7.53 ಲಕ್ಷ ಮೌಲ್ಯದ 992 ಚೀಲ ಆಹಾರಧಾನ್ಯ ಜಪ್ತಿ

7

7.53 ಲಕ್ಷ ಮೌಲ್ಯದ 992 ಚೀಲ ಆಹಾರಧಾನ್ಯ ಜಪ್ತಿ

Published:
Updated:

ಚಿತ್ತಾಪುರ: ಪಟ್ಟಣದ ಗುಲ್ಬರ್ಗ ರಸ್ತೆ ಮಾರ್ಗದಲ್ಲಿರುವ ಸೋಮಶೇಖರ ಪಾಟೀಲ್ ಬೆಳಗುಂಪಾ ಒಡೆತನದ ಸಿದ್ಧಲಿಂಗೇಶ್ವರ ದಾಲ್‌ಮಿಲ್‌ನಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿ ಹೊರ ರಾಜ್ಯಗಳಿಗೆ ಸಾಗಾಟ ಮಾಡುತ್ತಿದ್ದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ಸೇರಿದ ರೂ,7.53 ಲಕ್ಷ ಮೌಲ್ಯದ 992 ಚೀಲ ಪಡಿತರ ಆಹಾರ ಧಾನ್ಯವನ್ನು ಜಿಲ್ಲಾ ಅಪರಾಧ ವಿಭಾಗದ ಪೊಲೀಸರು ಲಾರಿ ಸಮೇತ ಜಪ್ತಿ ಮಾಡಿಕೊಂಡಿದ್ದಾರೆ.ಪಟ್ಟಣದ ಸಿದ್ಧಲಿಂಗೇಶ್ವರ ದಾಲ್‌ಮಿಲ್‌ನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಬಡವರಿಗೆ ವಿತರಣೆ ಮಾಡಬೇಕಾದ ಪಡಿತರ ಆಹಾರ ಧಾನ್ಯವನ್ನು ಅಕ್ರಮವಾಗಿ ಸಂಗ್ರಹಿಸಿ ಹೊರ ರಾಜ್ಯಗಳಿಗೆ ಕಳ್ಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಆಧರಿಸಿ ಜಿಲ್ಲಾ ಪೊಲೀಸ್ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ ಎಸ್.ಎಸ್. ಹುಲ್ಲೂರ್ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆಹಾರ ಧಾನ್ಯ ತುಂಬಿಕೊಂಡು ಹೊರಡಲು ಸಿದ್ದವಾದ ಲಾರಿಯನ್ನು ಆರೋಪಿಗಳ ಸಮೇತ ಜಪ್ತಿ ಮಾಡಿದ್ದಾರೆ.ಲಾರಿಯಲ್ಲಿ 680 ಚೀಲ ಅಕ್ಕಿ ತುಂಬಲಾಗಿದೆ. ದಾಲ್‌ಮಿಲ್ ಗೋದಾಮಿನಲ್ಲಿ ಅಕ್ರಮವಾಗಿ 290 ಚೀಲಾ ಅಕ್ಕಿ, 10 ಚೀಲಾ ಗೋಧಿ ಹಾಗೂ ಫುಡ್ ಕಾರ್ಪೂರೇಷನ್ ಆಫ್ ಇಂಡಿಯಾ ಹೆಸರಿರುವ 12 ಕ್ವಿಂಟಾಲ್ ಅಕ್ಕಿ(ದೊಡ್ಡ ಚೀಲ) ಹೀಗೆ ಒಟ್ಟು ರೂ,7.53 ಲಕ್ಷ ಮೌಲ್ಯದ 992 ಚೀಲ ಆಹಾರ ಧಾನ್ಯ ಮತ್ತು ರೂ,12.50 ಲಕ್ಷ ಮೌಲ್ಯದ ಲಾರಿಯನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.ತಾಲ್ಲೂಕಿನ ಬಡವರಿಗೆ ವಿತರಣೆ ಮಾಡಲೆಂದು ಪಂಜಾಬ್ ಸರ್ಕಾರದಿಂದ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ಬರುತ್ತಿದ್ದ ಗೋಧಿಯನ್ನು ಮತ್ತು ಫುಡ್ ಕಾರ್ಪೂರೇಷನ್ ಆಫ್ ಇಂಡಿಯಾದಿಂದ ಬರುತ್ತಿದ್ದ ಅಕ್ಕಿಯನ್ನು ಕಳ್ಳ ಮಾರಾಟ ಮಾಡಲು ದಾಲ್‌ಮಿಲ್‌ನಲ್ಲಿ ಸಂಗ್ರಹ ಮಾಡಲಾಗಿದೆ. ಅನ್ನಪೂರ್ಣ ಗೋಲ್ಡ್ ಸೋನಾ ಮಸೂರಿ ಎಂಬ ಹೆಸರಿನ ಪ್ಲಾಸ್ಟಿಕ್ ಬ್ಯಾಗ್‌ಗಳಿಗೆ ಅಕ್ಕಿ ಹಾಕಿ ಇಲ್ಲಿಂದ ಮಾಹಾರಾಷ್ಟ್ರ ಮತ್ತು ಆಂಧ್ರಪ್ರದೇಶಕ್ಕೆ ಸಾಗಾಟ ಮಾಡಿ ಕಳ್ಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹುಲ್ಲೂರ್ ಪ್ರಜಾವಾಣಿಗೆ ತಿಳಿಸಿದರು.ಕಳೆದ ಅನೇಕ ವರ್ಷಗಳಿಂದ ಅಕ್ರಮವಾಗಿ ಪಡಿತ ಆಹಾರ ಧಾನ್ಯವನ್ನು ಇಲ್ಲಿ ಕಳ್ಳ ಮಾರಾಟ ಮಾಡಲಾಗುತ್ತಿದೆ. ವಾರಕ್ಕೆ 2/3 ಲಾರಿಯಂತೆ ತಿಂಗಳಲ್ಲಿ 7/8 ಲಾರಿ ಆಹಾರ ಧಾನ್ಯವನ್ನು ನಕಲಿ ದಾಖಲೆ ಸೃಷ್ಟಿ ಮಾಡಿ ಮಾಹಾರಾಷ್ಟ್ರಕ್ಕೆ ಸಾಗಿಸಿ ಕ್ವಿಂಟಲ್‌ಗೆ ರೂ,3000 ರಂತೆ ಮಾರಾಟ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಗೋದಾಮಿನಲ್ಲಿದ್ದ ಆಹಾರ ಧಾನ್ಯ ಚೀಲಗಳನ್ನು ಮತ್ತೊಂದು ಖಾಸಗಿ ಲಾರಿ ತರಿಸಿ ತುಂಬಿಕೊಂಡು ಪೊಲೀಸರು ಜಪ್ತಿ ಮಾಡಿದರು. ಆಹಾರ ಧಾನ್ಯ ಚೀಲಗಳನ್ನು ಲಾರಿಗೆ ತುಂಬಿದ ಶ್ರೀಕಾಂತ ಭೀಮಶಾ, ಸಂಜು, ರಾಮು ಹಣಮಂತ, ಶಿವರಾಯ ಹಣಮಂತ, ರಾಜು ಸಾಬಯ್ಯ ಹಾಗೂ ಲಾರಿ ಚಾಲಕ ಮಂಜುನಾಥ ಚನ್ನವೀರಯ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ. ದಾಲ್‌ಮಿಲ್ ಮಾಲೀಕ ಸೋಮಶೇಖರ ಪಾಟೀಲ್ ಹಾಗೂ ಶಾಂತಕುಮಾರ ಹತ್ತಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅಪರಾಧ ವಿಭಾಗದ ಇನ್ಸ್ ಪೆಕ್ಟರ್ ಎಸ್.ಎಸ್. ಹುಲ್ಲೂರ್ ನೇತೃತ್ವದಲ್ಲಿ ದಾಳಿ ಮಾಡಿದ ಪೊಲೀಸ್ ತಂಡದಲ್ಲಿ ಎ.ಎಸ್.ಐ ಬಸವರಾಜ, ಮುಖ್ಯ ಪೇದೆಗಳಾದ ಶಿವಯೋಗಿ, ಅಣ್ಣಾರಾವ, ಪ್ರಕಾಶ, ಲಕ್ಕಪ್ಪ, ಬಸವರಾಜ, ಪೇದೆ ಅಂಬಾರಾಯ ವಾಹನ ಚಾಲಕ ಈರಣ್ಣ ಇದ್ದರು.ಚಿತ್ತಾಪುರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಂಜೀವಕುಮಾರ ಎನ್ ಕುಂಬಾರಗೆರೆ, ಮುಖ್ಯ ಪೇದೆ ಅಣ್ಣಪ್ಪ ಜಮಾದಾರ್, ಪೇದೆಗಳಾದ ವಿಶ್ವನಾಥ, ಮಲ್ಲಿಕಾರ್ಜುನ ಉಕ್ಲಿ, ಅರವಿಂದ, ದೊಡ್ಡಪ್ಪ, ಪ್ರಶಾಂತ ವಾಹನ ಚಾಲಕ ಭಾಗಪ್ಪ ಇದ್ದರು.

ತನಿಖೆ ಮುಂದುವರಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry