92 ಸಾವಿರ ಕೋಟಿ ಸಾಲ: ಡಾ.ಪರಮೇಶ್ವರ್

ಗುರುವಾರ , ಜೂಲೈ 18, 2019
28 °C

92 ಸಾವಿರ ಕೋಟಿ ಸಾಲ: ಡಾ.ಪರಮೇಶ್ವರ್

Published:
Updated:

ತುಮಕೂರು: ಕೆಳ ಹಂತದ ಕಾರ್ಯಕರ್ತರನ್ನು ಮರೆತು, ಕಡೆಗಣಿಸಿದ್ದು ಪಕ್ಷಕ್ಕೆ ಈಗ ಅರ್ಥವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.ತಾಲ್ಲೂಕಿನ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾದಲ್ಲಿ ಬುಧವಾರ ನಡೆದ `ಕಾಂಗ್ರೆಸ್ ನಡಿಗೆ-ಜನರ ಬಳಿಗೆ~ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಇದಕ್ಕೂ ಮುಂಚೆ ಕೋರಾ ಗ್ರಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ್ ಅವರಿಗೆ ಗಿಡ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.`ಕಾಂಗ್ರೆಸ್ ನಡಿಗೆ-ಜನರ ಬಳಿಗೆ~ ಕಾರ್ಯಕ್ರಮವು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಆರಂಭವಾಗುತ್ತಿದ್ದು, ಕಾರ್ಯಕರ್ತರಿಗಾಗಿಯೇ ಪಕ್ಷ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕರ್ತರೆ ನಮ್ಮ ಪಕ್ಷದ ಬೆನ್ನೆಲುಬು. ಎಷ್ಟೇ ದೊಡ್ಡ ನಾಯಕರಿದ್ದರೂ ಕಾರ್ಯಕರ್ತರ ಮನೆಬಾಗಿಲಿಗೆ ತೆರಳಬೇಕೆಂದು ಸೂಚಿಸಿದರು.ಕಾಂಗ್ರೆಸ್ ಪಕ್ಷದ ಧ್ಯೇಯ, ಧೋರಣೆಯನ್ನು ಕಾರ್ಯಕರ್ತರಿಗೆ ತಿಳಿಸಿಕೊಡಲಾಗುವುದು. ಯುಪಿಎ ಸರ್ಕಾರದ ಎರಡು ಅವಧಿಯಲ್ಲೂ ಮಾಡಲಾಗಿರುವ ಸಾಧನೆ, ರಾಜ್ಯಕ್ಕೆ ನೀಡಿರುವ ಕೊಡುಗೆ ವಿವರಿಸಲಾಗುವುದು. ಇದಕ್ಕಾಗಿಯೇ ಮಾಹಿತಿ ಪುಸ್ತಕ ಹೊರತರಲಾಗಿದೆ ಎಂದರು.92 ಸಾವಿರ ಕೋಟಿ ಸಾಲ: ಮೂರು ವರ್ಷದ ಭ್ರಷ್ಟ ಬಿಜೆಪಿ ಸರ್ಕಾರದ ದುರಾಡಳಿತವನ್ನು ಕೊನೆಗಾಣಿಸಬೇಕಾಗಿದೆ. ರೂ. 92 ಸಾವಿರ ಕೋಟಿ ಸಾಲವನ್ನು ರಾಜ್ಯದ ಮೇಲೆ ಹೊರಿಸಿರುವ ಮುಖ್ಯಮಂತ್ರಿ ಈ ಹಣವನ್ನು ಯಾರಿಗೆ ಕೊಟ್ಟಿದ್ದಾರೆ ಎಂದು ಹೇಳಬೇಕು. ರೈತರಿಗೆ, ನೀರು, ರಸ್ತೆ, ವಸತಿ ಯಾವುದಕ್ಕೆ ಈ ಹಣವನ್ನು ಎಷ್ಟು ವೆಚ್ಚ ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.ಕಾಂಗ್ರೆಸ್ ಸರ್ಕಾರವಿದ್ದಾಗ ನೇತ್ರಾವತಿ ನದಿ ತಿರುವು ಯೋಜನೆ ಸಮೀಕ್ಷೆಗಾಗಿ ರೂ. 15 ಕೋಟಿ ನೀಡಲಾಗಿತ್ತು. ಬಿಜೆಪಿ ಸರ್ಕಾರ ಆ ಸಮೀಕ್ಷಾ ವರದಿಯನ್ನೂ ತರಿಸಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.ವಿಧಾನಸಭೆ ವಿರೋಧ ಪಕ್ಷದ ನಾಯಕ ಟಿ.ಬಿ.ಜಯಚಂದ್ರ ಮಾತನಾಡಿ, ಕಾವೇರಿ ನ್ಯಾಯಮಂಡಳಿ ಹೆಚ್ಚುವರಿ ನೀರು ಬಳಸಿಕೊಳ್ಳಲು ಅವಕಾಶ ನೀಡಿದ್ದರೂ ಅದನ್ನು ಬಳಸಿಕೊಳ್ಳುವ ಗೋಜಿಗೆ ಸರ್ಕಾರ ಹೋಗಿಲ್ಲ. ರೂ. 500 ಕೋಟಿ ಖರ್ಚು ಮಾಡಿದರೆ ಕೊರಟಗೆರೆ, ಪಾವಗಡ, ಗುಬ್ಬಿ ತಾಲ್ಲೂಕಿಗೆ ಇನ್ನು 5 ಟಿಎಂಸಿ ನೀರು ನೀಡಬಹುದು. ಯೋಜನೆ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದರೆ ಅದನ್ನು ತಿರಸ್ಕರಿಸಿದರು ಎಂದು ದೂರಿದರು.ವಿರೋಧ ಪಕ್ಷದ ಶಾಸಕರ ಕ್ಷೇತ್ರದಲ್ಲಿ ಅಭಿವೃದ್ಧಿಗೆ ತಡೆ ಹಾಕುವ ಮೂಲಕ ಬೆದರಿಕೆ ತಂತ್ರವನ್ನು ಸರ್ಕಾರ ಅನುಸರಿಸುತ್ತಿದೆ. ಮದಲೂರು ಕೆರೆಗೆ ಹೇಮಾವತಿ ನೀರಿಗಾಗಿ ಕೇಂದ್ರ ಸರ್ಕಾರ ರೂ. 61 ಕೋಟಿ ಬಿಡುಗಡೆ ಮಾಡಿದ್ದರೂ ಯೋಜನೆ ಜಾರಿಗೊಳ್ಳದಂತೆ 14 ತಿಂಗಳು ತಡೆ ಹಿಡಿಯಲಾಗಿತ್ತು. ಒತ್ತಡದ ನಂತರ ಯೋಜನೆ ಜಾರಿಗೆ ಟೆಂಡರ್ ಕರೆಯಲಾಗಿದ್ದು ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದರು.ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕೇಂದ್ರದ ಮಾಜಿ ಸಚಿವ ಎಂ.ವಿ. ರಾಜಶೇಖರನ್, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಷಫೀ ಅಹಮದ್, ಶಾಸಕ ರಾಮಸ್ವಾಮಿಗೌಡ, ಎಐಸಿಸಿ ಕಾರ್ಯದರ್ಶಿ ವಿನಯ್‌ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, ಗೋವಾ ಮಾಜಿ ಮುಖ್ಯಮಂತ್ರಿ ಲೂಸಿಯಾ ಫೆಲೋರಿಯಾ, ಮುಖಂಡರಾದ ರಾಣಿ ಸತೀಶ್, ವಿ.ಎಸ್.ಉಗ್ರಪ್ಪ, ಮಹಿಮಾ ಪಟೇಲ್, ಕೃಷ್ಣಪ್ಪ, ಷಡಕ್ಷರಿ, ನಂಜೇಗೌಡ, ಎಲ್.ಹನುಮಂತಯ್ಯ, ಕೆ.ಎನ್.ರಾಜಣ್ಣ, ಜಿ.ಪಂ. ಸದಸ್ಯರು ಹಾಗೂ ಚುನಾಯಿತ ಜನಪ್ರತಿನಿಧಿಗಳು, ಇನ್ನಿತರ ಮುಖಂಡರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry