ಬುಧವಾರ, ನವೆಂಬರ್ 13, 2019
21 °C

8 ಮಂದಿ ನೇಣಿಗೆ `ಸುಪ್ರೀಂ' ತಡೆ

Published:
Updated:

ನವದೆಹಲಿ (ಪಿಟಿಐ): ವಿವಿಧ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದ ಎಂಟು ಅಪರಾಧಿಗಳ ಗಲ್ಲುಶಿಕ್ಷೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಕಳೆದ ವಾರವಷ್ಟೇ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಇವರ ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಿದ್ದರು.ಮಂಗಳೂರಿನ ಪ್ರವೀಣ್ ಕುಮಾರ್ ಹಾಗೂ ವಿವಿಧ ರಾಜ್ಯಗಳಿಗೆ ಸೇರಿದ ಸುರೇಶ್, ರಾಮ್‌ಜೀ, ಗುರ್ಮೀತ್ ಸಿಂಗ್, ಹರಿಯಾಣದ ಮಾಜಿ ಶಾಸಕರೊಬ್ಬರ ಪುತ್ರಿ ಸೋನಿಯಾ ಮತ್ತು ಆಕೆಯ ಪತಿ ಸಂಜೀವ್, ಸುಂದರ್ ಸಿಂಗ್ ಮತ್ತು ಜಾಫರ್ ಅಲಿ ಇವರ ಗಲ್ಲು ಶಿಕ್ಷೆಯನ್ನು ಕೋರ್ಟ್ ನಾಲ್ಕು ವಾರ ತಡೆ ಹಿಡಿದಿದೆ.ಗಲ್ಲುಶಿಕ್ಷೆಗೆ ಒಳಗಾಗಲಿರುವ ಅಪರಾಧಿಗಳ ಸಂಬಂಧಿಕರು ಮತ್ತು ನಾಗರಿಕ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪ್ರಜಾಸತ್ತಾತ್ಮಕ ಹಕ್ಕುಗಳ ನಾಗರಿಕರ ಒಕ್ಕೂಟ (ಪಿಯುಡಿಆರ್) ಸಲ್ಲಿಸಿದ ಅರ್ಜಿಯನ್ನು ದ್ವಿಸದಸ್ಯ ಪೀಠ ಶನಿವಾರ ಸಂಜೆ ತುರ್ತಾಗಿ ವಿಚಾರಣೆಗೆ ಎತ್ತಿಕೊಂಡಿತು. `ಜಮ್ಮು ಮತ್ತು ಕಾಶ್ಮೀರದಲ್ಲಿ ತಲೆದೋರಿದ್ದ ಸ್ಥಿತಿ ಮತ್ತೊಮ್ಮೆ ಪುನರಾವರ್ತನೆಯಾಗದಿರಲಿ' ಎಂದು ಅದು ಇದೇ ವೇಳೆ ಅಭಿಪ್ರಾಯಪಟ್ಟಿತು.`ವ್ಯಕ್ತಿಯೊಬ್ಬರಿಗೆ ಗಲ್ಲುಶಿಕ್ಷೆ ವಿಧಿಸಿದ ಬಳಿಕ ಅವರ ಕುಟುಂಬದವರಿಗೆ ಆ ವಿಷಯ ತಿಳಿಸಲಾಯಿತು. ಇದರಿಂದ ನೇಣಿಗೆ ಏರುವ ಮುನ್ನ ಆರೋಪಿಯನ್ನು ಅವರ ಕುಟುಂಬದ ಸದಸ್ಯರು ಭೇಟಿಯಾಗಲು ಸಾಧ್ಯವಾಗಲಿಲ್ಲ' ಎಂದು ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಪಿ. ಸತ್ಯಶಿವಂ ಮತ್ತು ಎಂ.ವೈ. ಇಕ್ಬಾಲ್ ಅವರು, ಅಫ್ಜಲ್ ಗುರು ಪ್ರಕರಣವನ್ನು ಉಲ್ಲೇಖಿಸದೇ ಹೇಳಿದರು. ಫೆಬ್ರುವರಿ 9ರಂದು ನೇಣುಗಂಬ ಏರಿದ ಅಫ್ಜಲ್ ಗುರುವಿನ ಶಿಕ್ಷೆಯ ವಿಷಯವನ್ನು ಸಂಬಂಧಿಕರಿಗೆ ಎರಡು ದಿನಗಳ ಬಳಿಕ ಅಂಚೆ ಮೂಲಕ ತಿಳಿಸಲಾಗಿತ್ತು.`ಎಂಟು ಅಪರಾಧಿಗಳ ಗಲ್ಲು ಶಿಕ್ಷೆಗೆ ತಡೆ ನೀಡಲಾಗಿದೆ. ಸಂಬಂಧಿಸಿದ ರಾಜ್ಯಗಳಿಗೆ ನೋಟಿಸ್ ನೀಡಲಾಗಿದೆ. ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ' ಎಂದು ನ್ಯಾಯಮೂರ್ತಿಗಳು ತಿಳಿಸಿದರು. ಅಪರಾಧಿಗಳ ಕ್ಷಮಾದಾನದ ಅರ್ಜಿಯನ್ನು ರಾಷ್ಟ್ರಪತಿಯವರು ತಿರಸ್ಕರಿಸಿದ್ದು, ಯಾವುದೇ ಸಂದರ್ಭದಲ್ಲಿ ಎಂಟು ಮಂದಿಯನ್ನು ಗಲ್ಲಿಗೇರಿಸಬಹುದು ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ತುರ್ತಾಗಿ ನಡೆಸಲಾಯಿತು.ಪ್ರವೀಣ್ ಕುಮಾರ್ ಕರ್ನಾಟಕದ ಜೈಲಿನಲ್ಲಿ ಬಂಧಿಯಾಗಿದ್ದರೆ, ಸುರೇಶ್, ರಾಮ್‌ಜೀ, ಗುರ್ಮೀತ್ ಸಿಂಗ್ ಮತ್ತು ಜಾಫರ್ ಅಲಿ ಉತ್ತರ ಪ್ರದೇಶದ ಜೈಲಿನಲ್ಲಿ ಇದ್ದಾರೆ. ಹರಿಯಾಣದ ಮಾಜಿ ಶಾಸಕ ರಾಲುರಾಮ್ ಪುನಿಯಾ ಪುತ್ರಿ ಸೋನಿಯಾ ಮತ್ತು ಅವರ ಪತಿ ಸಂಜೀವ್‌ನನ್ನು ಆ ರಾಜ್ಯದ ಜೈಲಿನಲ್ಲಿ ಇರಿಸಲಾಗಿದೆ. ಸುಂದರ್ ಸಿಂಗ್‌ನನ್ನು ಉತ್ತರಾಂಚಲ ಜೈಲಿನಲ್ಲಿ ಇಡಲಾಗಿದೆ.ಪ್ರವೀಣ್ ಕೊಲೆಯೊಂದರ ಅಪರಾಧಿ. ಸೋನಿಯಾ ಮತ್ತು ಸಂಜೀವ್ 2001ರಲ್ಲಿ ಪೋಷಕರು ಸೇರಿದಂತೆ ಕುಟುಂಬದ ಎಂಟು ಸದಸ್ಯರನ್ನು ಹತ್ಯೆ ಮಾಡಿದ್ದರು. ಗುರ್ಮೀತ್ ಸಿಂಗ್ 1986ರಲ್ಲಿ ತನ್ನ ಕುಟುಂಬದ 13 ಸದಸ್ಯರನ್ನು ಕೊಲೆ ಮಾಡಿದ್ದ. ಜಾಫರ್ ಅಲಿ ಪತ್ನಿ ಮತ್ತು ಐವರು ಪುತ್ರಿಯರನ್ನು ಹತ್ಯೆ ಮಾಡಿದ್ದ. ಸುರೇಶ್ ಮತ್ತು ರಾಮ್‌ಜೀ ಐವರು ಸಂಬಂಧಿಕರ ಕೊಲೆ ಮಾಡಿದ್ದರು.

`ಕುಟುಂಬಕ್ಕೆ ಮೊದಲೇ ತಿಳಿಸಿ'

ನವದೆಹಲಿ (ಪಿಟಿಐ): ಅಪರಾಧಿಯನ್ನು ಗಲ್ಲಿಗೇರಿಸುವ ಮುನ್ನ ಕುಟುಂಬದವರಿಗೆ ಮಾಹಿತಿ ನೀಡಬೇಕೆಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಸಲಹೆ ಮಾಡಿದರು.`ಮುಂಚಿತವಾಗಿ ತಿಳಿಸಲೇಬೇಕು ಎಂಬ ನಿಯಮ ಹಿಂದೆ ಇತ್ತು. ಈಗಲೂ ಅದು ಇದೆ. ನನಗೆ ಗೊತ್ತಿರುವಂತೆ ಆ ರೀತಿ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ಅವರು ಭಾನುವಾರ ಇಲ್ಲಿ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಮಾವೇಶದ ಬಳಿಕ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರತಿಕ್ರಿಯಿಸಿ (+)