ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

80 ಸಾವಿರ ಕೋಟಿ ಕೊಟ್ಟ ದಾಖಲೆ ಎಲ್ಲಿ

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸೋನಿಯಾ ಗಾಂಧಿಗೆ  ಮುಖ್ಯಮಂತ್ರಿ ಶೆಟ್ಟರ್ ಪ್ರಶ್ನೆ

ಹುಬ್ಬಳ್ಳಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವ ಬಾಬ್ತಿನಲ್ಲಿ ರೂ 80 ಸಾವಿರ ಕೋಟಿ ಬಿಡುಗಡೆ ಮಾಡಿದೆ ಎಂಬುದನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೊದಲು ಬಹಿರಂಗಪಡಿಸಲಿ. ನಂತರ ವೆಚ್ಚದ ಬಗ್ಗೆ ಲೆಕ್ಕ ನೀಡುವುದಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸವಾಲು ಹಾಕಿದರು.

ಇಲ್ಲಿನ ನೆಹರೂ ಮೈದಾನದಲ್ಲಿ ಶನಿವಾರ ಬಿಜೆಪಿ ಯುವ ಮೋರ್ಚಾದ ವತಿಯಿಂದ ನಡೆದ `ಕಾಂಗ್ರೆಸ್ ತೊಲಗಿಸಿ, ದೇಶ ಉಳಿಸಿ~ ಹೋರಾಟ ಹಾಗೂ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

ಕೇಂದ್ರದಿಂದ ನೀಡಿದ ಹಣ ಖರ್ಚು ಮಾಡಿರುವ ಬಗ್ಗೆ ರಾಜ್ಯ ಸರ್ಕಾರ ಲೆಕ್ಕ ನೀಡಲಿ ಎಂದು ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೀಡಿರುವ ಹೇಳಿಕೆಯ ಬಗ್ಗೆ ಅವರು ಕಿಡಿಕಾರಿದರು. ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಬಗ್ಗೆ ಯಾವುದೇ ಕಾಳಜಿ ಇಲ್ಲ. 145 ತಾಲ್ಲೂಕುಗಳು ತೀವ್ರ ಬರದಿಂದ ತತ್ತರಿಸಿದ್ದರೂ ನೆರವಿಗೆ ಬಂದಿಲ್ಲ ಎಂದು ಆರೋಪಿಸಿದರು.

ಪುಸ್ತಕದ ಬಗ್ಗೆ ಗೇಲಿ : ಕಾವೇರಿ ಸಮಸ್ಯೆ ಪರಿಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಮುಖಂಡರು ಪುಸ್ತಕ ಬರೆಯುತ್ತಾರೆ. ಪುಸ್ತಕ ಬರೆಯುವ ಬದಲು ಅದೇ ಸಮಯವನ್ನು ಪ್ರಧಾನಿ ಬಳಿ ತೆರಳಿ ಮನವಿ ಮಾಡಲು ಬಳಸಿದ್ದರೆ ರಾಜ್ಯದ ಹಿತಾಸಕ್ತಿ ರಕ್ಷಣೆ ಮಾಡಬಹುದಾಗಿತ್ತು ಎಂದು ಕಟುಕಿದರು.

`ಕಾವೇರಿ ಕಣಿವೆ ಹೊತ್ತಿ ಉರಿಯುತ್ತಿದ್ದರೂ ಆ ಭಾಗವನ್ನು ಪ್ರತಿನಿಧಿಸುವ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಮೌನ ವಹಿಸಿದ್ದೇಕೆ? ಪ್ರಧಾನಿ ಪಕ್ಷಪಾತದ ಬಗ್ಗೆ ಕೆ.ಎಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ.ಪಾಟೀಲ, ಧರಂ ಸಿಂಗ್ ಪಕ್ಷದ ಹೈಕಮಾಂಡ್ ಗಮನಕ್ಕೆ ಏಕೆ ತರಲಿಲ್ಲ~ ಎಂದು ಖಾರವಾಗಿ ಪ್ರಶ್ನಿಸಿದರು. ಕಾವೇರಿ ನದಿ ಪ್ರಾಧಿಕಾರದ ಸಭೆಯಲ್ಲಿ ರಾಜ್ಯದಲ್ಲಿನ ವಾಸ್ತವ ಸ್ಥಿತಿ-ಗತಿಯ ಬಗ್ಗೆ ತಜ್ಞರಿಂದ ವರದಿ ತರಿಸಿಕೊಂಡು ನಂತರ ತೀರ್ಪು ನೀಡುವಂತೆ ಮನವಿ ಮಾಡಿದರೂ ಪ್ರಧಾನಿ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಅದೇ ಕಾರಣಕ್ಕೆ ಸಭೆ ಬಹಿಷ್ಕರಿಸಿ ಹೊರಗೆ ಬರಬೇಕಾಯಿತು ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ದಾಖಲೆ ನೀಡಲಿ : ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ರೂ 600 ಕೋಟಿ ಅವ್ಯವಹಾರ ಆಗಿದೆ ಎಂದು ಆರೋಪಿಸುವ ವಿರೋಧ ಪಕ್ಷಗಳು ಮೊದಲು ಆ ಬಗ್ಗೆ ದಾಖಲೆ ಬಹಿರಂಗಪಡಿಸಲಿ ಎಂದು ಒತ್ತಾಯಿಸಿದ ಶೆಟ್ಟರ್, ಅವ್ಯವಹಾರದ ಕುರಿತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ಬರೆದ ಪತ್ರಕ್ಕೆ ಉತ್ತರ ಬರೆಯಲಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ 300 ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದರು.

ಪಕ್ಷದ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಮಾತನಾಡಿ, `ರೂ 5 ಲಕ್ಷ ಕೋಟಿಗಿಂತಲೂ ಹೆಚ್ಚು ಮೊತ್ತದ ಹಗರಣಗಳು ಯುಪಿಎ ಸರ್ಕಾರದಲ್ಲಿ ನಡೆದರೂ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ವಿರುದ್ಧ ಮೊಕದ್ದಮೆ ಏಕೆ ದಾಖಲಿಸುತ್ತಿಲ್ಲ. ಅವರು ಸಂವಿಧಾನಕ್ಕಿಂತ ಮಿಗಿಲಾದವರೇ~ ಎಂದು              ಪ್ರಶ್ನಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT