ಭಾನುವಾರ, ಜೂನ್ 20, 2021
26 °C

892 ಮೆಗಾವಾಟ್‌ ವಿದ್ಯುತ್‌ ಖರೀದಿಗೆ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿನ ವಿದ್ಯುತ್‌ ಕೊರತೆ ನೀಗಿಸುವುದಕ್ಕಾಗಿ ರಾಜ್ಯದ ವಿದ್ಯುತ್‌ ವಿತರಣಾ ಕಂಪೆನಿಗಳು ಕೇಂದ್ರ ಸರ್ಕಾರಿ ಸ್ವಾಮ್ಯದ ದಾಮೋದರ ಕಣಿವೆ ನಿಗಮದಿಂದ (ಡಿವಿಸಿ) 450 ಮೆಗಾ­ವಾಟ್‌ ಮತ್ತು ತಮಿಳುನಾಡಿನ ಕೂಡುಂ­ಕುಳಂ ಅಣು ವಿದ್ಯುತ್‌ ಸ್ಥಾವರದಿಂದ (ಎನ್‌ಪಿಸಿಐಎಲ್‌) 442 ಮೆಗಾವಾಟ್‌ ವಿದ್ಯುತ್‌ ಖರೀದಿಸಲಿವೆ.ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಕೂಡುಂಕುಳಂ ಘಟಕದ ಹಣಕಾಸು ನಿರ್ದೇಶಕ ಪ್ರೇಮನ್‌ ದಿನ­ರಾಜ್‌ ಮತ್ತು ಪಶ್ಚಿಮ ಬಂಗಾಳ, ಜಾರ್ಖಂಡ್‌ನಲ್ಲಿ ವಿದ್ಯುತ್‌  ಘಟಕಗ­ಳನ್ನು ಹೊಂದಿರುವ ದಾಮೋದರ ಕಣಿವೆ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಅಮಿತಾವ್‌ ನಾಯಕ ಅವರು ಮಂಗಳವಾರ ಇಲ್ಲಿ ರಾಜ್ಯದ ಎಲ್ಲ ಐದು ವಿದ್ಯುತ್‌ ವಿತರಣಾ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರ ಜತೆ ಒಪ್ಪಂದಕ್ಕೆ ಸಹಿ ಹಾಕಿದರು.ಈ ಸಂದರ್ಭದಲ್ಲಿ ಶಿವಕುಮಾರ್‌ ಮಾತನಾಡಿ,  ಪ್ರತಿ ಯೂನಿಟ್‌ಗೆ ಡಿವಿಸಿ­ಯಿಂದ ರೂ. 4.40 ಮತ್ತು ಎನ್‌ಪಿಸಿ­ಐಎಲ್‌ನಿಂದ ರೂ. 3.50ಕ್ಕೆ  ವಿದ್ಯುತ್‌ ಖರೀದಿಸಲಾಗುವುದು. ಈ ಸಂಸ್ಥೆಗಳಿಂದ ಇನ್ನೂ ಹೆಚ್ಚುವರಿ ವಿದ್ಯುತ್‌ ದೊರೆ­ತರೂ ಸರ್ಕಾರ ಖರೀದಿಸಲು ಸಿದ್ಧವಿದೆ. ಇದು ದೀರ್ಘ­ಕಾಲಿಕ ಒಪ್ಪಂದ­­­ವಾ­ಗಿದ್ದು, ಕನಿಷ್ಠ 25 ವರ್ಷಗಳವರೆಗೂ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.ಇದೊಂದು ಮಹತ್ವದ ಒಪ್ಪಂದ ಎಂದು ಪ್ರೇಮನ್‌ ದಿನರಾಜ್‌ ಹೇಳಿ­ದರು. ಕೂಡುಂಕುಳಂನಲ್ಲಿ  ಉತ್ಪಾದನೆ­ಯಾ­ಗುವ ವಿದ್ಯುತ್‌ನಲ್ಲಿ ತಮಿಳು­ನಾಡಿಗೆ ಸಿಂಹಪಾಲು ದೊರೆಯುತ್ತಿದೆ. ತಮಿಳುನಾಡಿಗೆ ಶೇಕಡ 46.2, ಕರ್ನಾಟಕಕ್ಕೆ 22.1, ಕೇರಳಕ್ಕೆ 13.3, ಪಾಂಡಿಚೇರಿಗೆ 13.3 ದೊರೆಯುತ್ತಿದೆ. ಉಳಿದ ಶೇ 5.1 ಭಾಗವನ್ನು  ಅಗತ್ಯ ಮತ್ತು ಅನಿವಾರ್ಯತೆ ಆಧರಿಸಿ ಇದೇ ನಾಲ್ಕು ರಾಜ್ಯಗಳಿಗೆ ಹಂಚಲಾಗುತ್ತದೆ ಎಂದು ವಿವರಿಸಿದರು.‘ಬಿಲ್ಡಿಂಗ್‌ ಕೋಡ್‌’ಗೆ ಅನುಮೋದನೆ’

ಹೊಸದಾಗಿ ನಿರ್ಮಿಸುವ ಕಟ್ಟಡಗಳಲ್ಲಿ ನೈಸರ್ಗಿಕವಾಗಿ ಬೆಳಕು ಮತ್ತು ಗಾಳಿ ಲಭ್ಯವಾಗುವಂತೆ ಇಂಧನ ಇಲಾಖೆ ರೂಪಿಸಿರುವ  ‘ಬಿಲ್ಡಿಂಗ್‌ ಕೋಡ್‌’ಗೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ  ಎಂದು ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದರು.

500 ಚದರ ಮೀಟರ್‌ (5382 ಚದರ ಅಡಿ) ಮೇಲ್ಪಟ್ಟ ಕಟ್ಟಡಗಳಿಗೆ ಈ  ನಿಯಮಗಳು ಅನ್ವಯವಾಗಲಿವೆ. ಕಿಟಕಿ, ಬಾಗಿಲು ಅಳವಡಿಸುವಾಗ ನಿರ್ದಿಷ್ಟ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಇದರಿಂದ ಶೇಕಡ 30 ರಿಂದ 40ರಷ್ಟು ವಿದ್ಯುತ್‌ ಉಳಿತಾಯವಾಗಲಿದೆ ಎಂದು ತಿಳಿಸಿದರು.1000 ಮೆ.ವಾ.ಗೆ ಟೆಂಡರ್‌

ರಾಜ್ಯದಲ್ಲಿನ ವಿದ್ಯುತ್‌ ಬೇಡಿಕೆ  ಪುರೈಸುವ ಉದ್ದೇಶದಿಂದ ಹೆಚ್ಚುವರಿ­ಯಾಗಿ  1 ಸಾವಿರ ಮೆಗಾವಾಟ್‌ ವಿದ್ಯುತ್‌ ಖರೀದಿಸಲು ಟೆಂಡರ್‌ ಕರೆಯ­ಲಾಗಿದೆ ಎಂದು  ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದರು.ಗುಲ್ಬರ್ಗದಲ್ಲಿ ಸ್ಥಾಪಿಸುವ ಕಲ್ಲಿದ್ದಲು ಆಧಾರಿತ  1220 ಮೆಗಾವಾಟ್‌ ವಿದ್ಯುತ್‌ ಯೋಜನೆಗಾಗಿ ಕೇಂದ್ರ ಸರ್ಕಾರ ಒಡಿಶಾದಲ್ಲಿನ ಕಲ್ಲಿದ್ದಲು ನಿಕ್ಷೇಪವನ್ನು ನೀಡಿದೆ. ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲೂ 800 ಮೆಗಾವಾಟ್‌ ಉತ್ಪಾದನೆ ಮಾಡುವ ಮೂರನೇ  ಘಟಕಕ್ಕೂ ಕಲ್ಲಿದ್ದಲು ಪೂರೈಸಲು ಅನುಮೋದನೆ ದೊರೆತಿದೆ.ಇದೇ ರೀತಿ ತಲಾ 800 ಮೆಗಾವಾಟ್ ವಿದ್ಯುತ್ ಸಾಮರ್ಥ್ಯದ ಎರಡು  ಘಟಕಗಳ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಕಲ್ಲಿದ್ದಲು ಹಂಚಿಕೆ ಮಾಡಲು ಕೇಂದ್ರ ಸರ್ಕಾರದ ಇಂಧನ ಸಚಿವಾಲಯ ಶಿಫಾರಸು ಮಾಡಿದೆ. 2015ರ ಮಾರ್ಚ್‌ ವೇಳೆಗೆ ಈ ಘಟಕಗಳು ಆರಂಭವಾಗುವ ನಿರೀಕ್ಷೆ ಇದೆ ಎಂದು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.