ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9/11 ಉಗ್ರವಾಗಿ ಕಾಡಿದ ಶೋಕ

Last Updated 11 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್/ವಾಷಿಂಗ್ಟನ್ (ಪಿಟಿಐ): ದಶಕದ ಹಿಂದೆ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡ, ಪೆಂಟಗಾನ್ ಹಾಗೂ ಪೆನ್ಸಿಲ್ವೇನಿಯಾ ಮೇಲೆ ನಡೆದ 9/11ರ ಭಯೋತ್ಪಾದನಾ ವಿಮಾನ ಅಪಘಾತ ದಾಳಿಯಲ್ಲಿ ಮಡಿದ ಸುಮಾರು 90 ದೇಶಗಳ 3000ಕ್ಕೂ ಅಧಿಕ ಜನರನ್ನು ಇಡೀ ವಿಶ್ವವೇ ಭಾನುವಾರ ಒಂದಾಗಿ ಸ್ಮರಿಸಿ, ಶ್ರದ್ಧಾಂಜಲಿ ಕಾರ್ಯಕ್ರಮಗಳ ಮೂಲಕ ಗೌರವಾರ್ಪಣೆ ಸಲ್ಲಿಸಿತು.

ದುರಂತ ನಡೆದು ಹತ್ತು ವರ್ಷಗಳಾದರೂ ಸಹ ಇನ್ನೂ ಜನಮನದಲ್ಲಿ ದುಃಖದ ಛಾಯೆ ಅಳಿಸದಂತಿದ್ದು, ಇದನ್ನು ವಿವಿಧ ಬಗೆಯ ಸಂಸ್ಮರಣಾ ಕಾರ್ಯಕ್ರಮಗಳ ಮೂಲಕ ಜಗತ್ತು ನೆನಪಿಸಿಕೊಂಡಿತು. ಮಡಿದವರನ್ನು ಸ್ಮರಿಸಿ, ಕುಟುಂಬದವರ ಮುಖಗಳಲ್ಲಿ ಕಣ್ಣೀರು ಹರಿದವು. ಮತ್ತೆ ಭಯೋತ್ಪಾದನಾ ದಾಳಿ ನಡೆಯುವ ಸಾಧ್ಯತೆಗಳ ಭೀತಿಯಲ್ಲಿ ಬಿಗಿ ಭದ್ರತೆಯ ನಡುವೆ ರಾಷ್ಟ್ರಗೀತೆ ಗಾಯನ ಮತ್ತು ಮೌನ ಮೆರವಣಿಗೆ ನಡೆಯಿತು.

ವಿಶ್ವ ನಾಯಕರಿಂದ ಹಿಡಿದು ಸಾಮಾನ್ಯ ನಾಗರಿಕರವರೆಗೆ ಎಲ್ಲರೂ ಅಗಲಿದವರನ್ನು ಸ್ಮರಿಸಿದರು. ಈ ಸಾಲಿನಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಮಾಜಿ ಅಧ್ಯಕ್ಷರಾದ ಜಾರ್ಜ್ ಡಬ್ಲ್ಯು ಬುಷ್, ಬಿಲ್ ಕ್ಲಿಂಟನ್, ಉಪಾಧ್ಯಕ್ಷ ಜೋ ಬಿಡೆನ್ ಮುಂತಾದ ಗಣ್ಯರು ಸೇರಿದ್ದರು. ಒಬಾಮ ಮತ್ತು ಪತ್ನಿ ಮಿಶೆಲ್ ಹಾಗೂ ಬುಷ್ ಮತ್ತು ಪತ್ನಿ ಲಾರಾ ದಂಪತಿ ಕಪ್ಪು ಉಡುಪಿನೊಂದಿಗೆ ಪರಸ್ಪರ ಕೈಹಿಡಿದುಕೊಂಡು ನಡೆದು, ಸ್ಮಾರಕದಲ್ಲಿದ್ದ ಮೃತರ ಹೆಸರನ್ನು ಓದಿ, ವೀಕ್ಷಿಸಿದರು.

ದಾಳಿಯ ರೂವಾರಿ ಅಲ್‌ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ಕಳೆದ ಮೇ 2ರಂದು ಪಾಕಿಸ್ತಾನದಲ್ಲಿ ಅಮೆರಿಕ ಪಡೆಗಳಿಂದ ಹತ್ಯೆಯಾದರೂ, ದಾಳಿಗೆ ಬಲಿಯಾದವರ ಕುಟುಂಬಗಳಿಗೆ (ಭಾರತೀಯರು ಸೇರಿ) ಇನ್ನೂ ನೋವು ಮಾಸಿಲ್ಲದಿರುವುದು ಸಂಸ್ಮರಣೆಯಲ್ಲಿ ಕಂಡುಬಂತು. ಅಮೆರಿಕದ ಬಾವುಟ ಮತ್ತು ಮೃತರ ಫೊಟೊಗಳನ್ನು ಹಿಡಿದುಕೊಂಡು ಅವರು ಮೌನವಾಗಿ ಸ್ಮಾರಕದ ಬಳಿ ನಡೆದರು.
 
ಸ್ಮಾರಕದ ಬಳಿ ಇರುವ 30 ಅಡಿಗಳ ಕೃತಕ ಜಲಪಾತದತ್ತ ಅಧ್ಯಕ್ಷರು ಮತ್ತು ಮಾಜಿ ಅಧ್ಯಕ್ಷರು ನಿಮಿಷ ಕಾಲ ದೃಷ್ಟಿಹರಿಸಿದರು.

`ಆಶ್ರಯ ಮತ್ತು ಬಲದ ಮೂಲ ದೇವರು~ ಎಂಬ ಬೈಬನ ವಾಕ್ಯವೊಂದನ್ನು ಒಬಾಮ ಓದಿದಾಗ, ಅಗಲಿದವರ ಸಂಬಂಧಿಕರು ಸ್ಮಾರಕದಲ್ಲಿ ಹಾಕಿರುವ ತಮ್ಮ ಬಂಧುಗಳ ಹೆಸರನ್ನು ಹೇಳಿದರು. 5 ಮಕ್ಕಳನ್ನು ಕಳೆದುಕೊಂಡ ತಾಯಿಗೆ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಬರೆದ ಪತ್ರವೊಂದನ್ನು ಬುಷ್ ಓದಿದರು.

ಶ್ಯಾಂಕ್ಸ್‌ವಿಲೆ, ಪೆನ್ಸಿಲ್ವೇನಿಯಾ ವರದಿ (ಎಎಫ್‌ಪಿ): `ಅಮೆರಿಕವು ಭಯೋತ್ಪಾದನೆ ವಿರುದ್ಧದ ತನ್ನ ಹೋರಾಟದಿಂದ ವಿಚಲಿತವಾಗಿಲ್ಲ~ ಎಂಬುದಾಗಿ ಭಾನುವಾರ ಇಲ್ಲಿ ತಿಳಿಸಿದ ಅಧ್ಯಕ್ಷ ಬರಾಕ್ ಒಬಾಮ, `9/11ರ ಉಗ್ರರ ದಾಳಿಯನ್ನು ಎಂದಿಗೂ ಮರೆಯಲಾಗದು ಮತ್ತು ದೇಶ ರಕ್ಷಣೆಯಲ್ಲಿ ವೀರಯೋಧರು ಸಂಪೂರ್ಣ ನೆರವಾಗಿದ್ದಾರೆ~ ಎಂದರು.

ಜಗತ್ತಿನೆಲ್ಲೆಡೆ 9/11ರ ದಾಳಿಯ ದಶಕಾಚರಣೆಯಲ್ಲಿರುವ ಸಂದರ್ಭದಲ್ಲಿ ಅಮೆರಿಕನ್ನರು ದುರಂತದಲ್ಲಿ ಮಡಿದವರ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಒಬಾಮ ಮಾತನಾಡಿದರು. ಮಾಜಿ ಅಧ್ಯಕ್ಷರಾದ ಜಾರ್ಜ್ ಡಬ್ಲ್ಯು ಬುಷ್ ಮತ್ತು ಬಿಲ್ ಕ್ಲಿಂಟನ್ ಹಾಗೂ ಹಾಲಿ ಉಪಾಧ್ಯಕ್ಷ ಜೋ ಬಿಡೆನ್ ಮುಂತಾದ ಗಣ್ಯರು ಭಾಗವಹಿಸಿ, ಅಗಲಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಅಮೆರಿಕದ ರಾಜಧಾನಿ ವಾಷಿಂಗ್ಟನ್ ಮೇಲೆ ದಾಳಿಗೆ ಯತ್ನಿಸಿದ ವಿಮಾನ ಅಪಹರಣಕಾರರನ್ನು ಮಣಿಸಿ, ಹೆಚ್ಚಿನ ದುರಂತ ತಪ್ಪಿಸಿದ ಯುನೈಟೆಡ್ ಏರ್‌ಲೈನ್ಸ್ ವಿಮಾನದ  ಸಿಬ್ಬಂದಿಯನ್ನು ಬುಷ್ ಅಭಿನಂದಿಸಿ, `ಇದು ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಮೊದಲ ಪ್ರತಿರೋಧ ಕ್ರಮವಾಗಿದೆ~ ಎಂದು ಬಣ್ಣಿಸಿದರು. `ನಮಗೆಲ್ಲ ದುರಂತ ನಡೆದು ದಶಕವಾದರೂ, ಸಂಬಂಧಿಕರನ್ನು ಕಳೆದುಕೊಂಡರಿಗೆ ಮಾತ್ರ ಇದೆಂದೂ ಇತಿಹಾಸವಾಗಿರದೆ, ಸದಾ ನೆನಪಿನಲ್ಲಿರುವುದು~ ಎಂದರು.

ಉಗ್ರರಿಗೆ ಜಯ ಸಿಗದು:
ನ್ಯೂಯಾರ್ಕ್‌ನಲ್ಲಿ ಮೈಲುಗಳುದ್ದದ ಮಾನವ ಸರಪಳಿ ನಿರ್ಮಿಸಿ, ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡ ಕುಸಿತದಲ್ಲಿ ಮೃತಪಟ್ಟವರಿಗೆ ಗೌರವ ಸಲ್ಲಿಸಲಾಯಿತು.

ವಿಶ್ವ ವಾಣಿಜ್ಯ ಕೇಂದ್ರ, ಪೆಂಟಗಾನ್ ಹಾಗೂ ಶ್ಯಾಂಕ್ಸ್‌ವಿಲೆಯಲ್ಲಿ ಮಡಿದ ಸುಮಾರು 90 ರಾಷ್ಟ್ರಗಳ 3000ಕ್ಕೂ ಹೆಚ್ಚು ಜನರ ಸ್ಮರಣಾರ್ಥ ರಾತ್ರಿ ಮೇಣದ ದೀಪಗಳನ್ನು ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೆನಡಾದ ಗಾಯಕರಾದ ಸಾರಾ ಮೆಕ್‌ಲ್ಯಾಕ್ಲಾನ್ ಅವರು `ನಾವು ನಿಮ್ಮನ್ನು ಸ್ಮರಿಸುತ್ತಿದ್ದೇವೆ~ ಎಂಬ ಹಾಡನ್ನು ಹಾಡಿದರು.

ಅಧ್ಯಕ್ಷ ಒಬಾಮ ಅವರು ಸೋಮವಾರ ಕೂಡಾ ಇಲ್ಲಿ ನಡೆಯುವ ಎರಡು ಗಂಟೆಗಳ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ವೆಲ್ಲಿಂಗ್ಟನ್ ವರದಿ (ಎಪಿ):
ಈ ಮಧ್ಯೆ, ಭಯೋತ್ಪಾದನಾ ದಾಳಿಯ ಸಂಚಿನ ಶಂಕೆಯ ಮೇಲೆ ನಾಲ್ವರನ್ನು ಬಂಧಿಸಿರುವುದಾಗಿ ಸ್ವೀಡನ್‌ನ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಪತ್ನಿ ಸತ್ತಿರಬಹುದೆಂದು ಭಾವಿಸಿದ್ದ ಕ್ಯಾಮರಾನ್
ಲಂಡನ್ (ಐಎಎನ್‌ಎಸ್):
2001ರ ಸೆಪ್ಟೆಂಬರ್ 11ರಂದು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಪತ್ನಿ ಸಮಂತಾ ವಾಣಿಜ್ಯ ಪ್ರವಾಸಕ್ಕಾಗಿ ನ್ಯೂಯಾರ್ಕ್‌ಗೆ ತೆರಳಿದ್ದರು. ಅಂದು ನಡೆದ ದಾಳಿಯಲ್ಲಿ ಪತ್ನಿ ಸತ್ತಿರಬಹುದು ಎಂದು ಕ್ಯಾಮರಾನ್ ಆತಂಕಗೊಂಡಿದ್ದರು. 

 ಆಗ ಪತ್ನಿ ತಾನು ಕ್ಷೇಮವಾಗಿರುವುದಾಗಿ ದೂರವಾಣಿ ಮೂಲಕ ಸಂಪರ್ಕಿಸಿದಾಗಲೇ ನಿರಾಳವಾಗಿದ್ದು ಎಂದು ಅಲ್ ಜಜೀರಾ ಟಿ.ವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕ್ಯಾಮರಾನ್ ತಮ್ಮ ಅನುಭವವನ್ನು ಬಹಿರಂಗ ಪಡಿಸಿದ್ದಾರೆ.

ಜೀವನ ಬದಲಾಯಿಸಿದ ಆ ಘಟನೆ
ಅರಿಜೋನಾ (ಐಎಎನ್‌ಎಸ್):
ಅಮೆರಿಕ- ಮೆಕ್ಸಿಕೊ ಗಡಿಯಲ್ಲಿನ ಪರಿಸ್ಥಿತಿಯನ್ನು 9/11 ದಾಳಿ ಬದಲಾಯಿಸಿದೆ.ದಾಳಿಯ ನಂತರ ಗಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸೇನೆಯ ಜಮಾವಣೆಯಿಂದಾಗಿ, ಅಮೆರಿಕ ಗಡಿಯೊಳಗೆ ಅಕ್ರಮವಾಗಿ ನುಸುಳುತ್ತಿದ್ದವರನ್ನು ತಡೆಯಲು ಸಾಧ್ಯವಾಗಿದ್ದು, ಅಲ್ಲಿನ ಜೀವನ ಸ್ಥಿತಿಯೇ ಬದಲಾಗಿದೆ.

ಅಮೆರಿಕದ ನೈರುತ್ಯದಲ್ಲಿರುವ ಈ ಪ್ರದೇಶ ನ್ಯೂಯಾರ್ಕ್‌ನಿಂದ ಸಾವಿರಾರು ಮೈಲಿ ದೂರದಲ್ಲಿದ್ದರೂ ಸಹ, ದಾಳಿಯ ನಂತರ ಅಲ್ಲಿ ಹೆಚ್ಚಿನ ಸೇನೆಯನ್ನು ನಿಯೋಜನೆ ಮಾಡಿದ ಪರಿಣಾಮವಾಗಿ ಮಾದಕವಸ್ತು ಕಳ್ಳಸಾಗಣೆಯನ್ನು ತಡೆಯಲಾಗಿದೆ, ಆ ಪ್ರದೇಶದಾದ್ಯಂತ ಬಂಡುಕೋರರನ್ನು ಸದೆಬಡಿದ ಕಾರಣ ಈಗಿನ ಜೀವನ ಸ್ಥಿತಿ ಬದಲಾಗಿದೆ.

ದಾಳಿಯನ್ನು ಸ್ಮರಿಸಿದ ಬರ್ಲುಸ್ಕೋನಿ
ರೋಮ್ (ಎಎಫ್‌ಪಿ):
ಹತ್ತು ವರ್ಷಗಳ ಹಿಂದೆ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದ ದಾಳಿಯನ್ನು ಟಿ.ವಿಯಲ್ಲಿ ನೋಡಿದ ಇಟಲಿಯ ಪ್ರಧಾನ ಮಂತ್ರಿ ಸಿಲ್ವಿಯೊ ಬರ್ಲುಸ್ಕೋನಿ ಆಘಾತಕ್ಕೆ ಒಳಗಾಗಿ ಕಣ್ಣೀರು ಸುರಿಸಿದ್ದರು.

`ಅಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಟಿ.ವಿ ಮೂಲಕ ವೀಕ್ಷಿಸಿ ಜೋರಾಗಿ ಕಿರುಚಿಕೊಂಡಿದ್ದೆ. ನನ್ನಂತೆಯೇ ಹಲವಾರು ಮಂದಿ ಆಘಾತಕ್ಕೆ ಒಳಗಾಗಿದ್ದರು~ ಎಂದು ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

`ಅಲ್ ಖೈದಾ ದುರ್ಬಲವಾಗಿದೆ~
ಲಂಡನ್ (ಎಎಫ್‌ಪಿ):
  ಹಿಂದೆಂದಿಗಿಂತಲೂ ಈಗ ಅಲ್‌ಖೈದಾ ಸಂಘಟನೆ ಅತ್ಯಂತ ದುರ್ಬಲವಾಗಿದೆ ಎಂದು ಬ್ರಿಟನ್ ಹೇಳಿದೆ.

ಅಲ್‌ಖೈದಾ ಬಲವನ್ನು ಮುರಿಯುವಲ್ಲಿ ಅಮೆರಿಕ ಯಶಸ್ವಿಯಾಗಿದ್ದು, ಈಗ ಆ ಸಂಘಟನೆ ಅಪ್ರಸ್ತುತವಾಗಿದೆ ಎಂದು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ವಿಲಿಯಂ ಹೇಗ್ ಹೇಳಿದ್ದಾರೆ.

ಪಾಕ್‌ಗೆ ಯಾತನೆ
ಇಸ್ಲಾಮಾಬಾದ್ (ಐಎಎನ್‌ಎಸ್): 
ಅಮೆರಿಕದ ಮೇಲೆ ನಡೆದ 9/11 ದಾಳಿಯ ನಂತರ ಸಂಘಟಿಸಿದ್ದ ಭಯೋತ್ಪಾದನೆ ವಿರುದ್ಧದ ಸಮರದಿಂದಾಗಿ ಪಾಕಿಸ್ತಾನವು ತುಂಬಾ ಯಾತನೆ ಅನುಭವಿಸಿದೆ. ಅದು ಸುಮಾರು 35,000 ನಾಗರಿಕರನ್ನು ಕಳೆದುಕೊಂಡಿದೆ ಎಂದು ಪ್ರಮುಖ ದೈನಿಕವೊಂದು ವರದಿ ಮಾಡಿದೆ.

ಪಾಕ್  ಪ್ರಮುಖ ಪತ್ರಿಕೆ ಡಾನ್ ತನ್ನ ಸಂಪಾದಕೀಯದಲ್ಲಿ ಈ ರೀತಿ ಬರೆದಿದ್ದು, ದಾಳಿಯ ನಂತರದ ವಿಶ್ವದಲ್ಲಿ  ಪಾಕಿಸ್ತಾನ ಕುರಿತಂತೆ ಜಗತ್ತಿನ ರಾಷ್ಟ್ರಗಳು ಇನ್ನೂ ಹೆಚ್ಚು ಸಂಶಯ ಮತ್ತು ಭಯ ಹೊಂದಿವೆ ಎಂದಿದೆ.
 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT