9 ವರ್ಷ ಬಳಿಕ ಮನೆ ಸೇರಿದ ಯುವಕ

7
ನೇಪಾಳದ ಯುವಕನನ್ನು ರಕ್ಷಿಸಿದ ಸ್ನೇಹಾಲಯ

9 ವರ್ಷ ಬಳಿಕ ಮನೆ ಸೇರಿದ ಯುವಕ

Published:
Updated:

ಮಂಗಳೂರು: ಸುಮಾರು 9 ವರ್ಷಗಳಿಂದ ನಾಪತ್ತೆಯಾಗಿ ಮಂಗಳೂರು ಸೇರಿದ್ದ ನೇಪಾಳದ ಯುವಕನನ್ನು ರಕ್ಷಿಸಿ ಆತನ ಮನೆಗೆ ತಲುಪಿಸುವ ಕಾರ್ಯವನ್ನು ತಲಪಾಡಿಯ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಮಾಡಿದೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾ­ಡಿದ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಜೋಸೆಫ್, ಒಂದೂವರೆ ವರ್ಷದ ಹಿಂದೆ, ತಲಪಾಡಿ ಸಮೀಪದ ಬಾರ್ ಒಂದರ ಎದುರು ಮಾನಸಿಕ ಅಸ್ವಸ್ಥನಂತೆ ಈ ಯುವಕ ಬಿದ್ದಿದ್ದನ್ನು ಗುರುತಿಸಿ, ಸ್ನೇಹಾಲಯಕ್ಕೆ ಕರೆತಂದು ಮಾನಸಿಕ ಸ್ಥೈರ್ಯ ತುಂಬಿ, ಚಿಕಿತ್ಸೆ ಕೊಡಿಸಲಾಯಿತು. ಆರಂಭದಲ್ಲಿ ಈತನಿಗೆ ಮಾತು ಬರುತ್ತಿರಲಿಲ್ಲ. ಅವನಿಗೆ ಸಿದ್ದು ಎಂದು ಹೆಸರಿಡಲಾಗಿತ್ತು.ಆದರೆ ದಿನ ಕಳೆದಂತೆ ಚಿಕ್ಸಿತೆಗೆ ಸ್ಪಂದಿಸಿ ನಿಧಾನವಾಗಿ ಮಾತನಾಡಲು ಆರಂಭಿಸಿದ. ಆ ಬಳಿಕ ತಾನು ನೇಪಾಳದವನೆಂದೂ, ತನ್ನ

ಹೆಸರು ಸಂಜೀವ ದಂಗಲ್ (27) ಎಂದು ತಿಳಿಸಿದ ಎಂದರು.ಅವನ ಬಳಿಯೇ ಮನೆಯ ವಿಳಾಸ ತೆಗೆದುಕೊಂಡು, ಮನೆಯವರನ್ನು ಸಂಪರ್ಕಿಸಲಾಯಿತು. ಈಗ ಅವನ ತಮ್ಮ ಮತ್ತು ಮಾವ ಕರೆದೊಯ್ಯಲು ಬಂದಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಸಂಜೀವನ ತಮ್ಮ ಸೂರಜ್ ದಂಗಲ್ ಮಾತನಾಡಿ, ‘ಸುಮಾರು 9 ವರ್ಷಗಳ ಹಿಂದೆ ದೆಹಲಿಗೆ ಹೋಟೆಲ್ ನಿರ್ವಹಣೆ ಕೋರ್ಸ್ ಮಾಡಲೆಂದು, ನೇಪಾಳದಿಂದ ತೆರಳಿದ್ದ ಸಂಜೀವ ತಪ್ಪಿಸಿಕೊಂಡಿದ್ದನು. ನಾವು ಪೊಲೀಸರಿಗೆ ದೂರನ್ನೂ ನೀಡಿದ್ದೆವು. ಆದರೆ ಆತನ ಪತ್ತೆಯೇ ಆಗಿರಲಿಲ್ಲ. ಆತ ಬದುಕಿರುವ ಆಸೆಯನ್ನೇ ಬಿಟ್ಟಿದ್ದೆವು. ಆದರೆ ಅಚ್ಚರಿ ಎಂಬಂತೆ ಅವನ ಪತ್ತೆಯಾಗಿದೆ. ಸ್ನೇಹಾಲಯ ಅವನನ್ನು ರಕ್ಷಿಸಿ ಚಿಕಿತ್ಸೆ ನೀಡಿದ್ದು, ಅವನನ್ನು ಬುಧವಾರ ಸಂಜೆಯೇ ವಾಪಸ್ ಕರೆದುಕೊಂಡು ಹೋಗುತ್ತಿದ್ದೇವೆ’ ಎಂದು ತಿಳಿಸಿದರು.ತಾನು ದೆಹಲಿ ಬಿಟ್ಟದ್ದು ಏಕೆ, ಮಂಗಳೂರು ಸೇರಿದ್ದು ಏಕೆ ಎಂಬ ಪ್ರಶ್ನೆಗಳಿಗೆ ಸಂಜೀವ ಉತ್ತರಿಸಲಿಲ್ಲ. ಆತನಿಗೆ ಸ್ಮರಣ ಶಕ್ತಿ ಇನ್ನೂ ಸಂಪೂರ್ಣವಾಗಿ ಬರಬೇಕಿದೆ. ಆತ ತನ್ನ ತಾಯಿಯನ್ನು ತುಂಬ ಹಚ್ಚಿಕೊಂಡಿದ್ದು, ಮಾನಸಿಕವಾಗಿ ನೆಮ್ಮದಿ ಸಿಕ್ಕ ಬಳಿಕ ಈ ವಿಚಾರಗಳೆಲ್ಲ ತಿಳಿಸಬಹುದು ಎಂದು ಸೂರಜ್ ಹೇಳಿದರು. ಸಂಜೀವನ ಮಾವ ಗಣೇಶ್ ಆಚಾರ್ಯ ಇದ್ದರು.ನಂತರ ಮಾತನಾಡಿದ ಜೋಸೆಫ್, ‘ಇದೇ ರೀತಿ ಉತ್ತರ ಪ್ರದೇಶದ ಮುತಾನಿ, ಜಾರ್ಖಂಡ್‌ನ ಸುನಾತ್, ಮಧ್ಯ ಪ್ರದೇಶದ ರಮೇಶ್ ಎಂಬವರನ್ನು ರಕ್ಷಿಸಿದ್ದೇವೆ. ಆದರೆ ಇವರ ವಿಳಾಸ ಪತ್ತೆಯಾಗದ ಕಾರಣ, ಸ್ನೇಹಾಲಯದಲ್ಲೇ ಇರಿಸಿಕೊಳ್ಳಲಾಗಿದೆ. ಇವರಲ್ಲದೇ 25 ವೃದ್ಧರು, 15 ಸ್ವಯಂಸೇವಕ ಪರಿಚಾರಕರು ಇದ್ದಾರೆ. ಸ್ಥಳದ ಕೊರತೆ ನಮಗಿದೆ. ಇದಕ್ಕಾಗಿ ಮಂಜೇಶ್ವರ ಬಳಿ ಜಾಗವನ್ನು ಖರೀದಿಸಿದ್ದು ಸುಮಾರು 25 ಸಾವಿರ ಚದರ ವಿಸ್ತೀರ್ಣದ ಕಟ್ಟಡವನ್ನು ನಿರ್ಮಿಸುತ್ತಿದ್ದೇವೆ.ಬರುವ ಡಿಸೆಂಬರ್‌ಅಂತ್ಯದ ಒಳಗೆ ಅದು ಪೂರ್ಣಗೊಳ್ಳಲಿದ್ದು, ಎಲ್ಲರನ್ನೂ ಅಲ್ಲಿಗೆ ಸ್ಥಳಾಂತರಿಸುತ್ತೇವೆ’ ಎಂದು ಹೇಳಿದರು. ಸ್ನೇಹಾಲಯಕ್ಕೆ ಮಂಗಳೂರು ಕೇಂದ್ರ ಮಾರುಕಟ್ಟೆಯಲ್ಲಿ ವಾರಕ್ಕೊಮ್ಮೆ ಉಚಿತವಾಗಿ ತರಕಾರಿ ಸಿಗುತ್ತಿದೆ. ಇದೇ ರೀತಿ ಕೋಳಿ ಮಾಂಸ ಇತ್ಯಾದಿ ಆಹಾರ ಪದಾರ್ಥಗಳೂ ದಾನದ ರೂಪದಲ್ಲಿ ಸಿಗುತ್ತಿವೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry