ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

750 ವಿದ್ಯಾರ್ಥಿಗಳಿಗೆ 2 ಶೌಚಾಲಯ

Last Updated 24 ಫೆಬ್ರುವರಿ 2011, 7:40 IST
ಅಕ್ಷರ ಗಾತ್ರ

ಮೈಸೂರು: ಗಬ್ಬು ನಾರುತ್ತಿರುವ ಶೌಚಾಲಯ, ಕಾಂಪೌಂಡ್ ಇಲ್ಲದ ಕಟ್ಟಡ, ಕುಡಿಯುವ ನೀರು ಇಲ್ಲವೇ ಇಲ್ಲ. ಪಾರ್ಕಿಂಗ್ ಜಾಗದಲ್ಲಿ ಆಟವಾಡಬೇಕು.ಕುವೆಂಪು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಈ ಸಮಸ್ಯೆ    ಗಳನ್ನು ಎದುರಿಸುತ್ತಿದೆ. ಸುಮಾರು 750ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಕಾಲೇಜಿನಲ್ಲಿ 2 ಶೌಚಾಲಯಗಳಿವೆ. ಆದರೆ ಇವು ಗಬ್ಬೆದ್ದು, ನಾರುತ್ತಿವೆ. ಸಮರ್ಪಕವಾಗಿ ನೀರು ಸರಬರಾಜು ಮಾಡದೇ ಇರುವುದರಿಂದ  ವಾಸನೆ ಕುಡಿಯುತ್ತಾ ಪಾಠ ಕೇಳಬೇಕಾದ ಪರಿಸ್ಥಿತಿ ಬಂದಿದೆ.

ಕೇವಲ ಎರಡು ಶೌಚಾಲಯಗಳು 750 ವಿದ್ಯಾರ್ಥಿಗಳಿಗೆ ಸಾಕಾಗುತ್ತಿಲ್ಲ, ಅವುಗಳಲ್ಲಿ ಮಹಿಳೆಯರಿಗೆ ಒಂದು, ಪುರುಷರಿಗೆ ಒಂದು ಶೌಚಾಲಯ ವಿಭಾಗಿಸಲಾಗಿದೆ. ಅಲ್ಲದೇ ಶೌಚಾಲಯ ಕಟ್ಟಡಗಳು ಶಿಥಿಲಗೊಂಡಿವೆ. ಕಾಲೇಜಿನಲ್ಲಿ ಮತ್ತೊಂದು ಸಮಸ್ಯೆ ಎಂದರೆ ಅದು ಕುಡಿಯುವ ನೀರು. ಕುಡಿಯುವ ನೀರು ಸರಬರಾಜು ಮಾಡಲು ಕಾಲೇಜಿನಲ್ಲಿ ಸಂಪ್ ಇದೆ. ಆದರೆ ಅಲ್ಲಿ ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.

 ಕಾಲೇಜಿನಲ್ಲಿ ಬಿಎ, ಬಿಬಿಎಂ, ಬಿಕಾಂ, ಬಿಎಸ್ಸಿ ತರಗತಿಗಳಿವೆ. ಎಚ್.ಡಿ.ಕೋಟೆ, ನಂಜನಗೂಡು, ಮೈಸೂರು ಸೇರಿದಂತೆ ವಿವಿಧ ತಾಲ್ಲೂಕುಗಳ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ಶೇ.90ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರು. ಶೇ.90ರಷ್ಟು ಫಲಿತಾಂಶ ಬಂದಿದ್ದು, ಬಿಕಾಂ ಮತ್ತು ಬಿಬಿಎಂಗೆ ಬೇಡಿಕೆ ಇದೆ. ಶೈಕ್ಷಣಿಕವಾಗಿ ನಾವು ಉತ್ತಮವಾಗಿದ್ದೇವೆ ಆದರೆ ಅಗತ್ಯ ಸೌಲಭ್ಯ ಇಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.

ಕೊಠಡಿಗಳ ಕೊರತೆ: ಕಾಲೇಜಿನ ಕಟ್ಟಡಗಳು ತೀರ ಹಳೆಯವಾಗಿದ್ದು, ಬಣ್ಣ ಕಿತ್ತು ಬರುತ್ತಿದೆ. ಅಲ್ಲದೇ ಕಾಲೇಜಿಗೆ ಒಂದು ಬೋರ್ಡ್ ಕೂಡ ಇಲ್ಲ, ಇರುವ ಬೋರ್ಡ್ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಅಲ್ಲದೇ ಕಾಲೇಜಿನಲ್ಲಿ ಒಟ್ಟು 14 ಕೊಠಡಿಗಳಿದ್ದು, ಇವು ಸಾಲುತ್ತಿಲ್ಲ, ಇನ್ನೂ 4 ಕೊಠಡಿಗಳ ಅಗತ್ಯವಿದೆ. ಕಾಲೇಜಿನಲ್ಲಿ 30ಮಂದಿ ಉಪನ್ಯಾಸಕರು, 20 ಮಂದಿ ಅರೆಕಾಲಿಕ ಉಪನ್ಯಾಸಕರು ಸೇರಿ ಒಟ್ಟು 50 ಮಂದಿ ಇದ್ದಾರೆ. ಆರಂಭದಲ್ಲಿ ಇದು ಮುಡಾ ವಶದಲ್ಲಿತ್ತು. ಆದರೆ ಕಳೆದ ವರ್ಷ ಇದನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಸಮಸ್ಯೆಗಳು ಹೆಚ್ಚುತ್ತಿವೆ.

ಸಾರ್ವಜನಿಕರ ಕಿರಿಕಿರಿ: ಕಾಲೇಜಿನಲ್ಲಿ ಸೂಕ್ತವಾದ ಕಾಂಪೌಂಡ್ ವ್ಯವಸ್ಥೆ ಇಲ್ಲದ್ದರಿಂದ ಸಾರ್ವಜನಿಕರು ಕಾಲೇಜಿಗೆ ಸರಾಗವಾಗಿ ನುಗ್ಗುತ್ತಿರುತ್ತಾರೆ. ಕಾಲೇಜಿನ ಗೇಟ್ ಬೀಗ ಹಾಕಿದರೂ ಅದನ್ನು ಒಡೆದು ಒಳ ನುಗ್ಗುತ್ತಿದ್ದಾರೆ. ನಾವು ಎಷ್ಟೇ ಹೇಳಿದರೂ ಕೇಳುವುದಿಲ್ಲ. ಕಾಲೇಜು ಮುಚ್ಚಿದ ಮೇಲೆ ಕೆಲವು ಕಿಡಿಗೇಡಿಗಳು ಒಳನುಗ್ಗಿ ತೊಂದರೆ ಕೊಡುತ್ತಾರೆ ಎಂದು ಉಪನ್ಯಾಸಕರು ಅಳಲು ತೋಡಿಕೊಳ್ಳುತ್ತಾರೆ.

ಅಲ್ಲದೇ ಕರಾಟೆ ಸಂಸ್ಥೆಯೊಂದು ಕಾಲೇಜಿನ ಪಕ್ಕದಲ್ಲೇ ಬೋರ್ಡ್ ಹಾಕಿಕೊಂಡು ಅಲ್ಲೇ ಕರಾಟೆ ತರಗತಿ ನಡೆಸುತ್ತಿದ್ದು, ನಮಗೆ ತೊಂದರೆ ಕೊಡುತ್ತಿದ್ದಾರೆ. ನಾವು ಎಷ್ಟೇ ಹೇಳಿದರೂ ಇದು ನಮಗೆ ಸೇರಿದ್ದು ಎಂದು ಹೇಳುತ್ತಿದ್ದಾರೆ, ಪರೀಕ್ಷಾ ಸಮಯದಲ್ಲೂ ನಮಗೆ ತೊಂದರೆ ಕೊಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡರು.

ಆಟದ ಮೈದಾನವಿಲ್ಲ: ಕಾಲೇಜಿನಲ್ಲಿ ಆಟದ ಮೈದಾನವೇ ಇಲ್ಲ. ಇರುವ ಅಲ್ಪ ಸ್ವಲ್ಪ ಜಾಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಪಾರ್ಕಿಂಗ್‌ಗೆ ಜಾಗವಿಲ್ಲದೇ ರಸ್ತೆಯ ಮುಂದೆಯೇ ಸೈಕಲ್ ಮತ್ತು ಸ್ಕೂಟರ್‌ಗಳನ್ನು ನಿಲ್ಲಿಸುತ್ತಿದ್ದಾರೆ. ಎಷ್ಟೋ ಸಲ ಸಂಚಾರಿ ಪೊಲೀಸರು ಇಲ್ಲಿ ವಾಹನಗಳನ್ನು ಲಾರಿಯಲ್ಲಿ ಎತ್ತಿ ಹಾಕಿಕೊಂಡು ಹೋಗಿದ್ದಾರೆ. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ಕಾಲೇಜಿಗೆ ಬೇಕಾದ ಸೌಲಭ್ಯಗಳು: ಕಾಲೇಜಿಗೆ ಕನಿಷ್ಠ 8 ಶೌಚಾಲಯ ಬೇಕು. ಕುಡಿಯುವ ನೀರಿನ ವ್ಯವಸ್ಥೆ ಜರೂರಾಗಿ ಆಗಬೇಕಾಗಿದೆ. ಕಾಲೇಜಿಗೆ ಒಂದು ಪ್ರತ್ಯೇಕ ಬೋರ್ವೆಲ್ ಕಲ್ಪಿಸಿದರೆ ಸೂಕ್ತ. ವಿದ್ಯಾರ್ಥಿನಿಯರಿಗೆ ವಿಶ್ರಾಂತಿ ಕೊಠಡಿ ಬೇಕು. ವಿದ್ಯಾರ್ಥಿಗಳಿಗೆ ಆಟವಾಡಲು ಒಂದು ಮೈದಾನ. ಕಾಲೇಜಿಗೆ ಸುವ್ಯವಸ್ಥಿತವಾದ ಕಾಂಪೌಂಡ್ ನಿರ್ಮಾಣ ಇವಿಷ್ಟು ಸೌಲಭ್ಯಗಳು ಜರೂರಾಗಿ ಆಗಬೇಕಾಗಿವೆ. ಈ ಭಾಗದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರು, ಇತ್ತ ಗಮನ ಹರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT