ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ಪ್ರಭೇದದ ಹೊಸ ಹಕ್ಕಿಗಳ ಪತ್ತೆ

Last Updated 3 ಡಿಸೆಂಬರ್ 2012, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದಲ್ಲಿ (ಬಿಆರ್‌ಟಿ) ವೈಜ್ಞಾನಿಕ ವಿಧಾನದಡಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಅರಣ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಗಣತಿಯಲ್ಲಿ ಹೊಸದಾಗಿ 8 ಪ್ರಭೇದದ ಹಕ್ಕಿಗಳು ಪತ್ತೆಯಾಗಿವೆ. ಇದರೊಂದಿಗೆ  ರಕ್ಷಿತಾರಣ್ಯದಲ್ಲಿರುವ ಪಕ್ಷಿಗಳ ಪ್ರಭೇದಗಳ ಸಂಖ್ಯೆ 282ಕ್ಕೆ ಏರಿದೆ.

ಈ ರಕ್ಷಿತಾರಣ್ಯ 574.82 ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. 1942-43ರಲ್ಲಿ ಪಕ್ಷಿಶಾಸ್ತ್ರದ ಪಿತಾಮಹ ಸಲೀಂ ಅಲಿ ಅವರು ಅಂದಿನ ಮೈಸೂರು ಪ್ರಾಂತ್ಯದಲ್ಲಿ ಪಕ್ಷಿ ಗುರುತಿಸುವ ಕಾರ್ಯಕೈಗೊಂಡಿದ್ದರು. ಆ ವೇಳೆ ಬಿಆರ್‌ಟಿ ರಕ್ಷಿತಾರಣ್ಯಕ್ಕೂ ಭೇಟಿ ನೀಡಿ, 60 ಪಕ್ಷಿ ಗುರುತಿಸಿರುವ ದಾಖಲೆಗಳು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯಲ್ಲಿವೆ.

ಆ ನಂತರದ ವರ್ಷಗಳಲ್ಲಿ ಹಲವು ಪಕ್ಷಿತಜ್ಞರು `ಬಿಆರ್‌ಟಿ'ಯಲ್ಲಿ ಅಧ್ಯಯನ ನಡೆಸ್ದ್ದಿದಾರೆ. 1997ರಲ್ಲಿ ಪಕ್ಷಿತಜ್ಞರಾದ ಬೆಂಗಳೂರಿನ ಎಂ.ಬಿ. ಕೃಷ್ಣ ಹಾಗೂ ಎಸ್. ಸುಬ್ರಮಣ್ಯ ಅವರು ರಕ್ಷಿತಾರಣ್ಯದಲ್ಲಿ ಪಕ್ಷಿ ಗಣತಿ ನಡೆಸಿದ್ದರು.

`ಬಿಆರ್‌ಟಿ'ಯಲ್ಲಿ ಇಲ್ಲಿಯವರೆಗೆ 274 ಹಕ್ಕಿಗಳನ್ನು ಗುರುತಿಸಲಾಗಿತ್ತು. ಈಗ ಈ ಪಟ್ಟಿಗೆ ಇರುಳು ಬಕ (ನೈಟ್ ಹೆರಾನ್), ದಪ್ಪಕೊಕ್ಕಿನ ಉಲಿಯಕ್ಕಿ (ಥಿಕ್ ಬಿಲ್ಲೆಡ್ ವಾರ‌್ಬಲ್ಲರ್), ಕಂದುಗಪ್ಪ ಕಮರಿತೋಕೆ (ಡಸ್ಕಿ ಕ್ರಾಗ್ ಮಾರ್ಟಿನ್), ಕೆಂಗಂದು ಬೆಳವ (ಓರಿಯಂಟಲ್ ಟಾರ್ಟ್‌ಲ್ ಡವ್), ನೀಲಿ ಕಪಾಳದ ಮಿಂಚುಳ್ಳಿ (ಬ್ಲೂ ಈಯರ್ಡ್‌ ಕಿಂಗ್‌ಫಿಷರ್), ಉದ್ದಬಾಲದ ಗಿಡುಗ (ಬೊನೆಲಿ ಈಗಲ್), ಸಿಲೋನ್ ಫ್ರಾಗ್‌ಮೌತ್ ಹಾಗೂ ಕ್ರೆಸ್ಟೆಡ್ ಟ್ರೀ ಸ್ವಿಫ್ಟ್ ಪಕ್ಷಿ ಸೇರ್ಪಡೆಗೊಂಡಿವೆ.

ರಕ್ಷಿತಾರಣ್ಯದಲ್ಲಿ ಒಂಬತ್ತು ಪಕ್ಷಿಗಳು ಅಳಿವಿನ ಅಂಚಿನಲ್ಲಿವೆ. ದೊಡ್ಡಚುಕ್ಕಿಯ ಗಿಡುಗ (ಗ್ರೇಟರ್ ಸ್ಪಾಟೆಡ್ ಈಗಲ್), ಕರಿತಲೆಯ ಕೆಂಬರಲು (ಬ್ಲಾಕ್ ಹೆಡೆಡ್ ಐಬಿಸ್), ನೀಲಗಿರಿ ಪಾರಿವಾಳ (ನೀಲಗಿರಿ ಹುಡ್ ಪಿಜನ್), ಹಳದಿ ಕೊರಳಿನ ಪಿಕಳಾರ (ಯಲೊ ಥ್ರೋಟೆಡ್ ಬುಲ್‌ಬುಲ್), ಬಿಳಿ ರಣಹದ್ದು (ಈಜಿಫ್ಟಿಯನ್ ವ್ಹಲ್ಚರ್), ಕಪ್ಪುಕಿತ್ತಲೆ ನೊಣ ಹಿಡುಕ (ಬ್ಲಾಕ್ ಅಂಡ್ ಆರೆಂಜ್ ಫ್ಲೆಕ್ಯಾಚರ್), ಬೂದುತಲೆಯ ಪಿಕಳಾರ (ಗ್ರೇ ಹೆಡೆಡ್ ಬುಲ್‌ಬುಲ್), ಬಿಳಿಕತ್ತಿನ ಚೇಗಡಿ (ವೈಟ್ ನ್ಯಾಪ್ಡ್ ಟಿಟ್), ಬೂದು ತಲೆಯ ಮೀನು ಗಿಡುಗ (ಗ್ರೇ ಹೆಡೆಡ್ ಫಿಶ್ ಈಗಲ್) ಅಳಿವಿನ ಅಂಚಿನಲ್ಲಿರುವ ಪಕ್ಷಿಗಳಾಗಿವೆ. ಇವುಗಳಲ್ಲಿ ಹಳದಿ ಕೊರಳಿನ ಪಿಕಳಾರ ಕೆ. ಗುಡಿ ವ್ಯಾಪ್ತಿಯಲ್ಲಿ ದರ್ಶನ ನೀಡಿದೆ.

ದಕ್ಷಿಣ ಭಾರತದ ಯಾವುದೇ ಹುಲಿ ರಕ್ಷಿತಾರಣ್ಯ ಹಾಗೂ ವನ್ಯಜೀವಿಧಾಮದಲ್ಲಿ ವೈಜ್ಞಾನಿಕ ವಿಧಾನದಡಿ ಪಕ್ಷಿ ಗಣತಿ ನಡೆದಿಲ್ಲ. ಹೀಗಾಗಿ, ಬಿಆರ್‌ಟಿ ಹುಲಿ ರಕ್ಷಿತಾರಣ್ಯದಲ್ಲಿ ಹಮ್ಮಿಕೊಂಡಿದ್ದ ಗಣತಿ ರಾಷ್ಟ್ರದ ಗಮನ ಸೆಳೆದಿತ್ತು.

`ಗಣತಿಯಲ್ಲಿ ಅಪರೂಪದ ಪಕ್ಷಿಗಳು ಪತ್ತೆಯಾಗಿವೆ. ಅಳಿವಿನ ಅಂಚಿನಲ್ಲಿರುವ ಪಕ್ಷಿಗಳನ್ನು ಕೂಡ ಗುರುತಿಸಲಾಗಿದೆ. ಸದ್ಯಕ್ಕೆ 8 ಪಕ್ಷಿಗಳು ಪಟ್ಟಿಗೆ ಸೇರ್ಪಡೆಯಾಗಿವೆ. ಗಣತಿದಾರರಿಗೆ ನೀಡಿದ್ದ ಪುಸ್ತಕದಲ್ಲಿ ಹಕ್ಕಿಯ ಹೆಸರು ಸೂಚಿಸುವಂತೆ ಇಂಗ್ಲಿಷ್‌ನ ದೊಡ್ಡ ಅಕ್ಷರಗಳಲ್ಲಿ ನಮೂದಿಸಿದ್ದಾರೆ. ಅವುಗಳ ಪೂರ್ಣ ಹೆಸರು ಬರೆದಿಲ್ಲ.

ಮೂರ‌್ನಾಲ್ಕು ದಿನದೊಳಗೆ ಕೂಲಂಕಷವಾಗಿ ಪರಿಶೀಲಿಸಲಾಗುವುದು. ಹೀಗಾಗಿ, ಮತ್ತಷ್ಟು ಪಕ್ಷಿಗಳು ಪಟ್ಟಿಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ' ಎಂದು ಬಿಆರ್‌ಟಿ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ವಿಜಯ್ ಮೋಹನ್‌ರಾಜ್ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT