ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ತಿಂಗಳಲ್ಲಿ 130 ಮಹಿಳೆಯರು ನಾಪತ್ತೆ

Last Updated 20 ಸೆಪ್ಟೆಂಬರ್ 2011, 8:55 IST
ಅಕ್ಷರ ಗಾತ್ರ

ತುಮಕೂರು: ಮಹಿಳೆಯರು, ಯುವತಿಯರ ಮೇಲೆ ಜಿಲ್ಲೆಯಲ್ಲಿ ಹಿಂಸೆ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಎಲ್ಲಕ್ಕೂ ಹೆಚ್ಚಾಗಿ ಕಾಣೆಯಾಗುತ್ತಿರುವ ಪ್ರಕರಣಗಳು ಅಧಿಕವಾಗುತ್ತಿದ್ದು, ಸಾಕಷ್ಟು ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿಲ್ಲ.

ಮೂರು ವರ್ಷಗಳ ಅಂಕಿ ಅಂಶ ಗಮನಿಸಿದರೆ ಮಹಿಳೆಯರ ಮೇಲಿನ ಕಿರುಕುಳ, ಮಾನಭಂಗ ಯತ್ನ, ಅತ್ಯಾಚಾರ, ನಾಪತ್ತೆ ಪ್ರಕರಣಗಳು ಹೆಚ್ಚುತ್ತಲೇ ಸಾಗಿವೆ. ಈ ವರ್ಷದ ಸೆಪ್ಟೆಂಬರ್ ತಿಂಗಳವರೆಗೆ 22 ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. 82 ಮಹಿಳೆಯರು, 48 ಬಾಲಕಿಯರು ಕಾಣೆಯಾಗಿದ್ದಾರೆ.
ತಿಂಗಳಲ್ಲಿ ಕನಿಷ್ಠ 5 ಯುವತಿಯರು, 9 ಮಹಿಳೆಯರು ಕಾಣೆಯಾಗುತ್ತಿದ್ದಾರೆ.

ಹೀಗೆ ಕಾಣೆಯಾದ ಯುವತಿಯರು ಎಲ್ಲಿಗೆ ಹೋಗುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಇವರಲ್ಲಿ ಕೆಲವರಾದರೂ ಕಳ್ಳಸಾಗಣೆ, ವೇಶ್ಯಾವಾಟಿಕೆ ಗೃಹಗಳಿಗೆ ಮಾರಾಟ ಆಗಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಸಾಂತ್ವನ ಕೇಂದ್ರದ ಸಾ.ಚಿ.ರಾಜಕುಮಾರ ಹೇಳುತ್ತಾರೆ.

ಪ್ರೇಮ ಪ್ರಕರಣ ಯುವತಿಯರು ಕಾಣೆಯಾಗಲು ಪ್ರಮುಖ ಕಾರಣ. ಕಾಣೆಯಾದ ಪ್ರಕರಣಗಳಲ್ಲಿ 18 ವಯಸ್ಸಿನ ಯುವತಿಯರೇ ಹೆಚ್ಚಾಗಿದ್ದಾರೆ. ಮಹಿಳೆಯರು ಕಾಣೆಯಾಗಲು ಅನೈತಿಕ ಸಂಬಂಧ ಕಾರಣವಾಗಿದೆ. ಶೇ 90ರಷ್ಟು ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದ್ದು, ಶೇ 10ರಷ್ಟು ಪ್ರಕರಣಗಳಲ್ಲಿ ಕಾಣೆಯಾದವರು ಎಲ್ಲಿಗೆ ಹೋಗಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಅತ್ಯಾಚಾರ ಪ್ರಕರಣಗಳಿಗೆ ಪ್ರಮುಖ ಕಾರಣ ಯುವತಿಯರ ಪ್ರೇಮ. ಮದುವೆ ನಿರಾಕರಣೆ ಹಾಗೂ ಮದುವೆಯಾಗಲು ಸಾಧ್ಯವಿಲ್ಲ ಎಂಬ ಸಂದರ್ಭದಲ್ಲಿ ಯುವತಿಯರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ. ಆದರೆ ಶೇ 10ರಷ್ಟು ಪ್ರಕರಣಗಳಲ್ಲಿ ಅತ್ಯಾಚಾರ ನಿಜ ಇರಬಹುದು. ಆದರೆ ಜಿಲ್ಲೆಯಲ್ಲಿ ಮಹಿಳೆಯರು, ಯುವತಿಯರ ಕಳ್ಳಸಾಗಣೆ ನಡೆದಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಅವರು ಹೇಳಿದರು.

`ಮಹಿಳೆಯರು ಮತ್ತು ಯುವತಿಯರ ಕಳ್ಳ ಸಾಗಣೆ ಗೊತ್ತಿಲ್ಲದಂತೆ ನಡೆಯುತ್ತದೆ. ಭೂಗತವಾಗಿ ಕಳ್ಳಸಾಗಣೆ ನಡೆಯುವುದರಿಂದ ಪತ್ತೆ ಹಚ್ಚಲು ಕಷ್ಟ~ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಧಾಕೃಷ್ಣ ಪ್ರತಿಕ್ರಿಯಿಸಿದರು.

`ಜಿಲ್ಲೆಯಲ್ಲಿ ಯುವತಿಯರ ಕಳ್ಳ ಸಾಗಣೆ ನಡೆಯುತ್ತಿದೆ. ಆದರೆ ಸಾಕ್ಷ್ಯ ಸಿಗುತ್ತಿಲ್ಲ. ಅಲ್ಪ ಸಂಖ್ಯಾತರ ಸಮುದಾಯದ ಪೋಷಕರೇ ಕಳ್ಳಸಾಗಣೆದಾರರಿಗೆ ಮಾರಾಟ ಮಾಡಿದ ಪ್ರಕರಣಗಳಿವೆ. ಒಂದೆರಡು ಪ್ರಕರಣಗಳಲ್ಲಿ ದೆಹಲಿಗೆ ಕಳ್ಳ ಸಾಗಣೆಯಾಗಿ ಮತ್ತೆ ವಾಪಸ್ ಬಂದವರನ್ನು ವಿಚಾರಣೆ ನಡೆಸಿದರೂ ಜಾಲದ ಸುಳಿವು ಮಾತ್ರ ಸಿಕ್ಕುತ್ತಿಲ್ಲ. ನಗರದ ಎಂ.ಜಿ.ರಸ್ತೆ, ಗಾರ್ಡನ್ ರಸ್ತೆಯಲ್ಲಿ ಒಂದಿಬ್ಬರು ಇಂಥ ಜಾಲದಲ್ಲಿ ಇದ್ದಾರೆ. ಕಳ್ಳ ಸಾಗಣೆ ಜಾಲ ಇರುವುದು ಸತ್ಯ~ ಎಂದು ಮಹಿಳೆ, ಯುವತಿಯರ ಕಳ್ಳಸಾಗಣೆ ಜಾಲದ ವಿರುದ್ಧ ಸಾಕಷ್ಟು ಅಧ್ಯಯನ, ಹೋರಾಟ ನಡೆಸುತ್ತಿರುವ ರಮಾದೇವಿ ಹೇಳಿದರು.

`ಈ ಮೊದಲು ಮಹಿಳೆಯರ ಮೇಲಿನ ಪ್ರಕರಣಗಳನ್ನು ಠಾಣೆಗಳಲ್ಲಿ ಸರಿಯಾಗಿ ದಾಖಲಿಸುತ್ತಿರಲಿಲ್ಲ. ಆದರೆ ಈಗ `ಕಾಣೆಯಾದ ವ್ಯಕ್ತಿಗಳ ವಿಭಾಗ (ಮಿಸ್ಸಿಂಗ್ ಪರ‌್ಸನ್ ಬ್ಯೊರೊ) ತೆರೆಯಲಾಗಿದೆ. ಪ್ರತಿ ಪ್ರಕರಣವನ್ನು ದಾಖಲು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಇಲ್ಲಿವರೆಗೂ ಕಳ್ಳಸಾಗಣೆಯಾದ ಒಂದೇ ಒಂದು ಪ್ರಕರಣವು ದಾಖಲಾಗಿಲ್ಲ. ಈ ಹಿಂದೆ ಕಾಣೆಯಾದವರ ಪತ್ತೆಗಾಗಿ ತಂಡವನ್ನು ರಚಿಸಲಾಗಿದೆ. ಪ್ರೇಮ ಪ್ರಕರಣಗಳು ನಾಪತ್ತೆಗೆ ಪ್ರಮುಖ ಕಾರಣ. ಜಿಲ್ಲೆಯಲ್ಲಿ ಕಳ್ಳಸಾಗಣೆ ನಡೆಯುತ್ತಿಲ್ಲ~ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್ `ಪ್ರಜಾವಾಣಿ~ಗೆ ತಿಳಿಸಿದರು.

ಯುವತಿಯರು ಕಾಣೆಯಾದ ಪ್ರಕರಣಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಕೂಡಲೇ ಪ್ರಕರಣ ದಾಖಲಿಸುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲವು ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ಆದರೆ ಎರಡು-ಮೂರು ದಿನ ದೂರು ನೀಡುವುದು, ಪ್ರಕರಣ ದಾಖಲಿಸುವುದರಲ್ಲಿ ನಿಧಾನ ಮಾಡಲಾಗುತ್ತಿದೆ. ಇದರಿಂದಾಗಿಯೂ ಕಳ್ಳ ಸಾಗಣೆ ಜಾಲ ಪತ್ತೆಯಾಗುತ್ತಿಲ್ಲ. ಆದರೆ ಪೊಲೀಸರು ಕಳ್ಳ ಸಾಗಣೆ ಇಲ್ಲ ಎಂದೇ ವಾದ ಮಾಡುತ್ತಾರೆ. ಆದರೆ ವಾಸ್ತವ ಆಗಿಲ್ಲ ಎಂದು ಸಾ.ಚಿ.ರಾಜಕುಮಾರ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT