ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

86 ನಾಮಪತ್ರ ಕ್ರಮಬದ್ಧ

ದಕ್ಷಿಣ ಕನ್ನಡ: ಕಾಂಗ್ರೆಸ್‌ನಿಂದ ಪಾದಯಾತ್ರೆ; ಬಿಜೆಪಿಯಿಂದ ಬೈಠಕ್
Last Updated 19 ಏಪ್ರಿಲ್ 2013, 13:29 IST
ಅಕ್ಷರ ಗಾತ್ರ

ಮಂಗಳೂರು: ವಿಧಾನಸಭಾ ಚುನಾವಣೆಗೆ ಸಲ್ಲಿಸಲಾಗಿದ್ದ ನಾಮಪತ್ರಗಳ ಪರಿಶೀಲನೆ ಗುರುವಾರ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ. ಹೀಗಾಗಿ 86 ಮಂದಿಯ ನಾಮಪತ್ರಗಳು ಕ್ರಮಬದ್ಧಗೊಂಡಂತಾಗಿದೆ.

ತಿರಸ್ಕೃತಗೊಂಡ ಬಹುತೇಕ ನಾಮಪತ್ರಗಳು ಪಕ್ಷೇತರ ಅಭ್ಯರ್ಥಿಗಳದು ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿದ್ದು, ಪ್ರಮುಖ ರಾಷ್ಟ್ರೀಯ ಪಕ್ಷಗಳು ಮತ್ತು ಮಾನ್ಯತೆ ಪಡೆದ ಇತರ ಪಕ್ಷಗಳ ಅಭ್ಯರ್ಥಿಗಳ ನಾಮಪತ್ರಗಳು ಸಿಂಧು ಎನಿಸಿವೆ.

ಬೆಳ್ತಂಗಡಿಯಲ್ಲಿ 8 ಮಂದಿಯ ನಾಮಪತ್ರ ಕ್ರಮಬದ್ಧವಾಗಿದ್ದರೆ, ಮೂಡುಬಿದಿರೆಯಲ್ಲಿ 8, ಮಂಗಳೂರು ನಗರ ಉತ್ತರದಲ್ಲಿ 11, ಮಂಗಳೂರು ನಗರ ದಕ್ಷಿಣದಲ್ಲಿ 15, ಮಂಗಳೂರಿನಲ್ಲಿ 18, ಬಂಟ್ವಾಳದಲ್ಲಿ 9, ಪುತ್ತೂರಿನಲ್ಲಿ 7 ಮತ್ತು ಸುಳ್ಯದಲ್ಲಿ 10 ನಾಮಪತ್ರಗಳು ಕ್ರಮಬದ್ಧವಾಗಿವೆ.

ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಎರಡು ದಿನಗಳ ಅವಕಾಶ ಇದ್ದು, ಶನಿವಾರ ಸಂಜೆಯ ವೇಳೆಗೆ ಕಣದಲ್ಲಿ ಅಂತಿಮವಾಗಿ ಉಳಿಯಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಲಭಿಸಲಿದೆ.

ಪ್ರಚಾರ ಆರಂಭ: ಈ ಮಧ್ಯೆ, ಕಾಂಗ್ರೆಸ್ ಮತ್ತು ಬಿಜೆಪಿ ಪ್ರಚಾರ ಕಾರ್ಯವನ್ನು ಆರಂಭಿಸಿದ್ದು, ಕಾಂಗ್ರೆಸ್ ಪಾದಯಾತ್ರೆಗೆ ಮತ್ತು ಬಿಜೆಪಿ ಕಾರ್ಯಕರ್ತರ ಬೈಠಕ್‌ಗೆ ಮಹತ್ವ ನೀಡಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಗುರುವಾರ ಸಂಜೆ ನಗರದ ವೆಲಿನ್ಸಿಯಾದಿಂದ ಆರಂಭವಾದ ಪಾದಯಾತ್ರೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಮತ್ತೊಂದೆಡೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪಕ್ಷದ ಕಾರ್ಯಕರ್ತರಿಗೆ ಪ್ರಚಾರ ಕಾರ್ಯತಂತ್ರಗಳ ಮನವರಿಕೆ ಮಾಡುತ್ತಿದ್ದುದು ಕಂಡುಬಂತು. ಯೋಗೀಶ್ ಭಟ್ ಮತ್ತು ಜೆ.ಆರ್.ಲೋಬೊ ಅವರು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿದ ಬೆಳವಣಿಗೆಯೂ ಗುರುವಾರ ನಡೆಯಿತು.

ಆಂತರಿಕ ಬಿಕ್ಕಟ್ಟಿನಿಂದ ಜರ್ಜರಿತವಾಗಿ ಹೋಗಿರುವ ಜೆಡಿಎಸ್‌ನಿಂದ ಪಕ್ಷ ತೊರೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹುರುಪಿನ ಪ್ರಚಾರ ಕಾರ್ಯ ಆರಂಭವಾಗುವ ಯಾವುದೇ ಲಕ್ಷಣವೂ ಕಾಣುತ್ತಿಲ್ಲ. ಇತರ ಪಕ್ಷಗಳ ಕಾರ್ಯತಂತ್ರ ರೂಪುಗೊಳ್ಳುತ್ತಿದ್ದರೂ, ಶನಿವಾರ ಸಂಜೆಗೆ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಆಧಾರದಲ್ಲಿ ಪ್ರಚಾರ ತಂತ್ರಗಳಿಗೆ ರೂಪ ದೊರೆಯುವ ಸಾಧ್ಯತೆ ಇದೆ.

ಎಚ್ಚರಿಕೆ: ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಎಸ್‌ಎಂಎಸ್ ಮೂಲಕ, ಧ್ವನಿಮುದ್ರಿತ ಸಂದೇಶಗಳ ಮೂಲಕ ಮತದಾರರನ್ನು ತಲುಪುತ್ತಿರುವುದು ಚುನಾವಣಾ ಆಯೋಗದ ಗಮನಕ್ಕೆ ಬಂದಿದ್ದು, ಎಂಸಿಎಂಸಿ ಸಮಿತಿಯ ಅನುಮತಿ ಪಡೆಯದೆ ಕಳುಹಿಸುವ ಈ ಜಾಹೀರಾತುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸೇವೆ ಒದಗಿಸುವವರ ವಿರುದ್ಧವೂ ಜನಪ್ರತಿನಿಧಿ ಕಾಯ್ದೆಯ  ಸೆಕ್ಷನ್ 127ರ ಅಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಬಸ್ ಸಂಚಾರ ರದ್ದು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ಕರ್ತವ್ಯ ನಿರ್ವಹಿಸುವ ಬಗ್ಗೆ ಮತಗಟ್ಟೆಗಳಿಗೆ ನೇಮಕ ಮಾಡಲಾದ ಸಿಬ್ಬಂದಿಯನ್ನು ಕರೆದೊಯ್ಯಲು ಹಾಗೂ ಪೋಲೀಸ್ ಬಂದೋಬಸ್ತಿಗೆ ಸಂಸ್ಥೆಯ ವಾಹನಗಳನ್ನು ನೀಡುವಂತೆ  ಜಿಲ್ಲಾ ಚುನಾವಣಾಧಿಕಾರಿ ಆದೇಶಿಸಿದ್ದಾರೆ.ಮಂಗಳೂರು ವಿಭಾಗದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ನೀಡಲಾಗುವುದು.

ಇದರಿಂದಾಗಿ ವಾಹನಗಳ ಕೊರತೆಯುಂಟಾಗಿ ಕೆಲವು ಮಾರ್ಗಗಳಲ್ಲಿ ಬಸ್ ಸಂಚಾರವನ್ನು ರದ್ದುಗೊಳಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT