8 ಸಚಿವರ ರಾಜೀನಾಮೆ: ಸರ್ಕಾರ ಇಕ್ಕಟ್ಟಿಗೆ

7

8 ಸಚಿವರ ರಾಜೀನಾಮೆ: ಸರ್ಕಾರ ಇಕ್ಕಟ್ಟಿಗೆ

Published:
Updated:

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ, ಆಡಳಿತಾರೂಢ ಬಿಜೆಪಿಯಲ್ಲಿ ಹಠಾತ್ ಬೆಳವಣಿಗೆಗಳು ನಡೆದಿವೆ. ಎಂಟು ಮಂದಿ ಸಚಿವರು ತಮ್ಮ ರಾಜೀನಾಮೆ ಪತ್ರಗಳನ್ನು ಯಡಿಯೂರಪ್ಪ ಅವರಿಗೆ ನೀಡುವುದರ ಮೂಲಕ `ಸ್ವಾಮಿ ನಿಷ್ಠೆ~ ಮೆರೆದಿದ್ದಾರೆ.ಸಚಿವರಾದ ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ, ಸಿ.ಎಂ. ಉದಾಸಿ, ಮುರುಗೇಶ ನಿರಾಣಿ, ವಿ. ಸೋಮಣ್ಣ, ಎಂ.ಪಿ. ರೇಣುಕಾಚಾರ್ಯ, ರಾಜೂಗೌಡ ಹಾಗೂ ಉಮೇಶ ಕತ್ತಿ ಅವರು ತಮ್ಮ ರಾಜೀನಾಮೆ ಪತ್ರಗಳನ್ನು ಯಡಿಯೂರಪ್ಪ ಅವರಿಗೆ ನೀಡಿದ್ದಾರೆ. ತಮ್ಮ ನಾಯಕ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳುವುದರ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.ಶನಿವಾರ ಇಡೀ ದಿನ ಸರಣಿ ಸಭೆಗಳನ್ನು ನಡೆಸಿದ ಇವರು, ರಾಜೀನಾಮೆ ಸಲ್ಲಿಸುವ ನಿರ್ಧಾರವನ್ನು ಸಂಜೆಯ ವೇಳೆಗೆ ತೆಗೆದುಕೊಂಡರು. ಆದರೆ, ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು, `ಯಾವ ಸಚಿವರ ರಾಜೀನಾಮೆ ಪತ್ರವೂ ನನಗೆ ತಲುಪಿಲ್ಲ. ಶಾಸಕರು ರಾಜೀನಾಮೆ ನೀಡುವ ಪ್ರಸಂಗವೂ ಎದುರಾಗಿಲ್ಲ~ ಎಂದು ಮಂಗಳೂರಿನಲ್ಲಿ ಹೇಳಿದ್ದಾರೆ.ರಹಸ್ಯ ಪತ್ರವೇ ಚರ್ಚೆಯ ಕೇಂದ್ರ ಬಿಂದು: ಯಡಿಯೂರಪ್ಪ ಅವರ ವಿರುದ್ಧ ಸಿಬಿಐ ತನಿಖೆಗೆ ಆದೇಶ ನೀಡಿರುವ ಪ್ರಕರಣಕ್ಕಿಂತ, ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಒಂದೂವರೆ ತಿಂಗಳ ಹಿಂದೆ ಬರೆದ ಪತ್ರವೇ ಶನಿವಾರದ ಪ್ರಮುಖ ಚರ್ಚಾ ವಸ್ತುವಾಯಿತು.ಯಡಿಯೂರಪ್ಪ ಅವರಿಗೆ ಸ್ವಾಮಿ ನಿಷ್ಠೆ ಪ್ರದರ್ಶಿಸುವುದರ ಜತೆಗೆ ನಾಯಕತ್ವ ಬದಲಾವಣೆಯ ಕೂಗು ಕೂಡ ಮತ್ತೆ ಎದ್ದಿದೆ. ಈ ಸಲುವಾಗಿ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂದೂ ಯಡಿಯೂರಪ್ಪ ಬಣದ ಶಾಸಕರು ಆಗ್ರಹಪಡಿಸಿದ್ದಾರೆ.ಈ ನಡುವೆ ಸದಾನಂದ ಗೌಡ ಅವರು ಭಾನುವಾರ ಸಂಜೆ ದೆಹಲಿಗೆ ತೆರಳಲಿದ್ದಾರೆ. ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಪಕ್ಷದ ವರಿಷ್ಠರ ಜತೆ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಲಿದ್ದಾರೆ ಎಂದು ಗೊತ್ತಾಗಿದೆ. ಮುಖ್ಯಮಂತ್ರಿ ಪರ ಲಾಬಿ ನಡೆಸಲು ಸಚಿವರಾದ ಬಾಲಚಂದ್ರ ಜಾರಕಿಹೊಳಿ, ಆನಂದ ಅಸ್ನೋಟಿಕರ್ ಅವರೂ ದೆಹಲಿಗೆ ತೆರಳುವ ಸಾಧ್ಯತೆ ಇದೆ.ತಾವು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದೇವೆ ಎಂದು ಸದಾನಂದ ಗೌಡ ಹಾಗೂ ಈಶ್ವರಪ್ಪ ಅವರು ಗಡ್ಕರಿ ಅವರಿಗೆ ಬರೆದ ಪತ್ರದಲ್ಲಿ ಆರೋಪಿಸಿರುವುದರ ವಿರುದ್ಧ ಆಕ್ರೋಶಗೊಂಡಿರುವ ಯಡಿಯೂರಪ್ಪ ಬಣದ ಸಚಿವರು, ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರದ ಭಾಗವಾಗಿ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ. ಸಚಿವ ರೇವು ನಾಯಕ ಬೆಳಮಗಿ ಅವರೂ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.ಯಡಿಯೂರಪ್ಪ ಅವರ ನಿವಾಸದಲ್ಲಿ ಬೆಳಿಗ್ಗೆ ನಡೆದ ಸಭೆಯಲ್ಲಿ ಕಾಣಿಸಿಕೊಂಡಿದ್ದ ಸಣ್ಣ ಕೈಗಾರಿಕೆ ಸಚಿವ ರಾಜೂಗೌಡ ಅವರು ಸಂಜೆ ನಡೆದ ಸಭೆಗೆ ಗೈರುಹಾಜರಾಗಿದ್ದರೂ, ತಡರಾತ್ರಿ ರಾಜೀನಾಮೆ ಸಲ್ಲಿಸಿದ್ದಾರೆ. ಯಡಿಯೂರಪ್ಪ ಪಾಳಯದಲ್ಲಿ ಗುರುತಿಸಿಕೊಂಡಿರುವ ಸಚಿವ ಜಗದೀಶ್ ಶೆಟ್ಟರ್ ರಾಜೀನಾಮೆ ಕುರಿತು ಯಾವ ತೀರ್ಮಾನವನ್ನೂ ತೆಗೆದುಕೊಂಡಿಲ್ಲ ಎನ್ನಲಾಗಿದೆ.`ಸದಾನಂದ ಗೌಡ ಅವರಿಗೆ ತಮ್ಮ ಸಂಪುಟದ ಸಹೋದ್ಯೋಗಿಗಳ ಮೇಲೆಯೇ ವಿಶ್ವಾಸ ಇಲ್ಲದಿರುವಾಗ, ನಾವೇಕೆ ಸಚಿವ ಸ್ಥಾನದಲ್ಲಿ ಮುಂದುವರಿಯಬೇಕು. ಸಚಿವ ಸ್ಥಾನ ಮಾತ್ರವಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಲು ಸಿದ್ಧ~ ಎಂದು ಸಚಿವ ಉಮೇಶ ಕತ್ತಿ ಹೇಳಿದ್ದಾರೆ.ಮೊದಲ ಹಂತದಲ್ಲಿ ಸಚಿವರು ರಾಜೀನಾಮೆ ನೀಡಿದ್ದು, ಈ ಒತ್ತಡ ತಂತ್ರಕ್ಕೂ ಮಣಿಯದೆ ಶಾಸಕಾಂಗ ಪಕ್ಷದ ಸಭೆ ಕರೆಯದಿದ್ದರೆ ಮುಂದಿನ ದಿನಗಳಲ್ಲಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಈಗಾಗಲೇ 38 ಶಾಸಕರು ಸಹಿ ಮಾಡಿರುವ ಪತ್ರವನ್ನು ಮುಖ್ಯಮಂತ್ರಿಗೆ ರವಾನಿಸಿದ್ದು, ಆದಷ್ಟು ಬೇಗ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಒತ್ತಾಯಿಸಲಾಗಿದೆ.

ಶಾಸಕರೂ ರಾಜೀನಾಮೆ

ಸಚಿವರ ರಾಜೀನಾಮೆ ನಂತರ ಶಾಸಕರು ಕೂಡ ರಾಜೀನಾಮೆ ಪತ್ರಗಳನ್ನು ಯಡಿಯೂರಪ್ಪ ಅವರಿಗೆ ನೀಡಲಿದ್ದಾರೆ. ಇದೊಂದು ರೀತಿಯ ಒತ್ತಡ ತಂತ್ರವಾದರೂ ಪಕ್ಷದ ವರಿಷ್ಠರು ಮಧ್ಯಪ್ರವೇಶ ಮಾಡಿ, ನಾಯಕತ್ವ ಬದಲಾವಣೆ ಕುರಿತು ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಎಂಬುದು ಇದರ ಹಿಂದಿನ ಉದ್ದೇಶ ಎಂದು ಮೂಲಗಳು ತಿಳಸಿವೆ.

ಪಕ್ಷ ಬಿಡುವುದೇ ಉತ್ತಮ: ಬಿಎಸ್‌ವೈ ಇಂಗಿತ

ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ವಹಿಸಿದ ನಂತರ ಶುಕ್ರವಾರ ಸಂಜೆ ಆಪ್ತರ ಸಭೆ ನಡೆಸಿದ್ದ ಯಡಿಯೂರಪ್ಪ ಅವರು `ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ~ ಎಂದು ಹೇಳಿದ್ದರು. ಆದರೆ, ಶನಿವಾರದ ವೇಳೆಗೆ ಅವರ ನಿಲುವಿನಲ್ಲಿ ಸ್ವಲ್ಪ ಬದಲಾವಣೆ ಕಂಡಿದ್ದು, ಪಕ್ಷ ಬಿಡುವುದು ಅನಿವಾರ್ಯ ಎನ್ನುವ ಮಾತುಗಳನ್ನು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಸಚಿವರು ಮತ್ತು ಶಾಸಕರ ಜತೆ ಪ್ರತ್ಯೇಕ ಸಭೆಗಳನ್ನು ನಡೆಸಿದ ಅವರು ಎಲ್ಲರ ಅಭಿಪ್ರಾಯಗಳನ್ನು ಆಲಿಸಿದರು. ಬಹುತೇಕರು ಪಕ್ಷ ಬಿಡುವ ಸಲಹೆಯನ್ನೇ ನೀಡಿದ್ದು, ಆ ಪ್ರಕಾರವೇ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಿದ್ದಾರೆ ಎಂದು ಗೊತ್ತಾಗಿದೆ. `ಈ ಸರ್ಕಾರ ಇದ್ದಷ್ಟು ದಿನ ನಮಗೇ ಸಮಸ್ಯೆ. ಹೀಗಾಗಿ ಈ ಸರ್ಕಾರ ಕೂಡ ಇರುವುದು ಬೇಡ. ನನ್ನ ತೀರ್ಮಾನಕ್ಕೆ ಎಷ್ಟು ಜನ ಬದ್ಧ ಎನ್ನುವುದು ಮುಖ್ಯ. ರಾಜೀನಾಮೆ ಪತ್ರವನ್ನು ಯಾವಾಗ ನನ್ನ ಕೈಗೆ ಕೊಡುತ್ತೀರಿ~ ಎಂದೂ ಸಭೆಯಲ್ಲಿ ಹಾಜರಿದ್ದ ಶಾಸಕರನ್ನು ಕೇಳಿದ್ದಾರೆ. ಇದಕ್ಕೆ ಕೆಲವರು `ಸ್ವಲ್ಪ ಯೋಚನೆ ಮಾಡಿ ಸಾರ್~ ಎಂದೂ ಸಮಾಧಾನ ಮಾಡಿದ್ದಾರೆ. `ಇಲ್ಲ, ಇನ್ನು ಯೋಚನೆ ಮಾಡುವುದಕ್ಕೆ ಏನೂ ಉಳಿದಿಲ್ಲ. ಈ ಸರ್ಕಾರವನ್ನು ಹೀಗೆ ಬಿಟ್ಟರೆ ನಮ್ಮನ್ನು ಮುಗಿಸುತ್ತಾರೆ. ಮಧ್ಯಂತರ ಚುನಾವಣೆ ಅನಿವಾರ್ಯ. ಎಲ್ಲರೂ ಸಿದ್ಧರಾಗಿ. ಸಿಬಿಐ ತನಿಖೆಯನ್ನು ನನಗೆ ಬಿಡಿ. ಅದನ್ನು ನಾನು ನೋಡಿಕೊಳ್ಳುತ್ತೇನೆ~ ಎಂದು ಶಾಸಕರನ್ನು ಉದ್ದೇಶಿಸಿ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry