75 ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭ

ಶನಿವಾರ, ಜೂಲೈ 20, 2019
22 °C

75 ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭ

Published:
Updated:

ಚಿಕ್ಕಮಗಳೂರು: ಜಿಲ್ಲೆಯಲ್ಲಿ 695 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಅವುಗಳಲ್ಲಿ 75 ಶಾಲೆಗಳಲ್ಲಿ ಆರನೇ ತರಗತಿಯಿಂದ ಆಂಗ್ಲ ಮಾಧ್ಯಮವನ್ನು ಆರಂಭಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವಿ.ಎಂ. ಕಾಂತರಾಜು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಚಿಕ್ಕಮಗಳೂರು ತಾಲ್ಲೂಕಿನಲ್ಲಿ 151 ಹಿರಿಯ ಪ್ರಾಥಮಿಕ ಶಾಲೆಗಳಿವೆ. ಅವುಗಳಲ್ಲಿ  28 ಶಾಲೆಗಳಲ್ಲಿ ಆಂಗ್ಲಮಾಧ್ಯಮವನ್ನು ಆರಂಭಿಸಲಾಗಿದೆ. ಉಳಿದದಂತೆ ಕಡೂರು, ತರೀಕೆರೆ, ಮೂಡಿಗೆರೆ, ಕೊಪ್ಪ, ನರಸಿಂಹರಾಜುಪುರ ಮತ್ತು ಶೃಂಗೇರಿ ತಾಲ್ಲೂಕಿನ 60 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಗೊಂಡಿದೆ ಎಂದು ಮಾಹಿತಿ ನೀಡಿದರು.ದ್ವಿತೀಯ ಪಿಯುಸಿ ವಿಜ್ಞಾನ ವಿಷಯ ಪಡೆದು ತೇರ್ಗಡೆಗೊಂಡು ಶಿಕ್ಷಕರ ತರಬೇತಿ ಮುಗಿಸಿ ಶಿಕ್ಷಕರಾಗಿ ಆಯ್ಕೆಗೊಂಡು ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ಗಣಿತ ಮತ್ತು ವಿಜ್ಞಾನ ವಿಷಯ ಬೋಧಿಸಿದರೆ, ಉಳಿದ ಶಿಕ್ಷಕರು ಆಂಗ್ಲಮಾಧ್ಯಮದಲ್ಲಿ ಪಾಠ ಪ್ರವಚನಗಳನ್ನು ಉತ್ತಮ ರೀತಿ ನಿರ್ವಹಿಸುತ್ತಿದ್ದಾರೆ ಎಂದರು. ಈಗಾಗಲೇ ವಿಜ್ಞಾನ ವಿಷಯದಲ್ಲಿ ಪಿಯುಸಿ ಮುಗಿಸಿ ಶಿಕ್ಷಕರಾಗಿರುವವರು ಅಪೇಕ್ಷಿಸಿ, ವಿಜ್ಞಾನ ವಿಷಯದಲ್ಲಿ ಪದವಿ ಪೂರ್ಣಗೊಳಿಸಲು ಮುಂದಾದರೆ ಅದಕ್ಕೆ ಸರ್ಕಾರ ಅವಕಾಶ ಮಾಡಿಕೊಡಲಿದೆ ಎಂದು ತಿಳಿಸಿದರು.ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲು ಅನುಮತಿ ನೀಡುವಂತೆ ಶಾಲಾಭಿವೃದ್ಧಿ ಸಮಿತಿಯವರು ಮನವಿ ಮಾಡಿದ ಹಿನ್ನೆಲೆಯಲ್ಲಿ 65ಶಾಲೆಗಳಿಗೆ ಅನುಮಿತಿ ನೀಡಲಾಗಿದೆ. ಉಳಿದ 10 ಶಾಲೆಗಳಿಂದ ಅರ್ಜಿ ಬಂದಿದ್ದು, ಅವುಗಳಿಗೆ ಅನುಮತಿ ನೀಡುವಂತೆ ಸರ್ಕಾರವನ್ನು ಕೋರಲಾಗಿದೆ. ಈಗಾಗಲೇ ಬಾಳೆಹೊನ್ನೂರಿನ ಸರ್ಕಾರಿ ಶಾಲೆಯಲ್ಲಿ ಆರಂಭಿಸಿರುವ ಆಂಗ್ಲಮಾಧ್ಯಮ ಶಾಲೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.ಜಿಲ್ಲೆಯ 28 ಶಾಲೆಗಳನ್ನು ಉನ್ನತೀಕರಿಸಿ 8 ನೇ ತರಗತಿ ಆರಂಭಿಸಲು ಉದ್ದೇಶಿಸಿದ್ದು, ಅದರಲ್ಲಿ ಈಗಾಗಲೇ 18 ಶಾಲೆಗಳಲ್ಲಿ 8 ನೇ ತರಗತಿ ಆರಂಭಗೊಂಡಿದೆ. ಬೀರೂರಿನಲ್ಲಿ 2, ಚಿಕ್ಕಮಗಳೂರು ತಾಲ್ಲೂಕಿನಲ್ಲಿ 9, ಕಡೂರು 1, ಕೊಪ್ಪ 1, ಮೂಡಿಗೆರೆ 5 ನರಸಿಂಹರಾಜಪುರ ಮತ್ತು ತರೀಕೆರೆ ತಾಲ್ಲೂಕಿನಲ್ಲಿ ತಲಾ ಮೂರು ಶಾಲೆಗಳನ್ನು 8 ನೇ ತರಗತಿಗೆ ಮೇಲ್ದರ್ಜೆಗೆ ಏರಿಸಲಾಗಿದೆ ಎಂದರು.ಜಿಲ್ಲೆಯ ಕೆಲವು ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ಅವರನ್ನು ಈ ಶಾಲೆಗೆ ನಿಯೋಜನೆಗೊಳಿಸಲಾಗಿದೆ. ಅಗತ್ಯವಿದ್ದರೆ ಹೆಚ್ಚುವರಿ ಕಟ್ಟಡಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಋತುಮಾನ ಶಾಲೆ ಆರಂಭ: ಬೇರೆ ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆಗೆ ಕೆಲಸ ಅರಸಿ ಬರುವ ಕೂಲಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಈಗಾಗಲೇ ಮೇದರಹಳ್ಳಿ, ಬೂಚೇನಹಳ್ಳಿಕಾವಲು ಮತ್ತು ತರೀಕೆರೆ ತಾಲ್ಲೂಕಿನ ಗುರುಪುರದಲ್ಲಿ ಋತುಮಾನ ಶಾಲೆಯನ್ನು ಆರಂಭಿಸಲಾಗಿದೆ. ಅಗತ್ಯವಿದ್ದರೆ ಮಲೆನಾಡು ಭಾಗದ ತೋಟಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಈ ಋತುಮಾನ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.ಜಿಲ್ಲೆಯಲ್ಲಿ ಒಟ್ಟು 384 ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಪಟ್ಟಿಮಾಡಲಾಗಿದೆ. ಚಿಣ್ಣರ ಅಂಗಳದ ಮೂಲಕ 154 ಮಕ್ಕಳನ್ನು ಶಾಲೆಗೆ ಸೇರ್ಪಡೆಗೊಳಿಸಲಾಗಿದೆ. ಉಳಿದ ಮಕ್ಕಳನ್ನು ಶಿಕ್ಷಕರು ಪೋಷಕರ ಮನವೊಲಿಸಿ ಶಾಲೆ ಕರೆತರಲು ಮುಂದಾಗಿದ್ದಾರೆಂದು ಹೇಳಿದರು.ಜಿಲ್ಲೆಯಲ್ಲಿ ಮೊದಲ ಹಂತದ `ಶಾಲೆಗಾಗಿ ನಾವು ನೀವು~ ಕಾರ್ಯಕ್ರಮ ಇದೇ ಗುರುವಾರದಿಂದ 31 ವರೆಗೆ ಹಮ್ಮಿಕೊಳ್ಳಲಾಗುವುದು. ಎರಡನೆಯ ಹಂತದ ಕಾರ್ಯಕ್ರಮ ಆಗಸ್ಟ್ ತಿಂಗಳಲ್ಲಿ ಆರಂಭಿಸ ಲಾಗುವುದು.ಕಲ್ಲುದೊಡ್ಡಿಯ ಶಾಂತಿ ನಗರದಲ್ಲಿ ಮಕ್ಕಳ ಶಿಕ್ಷಣ ಹಕ್ಕು ಅಭಿಯಾನ ಆರಂಭಗೊಳ್ಳುತ್ತಿದೆ ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಜಿ. ನಾಗೇಶ್, ದೈಹಿಕ ಶಿಕ್ಷಣಾಧಿಕಾರಿ ರವಿಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry