿಶೀಲಿಸಿ ಅನುಮತಿ  ನೀಡಬೇಕು ಎಂದು ಸೂಚಿಸಿದರು.ಜಗಜೀವನರಾಂ ಪ್ರತಿಮೆಗೆ ಅನುಮೋದನೆ: ನಗರದಲ್ಲಿ ಬಾಬು ಜಗಜೀವನರಾಂ ಪ್ರತಿಮೆ ನಿರ್ಮಾಣ ಕಾಮಗಾರಿಗೆ ್ಙ 12 ಲಕ್ಷ ಕಾಯ್ದಿರಿಸಲು ಸಾಮಾನ್ಯಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.ಸಮಯ ಪ್ರಜ್ಞೆ ಇಲ್ಲದ ಸದಸ್ಯರು!

ಗುರುವಾರ ನಡೆದ ನಗರಸಭೆ ಸಾಮಾನ್ಯಸಭೆ ಸುಮಾರು ಒಂದು ಗಂಟೆ ತಡವಾಗಿ ಆರಂಭವಾಯಿತು.ಬೆಳಿಗ್ಗೆ 10.30ಕ್ಕೆ ಆರಂಭವಾಗಬೇಕಾದ ಸಭೆ 11.25ಕ್ಕೆ ಆರಂಭವಾಯಿತು. ಅಧ್ಯಕ್ಷರು 10.40ಕ್ಕೆ ಆಗಮಿಸಿದರು. ಕೆಲವೇ ಸದಸ್ಯರು ಮಾತ್ರ ಸಕಾಲಕ್ಕೆ ಆಗಮಿಸಿದ್ದರು. ಉಳಿದ ಸದಸ್ಯರು ಒಬ್ಬೊಬ್ಬರಾಗಿ ಆಗಮಿಸಿದರು. ಸಭೆಗೆ ಮುನ್ನ ಸದಸ್ಯರು ಸಭೆ ನಡೆಸಿ ಈ ಸಭೆಯಲ್ಲಿ ಯಾವುದೇ ರೀತಿ ತಕರಾರು ಮಾಡದಿರುವ ಬಗ್ಗೆ ನಿರ್ಣಯ ಕೈಗೊಂಡರು.ಸಭೆಯಲ್ಲಿ ಸುಮಾರು 70 ವಿಷಯ ಚರ್ಚೆಗೆ ತೆಗೆದುಕೊಂಡು ಬರಲಾಗಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಸದಸ್ಯರು ಪ್ರತಿ ತಿಂಗಳು ಸಭೆ ಕರೆದಿದ್ದರೆ ಉತ್ತಮವಾಗಿ ಚರ್ಚೆ ಮಾಡಬಹುದಿತ್ತು ಎಂದರು.

ಉತ್ತರ ನೀಡದ ಪೌರಾಯುಕ್ತರು: ನಗರದಲ್ಲಿನ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆದಾಗ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡದೆ ಪೌರಾಯುಕ್ತರು ಪರದಾಡಿದರು.

ಮಾಹಿತಿ ಇಲ್ಲದೆ ಸಭೆಗೆ ಆಗಮಿಸಿರುವ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಯೊಂದು ಉತ್ತರವನ್ನು ಕಂದಾಯ ನಿರೀಕ್ಷಕರು ಮತ್ತು ಕಾರ್ಯಪಾಲಕ ಎಂಜಿನಿಯರ್ ಉತ್ತರ ನೀಡಿದರು.ಸದಸ್ಯರ ವಾಗ್ಯುದ್ಧ

ಸಭೆಯ ಗಂಭೀರತೆ ಮರೆತು ಸದಸ್ಯರಾದ ಗಾಡಿ ಮಂಜುನಾಥ್ ಮತ್ತು ಸರ್ದಾರ್ ಮಹ್ಮದ್ ಅಹ್ಮದ್ ಪಾಷಾ ಏರಿದ ದನಿಯಲ್ಲಿ ಕೂಗಾಡಿದ ಪ್ರಸಂಗ ಸಭೆಯಲ್ಲಿ ನಡೆಯಿತು.

ಜೋಗಿಮಟ್ಟಿ ರಸ್ತೆಯಲ್ಲಿನ ಸ್ಮಶಾನದಿಂದ ಚೌಡೇಶ್ವರಿ ದೇವಾಲಯದವರೆಗೆ ಹೊಸದಾಗಿ ವಿದ್ಯುತ್ ಕಂಬಗಳನ್ನು ಅಳವಡಿಸುವಂತೆ ಅಂದಾಜು ಕ್ರಿಯಾ ಯೋಜನೆಯ ಪಟ್ಟಿಯನ್ನು ಸಲ್ಲಿಸಲಾಯಿತು. ಈ ವಿಷಯ ಬಗ್ಗೆ ಸರ್ದಾರ ಆಕ್ಷೇಪ ವ್ಯಕ್ತಪಡಿಸಿದರು.ಈ ರೀತಿಯ ವಿದ್ಯುತ್ ಕಂಬಗಳನ್ನು ಅಳವಡಿಸಲು ಬರುವುದಿಲ್ಲ ಎಂದು ಹೇಳಿದಾಗ ಗಾಡಿ ಮಂಜುನಾಥ್ ಮತ್ತು ಸರ್ದಾರ್ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಸರ್ದಾರ್ ಪಾಷಾ ಅವಾಚ್ಯ ಶಬ್ದಗಳನ್ನು ಬಳಸಿದರು.ಮಧ್ಯಪ್ರವೇಶಿಸಿದ ರವಿಶಂಕರ್, ಮಲ್ಲೇಶಪ್ಪ, ಪ್ರಕಾಶ್, ಮಹೇಶ್ ಮಂಜುನಾಥ್ ಸಮಾಧಾನಪಡಿಸಿ ವಾಗ್ವಾದಕ್ಕೆ ಅಂತ್ಯ ಹಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry