ಭಾನುವಾರ, ನವೆಂಬರ್ 17, 2019
28 °C
ಗಡಿ ಜಿಲ್ಲೆ ಬೀದರ್‌ನ ಚುನಾವಣಾ ರಂಗದಲ್ಲಿ ಮಹಿಳೆಯರು

85ರ ನಂತರ ಆಯ್ಕೆಯಾಗಿಲ್ಲ, ಈ ಬಾರಿ ಇಬ್ಬರ ಸ್ಪರ್ಧೆ!

Published:
Updated:

ಬೀದರ್: ಸಾರ್ವತ್ರಿಕ ಚುನಾವಣೆಯಲ್ಲಿ ಗಡಿ ಜಿಲ್ಲೆ ಬೀದರ್‌ನಲ್ಲಿ 1985ರ ನಂತರ ಮಹಿಳೆಯರೇ ಚುನಾಯಿತರಾಗಿಲ್ಲ. ಅದಕ್ಕೂ ಮಿಗಿಲಾಗಿ ಕಳೆದ ಎರಡು ಚುನಾವಣೆಗಳಲ್ಲಿ ಮಹಿಳೆಯರಿಗೆ ಸ್ಪರ್ಧಿಸುವ ಅವಕಾಶವೇ ದೊರೆತಿರಲಿಲ್ಲ. 10 ವರ್ಷಗಳ ತರುವಾಯ ಈಗ ಮಹಿಳೆಯರಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ದೊರೆತಿದೆ.   ಪ್ರಸಕ್ತ ಚುನಾವಣೆಯಲ್ಲಿ ಕ್ರಮವಾಗಿ ಕಾಂಗ್ರೆಸ್ ಮತ್ತು ಕೆಜೆಪಿ ತಲಾ ಒಬ್ಬರು ಮಹಿಳೆಯನ್ನು ಉಮೇದುವಾರರನ್ನಾಗಿ ಬೀದರ್ ದಕ್ಷಿಣ ಮತ್ತು ಬಸವಕಲ್ಯಾಣ ಕ್ಷೇತ್ರದಲ್ಲಿ  ಕಣಕ್ಕಿಳಿಸಿವೆ.ಈಗಷ್ಟೇ ರಂಗು ಪಡೆಯುತ್ತಿರುವ ಜಿಲ್ಲೆಯ ಚುನಾವಣೆ ರಾಜಕಾರಣದಲ್ಲಿ ಮಹಿಳಾ ಹೋರಾಟವೂ ಕಂಡುಬರುತ್ತಿದೆ. ವಿಧಾನಸಭೆ ಕ್ಷೇತ್ರಗಳು ಈ ಮೊದಲು ಇದ್ದ ಹೈದರಾಬಾದ್ ರಾಜ್ಯದಿಂದ ಮೈಸೂರು ರಾಜ್ಯದ ವ್ಯಾಪ್ತಿಗೆ ಸೇರಿದ ನಂತರ 1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿಯೇ ಮಹಿಳೆಯನ್ನು ಆಯ್ಕೆ ಮಾಡಿದ ಹೆಗ್ಗಳಿಕೆ ಜಿಲ್ಲೆಯದು. ಬಸವಕಲ್ಯಾಣ ಕ್ಷೇತ್ರದಿಂದ ಕ್ರಮವಾಗಿ 1957 ಮತ್ತು 1962ರಲ್ಲಿ ಅನ್ನಪೂರ್ಣಬಾಯಿ ಅವರು ಆಯ್ಕೆಯಾಗಿದ್ದರು.ಇದನ್ನು ಹೊರತುಪಡಿಸಿದಂತೆ ಹುಲಸೂರು ಮೀಸಲು ಕ್ಷೇತ್ರದಿಂದ (ಕ್ಷೇತ್ರ ಪುನರ್ವಿಂಗಡಣೆಯ ಬಳಿಕ ಕೈಬಿಡಲಾಗಿದೆ) 1985ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಶಿವಕಾಂತಾ ಚತುರೆ ಆಯ್ಕೆಯಾಗಿದ್ದು, ಬಳಿಕ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಸಚಿವೆಯೂ ಆಗಿದ್ದರು.ಇದನ್ನು ಹೊರತುಪಡಿಸಿದರೆ ಲೋಕಸಭೆ ಚುನಾವಣೆ ಸೇರಿದಂತೆ ಇತರೆ ಚುನಾವಣೆಯಲ್ಲಿ ಮಹಿಳೆಯರು ಸ್ಪರ್ಧೆ ನೀಡಿದ್ದರೂ, ಗಣನೀಯ ಮತಗಳನ್ನು ಪಡೆಯುವಲ್ಲಿ ಸೋತಿದ್ದರು. ಕಡೆಯದಾಗಿ ಭಾಲ್ಕಿ ಕ್ಷೇತ್ರದಲ್ಲಿ 1994ರಲ್ಲಿ ಬಿಎಸ್‌ಪಿ ತನ್ನ ಅಭ್ಯರ್ಥಿಯಾಗಿ ಶೋಭಾ ವಿಜಯ ಅವರನ್ನು ಕಣಕ್ಕಿಳಿಸಿದ ಬಳಿಕ ಮಹಿಳೆ ಜಿಲ್ಲೆಯಲ್ಲಿ ಸ್ಪರ್ಧಿಸಿಲ್ಲ. ಆ ಚುನಾವಣೆಯಲ್ಲಿ ಶೋಭಾ ವಿಜಯ ಅವರು 7,789 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.ಈಗ ಚುನಾವಣೆ ಕಣದಲ್ಲಿ ಬಸವಕಲ್ಯಾಣ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಮಲ್ಲಮ್ಮ ಬಸವರಾಜ ಪಾಟೀಲ ಅಟ್ಟೂರು ಮತ್ತು ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೀನಾಕ್ಷಿ ಸಂಗ್ರಾಮ್ ಅವರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.ಮಲ್ಲಮ್ಮ ಅವರು ಐದು ಬಾರಿ ಬಸವಕಲ್ಯಾಣ ಕ್ಷೇತ್ರದಿಂದ ಶಾಸಕರಾಗಿದ್ದ ಬಸವರಾಜ ಪಾಟೀಲ ಅಟ್ಟೂರು ಅವರ ಪತ್ನಿ. ಅವರ ರಾಜಕೀಯ, ಆಡಳಿತದ ಅನುಭವ ಅಷ್ಟಕ್ಕೇ ಸೀಮಿತ. ಆನಾರೋಗ್ಯದ ನಿಮಿತ್ತ ಪತಿ ಈ ಬಾರಿ ಸ್ಪರ್ಧೆಯಿಂದ ಹಿಂದೆ ಸರಿದಾಗ, ಅನಿವಾರ್ಯ ಸಂದರ್ಭದಲ್ಲಿ ಕಣಕ್ಕಿಳಿದವರು ಅವರು.ಇನ್ನೂ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಮೀನಾಕ್ಷಿ ಸಂಗ್ರಾಮ್ ಅವರು ಮಾಜಿ ಶಾಸಕ ಗುಂಡಪ್ಪ ವಕೀಲ ಅವರ ಪುತ್ರಿ. ಈ ಹಿಂದೆ ಬೀದರ್ ಜಿಲ್ಲಾ ಪಂಚಾಯತಿ ಸದಸ್ಯೆಯಾಗಿ ಆಯ್ಕೆಯಾಗಿದ್ದರು.ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ ಅನುಭವೂ ಇದೆ. ಪ್ರಸ್ತುತ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯೂ ಹೌದು.ಜನವರಿ 16, 2013ರಲ್ಲಿ ಇದ್ದಂತೆ ಜಿಲ್ಲೆಯಲ್ಲಿನ ಒಟ್ಟು ಮತದಾರರ ಸಂಖ್ಯೆ 11,38,617. ಕಳೆದೆರಡು ಚುನಾವಣೆಯಲ್ಲಿ ಮಹಿಳೆಯರಿಗೆ ಸ್ಪರ್ಧಿಸಲು ಪಕ್ಷಗಳಿಂದ ಅವಕಾಶವೇ ದೊರೆತಿರಲಿಲ್ಲ ಮತ್ತು 1985ರ ನಂತರ ಈ ಜಿಲ್ಲೆಯ ಯಾವುದೇ ಕ್ಷೇತ್ರದಿಂದ ಮಹಿಳೆ  ಆಯ್ಕೆಯಾಗಿಯೇ ಇಲ್ಲ ಎಂಬ ಕಾರಣದಿಂದಲೂ ಇವರ ಸ್ಪರ್ಧೆ ಗಮನ ಸೆಳೆದಿದೆ.

ಪ್ರತಿಕ್ರಿಯಿಸಿ (+)