ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ತಿಂಗಳಿಗೆ ಪಿಎಚ್‌ಡಿ: ತುಮಕೂರು ವಿ.ವಿ ಸಾಧನೆ!

Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ವಿಶ್ವ­ವಿದ್ಯಾ­ಲಯ ತನ್ನ ಏಳನೇ ಘಟಿಕೋತ್ಸವಕ್ಕೆ ಸಿದ್ಧತೆ ನಡೆಸಿದ್ದು, ನೋಂದಣಿಯಾದ ಎಂಟು ತಿಂಗಳಿಗೇ ಪಿಎಚ್‌.ಡಿ ಪದವಿ ನೀಡಲು ಮುಂದಾಗಿದೆ. ವಿ.ವಿ.ಯಲ್ಲಿ ನಡೆದ ಘಟಿಕೋತ್ಸವ ಸಿದ್ಧತೆ ಕುರಿತ ಸಭೆಯಲ್ಲಿ ವಿವಿಧ ವಿಷಯಗಳಲ್ಲಿ ಕೇವಲ 8 ತಿಂಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿರುವ 6 ಮಂದಿಗೆ ಪಿಎಚ್‌.ಡಿ ಹಾಗೂ ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಡಿ.ಲಿಟ್‌, ಡಿ.ಎಸ್ಸಿ ಪದವಿ ನೀಡಲು ನಿರ್ಧರಿಸ­ಲಾ­ಯಿತು ಎಂದು ಮೂಲಗಳು ತಿಳಿಸಿವೆ.

ನಿಕಟಪೂರ್ವ ಕುಲಪತಿ ಡಾ.ಎಸ್‌.ಸಿ.­ಶರ್ಮಾ ಅವಧಿಯಲ್ಲಿ ಈ ಆರು ಮಂದಿಗೂ ಸಂಶೋಧನೆಗೆ ನೋಂದಣಿಯಾದ ಎಂಟು ತಿಂಗಳಿಗೆ ಪದವಿ ನೀಡಲಾಗಿದ್ದು, ತಾತ್ಪೂರ್ತಿಕ ಪದವಿ ಪ್ರಮಾಣ ಪತ್ರವನ್ನು (ಪಿಎಚ್‌.ಡಿ) ಮೌಖಿಕ ಪರೀಕ್ಷೆ ದಿವಸವೇ ತರಾತುರಿಯಲ್ಲಿ ಪ್ರದಾನ ಮಾಡಲಾಗಿದೆ. ಈ ಕ್ರಮ ರಾಜ್ಯದ ಯಾವ ವಿ.ವಿ.ಯಲ್ಲೂ ಇಲ್ಲ. ಇಂಥ ಸಂಶೋಧನೆಗೆ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಪ್ರದಾನ ಮಾಡುವುದು ಹೇಗೆ? ಯಾರಾದರೂ ಪ್ರಶ್ನಿಸಿದರೆ ವಿಶ್ವವಿದ್ಯಾನಿಲಯ ತಲೆ ತಗ್ಗಿಸಬೇಕಾಗುತ್ತದೆ ಎಂದು ಸಭೆಯ­ಲ್ಲಿದ್ದ ಕೆಲವರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಡಿ.ಲಿಟ್‌, ಡಿ.ಎಸ್ಸಿ ಸಂಶೋಧನಾ ಪದವಿ ಕೂಡ ಸಂಶಯಕ್ಕೆ ಎಡೆಮಾಡಿ­ಕೊಟ್ಟಿದೆ. ಡಾ.ಎಸ್‌.ಸಿ.ಶರ್ಮಾ ಕುಲಪತಿ ಅವಧಿಯ ಕೇವಲ 4 ವರ್ಷಗಳಲ್ಲಿ 60ಕ್ಕೂ ಹೆಚ್ಚು ಮಂದಿಗೆ ಡಿ.ಲಿಟ್‌, ಡಿ.ಎಸ್ಸಿ ಪ್ರದಾನ ಮಾಡ­ಲಾಗಿದೆ. ಶೇ 70ರಷ್ಟು ಡಿಲಿಟ್‌ ಪದವಿ ಪಡೆದವರು ಒಂದೇ ಸಮುದಾಯಕ್ಕೆ ಸೇರಿದವರು ಎಂದು ಸಿಂಡಿಕೇಟ್‌ನ ಮಾಜಿ ಸದಸ್ಯರೊಬ್ಬರು ನೊಂದು ನುಡಿದರು.

ರಾಜ್ಯದ ಹಳೆಯ, ಪ್ರಮುಖ ವಿ.ವಿ.ಯಾದ ಮೈಸೂರು ವಿ.ವಿ. ಇತಿಹಾಸದಲ್ಲಿ ಇಷ್ಟೊಂದು ಮಂದಿಗೆ ಡಿ.ಲಿಟ್‌ ಪ್ರದಾನ ಮಾಡಿಲ್ಲ. ಶರ್ಮಾ ಅವಧಿಯಲ್ಲಿ ಪಿಎಚ್‌.ಡಿ ಪದವಿ ನೀಡಿದ್ದರೂ ಆ ಕುರಿತು ತನಿಖೆ ನಡೆಸಿ ಪದವಿ ವಾಪಸ್ ಪಡೆಯಲು ವಿಶ್ವವಿದ್ಯಾನಿಲಯಕ್ಕೆ ಅಧಿಕಾರವಿದೆ. ಸಂಶೋಧನಾ  ಪ್ರಬಂಧ ಮಂಡನೆಗೆ ಕನಿಷ್ಠ ಎರಡು ವರ್ಷಗಳಾದರೂ ಬೇಕು. ಮೌಲ್ಯಮಾಪನ, ಮೌಖಿಕ ಪರೀಕ್ಷೆ ನಡೆಸಲು ತಿಂಗಳ ಕಾಲಾವಧಿ ಬೇಕಾಗುತ್ತದೆ.

ಕೋರ್ಸ್‌ ವರ್ಕ್‌ ಕಾಲಾವಧಿಯೇ 6 ತಿಂಗಳು. ಇದೆಲ್ಲ­ವನ್ನು ಮೀರಿ 8 ತಿಂಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ ಅದನ್ನು ಮೌಲ್ಯಮಾಪನ ಮಾಡಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಶೈಕ್ಷಣಿಕ ವಲಯದಲ್ಲಿ ಮೂಡಿದೆ. ವಿಶ್ವವಿದ್ಯಾಲಯವೊಂದು 8 ತಿಂಗಳಿಗೆ ಪಿಎಚ್‌.ಡಿ ನೀಡಬಹುದಾ­ದರೆ ಎಲ್ಲ ವಿ.ವಿ.ಗಳು ನೀಡಬಹುದು. ಗುಣಮಟ್ಟದ ಉನ್ನತ ಶಿಕ್ಷಣದ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ಕಾಲಘಟ್ಟದಲ್ಲಿ ಇಂಥದೊಂದು ಅಧ್ವಾನ ನಡೆದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಹೆಸರು ಹೇಳದ ಶಿಕ್ಷಣ ತಜ್ಞರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT