ಮಂಗಳವಾರ, ಅಕ್ಟೋಬರ್ 15, 2019
28 °C

8ರಂದು 60 ಕೃತಿಗಳ ಲೋಕಾರ್ಪಣೆ

Published:
Updated:

ಗುಲ್ಬರ್ಗ: ಇಲ್ಲಿನ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆಯ 35ನೇ ವಾರ್ಷಿಕೋತ್ಸವ ಹಾಗೂ ಪ್ರಕಾಶಕ ಬಸವರಾಜ ಕೊನೇಕ್ ಅವರ ಷಷ್ಟ್ಯಬ್ದ ಸಮಾರಂಭದ ಅಂಗವಾಗಿ ಜ. 8ರಂದು ಎಸ್.ಎಂ. ಪಂಡಿತ ರಂಗಮಂದಿರದಲ್ಲಿ 60 ಮೌಲಿಕ ಕೃತಿಗಳ ಲೋಕಾರ್ಪಣೆ ಜರುಗಲಿದೆ ಎಂದು ಬಸವರಾಜ್ ಕೊನೇಕ್ ತಿಳಿಸಿದರು.ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಮುಂಚೆ (ಡಿ. 12, 2977) ಕೇವಲ ಪಠ್ಯಪುಸ್ತಕ ಮಾರಾಟಕ್ಕೆ ಮಾತ್ರ ಸೀಮಿತವಾಗಿದ್ದ ಬುಕ್ ಡಿಪೋ ಈ ಭಾಗದ ಮೌಲ್ಯಯುತ ಕೃತಿ ಪ್ರಕಾಶನದ ಕೊರತೆ ನೀಗಿಸುವುದಕ್ಕಾಗಿ ಪ್ರಕಾಶನ ಸಂಸ್ಥೆಯೊಂದನ್ನು ಹುಟ್ಟು ಹಾಕಿತ್ತು. ಆ ಮೂಲಕ ಸಮಾಜಶಾಸ್ತ್ರ, ಮಾನವಿಕ, ಇತಿಹಾಸ, ಪಠ್ಯಪುಸ್ತಕದ ಜೊತೆಗೆ ಜನಪ್ರಿಯ, ದರ್ಶನ, ಸಾಹಿತ್ಯ, ಪರಿಚಯ ಮಾಲಿಕೆ, ಸ್ಪರ್ಧಾತ್ಮಕ, ಕನ್ನಡ ಸಾಹಿತ್ಯ  ಸೇರಿ 850 ಗ್ರಂಥಗಳನ್ನು ಪ್ರಕಟಿಸಿದೆ ಎಂದರು.ಸಾಹಿತಿ ಬಾಲಚಂದ್ರ ಜಯಶೆಟ್ಟಿ ಅವರು ಅನುವಾದಿಸಿದ `ವಿಭೂತಿಯಾ~ ಎನ್ನುವ ಗ್ರಂಥವನ್ನು ಮೊಟ್ಟ ಮೊದಲ ಬಾರಿಗೆ ಪ್ರಕಟಿಸುವ ಮೂಲಕ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪುಸ್ತಕ ಬಹುಮಾನ ಪಡೆದ ಪ್ರಕಾಶನ ಸಂಸ್ಥೆ ನಂತರದ ದಿನಗಳಲ್ಲಿ ಈ ಭಾಗದ ಲೇಖಕರನ್ನೇ ಬಳಸಿಕೊಂಡು ಸಾಕಷ್ಟು ಕೃತಿಗಳನ್ನು ಪ್ರಕಟಿಸಿದ್ದು, ವಾರ್ಷಿಕೋತ್ಸವದ ಸವಿ ನೆನಪಲ್ಲಿ ಅಷ್ಟೇ ಕೃತಿಗಳನ್ನು ಬಿಡುಗಡೆ ಮಾಡುವ ಮೂಲಕ ತಾನು ಸ್ಥಾಪಿಸಿದ ದಾಖಲೆಯನ್ನು ತಾನೇ ಮುರಿಯುತ್ತ ರಾಜ್ಯ ಮಟ್ಟದ ಉತ್ತಮ ಪ್ರಕಾಶನ ಸಂಸ್ಥೆಯಾಗಿ ಮುನ್ನಡೆದಿದೆ ಎಂದು ವಿವರಿಸಿದರು.ಷಷ್ಟ್ಯಬ್ದ ಸಮಾರಂಭದ ಅಂಗವಾಗಿ ಸರಸ್ವತಿ ಗೋದಾಮಿನ ಹತ್ತಿರವಿರುವ ಪ್ರಕಾಶನ ಸಂಸ್ಥೆಯಿಂದ ಕಾರ್ಯಕ್ರಮ ನಡೆಯುವ ಎಸ್.ಎಂ. ಪಂಡಿತ ರಂಗ ಮಂದಿರದವರೆಗೆ 60 ಜನ ಸುಮಂಗಲೆಯರು, 60 ಜನ ಸಾಹಿತಿಗಳು ಗ್ರಂಥಗಳನ್ನು ತಲೆ ಮೇಲೆ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.8ರಂದು ಬೆಳಿಗ್ಗೆ 10ಕ್ಕೆ ವಾರ್ಷಿಕೋತ್ಸವ ಸಮಾರಂಭವನ್ನು ಗ್ರಂಥಾಲಯ ಸಚಿವ ರೇವುನಾಯಕ ಬೆಳಮಗಿ ಉದ್ಘಾಟಿಸುವರು. ಗದುಗಿನ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ, ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಶೋಧಕ ಡಾ. ಎಂ.ಎಂ. ಕಲ್ಬುರ್ಗಿ, ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ. ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಡಾ. ಕಮಲಾ ಹಂಪನಾ ಮತ್ತು ಡಾ. ಸಾ.ಶಿ. ಮರುಳಯ್ಯ ಕೃತಿಗಳ ಕುರಿತು ಮಾತನಾಡಲಿದ್ದಾರೆ. ಸಂಜೆ 5ಕ್ಕೆ ನಡೆಯಲಿರುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಶರಣಬಸವೇಶ್ವರ ಸಂಸ್ಥಾನದ ಬಸವರಾಜಪ್ಪ ಅಪ್ಪ ವಹಿಸಲಿದ್ದು, ಡಾ. ವಸಂತ ಕುಷ್ಟಗಿ ಅಧ್ಯಕ್ಷತೆ ವಹಿಸಲಿದ್ದಾರೆ. `ಬಸವಸಿರಿ~ ಅಭಿನಂದನ ಗ್ರಂಥವನ್ನು ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಬಿಡುಗಡೆಗೊಳಿಸುವರು. ಡಾ. ಸಾರಾ ಅಬೂಬಕ್ಕರ, ಡಾ. ಬಿ.ವಿ. ಮಲ್ಲಾಪುರ, ಡಾ. ಗಿರಡ್ಡಿ ಗೋವಿಂದರಾಜ, ಪ್ರಕಾಶ ಹೆಬ್ಬಾರ್, ಪ್ರೊ. ಅಲ್ಲಮಪ್ರಭು ಬೆಟ್ಟದೂರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಸಾಹಿತ್ಯಾಸಕ್ತರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.ಪ್ರೊ. ಶಿವರಾಜ ಪಾಟೀಲ, ಪ್ರೊ. ಸೂಗಯ್ಯ ಹಿರೇಮಠ, ಡಾ. ಚಿ.ಸಿ. ನಿಂಗಣ್ಣ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Post Comments (+)