80 ವಿಷಯಗಳಲ್ಲಿ `ವಾಲ್‌ಮಾರ್ಟ್' ಲಾಬಿ

7
ಅಮೆರಿಕ ಸೆನೆಟ್‌ಗೆ ಸಲ್ಲಿಸಿದ ವರದಿಯಲ್ಲಿ ಬಹಿರಂಗ

80 ವಿಷಯಗಳಲ್ಲಿ `ವಾಲ್‌ಮಾರ್ಟ್' ಲಾಬಿ

Published:
Updated:

ವಾಷಿಂಗ್ಟನ್ (ಪಿಟಿಐ): ಚಿಲ್ಲರೆ ವ್ಯಾಪಾರ ಕ್ಷೇತ್ರದ ಜಾಗತಿಕ ದೈತ್ಯ ಸಂಸ್ಥೆ `ವಾಲ್‌ಮಾರ್ಟ್' ಕಳೆದ ಐದು ವರ್ಷಗಳ ಅವಧಿಯಲ್ಲಿ ಒಂಬತ್ತು ವಿಭಾಗಗಳ ಒಟ್ಟು 80 ವಿಷಯಗಳಿಗೆ ಸಂಬಂಧಿಸಿದಂತೆ ಅಮೆರಿಕ ಸರ್ಕಾರದ ವಿಚಾರದಲ್ಲಿ ಲಾಬಿ ಮಾಡಿರುವುದು ದೃಢಪಟ್ಟಿದೆ. ಅಮೆರಿಕ ಜನಪ್ರತಿನಿಧಿಗಳ ಸಭೆ ಹಾಗೂ ಸೆನೆಟ್‌ಗೆ ಸಲ್ಲಿಸಿದ ತ್ರೈಮಾಸಿಕ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ.ಅಮೆರಿಕದ ಎಲ್ಲ ಕಂಪೆನಿಗಳಂತೆಯೇ `ವಾಲ್‌ಮಾರ್ಟ್' ಸಹ ತನ್ನ ತ್ರೈಮಾಸಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಹಲವು ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದಂತೆ ಲಾಬಿ ನಡೆಸಿದೆ. ಸ್ಥಳೀಯ ಹಾಗೂ ವಿದೇಶ ವ್ಯಾಪಾರ, ಆಹಾರ ಉದ್ಯಮ, ತೆರಿಗೆ, ಹಣಕಾಸು ಸಂಸ್ಥೆ, ಆರೋಗ್ಯ ಸಂಬಂಧಿ ವಿಷಯಗಳು, ಕಾರ್ಮಿಕರ ಸಮಸ್ಯೆಗಳು, ಫಾರ್ಮಸಿ, ಸಾರಿಗೆ, ವಲಸೆ, ಗ್ರಾಹಕ ಸಂಬಂಧಿ ವಿಷಯಗಳು, ಸುರಕ್ಷತೆ, ಇಂಧನ ಹಾಗೂ ಅಣುಶಕ್ತಿ ಮತ್ತಿತರ ವಿಷಯಗಳು ಲಾಬಿ ನಡೆಸಿದ ಪಟ್ಟಿಯಲ್ಲಿ ಪ್ರಮುಖವಾಗಿವೆ. ಈ ಪಟ್ಟಿಯಲ್ಲಿ ಭಾರತೀಯ ಚಿಲ್ಲರೆ ವಹಿವಾಟು ಕ್ಷೇತ್ರ (ಎಫ್‌ಡಿಐ) ಪ್ರವೇಶಿಸುವ ವಿಷಯವೂ ಸೇರಿದೆ.ಆದರೆ ಪಟ್ಟಿಯಲ್ಲಿರುವ ಪ್ರತಿಯೊಂದು ನಿರ್ದಿಷ್ಟ ವಿಷಯ ಇಲ್ಲವೆ ಕ್ಷೇತ್ರಕ್ಕೆ ಎಷ್ಟು ಮೊತ್ತ ವೆಚ್ಚ ಮಾಡಲಾಗಿದೆ ಎಂಬ ಮಾಹಿತಿ ನೀಡಲು ಸಂಸ್ಥೆಯ ವಕ್ತಾರರು ನಿರಾಕರಿಸಿದರು. ಲಾಬಿ ನಡೆಸಿರುವುದು ಅಮೆರಿಕದ ಕಾನೂನಿಗೆ ಅನುಗುಣವಾಗಿಯೇ ಇದ್ದು ಇದರಲ್ಲಿ ತಪ್ಪೇನೂ ನಡೆದಿಲ್ಲ ಎಂದು ಸರ್ಕಾರ ಹಾಗೂ ವಾಲ್‌ಮಾರ್ಟ್ ಸಂಸ್ಥೆ ಮತ್ತೊಮ್ಮೆ ಸ್ಪಷ್ಟಪಡಿಸಿವೆ.ಅಮೆರಿಕದ ಕಾನೂನಿನ ಅನ್ವಯ ವಾಲ್‌ಮಾರ್ಟ್ 25 ದಶಲಕ್ಷ ಅಮೆರಿಕನ್ ಡಾಲರ್ (ಸುಮಾರು 138 ಕೋಟಿ ರೂಪಾಯಿ) ವೆಚ್ಚ ಮಾಡಿರುವುದಾಗಿ ಸಂಸ್ಥೆ ಸಲ್ಲಿಸಿರುವ ತ್ರೈಮಾಸಿಕ ವರದಿಯಲ್ಲಿ ತಿಳಿಸಲಾಗಿದೆ. ಆದರೆ ಭಾರತದಲ್ಲಿ ಸಂಸ್ಥೆ ಮಾಡಿರುವ ವೆಚ್ಚದ ಕುರಿತು ಸ್ಪಷ್ಟ ಮಾಹಿತಿ ಪಡೆಯುವಂತಾಗಲು ವಿದೇಶಿ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಪ್ರತ್ಯೇಕ ತನಿಖೆ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳ್ದ್ದಿದಾರೆ.ಅಮೆರಿಕದ ಕಾನೂನಿನ ಪ್ರಕಾರ, ಕಂಪೆನಿಗಳು, ವ್ಯಕ್ತಿಗಳು ಇಲ್ಲವೆ ಪರ ರಾಷ್ಟ್ರಗಳು ಅಮೆರಿಕ ಸರ್ಕಾರದ ಮುಂದೆ ಲಾಬಿ ನಡೆಸಲು ಅವಕಾಶವಿದೆ. ಆದರೆ ಈ ರೀತಿ ಲಾಬಿ ನಡೆಸುವುದಕ್ಕೆ ನೋಂದಾಯಿತ ಲಾಬಿದಾರರ ಸೇವೆ ಪಡೆಯಬೇಕಾಗುತ್ತದೆ. ಇಂತಹ ಲಾಬಿದಾರರು ಕಂಪೆನಿ ಇಲ್ಲವೆ ವ್ಯಕ್ತಿಗಳ ಪರ ಸರ್ಕಾರದ ಮುಂದೆ ಲಾಬಿ ನಡೆಸುವ ಪ್ರಕ್ರಿಯೆ ಕೈಗೊಳ್ಳುತ್ತಾರೆ. ಇಂತಹ ಲಾಬಿ ನೀತಿಯನ್ನು ಉಲ್ಲಂಘಿಸಿದಲ್ಲಿ ಸಂಬಂಧಿಸಿದ ವ್ಯಕ್ತಿ ಇಲ್ಲವೆ ಕಂಪೆನಿಗಳ ಪ್ರತಿನಿಧಿಗಳಿಗೆ ಜೈಲು ಶಿಕ್ಷೆ ನೀಡಲೂ ಕಾನೂನು ಅವಕಾಶ ನೀಡುತ್ತದೆ.

ವಹಿವಾಟು 22 ಲಕ್ಷ ಕೋಟಿ ರೂಪಾಯಿ

ನ್ಯೂಯಾರ್ಕ್ (ಪಿಟಿಐ): `ವಾಲ್‌ಮಾರ್ಟ್‌ಗೆ ಜಗತ್ತಿನಾದ್ಯಂತ ಒಂದು ಲಕ್ಷ ಪೂರೈಕೆದಾರರು ಇದ್ದಾರೆ. 22 ಲಕ್ಷ ನೌಕರರು ಕೆಲಸ ಮಾಡುತ್ತಿದ್ದು ಕಳೆದ ವರ್ಷ 44000 ಕೋಟಿ ಡಾಲರ್‌ಗಳಷ್ಟು (ಸುಮಾರು 22 ಲಕ್ಷ ಕೋಟಿ ರೂಪಾಯಿ) ವಹಿವಾಟು ನಡೆಸಿದೆ' ಎಂದು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೈಕ್ ಡ್ಯೂಕ್ ಹೇಳಿದ್ದಾರೆ.`ಭಾರತದಲ್ಲಿ ನಮ್ಮ ಕೆಲಸ ಸುಗಮವಾಗುತ್ತದೆ ಎಂಬ ಆತ್ಮವಿಶ್ವಾಸವಿದ್ದು, ಅದಕ್ಕಾಗಿ ಕಾಯುವ ತಾಳ್ಮೆಯೂ ಇದೆ. ಅಲ್ಲಿ ಸಾಕಷ್ಟು ಅವಕಾಶವಿದೆ. ಆ ದೇಶದಲ್ಲಿ ರೈತರು ಹಾಗೂ ಗ್ರಾಹಕ ಉತ್ಪನ್ನಗಳನ್ನು ಉತ್ಪಾದಿಸುವವರು ಇಬ್ಬರಿಗೂ ಇದರಿಂದ ಲಾಭವಿದೆ' ಎಂದು ಮಂಗಳವಾರ ಇಲ್ಲಿನ ವಿದೇಶಾಂಗ ವ್ಯವಹಾರ ಪರಿಷತ್ತಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೈಕ್ ಅಭಿಪ್ರಾಯ ಪಟ್ಟಿದ್ದಾರೆ.

`ಭಾರತ, ಮೆಕ್ಸಿಕೊ ಮತ್ತು ಬ್ರೆಜಿಲ್‌ಗಳಲ್ಲಿ ನಮ್ಮ ಕಂಪೆನಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಉಲ್ಲಂಘಿಸಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಈಗಾಗಲೇ ಆರಂಭವಾಗಿದೆ' ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry