88ನೇ ವಸಂತಕ್ಕೆ ಕಾಲಿಟ್ಟ ಅಟಲ್

7

88ನೇ ವಸಂತಕ್ಕೆ ಕಾಲಿಟ್ಟ ಅಟಲ್

Published:
Updated:
88ನೇ ವಸಂತಕ್ಕೆ ಕಾಲಿಟ್ಟ ಅಟಲ್

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಮತ್ತು ಹಿರಿಯ ರಾಜಕೀಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಅವರು ಮಂಗಳವಾರ 88ನೇ ವರ್ಷಕ್ಕೆ ಕಾಲಿಟ್ಟರು.ಇಲ್ಲಿನ ಕೃಷ್ಣ ಮೆನನ್ ಮಾರ್ಗದಲ್ಲಿರುವ ನಿವಾಸದಲ್ಲಿ ಸರಳವಾಗಿ ಜನ್ಮದಿನವನ್ನು ಆಚರಿಸಿಕೊಂಡ ಅಟಲ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. ಸ್ವತಃ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಟಲ್ ನಿವಾಸಕ್ಕೆ ತೆರಳಿ ಜನ್ಮದಿನದ ಶುಭಾಶಯ ತಿಳಿಸಿದರು. 15 ನಿಮಿಷಗಳ ಕಾಲ ಅಟಲ್ ಕುಶಲೋಪರಿ ವಿಚಾರಿಸಿದ ಸಿಂಗ್, ಆರೋಗ್ಯಕರ ಜೀವನಕ್ಕೆ ಶುಭ ಹಾರೈಸಿದರು. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರೂ ಅಟಲ್‌ಗೆ ಜನ್ಮದಿನದ ಶುಭಕಾಮನೆ ಕೋರಿ ಪುಷ್ಪಗುಚ್ಛ ಕಳುಹಿಸಿದ್ದರು.ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್, ಉಪಸ್ಪೀಕರ್ ಕರಿಯ ಮುಂಡಾ, ಮುಖಂಡರಾದ ರಾಜನಾಥ್ ಸಿಂಗ್, ಶಹಾನವಾಜ್ ಹುಸೇನ್, ಕಲ್‌ರಾಜ್ ಮಿಶ್ರಾ, ರಾಜೀವ್ ಪ್ರತಾಪ್ ರೂಡಿ, ರವಿಶಂಕರ್ ಪ್ರಸಾದ್ ಬೆಳಗ್ಗೆಯೇ ಅಟಲ್ ನಿವಾಸಕ್ಕೆ ತೆರಳಿ ಶುಭ ಕೋರಿದರು.ಅಟಲ್ ಮನೆ ಇರುವ ಮನಾಲಿಯ ಪ್ರಿಣಿ ಗ್ರಾಮದ ಜನರು ಜನ್ಮದಿನಾಚರಣೆ ಆಚರಿಸಿದರು. ಆರೋಗ್ಯ ಬಿಗಡಾಯಿಸುವ ಮೊದಲು ಪ್ರತಿವರ್ಷ ಬೇಸಿಗೆ ರಜೆ ಕಳೆಯಲು ಅಟಲ್ ಇಲ್ಲಿಗೆ ತಪ್ಪದೇ ಆಗಮಿಸುತ್ತಿದ್ದರು ಎಂದು ಗ್ರಾಮಸ್ಥರು ಸವಿ ನೆನಪುಗಳನ್ನು ಮೆಲುಕು ಹಾಕಿದರು. ಬಿಹಾರ ಮುಖ್ಯಮಂತ್ರಿ ನಿತಿಶ್‌ಕುಮಾರ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರೂ ವಾಜಪೇಯಿ ಅವರನ್ನು ಅಭಿನಂದಿಸಿದ್ದಾರೆ. ವಾಜಪೇಯಿ ಅವರಿಗೆ ಪ್ರತಿಷ್ಠಿತ `ಭಾರತ ರತ್ನ' ಪ್ರಶಸ್ತಿ ನೀಡುವಂತೆ ಚೌಹಾಣ್ ಒತ್ತಾಯಿಸಿದ್ದಾರೆ.ಅಟಲ್ ಗಾಲಿ ಕುರ್ಚಿಯ ಮೇಲೆ ಅವಲಂಬಿತರಾಗಿದ್ದು ಆರೋಗ್ಯ ಸ್ಥಿತಿಯ ಬಗ್ಗೆ ಪಕ್ಷದ ನಾಯಕರು ತುಟಿ ಬಿಚ್ಚುತ್ತಿಲ್ಲ. ಅಟಲ್ ಆರೋಗ್ಯ ಆತಂಕಕ್ಕೆ ಕಾರಣವಾಗಿದ್ದು ಇದೇ ಕಾರಣದಿಂದಾಗಿ ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವ ಅವರು ತಮ್ಮ ದೀರ್ಘ ಕಾಲದ ಒಡನಾಡಿಗಳನ್ನು ಮಾತ್ರ ಗುರುತಿಸಲು ಸಮರ್ಥರಾಗಿದ್ದಾರೆ ಎಂದು ಅಟಲ್ ನಿಕಟವರ್ತಿಗಳು ತಿಳಿಸಿದ್ದಾರೆ. ಪಕ್ಷದ ಮುಖಂಡರು ಔಪಚಾರಿಕ ಭೇಟಿ ನೀಡಿದ್ದು ವಾಜಪೇಯಿ ಅವರೊಂದಿಗೆ ರಾಜಕೀಯ ಸೇರಿದಂತೆ ಯಾವುದೇ ವಿಷಯಗಳನ್ನು ಚರ್ಚಿಸಿಲ್ಲ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry