8,878 ಹುದ್ದೆ ಭರ್ತಿಗೆ ಕ್ರಮ

7

8,878 ಹುದ್ದೆ ಭರ್ತಿಗೆ ಕ್ರಮ

Published:
Updated:

ಸುವರ್ಣ ವಿಧಾನಸೌಧ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ಖಾಲಿ ಇರುವ 8,878  ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಪ್ರಕಟಿಸಿದರು.ವಿಧಾನ ಪರಿಷತ್ತಿನಲ್ಲಿ ಬುಧವಾರ ಬಿಜೆಪಿಯ ಕೆ.ಮೋನಪ್ಪ ಭಂಡಾರಿ ಪ್ರಶ್ನೆಗೆ ಅವರು ಉತ್ತರಿಸಿದರು.ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಅಗತ್ಯ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗವನ್ನು (ಕೆಪಿಎಸ್‌ಸಿ) ಕೋರಲಾಗಿದೆ. 60 ಕಾರ್ಯನಿರ್ವಾಹಕ ಅಧಿಕಾರಿ, 140 ಸಹಾಯಕ ಎಂಜಿನಿಯರ್, 306 ಕಿರಿಯ ಎಂಜಿನಿಯರ್, 1353 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು 1750 ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿದ್ದ ಎಲ್ಲ ಪ್ರಕರಣಗಳು ಇತ್ಯರ್ಥಗೊಂಡಿದ್ದು, ಪ್ರಕ್ರಿಯೆ ಮರು ಚಾಲನೆಯಲ್ಲಿದೆ. ಕೆಪಿಎಸ್‌ಸಿಯಿಂದ ಅರ್ಹ ಅಭ್ಯರ್ಥಿಗಳ ಪಟ್ಟಿ ಸಲ್ಲಿಕೆಯಾದ ತಕ್ಷಣವೇ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ಹೇಳಿದರು.ಕುಡಿಯುವ ನೀರಿಗೆ ರೂ 1,223 ಕೋಟಿ: ರಾಜೀವ್ ಗಾಂಧಿ ರಾಷ್ಟ್ರೀಯ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕಾಗಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸರ್ಕಾರ ರೂ 1,223 ಕೋಟಿ ಖರ್ಚು ಮಾಡಿದೆ ಎಂದು ಈಶ್ವರಪ್ಪ ತಿಳಿಸಿದರು. ಕಾಂಗ್ರೆಸ್‌ನ ನಜೀರ್ ಅಹ್ಮದ್ ಪ್ರಶ್ನೆಗೆ ಅವರು ಉತ್ತರಿಸಿದರು. ರಾಜ್ಯದ ಒಟ್ಟಾರೆ 14 ಜಿಲ್ಲೆಗಳಲ್ಲಿ ಈ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಮಾಹಿತಿ ನೀಡಿದರು.ಎನ್‌ಆರ್‌ಇಜಿ ಹಣ ಉಳಿಸಿಕೊಂಡಿಲ್ಲ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎನ್‌ಆರ್‌ಇಜಿ) ಅಡಿಯಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ 5,011 ಕೋಟಿ ಬಿಡುಗಡೆಯಾಗಿದ್ದು, ಸಂಬಂಧಿಸಿದ ಪಂಚಾಯಿತಿಗಳಿಗೆ ನೇರವಾಗಿ ಪಾವತಿ ಮಾಡಲಾಗಿದೆ ಎಂದು ಈಶ್ವರಪ್ಪ ವಿವರಿಸಿದರು.ಕಾಂಗ್ರೆಸ್‌ನ ಮೋಟಮ್ಮ ಪ್ರಶ್ನೆಗೆ ಅವರು ಉತ್ತರಿಸಿದರು. ಎನ್‌ಆರ್‌ಇಜಿ ಯೋಜನೆ ಅನುಷ್ಠಾನದಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ಅದರ ವಿರುದ್ಧ ತನಿಖೆ ನಡೆಸಬೇಕು ಎಂದು ಮೋಟಮ್ಮ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry