8 ವಾರ್ಡ್ ಕಾಮಗಾರಿಗಳಲ್ಲಿ ಅಕ್ರಮ

7
ರೂ. 40 ಕೋಟಿ ನಷ್ಟ- ತಾಂತ್ರಿಕ ಹಾಗೂ ಜಾಗೃತಿ ಕೋಶದ ತನಿಖೆಯಿಂದ ಪತ್ತೆ

8 ವಾರ್ಡ್ ಕಾಮಗಾರಿಗಳಲ್ಲಿ ಅಕ್ರಮ

Published:
Updated:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ನಗರದ ಎಂಟು ವಾರ್ಡ್‌ಗಳಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವುದನ್ನು ತಾಂತ್ರಿಕ ಹಾಗೂ ಜಾಗೃತಿ ಕೋಶ (ಟಿವಿಸಿಸಿ) ಪತ್ತೆ ಹಚ್ಚಿದೆ. ಇದರಿಂದ ಸುಮಾರುರೂ.40 ಕೋಟಿಯಷ್ಟು ಬಿಬಿಎಂಪಿ ಹಣ ಪೋಲಾಗಿದೆ ಎಂಬ ಅಂದಾಜು ಮಾಡಲಾಗಿದೆ.ಬಿಬಿಎಂಪಿ ಆಯುಕ್ತರ ಆದೇಶದ ಮೇರೆಗೆ ಟಿವಿಸಿಸಿ, ಎಂಟು ವಲಯಗಳ ತಲಾ ಒಂದೊಂದು ವಾರ್ಡ್‌ನಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಕೈಗೊಂಡ ಕಾಮಗಾರಿಗಳನ್ನು ತನಿಖೆ ಒಳಪಡಿಸಿದೆ. ತನಿಖಾ ವರದಿಯನ್ನು ಈಗಾಗಲೇ ವಿಶೇಷ ಆಯುಕ್ತರಿಗೆ (ಆಡಳಿತ) ಸಲ್ಲಿಸಲಾಗಿದೆ.`ತನಿಖೆಗೆ ಒಳಪಡಿಸಿದ ಅವಧಿಯಲ್ಲಿ ಎಂಟೂ ವಾರ್ಡ್‌ಗಳಲ್ಲಿ ಸೇರಿ, ಒಟ್ಟಾರೆ ರೂ.45.80 ಕೋಟಿ ಮೊತ್ತದ 372 ಕಾಮಗಾರಿ ನಡೆಸಲಾಗಿದೆ. ಇದರಲ್ಲಿ ಶೇ 80ರಷ್ಟು ಕಾಮಗಾರಿಗಳು ಅನಗತ್ಯವಾಗಿದ್ದವು. ಕೈಗೊಂಡ ಯಾವ ಕಾಮಗಾರಿ ಸಹ ಗುಣಮಟ್ಟದಿಂದ ಕೂಡಿಲ್ಲ. ನಿಯಮಾವಳಿಯನ್ನು ಗಾಳಿಗೆ ತೂರಲಾಗಿದ್ದು, ಯಾವ ದಾಖಲೆಗಳನ್ನೂ ಇಟ್ಟಿಲ್ಲ' ಎಂದು ವರದಿಯಲ್ಲಿ ತಿಳಿಸಲಾಗಿದೆ.ಕಾಮಗಾರಿಗಳ ತನಿಖೆಯನ್ನು ಸುಲಭಗೊಳಿಸಲು ಅವುಗಳನ್ನು ಸಿವಿಲ್, ರಸ್ತೆ ಮತ್ತು ಕಟ್ಟಡ ನಿರ್ವಹಣೆ ಎಂಬ ಮೂರು ಭಾಗ ಮಾಡಲಾಗಿದೆ. ಸಿವಿಲ್ ವಿಭಾಗದಲ್ಲಿ ಪ್ರಮುಖವಾಗಿ ಚರಂಡಿ, ಅಡಿಗಾಲುವೆ  ಮತ್ತು ಪಾದಚಾರಿ ಮಾರ್ಗ ನಿರ್ಮಾಣ, ಚರಂಡಿ ಮುಚ್ಚಳಗಳ ಅಳವಡಿಕೆ, ರಸ್ತೆ ವಿಸ್ತರಣೆ ಕಾಮಗಾರಿಗಳನ್ನು ಸೇರ್ಪಡೆ ಮಾಡಲಾಗಿದೆ. ಈ ವಿಭಾಗದ ರೂ.33.78 ಕೋಟಿ ಮೊತ್ತದ 301 ಕಾಮಗಾರಿಗಳನ್ನು ಟಿವಿಸಿಸಿ ತನಿಖೆಗೆ ಒಳಪಡಿಸಿದೆ.`ಯಾವ ಸಿವಿಲ್ ಕಾಮಗಾರಿಗಳೂ ಗುಣಮಟ್ಟದಿಂದ ಕೂಡಿಲ್ಲ. ಕಾಂಕ್ರೀಟ್ ಸ್ಲ್ಯಾಬ್‌ಗಳು ನಿಗದಿತ ಅಳತೆ ಹೊಂದಿಲ್ಲ. ಚರಂಡಿಗಳನ್ನು ನೀರು ಸರಾಗವಾಗಿ ಹರಿಯದಂತೆ ನಿರ್ಮಿಸಲಾಗಿದೆ. ಇದರಿಂದ ಮಳೆ ನೀರು ರಸ್ತೆ ಮೇಲೆ ಹರಿಯುವ ಅಪಾಯವಿದ್ದು, ಅವು ಹಾಳಾಗುವ ಸಾಧ್ಯತೆಯಿದೆ. ಹಲವೆಡೆ ಟೆಂಡರ್‌ನಲ್ಲಿ ವಿಧಿಸಲಾದ ನಿಯಮದಂತೆ ಗುಣಮಟ್ಟದ ಸಾಮಗ್ರಿ ಬಳಕೆ ಮಾಡಿಲ್ಲ' ಎಂಬ ಅಕ್ರಮಗಳ ಸರಮಾಲೆಯನ್ನೇ ವರದಿಯಲ್ಲಿ ಪಟ್ಟಿ ಮಾಡಲಾಗಿದೆ.`ರಾಜರಾಜೇಶ್ವರಿನಗರ ವಲಯದಲ್ಲಿ ನಿರ್ಮಿಸಲಾದ ಅಡಿಗಾಲುವೆಗಳು ರಸ್ತೆ ಮೇಲ್ಮೈಗೆ ಹೊಂದಿಕೆ ಆಗಿಲ್ಲ. ಇದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗಿ ಪರಿಣಮಿಸಿದೆ. ಕೈಗೊಂಡ ಕಾಮಗಾರಿಗಳಲ್ಲಿ ಬಳಸಿದ ಸಾಮಗ್ರಿಗಳನ್ನು ಬಿಬಿಎಂಪಿ ಗುಣನಿಯಂತ್ರಣ ವಿಭಾಗದಿಂದ ಪರೀಕ್ಷಿಸಿ ಫಲಿತಾಂಶ ಪಡೆದಿಲ್ಲ. ಬಿಲ್ ಪಾವತಿಸಿದ ಕ್ರಮವೂ ಆಯುಕ್ತರ ಆದೇಶಕ್ಕೆ ವಿರುದ್ಧವಾಗಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಮಾದರಿಗಳನ್ನು ಸಂಗ್ರಹಿಸಲಾಗಿಲ್ಲ' ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.`ಹಲವು ಕಾಮಗಾರಿಗಳ ಸ್ಥಳ ಬದಲಾವಣೆ ಮಾಡಲಾಗಿದ್ದು, ಅವುಗಳಿಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದಿಲ್ಲ. ಚೆನ್ನಾಗಿದ್ದ ಕೆಲವು ಚರಂಡಿಗಳನ್ನೇ ಒಡೆದು ಪುನಃ ನಿರ್ಮಿಸಲಾಗಿದೆ' ಎಂಬ ಸಂಗತಿಯನ್ನೂ ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.ರಸ್ತೆಗೆ ಡಾಂಬರು ಹಾಕುವ ಕಾಮಗಾರಿಯಲ್ಲೂ ಅಕ್ರಮ ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. `ತನಿಖೆ ವ್ಯಾಪ್ತಿಗೆ ಬಂದ ಯಾವ ರಸ್ತೆಯನ್ನೂ ಭಾರತೀಯ ರಸ್ತೆ ಕಾಂಗ್ರೆಸ್ (ಐಆರ್‌ಸಿ) ಗುಣಮಟ್ಟದಂತೆ ದುರಸ್ತಿ ಮಾಡಲಾಗಿಲ್ಲ. ಗುಣಮಟ್ಟ ಪರೀಕ್ಷೆ ಸೇರಿದಂತೆ ನಿಯಮಬದ್ಧ ಕ್ರಮ ಅನುಸರಿಸದೆ ಬಿಲ್ ಪಾವತಿಸಲಾಗಿದೆ' ಎಂಬ ಅಂಶವನ್ನು ವರದಿಯಲ್ಲಿ ಎತ್ತಿ ತೋರಿಸಲಾಗಿದೆ.`ರಸ್ತೆ ದುರಸ್ತಿ ಸಮಯದಲ್ಲಿ ನಿರ್ವಹಿಸಬೇಕಿರುವ `ಸೈಟ್ ಆರ್ಡರ್' ದಾಖಲಾತಿ ಪುಸ್ತಕವೇ ಇಲ್ಲ. ರಸ್ತೆ ದುರಸ್ತಿ ಇತಿಹಾಸವನ್ನೂ ಇಟ್ಟಿಲ್ಲ. ಇದರಿಂದ ರಸ್ತೆ ನಿರ್ವಹಣೆ ಕುರಿತಂತೆ ಹಿಂದಿನ ಮಾಹಿತಿಯೇ ಇಲ್ಲವಾಗಿದೆ. ಟೆಂಡರ್‌ನಲ್ಲಿ ಸೂಚಿತ ಮಾರ್ಗದ ಬದಲು ಬೇರೆಡೆ ಕಾಮಗಾರಿ ಕೈಗೊಳ್ಳಲಾಗಿದೆ. ಇದಕ್ಕೆ ಸೂಕ್ತ ಅನುಮೋದನೆ ಪಡೆಯಲಾಗಿಲ್ಲ' ಎಂದು ತಿಳಿಸಲಾಗಿದೆ. ಕಟ್ಟಡ ದುರಸ್ತಿ ಕಾಮಗಾರಿಗಳಲ್ಲಿ ನಿಯಮಕ್ಕೆ ವಿರುದ್ಧವಾಗಿ ಕಳಪೆ ಸಾಮಗ್ರಿಗಳನ್ನು ಬಳಸಿರುವುದೂ ಪತ್ತೆಯಾಗಿದೆ.`ಕಾಮಗಾರಿಗಳಿಗೆ ಕರೆಯಲಾಗಿದ್ದ ಟೆಂಡರ್‌ನಲ್ಲಿ ಇಬ್ಬರು ಗುತ್ತಿಗೆದಾರರು ಮಾತ್ರ ಭಾಗಹಿಸಿದರೆ ಅದನ್ನು ಸ್ಪರ್ಧಾತ್ಮಕ ಅಲ್ಲವೆಂದು ಪರಿಗಣಿಸಬೇಕು. ಬಹುತೇಕ ಪ್ರಕರಣಗಳಲ್ಲಿ ಇಬ್ಬರು ಗುತ್ತಿಗೆದಾರರು ಮಾತ್ರ ಇದ್ದರೂ ನಿಯಮಕ್ಕೆ ವಿರುದ್ಧವಾಗಿ ಕಾರ್ಯಾದೇಶ ನೀಡಲಾಗಿದೆ. ಎಲ್ಲ ಟೆಂಡರ್‌ಗಳಲ್ಲಿ ಗರಿಷ್ಠ ಮಿತಿಗಿಂತ ಶೇ 5ರಷ್ಟು ಹೆಚ್ಚಿನ ಮೊತ್ತ ನಮೂದಿಸಲಾಗಿದೆ. ಸ್ಪರ್ಧಾತ್ಮಕ ಟೆಂಡರ್ ಸಂದರ್ಭದಲ್ಲಿ ಶೇ 10ರಷ್ಟು ಕಡಿಮೆ ಮೊತ್ತಕ್ಕೆ ಗುತ್ತಿಗೆ ನೀಡಬೇಕು ಎಂಬ ನಿಯಮವಿದೆ. ಹೀಗಾಗಿ ಬಿಬಿಎಂಪಿಗೆ ಪ್ರತಿ ಕಾಮಗಾರಿಯಲ್ಲಿ ಶೇ 15ರಷ್ಟು ಹೆಚ್ಚುವರಿ ಹೊರೆ ಬಿದ್ದಿದೆ' ಎಂದು ವರದಿಯಲ್ಲಿ ವಿವರಿಸಲಾಗಿದೆ.`ಕಾಮಗಾರಿ ಪೂರೈಸಲಾದ ಕುರಿತು ಪೂರ್ಣಗೊಂಡ ಪ್ರಮಾಣಪತ್ರ (ಸಿಸಿ) ಕಡತಗಳಲ್ಲಿ ಇಲ್ಲ. ಹಲವು ಕಾಮಗಾರಿಗಳನ್ನು ಕರ್ನಾಟಕ ರಸ್ತೆ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್) ಸಂಸ್ಥೆಗೆ ವಹಿಸಲಾಗಿದ್ದು, ಸರ್ಕಾರಿ ಸ್ವಾಮ್ಯದ ಈ ಸಂಸ್ಥೆ ಕೂಡ ನಿಯಮ ಪಾಲನೆ ಮಾಡಿಲ್ಲ' ಎಂಬ ಪ್ರಮಾದವನ್ನೂ ಪತ್ತೆ ಹಚ್ಚಲಾಗಿದೆ.`ರಾಜರಾಜೇಶ್ವರಿನಗರ ವಲಯದ ವಾರ್ಡ್ ಸಂಖ್ಯೆ 16ರಲ್ಲಿ ಕಾಮಗಾರಿಗಳು ಪೂರ್ಣಗೊಂಡಿವೆ ಎಂಬ ಮಾಹಿತಿಯನ್ನು ಬಿಲ್ ದಾಖಲಾತಿ (ಬಿಆರ್) ಪುಸ್ತಕದಲ್ಲಿ (ಕಾಮಗಾರಿ ಕ್ರಮ ಸಂಖ್ಯೆ 12, 13, 18, 22, 24) ನಮೂದಿಸಲಾಗಿದೆ. ವಾಸ್ತವವಾಗಿ ಸ್ಥಳದಲ್ಲಿ ಇನ್ನೂ ಕಾಮಗಾರಿಗಳು ಜಾರಿಯಲ್ಲಿವೆ. ಈ ಪ್ರಮಾದವನ್ನು ಗಂಭೀರವಾಗಿ ಪರಿಗಣಿಸಬೇಕು' ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.`ಮೇಲ್ನೋಟಕ್ಕೆ ಕಂಡ ನ್ಯೂನ್ಯತೆಗಳ ಆಧಾರದ ಮೇಲೆ ವರದಿ ತಯಾರಿಸಲಾಗಿದ್ದು, ಪ್ರತಿ ಪ್ರಕರಣದ ವಿವರವಾದ ತನಿಖೆ ಅಗತ್ಯವಿದೆ' ಎಂದು ಟಿವಿಸಿಸಿ ಮುಖ್ಯ ಎಂಜಿನಿಯರ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.ಅಧಿಕಾರಿಗಳಿಗೆ ನೋಟಿಸ್

ಬೆಂಗಳೂರು: ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವುದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಹಾಗೂ ಜಾಗೃತಿ ಕೋಶ (ಟಿವಿಸಿಸಿ) ನೀಡಿರುವ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ, ಈ ಕಾಮಗಾರಿಗಳ ನಿರ್ವಹಣೆ ಮಾಡಿದ ಅಧಿಕಾರಿಗಳಿಗೆ ಷೋಕಾಸ್ ನೋಟಿಸ್ ಜಾರಿಮಾಡಿದೆ.

`ಟಿವಿಸಿಸಿ ವರದಿಯನ್ನು ಸ್ವೀಕರಿಸಲಾಗಿದ್ದು, ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅವರಿಂದ  ಉತ್ತರ ಪಡೆದ ಬಳಿಕ ವಿಸ್ತೃತ ತನಿಖೆ ನಡೆಸಲಾಗುವುದು' ಎಂದು ವಿಶೇಷ ಆಯುಕ್ತ (ಆಡಳಿತ) ಅಶೋಕಕುಮಾರ್ `ಪ್ರಜಾವಾಣಿ'ಗೆ ಸ್ಪಷ್ಟಪಡಿಸಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry