ಶುಕ್ರವಾರ, ಮೇ 7, 2021
21 °C

8 ಪ್ರಮುಖ ಕೈಗಾರಿಕೆ ಉತ್ಪಾದನೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕಲ್ಲಿದ್ದಲು, ವಿದ್ಯುತ್ ಮತ್ತು ಸಿಮೆಂಟ್ ಉತ್ಪಾದನೆ ಹೆಚ್ಚಳಗೊಂಡಿರುವುದರಿಂದ ಫೆಬ್ರುವರಿ ತಿಂಗಳಲ್ಲಿ ಎಂಟು ಪ್ರಮುಖ ಕೈಗಾರಿಕೆಗಳ ಉತ್ಪಾದನೆಯು ಶೇ 6.8ರಷ್ಟು ಏರಿಕೆ ದಾಖಲಿಸಿದೆ.ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ ಶೇ 38ರಷ್ಟು ಪಾಲು ಹೊಂದಿರುವ ಎಂಟು ಪ್ರಮುಖ ಕೈಗಾರಿಕೆಗಳ ಒಟ್ಟಾರೆ ಉತ್ಪಾದನೆ ಹೆಚ್ಚಳವು, ಕೈಗಾರಿಕಾ ವಲಯವು ಚೇತರಿಸಿಕೊಳ್ಳುವ ಆಶಾವಾದ ಮೂಡಿಸಿದೆ.

ಜನವರಿ ತಿಂಗಳಲ್ಲಿನ ನಿರಾಶಾದಾಯಕವಾದ ಶೇ 0.5ರಷ್ಟು ಉತ್ಪಾದನೆ ಹೆಚ್ಚಳಕ್ಕೆ ಹೋಲಿಸಿದರೆ, ಫೆಬ್ರುವರಿ ತಿಂಗಳ ಅಂಕಿ ಅಂಶಗಳು ಉತ್ತೇಜನಕಾರಿಯಾಗಿವೆ.

 

ಕಳೆದ ವರ್ಷದ ಇದೇ ಅವಧಿಯಲ್ಲಿಯೂ ಕೈಗಾರಿಕಾ ವಲಯದ ಉತ್ಪಾದನೆಯು ಶೇ 6.4ರಷ್ಟು ಏರಿಕೆ ದಾಖಲಿಸಿತ್ತು.  ಇಲ್ಲಿ ಬಿಡುಗಡೆ ಮಾಡಿರುವ ತಾತ್ಕಾಲಿಕ ಅಂಕಿ ಅಂಶಗಳ ಪ್ರಕಾರ, ವಿದ್ಯುತ್, ಕಲ್ಲಿದ್ದಲು ಮತ್ತು ಸಿಮೆಂಟ್ ಉತ್ಪಾದನೆಯು ಕ್ರಮವಾಗಿ ಶೇ 8, ಶೇ 17.8 ಮತ್ತು ಶೇ 10.8ರಷ್ಟು ಹೆಚ್ಚಾಗಿದೆ.  ಕಳೆದ ವರ್ಷದ ಇದೇ ಅವಧಿಯಲ್ಲಿನ ಉತ್ಪಾದನೆಯು ಇದಕ್ಕಿಂತ ಕಡಿಮೆ ಇತ್ತು.ಕಚ್ಚಾ ತೈಲದ ಉತ್ಪಾದನೆ ಮಾತ್ರ ಕಳೆದ ವರ್ಷದ ಶೇ 12ಕ್ಕೆ ಹೋಲಿಸಿದರೆ ಈ ಬಾರಿ ಕೇವಲ ಶೇ 0.4ರಷ್ಟಾಗಿದೆ. ಆದರೆ, ಶುದ್ಧೀಕೃತ ಪೆಟ್ರೋಲಿಯಂ  ಉತ್ಪನ್ನಗಳ ಉತ್ಪಾದನೆಯು ಶೇ 3.2ರ ಬದಲಿಗೆ ಶೇ 6.2ರಷ್ಟು ಹೆಚ್ಚಳ ದಾಖಲಿಸಿದೆ. ನೈಸರ್ಗಿಕ ಅನಿಲ ಉತ್ಪಾದನೆಯು ಶೇ 7.6ರಷ್ಟು ಕಡಿಮೆಯಾಗಿದೆ. ರಸಗೊಬ್ಬರ ಮತ್ತು ಉಕ್ಕು ಉತ್ಪಾದನೆಯೂ ಹೆಚ್ಚಳಗೊಂಡಿದೆ.2011-12ನೇ ಹಣಕಾಸು ವರ್ಷದ ಏಪ್ರಿಲ್ - ಫೆಬ್ರುವರಿ ಅವಧಿಯಲ್ಲಿ, ಪ್ರಮುಖ ಕೈಗಾರಿಕೆಗಳ ಉತ್ಪಾದನೆಯು, ಹಿಂದಿನ ವರ್ಷದ ಇದೇ ಅವಧಿಯಲ್ಲಿನ ಶೇ 5.8ರಷ್ಟು ವೃದ್ಧಿಗೆ ಹೋಲಿಸಿದರೆ ಈ ಬಾರಿ ಉತ್ಪಾದನೆ ಹೆಚ್ಚಳವು ಶೇ 4.4ರಷ್ಟಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.