ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

78 ಸಾವಿರ ಹೆಕ್ಟೇರ್‌ನಲ್ಲಿ ₨ 41 ಕೋಟಿ ಬೆಳೆ ಹಾನಿ

ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
Last Updated 24 ಡಿಸೆಂಬರ್ 2013, 9:41 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ 78 ಸಾವಿರ ಹೆಕ್ಟೇರ್ ಜಮೀನಿನಲ್ಲಿ ₨ 41 ಕೋಟಿ ಬೆಳೆ ಹಾನಿ ಉಂಟಾಗಿರುವ ಪ್ರದೇಶಕ್ಕೆ ಕೇಂದ್ರ ಬರ ಅಧ್ಯಯನ ತಂಡ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ನವದೆಹಲಿಯ ಪಶು ಸಂಗೋಪನಾ ಇಲಾಖೆಯ ನಿರ್ದೇಶಕ ಕಾಳಸಿಂಗ್ ಹಾಗೂ ಕುಡಿಯುವ ನೀರು ಮತ್ತು ಸ್ಯಾನಿಟೇಶನ್ ಸಚಿವಾಲಯದ ಉಪ ಸಲಹೆಗಾರ ವಿಜಯಕುಮಾರ ಬಾಥ್ಲಾ ತಂಡವು ಪರಿಶೀಲನೆ ನಡೆಸಿತು.

ಬೈಲಹೊಂಗಲ ತಾಲ್ಲೂಕಿನ-11,912 ಹೆಕ್ಟೇರ್ ಪ್ರದೇಶ, ರಾಮದುರ್ಗ- ತಾಲ್ಲೂಕಿನ 16,622 ಹೆಕ್ಟೇರ್ ಪ್ರದೇಶ, ಸವದತ್ತಿ ತಾಲ್ಲೂಕಿನ 28,017 ಹೆಕ್ಟೇರ್ ಪ್ರದೇಶ, ಚಿಕ್ಕೋಡಿ ತಾಲ್ಲೂಕಿನ- 11,912 ಹೆಕ್ಟೇರ್ ಪ್ರದೇಶ, ಗೋಕಾಕ -6,412, ಹುಕ್ಕೇರಿ -1,835 ಹಾಗೂ ರಾಯಬಾಗ- ತಾಲ್ಲೂಕಿನ 1,863 ಹೆಕ್ಟೇರ್ ಪ್ರದೇಶ ಬರ ಪೀಡಿತ ಪ್ರದೇಶವಾಗಿದೆ. ವಾಡಿಕೆ ಮಳೆಗಿಂತ ಕಡಿಮೆ ಮಳೆ ಬಿದ್ದಿರುವುದರಿಂದ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿ.ಆರ್‌.ಪಾಟೀಲ ಬರ ಅಧ್ಯಯನ ತಂಡಕ್ಕೆ ತಿಳಿಸಿದರು.

ಕೇಂದ್ರ ಬರ ಅಧ್ಯಯನ ತಂಡವು ಬೈಲಹೊಂಗಲ ತಾಲ್ಲೂಕಿನ ನೇಸರಗಿ ಹೋಬಳಿಯ ವಣ್ಣೂರ ಹಾಗೂ ಹಣಬರಟ್ಟಿ ಗ್ರಾಮಗಳ ಬೆಳೆ ಹಾನಿ ಪ್ರದೇಶಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿತು. ಜಿಲ್ಲೆಯಲ್ಲಿ ಸಂಭವಿಸಿದ ಬೆಳೆ ಹಾನಿ ಕುರಿತ ವರದಿಯನ್ನು ಜಿಲ್ಲಾ ಆಡಳಿತವು ಅಧ್ಯಯನ ತಂಡಕ್ಕೆ ಸಲ್ಲಿಸಿತು.

‘ಮುಂಗಾರು ಬೆಳೆಗಳಾದ ಶೇಂಗಾ, ಮೆಕ್ಕೆಜೋಳ, ಸೋಯಾಬಿನ್ ಬೆಳೆಗಳ ಬೀಜ, ಗೊಬ್ಬರ ಹಾಕಿ ಬೆಳೆಯಲಾಗುತ್ತಿತ್ತು. ಮುಂಗಾರು ಮಳೆ ಬಾರದ್ದರಿಂದ ಬೆಳೆ ಹಾನಿಯಾಗಿದೆ. ದನಕರುಗಳಿಗೆ ಮೇವು ಹಾಗೂ ಕುಡಿಯುವ ನೀರಿಗಾಗಿತೊಂದರೆ ಉಂಟಾಗಿರುತ್ತದೆ. ಈ ಭಾಗಕ್ಕೆ ನೀರಾವರಿಗಾಗಿ ಕಾಲುವೆ ಮಾಡಲಾಗುತ್ತಿದ್ದು, ಆದಷ್ಟು ಬೇಗನೆ ಪೂರ್ಣಗೊಳಿಸಿ ನೀರು ಪೂರೈಕೆ ಮಾಡಬೇಕು’ ಎಂದು ರೈತ ಹಜರತ್‌ಸಾಬ್ ಅಪ್ಪಾಸಾಹೇಬ ಕಿಲ್ಲೇದಾರ ಮನವಿ ಮಾಡಿದರು.

ಮಳೆ ಅಭಾವದಿಂದ ಬರ ಪರಿಸ್ಥಿತಿ ಪ್ರತಿ ವರ್ಷ ಇರುತ್ತದೆ. ಬೆಳೆ ಹಾನಿಗೆ ಯೋಗ್ಯ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದರು.

ತಂಡದೊಂದಿಗೆ ಜಿಲ್ಲಾಧಿಕಾರಿ ಎನ್.ಜಯರಾಂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಾ ಚೋಳನ್‌, ಬೈಲಹೊಂಗಲ ಉಪವಿಭಾಗಾಧಿಕಾರಿ ಡಾ. ವಿಜಯಕುಮಾರ ಹೊನಕೇರಿ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ತಂಡದ ಸದಸ್ಯರಿಗೆ ಮಾಹಿತಿ ನೀಡಿದರು.

ಸಂಸದ ಅಂಗಡಿ ಮನವಿ: ಬೆಳಗಾವಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಬೈಲಹೊಂಗಲ, ರಾಮದುರ್ಗ ಹಾಗೂ ಸವದತ್ತಿ ತಾಲ್ಲೂಕುಗಳಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದರಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ದನಕರುಗಳಿಗೆ ಮೇವು, ಕುಡಿಯುವ ನೀರು ಇಲ್ಲದಂತಾಗಿದೆ. ಈ ಭಾಗದ ರೈತರಿಗೆ ಹೆಚ್ಚಿನ ನೆರವಿನ ಅವಶ್ಯಕತೆ ಇದೆ. ಆದ್ದರಿಂದ ವಿಶೇಷ ಆರ್ಥಿಕ ನೆರವು ಒದಗಿಸಬೇಕು ಎಂದು ಬರ ಅಧ್ಯಯನ ತಂಡಕ್ಕೆ ಪ್ರಸ್ತಾವ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT