ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8ರಂದು ಜೈಲುವಾಸದ ಭವಿಷ್ಯ ನಿರ್ಧಾರ

Last Updated 4 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭೂಹಗರಣಕ್ಕೆ ಸಂಬಂಧಿಸಿದಂತೆ ಒಂದು ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಜಾಮೀನು ಪಡೆದು, ಇನ್ನೊಂದು ಪ್ರಕರಣದಲ್ಲಿ ಅದರ ನಿರೀಕ್ಷೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಶುಕ್ರವಾರವೂ ನಿರಾಸೆಯ ದಿನ.

ಕಾರಣ, ಜಾಮೀನು ಕೋರಿ ಇವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ವಿ.ಪಿಂಟೊ ಮಂಗಳವಾರಕ್ಕೆ ಮುಂದೂಡಿ ಆದೇಶಿಸಿದರು. ಅದೇ ರೀತಿ ಶಾಸಕರಾದ ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಹೇಮಚಂದ್ರ ಸಾಗರ್ ಸೇರಿದಂತೆ ಇತರ ಆರೋಪಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನೂ ಮಂಗಳವಾರಕ್ಕೆ ಮುಂದೂಡಲಾಗಿದೆ.

ದೂರುದಾರ ಸಿರಾಜಿನ್ ಬಾಷಾ ಸಲ್ಲಿಸಿರುವ ಎರಡನೆಯ ದೂರಿಗೆ ಸಂಬಂಧಿಸಿದಂತೆ ಯಡಿಯೂರಪ್ಪನವರಿಗೆ ಗುರುವಾರ ಹೈಕೋರ್ಟ್ ಜಾಮೀನು ನೀಡಿದೆ. `ಸಾಕ್ಷ್ಯಗಳನ್ನು ನಾಶಪಡಿಸಬೇಕು ಎಂದಿದ್ದರೆ, ಅದು ಜೈಲಿನ ಒಳಗೆ ಇದ್ದುಕೊಂಡೇ ಆಗಬೇಕೆಂದೇನಿಲ್ಲ. ನಮ್ಮ ಗಮನಕ್ಕೆ ಬಂದ ಹಲವು ಪ್ರಕರಣಗಳಲ್ಲಿ, ಕೆಲವು ವ್ಯಕ್ತಿಗಳು ಜೈಲಿನಿಂದ ಹೊರಗೆ ಇದ್ದುಕೊಂಡು ಏನೇನು ಮಾಡಬಹುದೋ, ಅದನ್ನು ಜೈಲಿನ ಒಳಗೆ ಇದ್ದುಕೊಂಡೇ ಮಾಡಿದ್ದಾರೆ.
 
ಕಾರಾಗೃಹದಲ್ಲಿ ಬಂಧನದಲ್ಲಿ ಇರುವ ವ್ಯಕ್ತಿಗಳು ಚುನಾವಣೆ ಗೆದ್ದಿರುವ ಉದಾಹರಣೆಗಳೂ ನಮ್ಮ ಮುಂದಿವೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪನವರಿಗೆ ಜಾಮೀನು ನೀಡಿದರೆ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ಲೋಕಾಯುಕ್ತ ವಿಶೇಷ ಕೋರ್ಟ್ ಅಭಿಪ್ರಾಯಪಟ್ಟಿರುವುದು ಸರಿಯಲ್ಲ~ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟು ಜಾಮೀನು ನೀಡಿದ್ದಾರೆ.

ದಾಖಲೆ ಪರಿಶೀಲನೆ: ಎಲ್ಲ ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯಗಳು ಇವೆ ಎನ್ನಲಾದ ಮೂರನೆಯ ದೂರಿಗೆ ಸಂಬಂಧಿಸಿದಂತೆ ಕೆಲವೊಂದು ದಾಖಲೆಗಳನ್ನು ನ್ಯಾಯಮೂರ್ತಿಗಳು ಪರಿಶೀಲಿಸಬಯಸಿದ್ದಾರೆ.

ಈ ದಾಖಲೆಗಳನ್ನು ನೀಡುವಂತೆ ನ್ಯಾ.ಪಿಂಟೊ, ಬಾಷಾ ಅವರ ಪರ ವಕೀಲರಿಗೆ ಗುರುವಾರ ಸೂಚಿಸಿದ್ದರು. ಈ ನಿರ್ದೇಶನದಂತೆ ದಾಖಲೆ ನೀಡಲಾಗಿದೆ. ಶುಕ್ರವಾರ ಈ ಪ್ರಕರಣವು ಪ್ರಕರಣಗಳ ಪಟ್ಟಿಯಲ್ಲಿ (ಕಾಸ್ ಲಿಸ್ಟ್) 175ನೆಯ ಸ್ಥಾನ ಪಡೆದಿತ್ತು. ಆದರೆ ಈ ಪ್ರಕರಣದ ವಿಚಾರಣೆ ಬರುವ ವೇಳೆಗೆ ಕೋರ್ಟ್ ಸಮಯ ಮುಗಿಯಿತು.
ವಿಚಾರಣೆ ನಡೆಸುವಂತೆ ಯಡಿಯೂರಪ್ಪನವರ ಪರ ವಕೀಲರು ಕೋರಿಕೊಂಡರು. ಅದಕ್ಕೆ ನ್ಯಾಯಮೂರ್ತಿಗಳು ದಾಖಲೆಗಳನ್ನು ತಾವು ಪರಿಶೀಲಿಸಬೇಕಿರುವ ಹಿನ್ನೆಲೆಯಲ್ಲಿ ಕಾಲಾವಕಾಶ ಬೇಕಾಗುತ್ತದೆ ಎಂದರು. ಶನಿವಾರ ಹೈಕೋರ್ಟ್ ಕಲಾಪ ನಡೆಯುವುದಿಲ್ಲ. ಸೋಮವಾರ ಬಕ್ರೀದ್ ನಿಮಿತ್ತ ಸರ್ಕಾರಿ ರಜೆ. ಈ ಹಿನ್ನೆಲೆಯಲ್ಲಿ ಮಂಗಳವಾರಕ್ಕೆ ವಿಚಾರಣೆ ಮುಂದೂಡಲಾಗಿದೆ.

ವಿಷಯ ಬದಲಾವಣೆ?: ಸಾಮಾನ್ಯವಾಗಿ 15 ದಿನಗಳು ಅಥವಾ ತಿಂಗಳಿಗೆ ಒಮ್ಮೆ ನ್ಯಾಯಮೂರ್ತಿಗಳು ವಿಚಾರಣೆ ನಡೆಸುವ ವಿಷಯದ ಬದಲಾವಣೆ ಮಾಡಲಾಗುತ್ತದೆ. ಅದೇ ರೀತಿ ಮುಂದಿನ ವಾರ ವಿಷಯಗಳ ಬದಲಾವಣೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಒಂದು ವೇಳೆ ಆ ರೀತಿ ಆದರೆ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ಬೇರೆ ನ್ಯಾಯಮೂರ್ತಿಗಳು ನಡೆಸುತ್ತಾರೆ. ಹೀಗೆ ಆಗಿದ್ದೇ ಆದಲ್ಲಿ, ಬಾಷಾ ಅವರು ಸಲ್ಲಿಸಿರುವ ನಾಲ್ಕನೇ ದೂರಿನ ವಿಚಾರಣೆಯನ್ನು ಪುನಃ ಆ ನ್ಯಾಯಮೂರ್ತಿಗಳು ಆಲಿಸಿ ತೀರ್ಪು ನೀಡಬೇಕಿದೆ. ಹೈಕೋರ್ಟ್ ವೆಬ್‌ಸೈಟ್ ಮೂಲಕ ಶನಿವಾರ ಸಂಜೆಯ ವೇಳೆಗೆ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT