ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

884 ಕೋಟಿ ರೆಡ್ಡಿ ಆಸ್ತಿ ಜಪ್ತಿ

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರ ಕುಟುಂಬದ ಒಡೆತನದ ಓಬಳಾಪುರಂ ಮೈನಿಂಗ್ ಕಂಪೆನಿಯ (ಒಎಂಸಿ) ಅಕ್ರಮ ಗಣಿಗಾರಿಕೆ  ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ಹಣಕಾಸು ಇಲಾಖೆಯ ಜಾರಿ ನಿರ್ದೇಶನಾಲಯ, 884 ಕೋಟಿ ರೂಪಾಯಿ ಮೌಲ್ಯದ ಷೇರುಗಳು ಮತ್ತು ಸ್ಥಿರಾಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.

ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಅವರ ಮಾಲೀಕತ್ವದ ಬ್ರಹ್ಮಣಿ ಇಂಡಸ್ಟ್ರೀಸ್‌ಗೆ ಸೇರಿದ ತಲಾ 10 ರೂಪಾಯಿ ಮುಖಬೆಲೆಯ 88.41 ಕೋಟಿ ಷೇರುಗಳೂ ಇದರಲ್ಲಿ ಸೇರಿವೆ. ಅಕ್ರಮ ಲೇವಾದೇವಿ ತಡೆ ಕಾಯ್ದೆಯ ಅನ್ವಯ ಇವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ನಿರ್ದೇಶನಾಲಯದ ಬೆಂಗಳೂರು ವಲಯ ಘಟಕದ ಜಂಟಿ ನಿರ್ದೇಶಕ ಸುಭಾಷ್ ಅಗರವಾಲ್ ತಿಳಿಸಿದ್ದಾರೆ.

`2007ರಿಂದ 2010ರ ನಡುವಿನ ಅವಧಿಯಲ್ಲಿ ಒಎಂಸಿಯು 884.13 ಕೋಟಿ ರೂಪಾಯಿ ಮೌಲ್ಯದ ಅದಿರನ್ನು ಅಕ್ರಮವಾಗಿ ಸಾಗಿಸಿದೆ. ಈ ಅಕ್ರಮದಿಂದ ಬಂದ ಹಣವನ್ನು ಬ್ರಹ್ಮಣಿ ಇಂಡಸ್ಟ್ರಿಸ್‌ನಲ್ಲಿ ತೊಡಗಿಸಲಾಗಿದೆ ಎಂದು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ' ಎಂದು ಅವರು ವಿವರಿಸಿದ್ದಾರೆ.
ತನಿಖೆಯ ಭಾಗವಾಗಿ ಜಪ್ತಿಯಾದ ಬ್ರಹ್ಮಣಿ ಇಂಡಸ್ಟ್ರೀಸ್‌ನ ಆಸ್ತಿ, ಯಂತ್ರಗಳು ಸೇರಿದಂತೆ ಯಾವುದೇ ಸಲಕರಣೆಗಳನ್ನು ಯಾರಿಗೂ ಮಾರಾಟ ಮಾಡುವಂತಿಲ್ಲ. ಅವುಗಳನ್ನು ಇನ್ನೊಬ್ಬರ ಹೆಸರಿಗೆ ವರ್ಗಾವಣೆ, ಗುತ್ತಿಗೆ ನೀಡುವಂತಿಲ್ಲ ಎಂದು ಕಂಪೆನಿಯ ನಿರ್ದೇಶಕರಿಗೆ ತಾಕೀತು ಮಾಡಲಾಗಿದೆ. ಕಂಪೆನಿ ಷೇರು ಬಂಡವಾಳದ ಸ್ವರೂಪವನ್ನು ಮಾರ್ಪಾಡು ಮಾಡುವಂತಿಲ್ಲ ಎಂದೂ ಎಚ್ಚರಿಕೆ ನೀಡಲಾಗಿದೆ.

ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ಹೈದರಾಬಾದ್‌ನ ಭ್ರಷ್ಟಾಚಾರ ನಿಗ್ರಹ ದಳ ದಾಖಲು ಮಾಡಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಆಧರಿಸಿ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿತ್ತು. ರೆಡ್ಡಿ ಹಾಗೂ ಒಎಂಸಿ ನಡೆಸಿದ ಅವ್ಯಹಾರಗಳಿಗೆ ಸಂಬಂಧಿಸಿದಂತೆ ಸಿಬಿಐ, 2011ರ ಡಿಸೆಂಬರ್‌ನಲ್ಲೇ ದೋಷಾರೋಪ ಪಟ್ಟಿಯನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ. `ಈ ಪ್ರಕರಣದ ಸಂಬಂಧ ತನಿಖೆ ಮುಂದುವರಿಯಲಿದೆ' ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ನ್ಯಾಯಾಂಗ ಬಂಧನದಲ್ಲಿರುವ ರೆಡ್ಡಿ  ಜಾಮೀನಿನ ಮೇಲೆ ಹೊರ ಬಂದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಯತ್ನಿಸುತ್ತಿರುವ ಬೆನ್ನಿಗೇ, ಅವರ ಕುಟುಂಬದ ಕಂಪೆನಿಯ ಆಸ್ತಿಗಳ ಜಪ್ತಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT