ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

80 ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ

Last Updated 26 ಫೆಬ್ರುವರಿ 2012, 19:15 IST
ಅಕ್ಷರ ಗಾತ್ರ

ಬೆಂಗಳೂರು: `ಕಲಾ ಧ್ಯಾನವೇ ಜಗತ್ತಿನ ಅತಿ ದೊಡ್ಡ ಶಕ್ತಿ~ ಎಂದು ಚಲನಚಿತ್ರ ನಿರ್ದೇಶಕ ಬಿ. ಸುರೇಶ್ ಅಭಿಪ್ರಾಯಪಟ್ಟರು.

ಬೆಂಗಳೂರು ಆರ್ಟ್ ಫೌಂಡೇಷನ್ ನಗರದ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ 80 ಕಲಾವಿದರ ಕಲಾಕೃತಿಗಳ ಪ್ರದರ್ಶನದಲ್ಲಿ ಮಾತನಾಡಿದ ಅವರು, `ಕಲೆಯ ಧ್ಯಾನದಿಂದ ಕಲೆ ಸೃಷ್ಟಿಯಾಗುತ್ತದೆ. ಕಲಾವಿದರನ್ನು ಗುರುತಿಸುವ ಕೆಲಸ ಆಗಬೇಕು~ ಎಂದರು.

`ಅಕಾಡೆಮಿಯು ಕಲಾವಿದರ ಪ್ರದರ್ಶನಗಳನ್ನು ನಿರಂತರವಾಗಿ ನಡೆಸಬೇಕು. ಅಕಾಡೆಮಿಗಳಿಗೆ ಉತ್ತಮ ವ್ಯಕ್ತಿಗಳನ್ನು ಅಧ್ಯಕ್ಷರನ್ನು ನೇಮಕ ಮಾಡಿದಾಗ ಇಂತಹ ಚಟುವಟಿಕೆ ನಡೆಯಲು ಸಾಧ್ಯ. ಇತ್ತೀಚೆಗೆ ರಾಜ್ಯದ ಯುವ ಕಲಾವಿದರು ಸ್ವಪ್ರಯತ್ನದಿಂದ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸುತ್ತಿರುವುದು ಉತ್ತಮ ಬೆಳವಣಿಗೆ~ ಎಂದು ಅವರು ನುಡಿದರು.

ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ, `ಕಲೆಯ ಬೆಳೆವಣಿಗೆಗೆ ಉತ್ತಮ ಪ್ರೋತ್ಸಾಹ ಹಾಗೂ ನಿರಂತರ ಚಟುವಟಿಕೆ ಅಗತ್ಯ. ನಾನೂ ರಂಗಭೂಮಿಯ ಹಿನ್ನೆಲೆಯಿಂದ ಬಂದಿರುವುದರಿಂದ ನನಗೆ ಕಲಾಕ್ಷೇತ್ರ ಹೆಚ್ಚು ಇಷ್ಟವಾದದ್ದು. ಬೆಂಗಳೂರು ಆರ್ಟ್ ಫೌಂಡೇಷನ್ ಸಂಸ್ಥೆಯು ಸರ್ಕಾರದ ಯಾವುದೇ ಸಹಾಯ ನಿರೀಕ್ಷಿಸದೆ ಕಲಾ ಪ್ರದರ್ಶನ ನಡೆಸುತ್ತಿರುವುದು ಉತ್ತಮ ಕೆಲಸ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ವರ್ಣ ಚಿತ್ರ ಕಲಾವಿದ ಎನ್. ಮರಿಶ್ಯಾಮಾಚಾರ್, `ಪ್ರದರ್ಶನಗೊಂಡಿರುವ ಪ್ರತಿಯೊಂದು ಚಿತ್ರಗಳು ವಿಭಿನ್ನವಾಗಿ ನೋಡುಗರ ಮನ ಸೆಳೆಯುತ್ತವೆ. ಇಂದು ಸ್ಪರ್ಧೆಗಳಲ್ಲಿನ ರಾಜಕೀಯದಿಂದ ಉತ್ತಮ ಕಲಾವಿದರಿಗೆ ಅನ್ಯಾಯವಾಗುತ್ತಿದ್ದು, ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆಗಳು ನಡೆಯಬೇಕು~ ಎಂದರು.

ರಾಜ್ಯದ ವಿವಿಧ ಭಾಗಗಳಿಂದ ಸ್ಪರ್ಧೆಗೆ ಕಳಿಸಿದ್ದ ಒಟ್ಟು 180 ಕಲಾಕೃತಿಗಳ ಪೈಕಿ ಆಯ್ದ 80 ಕಲಾಕೃತಿಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ.

ಎಲ್.ಸಂತೋಷ್ ಅಂಬರ್‌ಕರ್, ಎಲ್. ಕಾಂತರಾಜ್, ಶಾಹೀದ್ ಪಾಷ, ವೀರೇಶ್.ಎಂ. ರುದ್ರಸ್ವಾಮಿ, ಎಂ.ಎಸ್. ಸಲೀಂ ಶೋಯಬ್, ಸಿ.ಎಸ್. ಶೀತಲ್, ಮತ್ತು ಸಂಗಮ ವಿ. ದೊಡ್ಡಮನಿ ಅವರನ್ನು `ಕಲಾ ಸಂಸ್ಕಾರ~ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2012ನೇ ಸಾಲಿನ `ಕಲಾ ಧ್ಯಾನ್~ ಪ್ರಶಸ್ತಿಗೆ ಹಿರಿಯ ವರ್ಣಚಿತ್ರ ಕಲಾವಿದರಾದ ಎಂ.ಎಸ್.ಮೂರ್ತಿ ಹಾಗೂ ಎಂ.ಸಿ.ಚೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಕಲಾಕೃತಿಗಳ ಪ್ರದರ್ಶನವು ಇದೇ 29 ರವರೆಗೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಲಲಿತ ಕಲಾ ಅಕಾಡೆಮಿ ರಿಜಿಸ್ಟ್ರಾರ್ ಕೆ.ಸುಧೀಂದ್ರ, ಬೆಂಗಳೂರು ಆರ್ಟ್ ಫೌಂಡೇಷನ್ ಅಧ್ಯಕ್ಷ ಕೃಷ್ಣ ರಾಯಚೂರು, ಕಾರ್ಯದರ್ಶಿ ಓ.ವೆಂಕಟೇಶ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT