ಬುಧವಾರ, ನವೆಂಬರ್ 13, 2019
23 °C
ಮಿಂಚೇರಿಯಲ್ಲಿ ಬೆಂಕಿ ಆಕಸ್ಮಿಕ

9 ಬಣವೆಗಳು ಭಸ್ಮ, ಅಪಾರ ನಷ್ಟ

Published:
Updated:

ಬಳ್ಳಾರಿ: ಬೆಂಕಿ ಆಕಸ್ಮಿಕದಿಂದಾಗಿ ಒಂಭತ್ತು ಬಣವೆಗಳು ಸುಟ್ಟು ಭಸ್ಮವಾಗಿರುವ ಘಟನೆ ತಾಲ್ಲೂಕಿನ ಮಿಂಚೇರಿ ಗ್ರಾಮದಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಸಂಭವಿಸಿದೆ.ಗ್ರಾಮದ ಹೊರ ವಲಯದಲ್ಲಿರುವ ಬಣವೆಗಳಿಗೆ ಭಾನುವಾರ ಹಾಗೂ ಸೋಮವಾರ ಬೆಳಗಿನ ಜಾವ ಸಣ್ಣ ಪ್ರಮಾಣದಲ್ಲಿ ಹೊತ್ತಿಕೊಂಡ ಬೆಂಕಿಯು, ಕ್ಷಣಾರ್ಧದಲ್ಲೇ ಸುತ್ತಮುತ್ತಲಿನ ಇತರ ಬಣವೆಗಳಿಗೂ ವ್ಯಾಪಿಸಿತು.ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಹಾಗು ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸಿದರು.ಸೋಮವಾರ ಸಂಜೆಯೂ ಮತ್ತೆ ಬೆಂಕಿ ಆಕಸ್ಮಿಕ ಸಂಭವಿಸಿ, ಬಣವೆಗಳು ಸುಟ್ಟು ಭಸ್ಮವಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿಯಾದ ತಿಪ್ಪೇಸ್ವಾಮಿ ಹಾಗೂ ಕುಮಾರಸ್ವಾಮಿ ನೇತೃತ್ವದ ತಂಡವು ಬೆಂಕಿ ನಂದಿಸಲು ಶ್ರಮಿಸಿದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜಾನುವಾರುಗಳಿಗೆ ಆಹಾರವೇ ಇಲ್ಲದಂತಾಗಿದ್ದು, ಕಂದಾಯ ಇಲಾಖೆ ಕೂಡಲೇ ರೈತರ ನೆರವು ನೀಡಿ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಬೈಕ್ ಕಳವು: ಆರೋಪಿಗಳ ಬಂಧನ

ಹೊಸಪೇಟೆ: ಹ
ೊಸಪೇಟೆಯಲ್ಲಿ ಕಳ್ಳತನವಾದ ಎರಡು ದ್ವಿಚಕ್ರವಾಹನಗಳನ್ನು ಆರೋಪಿಗಳ ಸಹಿತ ವಶಪಡಿಸಿಕೊಳ್ಳುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಕಂಪ್ಲಿ ಕೊಟ್ಟಾಲ್ ನಿವಾಸಿಗಳಾದ ಪಿ. ಸಂದೀಪ್ (24) ಮತ್ತು ಎಸ್. ಅಬ್ದುಲ್ (24) ಬಂಧಿತ ಆರೋಪಿಗಳು. ಖಚಿತ ಮಾಹಿತಿ ಆಧಾರಿಸಿ ಪೊಲೀಸರು ದಾಳಿ ನಡೆಸಿ, ಸುಮಾರು 65 ಸಾವಿರ ರೂಪಾಯಿ ಮೌಲ್ಯದ ಎರಡು ಬೈಕ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನಿಬ್ಬರು ಆರೋಪಿಗಳು ನಾಪತ್ತೆಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್‌ಪಿ ಡಾ. ಚಂದ್ರಗುಪ್ತಾ, ಹೆಚ್ಚುವರಿ ಎಸ್‌ಪಿ ಸಿ.ಎಸ್.ಕೆ.ಬಾಬಾ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರಶ್ಮಿ ಪರಡ್ಡಿ ಹಾಗೂ ಸಿಪಿಐ ರಘುಕುಮಾರ ನೇತೃತ್ವದಲ್ಲಿ ಪಿಎಸ್‌ಐ ಜಿ.ಶಾಂತಪ್ಪ, ಎಎಸ್‌ಐ  ವಿ.ಡಿ.ಜೋಶಿ ಹಾಗೂ ಸಿಬ್ಬಂದಿ ಕೋರಿ ಕೃಷ್ಣ, ಮಹಮ್ಮದ್ ರಫಿ, ಕುಮಾರಸ್ವಾಮಿ, ಬಿ.ಘಣಿರಾಜ್, ವೀರೇಶ ಹಾಗೂ ನಾಗರಾಜ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.2.80 ಲಕ್ಷ ಜಪ್ತಿ

ಸಿರುಗುಪ್ಪ: ಆಂಧ್ರಪ್ರದೇಶ ಮೂಲದ ವ್ಯಾಪಾರಿಯೊಬ್ಬರು ಅನುಮಾನಾಸ್ಪದವಾಗಿ ಕೊಂಡೊಯ್ಯುತ್ತಿದ್ದ 2.80 ಲಕ್ಷ ರೂಪಾಯಿ ನಗದು ಹಣವನ್ನು ಇಲ್ಲಿಯ ತಹಶೀಲ್ದಾರ್ ಸಿ.ಎಚ್. ಶಿವಕುಮಾರ್ ಸೋಮವಾರ ಜಪ್ತಿ ಮಾಡಿ ಹಚ್ಚೊಳ್ಳಿ ಪೊಲೀಸರ ವಶಕ್ಕೆ ನೀಡಿದ ಘಟನೆ ಜರುಗಿದೆ.ಆಂಧ್ರದ ಕರ್ನೂಲು ಜಿಲ್ಲೆಯ ಕಲ್ಲೂರು ಮಂಡಲದ ನೆರವಾಡ ಗ್ರಾಮದ ವರ್ತಕ ಮಧು ಬಂಧಿತ ವ್ಯಕ್ತಿ. ತಾಲ್ಲೂಕಿನ ಗಡಿಭಾಗದ ವತ್ತಮುರಣಿ ಗ್ರಾಮದ ಚೆಕ್‌ಪೋಸ್ಟ್ ಬಳಿ ಮಧು ಅವರನ್ನು ತಪಾಸಣೆ ನಡೆಸಿದ ಸಂದರ್ಭದಲ್ಲಿ ಆತನ ಬಳಿ ಇದ್ದ ಹಣವನ್ನು ಪತ್ತೆ ಹಚ್ಚಿದ್ದಾರೆ. ಹಣದ ಬಗ್ಗೆ ಆತನು ಯಾವುದೇ ದಾಖಲೆ ನೀಡಿಲ್ಲ ಎಂದು ತಹಶೀಲ್ದಾರ್ ಪತ್ರಿಕೆಗೆ ಮಾಹಿತಿ ತಿಳಿಸಿದರು.ತಾಲ್ಲೂಕಿನ ಗಡಿಭಾಗದ ಬಿ.ಎಂ. ಸೂಗೂರು ಗ್ರಾಮದಲ್ಲಿಯ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಈ ಮಾಹಿತಿ ಲಭ್ಯವಾಗಿ ತಕ್ಷಣ ಚೆಕ್‌ಪೋಸ್ಟ್‌ಗೆ ತೆರಳಿ ಪರಿಶೀಲಿಸಿದಾಗ ಆಂಧ್ರದ ಬಸ್‌ನಲ್ಲಿ ಪ್ರಯಾಣಿಕರ ಜೊತೆಗೆ ಬರುತ್ತಿದ್ದಾಗ ತಪಾಸಣೆ ನಡೆಸಲಾಯಿತು. ಆಗ ಹಣ ಪತ್ತೆಯಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿ ಇರುವುದರಿಂದ ಈ ಹಣವನ್ನು ಜಪ್ತಿ ಮಾಡಲಾಗಿದೆ. ಹಚ್ಚೊಳ್ಳಿ ಉಪತಹಶೀಲ್ದಾರ್ ರಾಥೋಡ್, ಸಿರುಗುಪ್ಪ ಸಿಪಿಐ ಲೋಕೇಶ್, ಹಚ್ಚೊಳ್ಳಿ ಪಿಎಸ್‌ಐ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಗಡಿ ಭಾಗದ ಹಳ್ಳಿಗಳಲ್ಲಿ ರೈತರು ಬೆಳೆಯುವ ಅಜಿವಾನ ಖರೀದಿಸಲು ವ್ಯಾಪಾರಿ ಮಧು ಇಲ್ಲಿಗೆ ನಗದು ಹಣದೊಂದಿಗೆ ಬಂದಿದ್ದರು ಎನ್ನಲಾಗಿದೆ.ಅರೆಸೇನಾ ಪಡೆ: ಗಡಿಭಾಗದ 2 ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಲು ಕೇಂದ್ರದ ಅರೆ ಸೇನಾ ಪಡೆಯ 25 ಜನ ತಂಡ ಆಗಮಿಸಿದ್ದು, ರಾರಾವಿಯಲ್ಲಿ ವಾಸ್ತವ್ಯವಿದೆ. ರಾರಾವಿ ಮತ್ತು ವತ್ತಮುರಣಿ ಚೆಕ್‌ಪೋಸ್ಟ್‌ಗಳಲ್ಲಿ ಆಂಧ್ರದಿಂದ ಬರುವ ಪ್ರತಿಯೊಬ್ಬರನ್ನು ಮತ್ತು ವಾಹನಗಳನ್ನು ತೀವ್ರ ತಪಾಸಣೆ ನಡೆಸಿ ನಿಗಾವಹಿಸಲು ಸೂಚಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.ವಿದ್ಯುತ್ ತಂತಿ ತಗುಲಿ ಕೋತಿ ಸಾವು

ಕಂಪ್ಲಿ: ಇ
ಲ್ಲಿಗೆ ಸಮೀಪದ ನಂ.10 ಮುದ್ದಾಪುರ ಗ್ರಾಮದಲ್ಲಿ ಸೋಮವಾರ ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಕೋತಿ (ಲಂಗೂರ್)ಯನ್ನು ಗ್ರಾಮಸ್ಥರು ಪೂಜಿಸಿ ಅಂತ್ಯಕ್ರಿಯೆ ನೆರವೇರಿಸಿದರು.ಮರಣ ಹೊಂದಿದ ಕೋತಿ ಅಂತ್ಯಕ್ರಿಯೆಗೂ ಮುನ್ನ ಗ್ರಾಮಸ್ಥರು, ವಿವಿಧ ಸಂಘಟನೆ ಪದಾಧಿಕಾರಿಗಳು ಗ್ರಾಮದಲ್ಲಿ ಭಕ್ತಿಭಾವದಿಂದ ಮೆರವಣಿಗೆ ಮಾಡಿ ಮಾನವೀಯತೆ ಮೆರೆದರು.ಕರವೇ ನಂ.10.ಮುದ್ದಾಪುರ ಗ್ರಾಮ ಘಟಕ ಅಧ್ಯಕ್ಷ ಕೆ. ಕುಮಾರಸ್ವಾಮಿ, ಗ್ರಾ.ಪಂ ಸದಸ್ಯ ವಿಪ್ರದ ಭೀಮೇಶ, ಗ್ರಾಮಸ್ಥರಾದ ವಿಪ್ರದ ನಾಗರಾಜ, ಉಪ್ಪಾರು ಸ್ವಾಮಿ, ಟಿ. ಶಿವು, ಪುರುಕಲಿ ವಿರೂಪಣ್ಣ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)