ಶುಕ್ರವಾರ, ಜೂನ್ 25, 2021
24 °C

8 ವಿದ್ಯಾರ್ಥಿ ನಿಲಯಗಳಿಗೆ ಜಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಹಲವು ವರ್ಷಗಳಿಂದ ತಾಲ್ಲೂಕಿನ ವಿವಿಧೆಡೆ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡ ಕಲ್ಪಿಸುವ ಪ್ರಕ್ರಿಯೆ ಚಾಲನೆ ಸಿಕ್ಕಿದೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತಹಶೀಲ್ದಾರರು ಒಟ್ಟು 7 ಎಕರೆ ಸರ್ಕಾರಿ ಜಮೀನನ್ನು ಇಲಾಖೆಗೆ ಮಂಜೂರು ಮಾಡಿದ್ದಾರೆ.ಕಂದಾಯ ಇಲಾಖೆ ಮೂಲಕ ಸರ್ವೆ ನಡೆಸಿ ಗಡಿ ಗುರುತಿಸುವ ಕೆಲಸವಷ್ಟೆ ಬಾಕಿ ಉಳಿದಿದೆ.

ತಾಲ್ಲೂಕಿನಲ್ಲಿ ಇಲಾಖೆ ಅಡಿ ಕಾರ್ಯನಿರ್ವಹಿಸುವ 24 ವಿದ್ಯಾರ್ಥಿ ನಿಲಯಗಳಿವೆ. ಅವುಗಳ ಪೈಕಿ 16 ನಿಲಯಗಳು ಸ್ವಂತ ಕಟ್ಟಡದಲ್ಲಿವೆ.ಉಳಿದ ಎಂಟು ನಿಲಯಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳ ಪೈಕಿ ನೂತನ ಬಾಲಕರ ವಿದ್ಯಾರ್ಥಿನಿಲಯ ಮತ್ತು ಕಾನೂನು ಕಾಲೇಜು ವಿದ್ಯಾರ್ಥಿನಿಲಯಗಳ ಬಾಡಿಗೆ ಕಟ್ಟಡಗಳಲ್ಲಿ ತೊಂದರೆಯಾದ ಹಿನ್ನೆಲೆಯಲ್ಲಿ ಕೆಲವು ತಿಂಗಳ ಹಿಂದೆಯೇ ನಗರದ ನಚಿಕೇತ ವಿದ್ಯಾರ್ಥಿನಿಲಯಕ್ಕೆ ಸ್ಥಳಾಂತರಿಸಲಾಗಿದೆ. ಈಗ ಅಲ್ಲಿ ಮೂರು ನಿಲಯದ ವಿದ್ಯಾರ್ಥಿಗಳಿದ್ದಾರೆ.ಎಲ್ಲೆಲ್ಲಿ?: ಹಾರೋಹಳ್ಳಿ ಸಮೀಪ 6 ಎಕರೆ ಜಮೀನು, ನರಸಾಪುರದಲ್ಲಿ 1ಎಕರೆ ಜಮೀನನ್ನು ಇಲಾಖೆಗೆ ನೀಡಲಾಗಿದೆ. ಈ ಜಮೀನುಗಳ ಸರ್ವೆ ಕೆಲಸ ನಡೆಯಬೇಕಾಗಿದೆ ಎಂದು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಪ್ರಭಾರಿ ಅಧಿಕಾರಿ ಸುಗ್ಗಂಡಹಳ್ಳಿ ಮುನಿರಾಜು ಗುರುವಾರ `ಪ್ರಜಾವಾಣಿ~ಗೆ ತಿಳಿಸಿದರು.ನಗರದ ಎಂಬಿ ರಸ್ತೆಯಲ್ಲಿ ಬಾಡಿಗೆ ಕಟ್ಟಡದಲ್ಲಿದ್ದ ಅಂಬೇಡ್ಕರ್ ವಿದ್ಯಾರ್ಥಿ ನಿಲಯ-2 ಅನ್ನು ಅಂಬೇಡ್ಕರ್ ವಿದ್ಯಾರ್ಥಿ ನಿಲಯ-1ರೊಳಗೇ ಸೇರಿಸಲಾಗಿದೆ. 2ನೇ ವಿದ್ಯಾರ್ಥಿ ನಿಲಯಕ್ಕೂ ಕೆಳಗಿನ ಪೇಟೆ ಕಟ್ಟೆ ಕೆಳಗೆ 23 ಗುಂಟೆ ಜಮೀನು ಮಂಜೂರು ಮಾಡಿದ್ದಾರೆ.ಒಂದು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲ ತಹಶೀಲ್ದಾರರ ಸಭೆಯನ್ನು ನಡೆಸಿ ವಿದ್ಯಾರ್ಥಿ ನಿಲಯಕ್ಕೆ ಅಗತ್ಯವಿರುವ ಸರ್ಕಾರಿ ಜಮೀನನ್ನು ಹುಡುಕಿ ಹಸ್ತಾಂತರಿಸಿ, ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದರೆ ಖಾಸಗಿ ಜಮೀನು ಕಡೆಗೆ ಗಮನ ಹರಿಸಬಹುದು ಎಂದು ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ಕೋಲಾರ ತಹಶೀಲ್ದಾರರು ಮುತುವರ್ಜಿ ವಹಿಸಿ ಸರ್ಕಾರಿ ಜಮೀನು ನೀಡಿದ್ದಾರೆ ಎಂದು ಅವರು ತಿಳಿಸಿದರು.ಪ್ರತ್ಯೇಕ ಪ್ರಸ್ತಾವನೆ: ಈಗಾಗಲೇ ಒಟ್ಟಾರೆಯಾಗಿ ಬೇಕಾಗಿರುವ ಜಮೀನಿನ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಈಗ ಪ್ರತಿ ನಿಲಯಕ್ಕೂ ಬೇಕಾಗಿರುವ ಜಮೀನಿನ ಬೇಡಿಕೆ ಕುರಿತು ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸುವಂತೆ ತಹಶೀಲ್ದಾರರು ತಿಳಿಸಿದ್ದಾರೆ. ಶೀಘ್ರದಲ್ಲೇ ಅದನ್ನೂ ಸಲ್ಲಿಸಲಾಗುವುದು ಎಂದರು.ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿಯೇ ವೃತ್ತಿಪರ ಶಿಕ್ಷಣ ಬಾಲಕಿಯರನ್ನೂ ಇರಿಸಲಾಗಿದೆ. ಅವರಿಗೆ ಪ್ರತ್ಯೇಕ ನಿಲಯದ ಅನುಕೂಲವಿಲ್ಲ. ಹೀಗಾಗಿ ಬಾಲಕಿಯರ ನಿಲಯದಲ್ಲೆ ಮೊದಲ ಅಂತಸ್ತಿನಲ್ಲಿ ಕಟ್ಟಡ ನಿರ್ಮಿಸಿ ಅವಕಾಶ ಮಾಡಿಕೊಡುವ ಸಲುವಾಗಿ ಪ್ರಸ್ತಾವನೆಯನ್ನು ಇಲಾಖೆಗೆ ಕಳಿಸಲಾಗಿದೆ ಎಂದು ಮಾಹಿತಿ ನೀಡಿದರು.ಹಾರೋಹಳ್ಳಿಯಲ್ಲಿ ಮಂಜೂರಾಗಿರುವ 3 ಎಕರೆಯಲ್ಲಿ ವಸತಿ ನಿಲಯ ಸಂಕೀರ್ಣವನ್ನು ನಿರ್ಮಿಸಿದರೆ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದರು.ಬಾಡಿಗೆ ಕಟ್ಟಡದಲ್ಲಿ ಹಾಸ್ಟೆಲ್

ನಗರದ ಗೌರಿಪೇಟೆಯಲ್ಲಿರುವ ನೂತನ ಸಾರ್ವಜನಿಕ ಬಾಲಕರ ನಿಲಯ, ಕಾನೂನು ಕಾಲೇಜು ನಿಲಯ, ನಗರದ ಕೀಲುಕೋಟೆ, ಗಾಂಧಿನಗರ, ತಾಲ್ಲೂಕಿನ ವೇಮಗಲ್, ನರಸಾಪುರದಲ್ಲಿರುವ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ನಿಲಯಗಳು, ವೃತ್ತಿಪರ ಬಾಲಕರ ಕಾಲೇಜು ವಿದ್ಯಾರ್ಥಿನಿಲಯ, ವೃತ್ತಿಪರ ಬಾಲಕಿಯರ ಕಾಲೇಜು ವಿದ್ಯಾರ್ಥಿನಿಲಯ. ಇವೆಲ್ಲವೂ ಮೆಟ್ರಿಕ್ ನಂತರದ ನಿಲಯಗಳು.ಸ್ವಂತ ಕಟ್ಟಡ: ನಗರದ ಭೋವಿ ಕಾಲೋನಿ, ಅಮ್ಮನಲ್ಲೂರು, ಅಣ್ಣಿಹಳ್ಳಿ, ಕೆಂಬೋಡಿ, ಹರಟಿ, ಮದ್ದೇರಿ, ವೇಮಗಲ್, ಸುಗಟೂರಿನಲ್ಲಿರುವ ಬಾಲಕರ ವಿದ್ಯಾರ್ಥಿ ನಿಲಯ, ಕೆಂಬೋಡಿ, ಮದನಹಳ್ಳಿಯಲ್ಲಿರುವ ಬಾಲಕಿಯರ ನಿಲಯ, ನಚಿಕೇತ ನಿಲಯ, ವಸತಿ ಶಾಲೆ, ಮಹಿಳೆಯರ ಸರ್ಕಾರಿ ಕಾಲೇಜು ವಿದ್ಯಾರ್ಥಿನಿಲಯ, ಅಂಬೇಡ್ಕರ್ ನಿಲಯ 1 ಮತ್ತು 2. ಬೆಗ್ಲಿ ಹೊಸಳ್ಳಿ ಬಾಲಕರ ವಿದ್ಯಾರ್ಥಿ ನಿಲಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.