ಮಂಗಳವಾರ, ಮೇ 18, 2021
25 °C

786ರ ಮಾಯೆ!

ಕಾಶೀನಾಥ ಬಿಳಿಮಗ್ಗದ Updated:

ಅಕ್ಷರ ಗಾತ್ರ : | |

ಮುಂಡರಗಿ ತಾಲ್ಲೂಕಿನ ಮೇವುಂಡಿ ಗ್ರಾಮದ ಹನುಮಂತರಾವ್ ರಾಮರಾವ್ ದಪ್ತರದಾರ ಅವರಿಗೆ ಮುಸ್ಲಿಮರ ಪವಿತ್ರ ಮತ್ತು ಶುಭ ಸಂಖ್ಯೆ 786ರ ಮೇಲೆ ಅಪಾರ ಭಕ್ತಿ ಮತ್ತು ಪ್ರೀತಿ!786ರಿಂದ ಕೊನೆಗೊಳ್ಳುವ ಒಂದು ರೂಪಾಯಿ ನೋಟಿನಿಂದ ಹಿಡಿದು ಸಾವಿರ ರೂಪಾಯಿ ಮುಖಬೆಲೆಯ ಸಾವಿರಾರು ನೋಟುಗಳು ಅವರ ಸಂಗ್ರಹದಲ್ಲಿವೆ.ಹನುಮಂತರಾವ್ ಅವರು ತಮ್ಮ ಕೈಗೆ ಬರುವ ನೋಟಿನ ಮುಖ ಬೆಲೆಯನ್ನು ನೋಡುವುದಕ್ಕಿಂತ ಮೊದಲು ನೋಟುಗಳ ಮೇಲ್ಭಾಗದ ಬಲಬದಿಯಲ್ಲಿ ಮುದ್ರಿಸಿರುವ ನೋಟುಗಳ ಸಂಖ್ಯೆಯನ್ನು ನೋಡುತ್ತಾರೆ. ಅವುಗಳಲ್ಲಿ ಯಾವುದಾದರೂ ನೋಟಿನ ಸಂಖ್ಯೆ 786 ನಂಬರ್ ಇದ್ದರೆ ಅಥವಾ 786ರಿಂದ ಕೊನೆಗೊಂಡಿದ್ದರೆ ತಕ್ಷಣ ಅವುಗಳನ್ನು ಬೇರೆ ಇಟ್ಟು ನಂತರ ಉಳಿದ ಹಣವನ್ನು ಎಣಿಸುತ್ತಾರೆ. ಅಂತಹ ಸಂಖ್ಯೆಯನ್ನು ಹೊಂದಿದ ಯಾವುದೇ ನೋಟನ್ನು ಅವರು ಯಾವ ಕಾರಣಕ್ಕೂ ಬಳಸದೆ ಹಾಗೇ ಇಟ್ಟುಕೊಳ್ಳುತ್ತಾರೆ. ಪ್ರತಿ ದೀಪಾವಳಿ ಅಮಾವಾಸ್ಯೆಯಂದು ಆ ನೋಟುಗಳನ್ನು ಮಹಾಲಕ್ಷ್ಮಿಯ ಮುಂದಿಟ್ಟು ವಿಶೇಷ ಪೂಜೆ ಸಲ್ಲಿಸುತ್ತಾರೆ.ಕಾಕತಾಳಿಯವೆನ್ನುವಂತೆ ಅವರ ಕಾರ್ ಸಂಖ್ಯೆ ಕೂಡ 786. ಆಶ್ಚರ್ಯವೆಂದರೆ ಅವರ ಎಸ್‌ಬಿಐ (ಮುಂಡರಗಿ ಶಾಖೆ) ಎಟಿಎಂ ಕಾರ್ಡ್‌ನ ಸಂಖ್ಯೆಯೂ 786. ಅವರಿಗೆ ಬರುವ ಚೆಕ್ಕುಗಳ ಸಂಖ್ಯೆ 786ರಿಂದ ಕೊನೆಗೊಂಡಿದ್ದರೆ ಅಥವಾ ಸಂಖ್ಯೆಯ ಮಧ್ಯದಲ್ಲಿ 786ಸಂಖ್ಯೆ ಇದ್ದರೆ ತಕ್ಷಣ ಅದನ್ನು ಜೆರಾಕ್ಸ್ ಮಾಡಿಸಿ ಇಟ್ಟುಕೊಳ್ಳುತ್ತಾರೆ.ಹನುಮಂತರಾವ್ ವೃತ್ತಿಯಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರು. ಅವರಿಗೆ ಈ ಸಂಖ್ಯಾ ವ್ಯಾಮೋಹ ಅವರ ತಂದೆ, ಸ್ವಾತಂತ್ರ ಹೋರಾಟಗಾರ ದಿವಂಗತ ರಾಮರಾವ್ ಅವರಿಂದ ಬಂದದ್ದು. ಈಗಲೂ ಅವರು ಹಾಗೂ ಅವರ ಕುಟುಂಬ ವರ್ಗದವರು ತಪ್ಪದೇ ಮಸೀದಿಗೆ ತೆರಳಿ ಅಲ್ಲಾನಿಗೆ ನಮಸ್ಕರಿಸುತ್ತಾರೆ. ಮೇವುಂಡಿ ಗ್ರಾಮದಲ್ಲಿ ಆಚರಿಸುವ ಮೋಹರಂ ಹಬ್ಬದಲ್ಲಿ ಈಗಲೂ ಹನುಮಂತರಾವ್ ಅವರು ಮುಂದಾಳತ್ವ ವಹಿಸುತ್ತಿದ್ದು, ಮೋಹರಂ ಹಬ್ಬದಲ್ಲಿ ಮೊದಲ ಓದಿಕೆ(ಪೂಜೆ) ಇವರಿಂದಲೇ ಪ್ರಾರಂಭವಾಗುತ್ತದೆ. ಗ್ರಾಮದ ಮಸೀದಿಗೆ ನಡೆದುಕೊಂಡಿದ್ದರಿಂದಲೇ ಹನುಮಂತರಾವ್ ಅವರಿಗೆ ಗಂಡು ಮಗು ಹುಟ್ಟಿದ್ದು ಎಂದು ಅವರು ನಂಬುತ್ತಾರೆ.`ನಮ್ಮ ತಂದೆಯವರು ಗ್ರಾಮದ ಮಸೀದಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು. ಅವರ ದಾರಿಯಲ್ಲಿ ನಾನೂ ನಡೆಯುತ್ತಿದ್ದೇನೆ. ಮನೆಯ ದೇವರು ಮೈಲಾರಲಿಂಗನಾದರೂ ನಾವು ಎಲ್ಲ ದೇವರಿಗೂ ಭಕ್ತಿಯಿಂದ ಕೈ ಮುಗಿಯುತ್ತೇವೆ. ಹಿಂದೂ, ಮುಸ್ಲಿಂ, ಕ್ರೈಸ್ತ ಇವೆಲ್ಲ ನಾವು ಮಾಡಿಕೊಂಡಿರುವುದು. ನಮ್ಮೆಲ್ಲರೊಳಗೂ ಒಬ್ಬನೆ ದೇವರಿದ್ದಾರೆ. ಅಷ್ಟನ್ನು ಅರ್ಥ ಮಾಡಿಕೊಂಡರೆ ಎಲ್ಲರೂ ನೆಮ್ಮದಿಯಿಂದ ಇರಬಹುದು' ಎನ್ನುತ್ತಾರೆ ಹನುಮಂತರಾವ್.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.