ಸೋಮವಾರ, ನವೆಂಬರ್ 18, 2019
23 °C

9 ರಂದು ಬಿಜೆಪಿ ಎರಡನೇ ಪಟ್ಟಿ?

Published:
Updated:

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೆಯ ಪಟ್ಟಿಯನ್ನು ಇದೇ 9 ಅಥವಾ 10ರಂದು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು. ಬಿಜೆಪಿ 140 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ.ಪಕ್ಷದ ರಾಜ್ಯ ಘಟಕದ ಕಚೇರಿ `ಜಗನ್ನಾಥ ಭವನ'ದಲ್ಲಿ ಶನಿವಾರ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸೋಮವಾರ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್, ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಗಂಭೀರ ಸ್ವರೂಪದ ಆರೋಪ ಎದುರಿಸುತ್ತಿರುವವರಿಗೆ ಟಿಕೆಟ್ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಅವರು ಪ್ರತ್ರಿಕ್ರಿಯೆ ನೀಡಲಿಲ್ಲ.ಮುತ್ತಿಗೆ

ವಿಧಾನಸಭಾ ಚುನಾವಣೆಗೆ ಶುಕ್ರವಾರ ಬಿಡುಗಡೆಯಾದ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ, ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಎಂ.ಶ್ರೀನಿವಾಸ್ ಅವರ ಹೆಸರು ಇಲ್ಲದಿರುವುದನ್ನು ಪ್ರತಿಭಟಿಸಿ ಅವರ ಬೆಂಬಲಿಗರು ಉಪಮುಖ್ಯಮಂತ್ರಿ ಆರ್.ಅಶೋಕ ಅವರ ಕಾರಿಗೆ ಮುತ್ತಿಗೆ ಹಾಕಿದರು.

ಪಕ್ಷದ ಕಚೇರಿ ಮುಂದೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರು ಶ್ರೀನಿವಾಸ್ ಪರ ಘೋಷಣೆಗಳನ್ನು ಕೂಗಿ, ಟಿಕೆಟ್ ನೀಡುವಂತೆ ಒತ್ತಾಯಿಸಿದರು. ಮೊದಲ ಪಟ್ಟಿಯಲ್ಲೇ ಹೆಸರು ಪ್ರಕಟಿಸದಿದ್ದಕ್ಕೆ ಪಕ್ಷದ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಈ ಕುರಿತು `ಪ್ರಜಾವಾಣಿ' ಜೊತೆ ಮಾತನಾಡಿದ ರಾಜರಾಜೇಶ್ವರಿ ನಗರದ ಬಿಜೆಪಿ ಎಸ್‌ಸಿ-ಎಸ್‌ಟಿ ಘಟಕದ ಅಧ್ಯಕ್ಷ ಮಧುರೆ, `ಶ್ರೀನಿವಾಸ್ ಅವರು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲೂ ಗೆಲ್ಲುವ ಸಾಮರ್ಥ್ಯ ಇದೆ. ಅವರಿಗೆ ಟಿಕೆಟ್ ನೀಡದಿರುವುದು ಖಂಡನೀಯ. ನಮ್ಮ ಪ್ರತಿಭಟನೆ ಪರಿಗಣಿಸಿದ ಅಶೋಕ ಅವರು ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ' ಎಂದರು.

ಪ್ರತಿಕ್ರಿಯಿಸಿ (+)