ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

79 ಕೃತಿಗಳ ಹಸ್ತಪ್ರತಿ ಸಲ್ಲಿಸಲು ಗಡುವು

Last Updated 25 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ವಿಜಾಪುರ:  ನಗರದಲ್ಲಿ ಫೆಬ್ರುವರಿ 8ರಿಂದ 10 ರವರೆಗೆ ನಡೆಯಲಿರುವ 79ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮುದ್ರಿಸಲು ನಿರ್ಧರಿಸಿರುವ 79 ಕೃತಿಗಳ ಹಸ್ತಪ್ರತಿಗಳನ್ನು 2013ರ ಜನವರಿ 1ರ ಒಳಗಾಗಿ ಜಿಲ್ಲಾ ಆಡಳಿತಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ತಿಳಿಸಿದರು.

ಸೋಮವಾರ ಇಲ್ಲಿ ನಡೆದ ಪುಸ್ತಕ ಆಯ್ಕೆ ಸಮಿತಿ ಸಭೆಯಲ್ಲಿ ಮಾತನಾಡಿ, ಸಮ್ಮೇಳನದ ಪೂರ್ವದಲ್ಲಿಯೇ ಎಲ್ಲ 79 ಕೃತಿಗಳನ್ನು ಮುದ್ರಿಸಬೇಕಿದೆ. ಸಮಯಾವಕಾಶ ಕಡಿಮೆ ಇರುವುದರಿಂದ ಪುಸ್ತಕಗಳ ಆಯ್ಕೆಯನ್ನು ಅಂತಿಮಗೊಳಿಸಿ, ಆಯ್ಕೆಯಾದ ಕೃತಿಗಳ ಹಸ್ತಪ್ರತಿಯನ್ನು ತ್ವರಿತವಾಗಿ ಸಲ್ಲಿಸಬೇಕು ಎಂದರು.

ಸಾಹಿತ್ಯ ಸಮ್ಮೇಳನದ ಪುಸ್ತಕಗಳ ಆಯ್ಕೆ ಸಮಿತಿಯ ಅಧ್ಯಕ್ಷ ಡಾ.ಎಂ.ಎನ್. ವಾಲಿ, `ಸಮ್ಮೇಳನದ ಅಂಗವಾಗಿ 79 ಪುಸ್ತಕಗಳನ್ನು ಮುದ್ರಿಸಬೇಕಾಗಿದೆ. ಈ ಪೈಕಿ ಕೇಂದ್ರ ಸಾಹಿತ್ಯ ಪರಿಷತ್ 25 ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ 25 ಕೃತಿಗಳನ್ನು ಆಯ್ಕೆ ಮಾಡಬೇಕು. ಉಳಿದ 29 ಕೃತಿಗಳನ್ನು ಇತರ ಜಿಲ್ಲೆಗಳಿಂದ ತಲಾ ಒಂದೊಂದು ಕೃತಿ ಪಡೆಯಲಾಗುತ್ತಿದೆ' ಎಂದರು.

`ವಿಜಾಪುರ ಜಿಲ್ಲೆಯಿಂದ 29 ಕೃತಿಗಳನ್ನು ಆಯ್ಕೆ ಮಾಡುವ ಹೊಣೆ ಪುಸ್ತಕ ಆಯ್ಕೆ ಸಮಿತಿಯದ್ದಾಗಿದೆ.  ಜಿಲ್ಲೆಯಿಂದ ನಾಟಕ, ಕವನ ಸಂಕಲನ ಹಾಗೂ ಸಾಹಿತ್ಯದ ಇತರ ಪ್ರಕಾರಗಳ 107 ಕೃತಿಗಳು ಬಂದಿವೆ. ಎಲ್ಲ ಕೃತಿಗಳನ್ನು ಪರಿಶೀಲಿಸಲಾಗಿದೆ. 29 ಕೃತಿಗಳ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ' ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಅಂದಾಜು 500 ಪುಟಗಳ ಸ್ಮರಣ ಸಂಚಿಕೆ ಹಾಗೂ 79 ಕೃತಿಗಳ ಮುದ್ರಣಕ್ಕೆ ಸುಮಾರು ರೂ 25 ಲಕ್ಷ ವೆಚ್ಚವಾಗಬಹುದು ಎಂದರು.

ಸಮ್ಮೇಳನದ ಅಂಗವಾಗಿ ಗೋಲಗುಮ್ಮಟ, ಇಬ್ರಾಹಿಂ ರೋಜಾ ಸ್ಮಾರಕಗಳಿಗೆ ಬೆಳಕಿನ ವ್ಯವಸ್ಥೆ ಹಾಗೂ ನಗರದ ರಸ್ತೆಗಳ ದುರಸ್ತಿ ಪ್ರಕ್ರಿಯೆ ಜಾರಿಯಲ್ಲಿದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಮನ್ವಯಾಧಿಕಾರಿಯನ್ನಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಜೆ. ಸಿದ್ದಪ್ಪ ಅವರನ್ನು ನೇಮಕ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT