ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

835 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಸೂರಿನ ಕೊರತೆ

Last Updated 17 ಜುಲೈ 2013, 5:41 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ಬಹುತೇಕ ಅಂಗನವಾಡಿಗಳು ಶೌಚಾಲಯ ಮತ್ತು ಕುಡಿಯುವ ನೀರು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ನೂರಾರು ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲಿ, ಸಮುದಾಯ ಭವನಗಳಲ್ಲಿ ಹಾಗೂ ದೇವಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ !

ಮೇಲ್ಚಾವಣಿ ದುರಸ್ತಿ ಇರುವ, ನೆಲಹಾಸು ಕಿತ್ತು ಹೋಗಿರುವ ಕಟ್ಟಡಗಳಲ್ಲಿಯೂ ಅಂಗನವಾಡಿಗಳು ನಡೆಯುತ್ತಿವೆ. ಹಲವೆಡೆ ಗೋಡೆಗಳು ಬಿರುಕು ಬಿಟ್ಟು, ಮುರಿದು ಬೀಳುವ ಸ್ಥಿತಿಯಲ್ಲಿವೆ. ಬಹುತೇಕ ಕಟ್ಟಡಗಳಿಗೆ ಕಾಂಪೌಂಡ್‌ಗಳಿಲ್ಲ. ಕಿಟಕಿ ಮತ್ತು ಬಾಗಿಲುಗಳು ದುರಸ್ತಿಯಲ್ಲಿದ್ದರೆ ಇನ್ನೂ ಕೆಲವೆಡೆ ಅಡುಗೆ ಮನೆಯೇ ಇಲ್ಲ. ಅಡುಗೆ ಮನೆ ಇರುವ ಕೆಲವೆಡೆ ಒಲೆ ಇಲ್ಲ. ಹಲವೆಡೆ ಈ ಒಲೆಗಳೂ ದುರಸ್ತಿಯಲ್ಲಿವೆ. ಇಂತಹ ಹಲವಾರು ಪ್ರಮುಖ ಸಮಸ್ಯೆಗಳನ್ನು ಜಿಲ್ಲೆಯ ಬಹುತೇಕ ಅಂಗನವಾಡಿಗಳು ಎದುರಿಸುತ್ತಿವೆ.
835 ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲ !

`ಜಿಲ್ಲೆಯಲ್ಲಿ ಒಟ್ಟು 1525 ಅಂಗನವಾಡಿಗಳಿವೆ. ಇವುಗಳಲ್ಲಿ 790ಕ್ಕೆ ಸ್ವಂತ ಕಟ್ಟಡ ಇವೆ. ಉಳಿದ 835 ಕೇಂದ್ರಗಳು ಸ್ವಂತ ಕಟ್ಟಡ ಇಲ್ಲದೆ ಮೂಲ ಸೌಕರ್ಯದ ಕೊರತೆ ಎದುರಿಸುತ್ತಿವೆ. 84 ಅಂಗನವಾಡಿಗಳ ಸ್ವಂತ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಸುಮಾರು 200 ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. 20 ಗ್ರಾಮಗಳಲ್ಲಿ ದೇವಾಲಯಗಳಲ್ಲಿಯೇ ಅಂಗನವಾಡಿಗಳು ನಡೆಯುತ್ತಿವೆ. ಉಳಿದಂತೆ ಸರ್ಕಾರಿ ಶಾಲಾ ಕಟ್ಟಡ, ಸಮುದಾಯ ಭವನಗಳಲ್ಲಿ ನಡೆಯುತ್ತಿವೆ' ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಚಂದ್ರ ಅವರು `ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

`ಜಿಲ್ಲೆಯ ನಗರ-ಪಟ್ಟಣ ಪ್ರದೇಶದಲ್ಲಿ 161 ಅಂಗನವಾಡಿಗಳಿದ್ದು, 31ಕ್ಕೆ ಮಾತ್ರ ಸ್ವಂತ ಕಟ್ಟಡಗಳಿವೆ. ಉಳಿದ 130ಕ್ಕೆ ಸ್ವಂತ ಕಟ್ಟಡ ಅಗತ್ಯವಿದೆ. ಜಮೀನಿನ ಕೊರತೆಯ ಕಾರಣ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಹುತೇಕ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಸಾಧ್ಯವಾಗಿಲ್ಲ' ಎಂದು ಅವರು ಪ್ರತಿಕ್ರಿಯಿಸಿದರು.

ಅನುದಾನದ ಕೊರತೆ: ಅನುದಾನದ ಕೊರತೆಯ ಕಾರಣ ಅಂಗನವಾಡಿಗಳ ದುರಸ್ತಿ ಕೆಲಸಗಳು ಸರಿಯಾಗಿ ಆಗಿಲ್ಲ. ಕನಕಪುರ ವ್ಯಾಪ್ತಿಯ ಅಂಗನವಾಡಿಗಳಿಗೆ ದುರಸ್ತಿ ಕೆಲಸ ಮಾಡಲು 30 ವರ್ಷದಿಂದ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ. ಅಲ್ಲದೆ ಮಾಗಡಿಯಲ್ಲಿ 18 ವರ್ಷದಿಂದ, ರಾಮನಗರ ಮತ್ತು ಚನ್ನಪಟ್ಟಣದಲ್ಲಿ 16 ವರ್ಷಗಳಿಂದ ದುರಸ್ತಿ ಕೆಲಸಗಳಿಗೆ ಅನುದಾನ ಬಿಡುಗಡೆ ಆಗಿಲ್ಲ. ಈಗ ಅನುದಾನ ಒದಗಿಸಿಕೊಡುವಂತೆ ಮೇಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಸ್ತಾವನೆ ಕಳುಹಿಸಲಾಗುತ್ತಿದೆ ಎಂದರು.

837ರಲ್ಲಿ ಶೌಚಾಲಯ ಇಲ್ಲ !
ಜಿಲ್ಲೆಯ 1525 ಅಂಗನವಾಡಿಗಳ ಪೈಕಿ 688ರಲ್ಲಿ ಮಾತ್ರ ಶೌಚಾಲಯದ ವ್ಯವಸ್ಥೆ ಇದೆ. ಉಳಿದ 837 ಅಂಗನವಾಡಿಗಳಲ್ಲಿ ದಾಖಲಾಗಿರುವ ಮಕ್ಕಳಿಗೆ ಬಯಲೇ ಶೌಚಾಲಯವಾಗಿದೆ. ಸುಮಾರು 400 ಅಂಗನವಾಡಿ ಕಟ್ಟಡಗಳಲ್ಲಿ ಮಾತ್ರ ಕುಡಿಯುವ ನೀರಿನ ಸೌಲಭ್ಯ ಇದೆ. ಉಳಿದೆಡೆ ಅಂಗನವಾಡಿ ಕಾರ್ಯಕರ್ತರು ಬೇರೆ ಕಡೆಯಿಂದ ನೀರು ಹೊತ್ತು ತಂದು ಮಕ್ಕಳಿಗೆ ನೀರು ಒದಗಿಸುತ್ತಿದ್ದಾರೆ ಎಂದು ಚಂದ್ರ ಅವರು ವಿವರಿಸಿದರು.

ಎಲ್ಲ ಅಂಗನವಾಡಿಗಳಿಗೂ ಕುಡಿಯುವ ನೀರಿನ ಸೌಲಭ್ಯ ಮತ್ತು ಶೌಚಾಲಯ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಜತೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

ಸ್ವಂತ ಕಟ್ಟಡ ಇರುವ ಕಟ್ಟಡಗಳಿಗೆ ನೀರಿನ ಸೌಲಭ್ಯ ಮತ್ತು ಶೌಚಾಲಯ ಕಟ್ಟಿಸಲು ತೊಂದರೆ ಆಗುವುದಿಲ್ಲ. ಆದರೆ ಬಾಡಿಗೆ ಕಟ್ಟಡ ಮತ್ತು ಇತರೆಡೆ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿಗಳಿಗೆ ಸಮಸ್ಯೆಯಾಗುತ್ತಿದೆ. ಜಿಲ್ಲಾ ಪಂಚಾಯಿತಿಯ ವಿವಿಧ ಯೋಜನೆಗಳಡಿಯಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಜಿ.ಪಂ ಸಿಇಒ ಒಲವು ತೋರಿದ್ದಾರೆ ಎಂದು ಅವರು ತಿಳಿಸಿದರು.

ಜಿ.ಪಂ ಪ್ರಸ್ತಾವ: ಈ ನಡುವೆ ಜಿಲ್ಲೆಯ ಸುಮಾರು 350 ಅಂಗನವಾಡಿ ಕಟ್ಟಡಗಳ ದುರಸ್ತಿಗೆ ಅಗತ್ಯವಿರುವ ಅಂದಾಜು ರೂ 2.81 ಕೋಟಿ ಅನುದಾನ ಒದಗಿಸುವಂತೆ ಕೋರಿ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಎಂ.ವಿ.ವೆಂಕಟೇಶ್ ಅವರು ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪ್ರಸ್ತಾವನೆ ಕಳುಹಿಸಿದ್ದಾರೆ. ರಾಮನಗರದ 65 ಅಂಗನವಾಡಿಗಳ ದುರಸ್ತಿಗೆ ರೂ 16,30 ಲಕ್ಷ, ಚನ್ನಟಪ್ಟಣದ 72 ಅಂಗನವಾಡಿಗಳ ದುರಸ್ತಿಗೆ ರೂ 47.30 ಲಕ್ಷ, ಮಾಗಡಿಯ 16 ಅಂಗನವಾಡಿ ದುರಸ್ತೆಗೆ ರೂ 21 ಲಕ್ಷ  ಹಾಗೂ ಕನಕಪುರದ 129 ಅಂಗನವಾಡಿಗಳ ದುರಸ್ತಿಗೆ 1.08 ಕೋಟಿ ರೂಪಾಯಿ ಅನುದಾನದ ಒದಗಿಸುವಂತೆ ಪ್ರಸ್ತಾವನೆಯಲ್ಲಿ ಕೋರಲಾಗಿದೆ ಎಂದರು.

`ಅಂಗನವಾಡಿಗಳಲ್ಲಿ ಶೌಚಾಲಯ ನಿರ್ಮಾಣ ವಿಷಯಕ್ಕೆ ಒತ್ತು ನೀಡಲಾಗುತ್ತಿದೆ. ಈ ಸಂಬಂಧ ಜಿ.ಪಂ ಎಂಜಿನಿಯರಿಂಗ್ ವಿಭಾಗಕ್ಕೆ ಸ್ಪಷ್ಟ ಸೂಚನೆ ನೀಡಲಾಗಿದ್ದು, ಎರಡು-ಮೂರು ದಿನಗಳಲ್ಲಿ ಶೌಚಾಲಯ ಇಲ್ಲದ ಅಂಗನವಾಡಿಗಳನ್ನು ಗುರುತಿಸಿ, ಶೀಘ್ರದಲ್ಲಿಯೇ ಅಲ್ಲಿ ಶೌಚಾಲಯ ನಿರ್ಮಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಪ್ರತಿ ಅಂಗನವಾಡಿಗೆ ಶೌಚಾಲಯ ನಿರ್ಮಾಣಕ್ಕೆ 8000 ರೂಪಾಯಿ ನೆರವು ಸರ್ಕಾರದಿಂದ ಬರುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ' ಎಂದು ಸಿಇಒ ಡಾ. ಎಂ.ವಿ.ವೆಂಕಟೇಶ್ `ಪ್ರಜಾವಾಣಿ'ಗೆ ತಿಳಿಸಿದರು.

`ಗ್ರಾಮೀಣ ಪ್ರದೇಶಗಳಲ್ಲಿ ಸ್ವಂತ ಕಟ್ಟಡ ಇಲ್ಲದ ಅಂಗನವಾಡಿಗಳಿಗೆ ಕಟ್ಟಡ ನಿರ್ಮಿಸುವ ಸಲುವಾಗಿ ನಿವೇಶನ ಗುರುತಿಸುವ ಕಾರ್ಯ ನಡೆಯುತ್ತಿದ್ದು, ನಿವೇಶನಗಳು ದೊರೆತ ಕೂಡಲೇ ಅಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT