ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

75:25 ಅನುಪಾತದಡಿ ಶಿಕ್ಷಕರ ನೇಮಕ: ಹೈಕೋರ್ಟ್

Last Updated 16 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪ್ರೌಢ ಶಾಲೆಗಳಲ್ಲಿ 2006ರ ಅಕ್ಟೋಬರ್ 30ರಿಂದ ಖಾಲಿ ಇರುವ ಮುಖ್ಯ ಶಿಕ್ಷಕರ ಹುದ್ದೆಯನ್ನು 75:25 ಅನುಪಾತದಲ್ಲಿ ನೇಮಕ ಮಾಡಿಕೊಳ್ಳುವಂತೆ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಈ ಆದೇಶದಿಂದಾಗಿ ಸರ್ಕಾರವು ಈಗ ಶೇ 75ರಷ್ಟು ಹುದ್ದೆಗಳನ್ನು ಸಹಾಯಕ ಶಿಕ್ಷಕರಾಗಿ ಸೇವೆ ಸಲ್ಲಿಸಿರುವವರಿಗೆ ಬಡ್ತಿ ನೀಡುವ ಮೂಲಕ ಹಾಗೂ ಉಳಿದ ಶೇ 25ರಷ್ಟನ್ನು ಮಾತ್ರ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಬೇಕಿದೆ. ಇದರಿಂದ ಸುಮಾರು ಎರಡು ಸಾವಿರ ಹುದ್ದೆಗಳಿಗೆ ಇದೇ ಅನುಪಾತದಡಿ ನೇಮಕಾತಿ ನಡೆಯಲಿದೆ.

ಕರ್ನಾಟಕ ಶಿಕ್ಷಣ ಇಲಾಖೆ ಸೇವಾ (ಸಾರ್ವಜನಿಕ ಶಿಕ್ಷಣ ಇಲಾಖೆ) ನಿಯಮ- 1967ರಲ್ಲಿ ಈ ಅನುಪಾತ ಶೇ 50:50 ಇತ್ತು. ಆದರೆ 2006ರಲ್ಲಿ ಈ ನಿಯಮಕ್ಕೆ ತಿದ್ದುಪಡಿ ಮಾಡಿ 75:25 ಅನುಪಾತ ಮಾಡಲಾಗಿದೆ. ನಿಯಮ ಜಾರಿಯಾದ ದಿನದಿಂದ ಅನ್ವಯ ಆಗುವಂತೆ ಹುದ್ದೆ ಭರ್ತಿ ಮಾಡಿಕೊಳ್ಳುವಂತೆ ಕಳೆದ ಸಾಲಿನಲ್ಲಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ನೇತೃತ್ವದ ವಿಭಾಗೀಯ ಪೀಠ ನಡೆಸಿತು.ಖಾಲಿ ಇರುವ ಹುದ್ದೆಗಳ ಭರ್ತಿಯನ್ನು ಅರ್ಜಿ ಇತ್ಯರ್ಥಗೊಳ್ಳುವವರೆಗೆ ಮಾಡುವುದಿಲ್ಲ ಎಂದು ಸರ್ಕಾರ ಹೈಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟಿತ್ತು.

ಆದರೆ 629 ಮಂದಿ ಶಿಕ್ಷಕರ ನೇಮಕಾತಿಯ ಅಂತಿಮ ಪಟ್ಟಿಯನ್ನು ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಳುಹಿಸಿಕೊಟ್ಟಿತ್ತು. ಸರ್ಕಾರದ ಈ ಕ್ರಮವನ್ನು ನೇಮಕಗೊಳ್ಳದ ಕೆಲ ಅಭ್ಯರ್ಥಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಮಧ್ಯಂತರ ಮನವಿ (ಐಎ) ಸಲ್ಲಿಸಿದ್ದರು. `ಕೋರ್ಟ್‌ಗೆ ಸಲ್ಲಿಸಿರುವ ಮುಚ್ಚಳಿಕೆಯನ್ನು ಸರ್ಕಾರ ಉಲ್ಲಂಘಿಸಿದೆ. ಇದು ನಿಯಮಬಾಹಿರ.

ಆದುದರಿಂದ ಆಯೋಗಕ್ಕೆ ಕಳುಹಿಸಿಕೊಟ್ಟಿರುವ ಪಟ್ಟಿಯ ಅನ್ವಯ ಇದುವರೆಗೆ ನೇಮಕಾತಿ ನಡೆಯದ ಕಾರಣ ಹೊಸ ನೇಮಕಾತಿ ನಡೆಸಬೇಕು~ ಎಂದು ಮನವಿದಾರರ ಪರ ವಕೀಲ ಎಂ.ಎಸ್.ಭಾಗವತ ವಾದಿಸಿದರು. ಈ ಹಿನ್ನೆಲೆಯಲ್ಲಿ ಈಗಾಗಲೇ ನೇಮಕಾತಿಗೊಂಡವರಿಗೆ ತೊಂದರೆ ಆಗದಂತೆ, ಖಾಲಿ ಸ್ಥಾನಗಳನ್ನು ಭರ್ತಿ ಮಾಡುವಂತೆ ಪೀಠ ಸರ್ಕಾರಕ್ಕೆ ನಿರ್ದೇಶಿಸಿತು.

ಪಿಡಿಒ ನೇಮಕ: ಅಧಿಸೂಚನೆಗೆ ತಡೆ
ರಾಜ್ಯದ ವಿವಿಧೆಡೆ 1,353 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗೆ (ಪಿಡಿಒ) 2010ರ ಮಾರ್ಚ್ 18ರಂದು ಹೊರಡಿಸಿರುವ ಅಧಿಸೂಚನೆಗೆ ಹೈಕೋರ್ಟ್ ಗುರುವಾರ ತಡೆ ನೀಡಿ ಆದೇಶಿಸಿದೆ.ಈ ಅಧಿಸೂಚನೆ ರದ್ದತಿಗೆ ಕೋರಿ ವಕೀಲ ಎನ್.ಎಸ್.ವಿಜಯಂತ ಬಾಬು ಹಾಗೂ ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರು  ಈ ಆದೇಶ ಹೊರಡಿಸಿದ್ದಾರೆ.

ಒಬ್ಬ ಅಭ್ಯರ್ಥಿ ಒಂದೇ ಜಿಲ್ಲೆಯಿಂದ ಅರ್ಜಿ ಸಲ್ಲಿಸಲು ಅರ್ಹ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದು ನಿಯಮಬಾಹಿರ ಎನ್ನುವುದು ಅರ್ಜಿದಾರರ ವಾದ. ಸಂವಿಧಾನ ತಮಗೆ ನೀಡಿರುವ ಅಧಿಕಾರದಿಂದ ವಂಚನೆ ಮಾಡಿದಂತೆ ಎಂದು ಅವರು ದೂರಿದ್ದಾರೆ. ಅವರ ವಾದವನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿಗಳು ಮಧ್ಯಂತರ ತಡೆ ನೀಡಿ ವಿಚಾರಣೆ ಮುಂದೂಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT