ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

927 ಕೋಟಿ ಬೆಳೆ ನಷ್ಟ; 945 ಕೋಟಿ ಪರಿಹಾರಕ್ಕೆ ಬೇಡಿಕೆ

*ಕೇಂದ್ರ ಬರ ಅಧ್ಯಯನ ತಂಡದ ಪರಿಶೀಲನೆ *ಇಳುವರಿಯಲ್ಲಿ ಭಾರಿ ಕುಸಿತ; ಮನವರಿಕೆ *ಪರಿಹಾರದ ಬಗ್ಗೆ ಭರವಸೆ, ರೈತರಲ್ಲಿ ಆಶಾಭಾವ
Last Updated 25 ಡಿಸೆಂಬರ್ 2013, 6:05 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ವಿವಿಧ ಗ್ರಾಮಗಳಿಗೆ ಮಂಗಳವಾರ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ, ಪರಿಸ್ಥಿತಿಯ ಪರಿಶೀಲನೆ ನಡೆಸಿತು.

ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಎಸ್‌.ಬಿ.ಸಿನ್ಹ ಮತ್ತು ಕೇಂದ್ರ ಕೃಷಿ ಇಲಾಖೆ ನಿರ್ದೇಶಕ ಡಿ.ಕೆ.ಚೌದರಿ ಅವರ ತಂಡ ತುಮಕೂರು, ಕೊರಟಗೆರೆ, ಮಧುಗಿರಿ, ಶಿರಾ ತಾಲ್ಲೂಕಿನ ಗ್ರಾಮಗಳಿಗೆ ಭೇಟಿ ನೀಡಿತ್ತು. ಈ ಸಂದರ್ಭ ಸ್ಥಳೀಯ ಜನತೆ ಮತ್ತು ಅಧಿಕಾರಿಗಳಿಂದ ಕೇಂದ್ರ ತಂಡದ ಅಧಿಕಾರಿಗಳು ಬರದ ಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.

ಮೂರು ವರ್ಷಗಳಿಂದ ಬರದ ಸ್ಥಿತಿ ಇದ್ದು, ಸಮರ್ಪಕ ಮಳೆ ಬಂದಿಲ್ಲ. 3 ಎಕರೆಗೆ 60 ಕ್ವಿಂಟಲ್‌ ಇಳುವರಿ ಬರಬೇಕಾಗಿದ್ದ ಜೋಳ ಕೇವಲ 8 ಕ್ವಿಂಟಲ್‌ ಬಂದಿದೆ. 20 ಸಾವಿರಕ್ಕೂ ಹೆಚ್ಚು ವೆಚ್ಚವಾಗಿದ್ದು, ವೆಚ್ಚ ಮಾಡಿರುವ ಹಣ ಸಹ ಬರಲಿಲ್ಲ. ಇದು ಇಲ್ಲಿನ ಎಲ್ಲ ರೈತರ ಸಮಸ್ಯೆ ಎಂದು ಜಟ್ಟಿ ಅಗ್ರಹಾರದಲ್ಲಿ ರೈತ ನಾಗಭೂಷಣ ವಿವರಿಸಿದರು.

3 ಎಕರೆಯಲ್ಲಿ ಭತ್ತ ಹಾಕಿದ್ದು, ನೀರಿಲ್ಲದೆ ಎಲ್ಲವೂ ಜೊಳ್ಳಾಗಿದೆ. ಬಿತ್ತಿದ ಶೇಂಗಾ ನಾಶವಾಗಿದ್ದು, ಇದು ಮೂರು ವರ್ಷದ ಸಮಸ್ಯೆ ಎಂದು ಕೊರಟಗೆರೆ ತಾಲ್ಲೂಕಿನ ಜಂಪಯ್ಯನ ಕ್ರಾಸ್‌ನಲ್ಲಿ ರೈತ ಲಕ್ಷ್ಮೀನರಸಯ್ಯ ಹೇಳಿದರು. ಭತ್ತ ಜೊಳ್ಳಾಗಿರುವುದು, ಮುಸುಕಿನ ಜೋಳ, ಶೇಂಗಾ ಮುಂತಾದ ಬೆಳೆಗಳು ನಷ್ಟವಾಗಿರುವ ಬಗ್ಗೆ ರೈತರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಓಬಳಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜನತೆ ವಿವರಿಸಿದರು.

ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯಲ್ಲಿ, ‘ಕಳೆದ 6 ವರ್ಷದಿಂದ ಶೇಂಗಾ ಬೆಳೆ ನಾಶವಾಗಿದೆ. ಎಕರೆಗೆ ರೂ. 10 ಸಾವಿರ ಖರ್ಚು ಬರುತ್ತದೆ. ಆದರೆ ಒಂದು ಪೈಸೆ ಆದಾಯ ಬಂದಿಲ್ಲ. ಕುಡಿಯುವ ನೀರಿಗೂ ತತ್ವಾರ ಇದೆ’ ಎಂದು ರೈತರು ವಿವರಿಸಿದರು. ತಾಲ್ಲೂಕಿನ ಚಿಕ್ಕಮಾಲೂರು, ದೊಡ್ಡಮಾಲೂರು ಕೆರೆ, ಬ್ಯಾಲ್ಯಾ, ದಬ್ಬೇಘಟ್ಟ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿದ್ದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ಬೆಳೆ ನಷ್ಟವಾಗಿರುವ ಬಗ್ಗೆ ಜಿಲ್ಲಾಧಿಕಾರಿ ಕೆ.ಎಸ್‌.ಸತ್ಯಮೂರ್ತಿ ತಂಡಕ್ಕೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ರೂ. 927 ಕೋಟಿ ಬೆಳೆ ನಷ್ಟವಾಗಿದೆ. ಕೃಷಿ ಉತ್ಪಾದನೆ ನಷ್ಟ ರೂ. 380 ಕೋಟಿ, ತೋಟಗಾರಿಕೆ ಬೆಳೆ ರೂ. 547 ಕೋಟಿ ನಷ್ಟವಾಗಿದೆ. ಮೇವಿನ ಬೀಜದ ಕಿಟ್‌ ವಿತರಣೆಗೆ ರೂ. 18 ಕೋಟಿ ಮತ್ತು ಕುಡಿಯುವ ನೀರಿಗಾಗಿ ರೂ. 17 ಕೋಟಿ ಸೇರಿದಂತೆ ರೂ. 945 ಕೋಟಿ ಪರಿಹಾರದ ಅಗತ್ಯವಿದೆ ಎಂಬುದನ್ನು ಮನದಟ್ಟು ಮಾಡಿದರು.

ಜಿಲ್ಲೆಯಲ್ಲಿ ತೆಂಗು, ಅಡಿಕೆ ಸೇರಿದಂತೆ ಶೇ 50ರಷ್ಟು ತೋಟಗಾರಿಕೆ ಬೆಳೆ ನಾಶವಾಗಿದೆ. ಜಿಲ್ಲೆಯಲ್ಲಿ 1340 ಕೆರೆಗಳಿದ್ದು, ಸಾಕಷ್ಟು ಬತ್ತಿ ಹೋಗಿವೆ. ಈ ವರ್ಷ 595 ಮಿ.ಮೀಗೆ 550 ಮಿ.ಮೀ ಮಳೆಯಾಗಿದೆ. ಆದರೆ ಇದೂ ಸಮಯಕ್ಕೆ ಸರಿಯಾಗಿ ಬಾರದ ಕಾರಣ ಬೆಳೆ ಸಂಪೂರ್ಣ ನಾಶವಾಗಿದೆ. ಪಾವಗಡ, ಮಧುಗಿರಿ ಮತ್ತು ಶಿರಾ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅದರಲ್ಲೂ ಮಧುಗಿರಿ ಮತ್ತು ಪಾವಗಡದಲ್ಲಿ ಪ್ಲೋರೈಡ್‌ ಸಮಸ್ಯೆ ತೀವ್ರವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕೇಂದ್ರ ತಂಡದ ಎಸ್‌.ಬಿ.ಸಿನ್ಹ ಮಾತನಾಡಿ, ಇಲ್ಲಿನ ಬರ ಪರಿಸ್ಥಿತಿ ಬಗ್ಗೆ ಶೀಘ್ರದಲ್ಲಿಯೇ ಕೇಂದ್ರ ಸಚಿವರ ಉನ್ನತ ಸಮಿತಿಗೆ ವರದಿ ಸಲ್ಲಿಸಲಾಗುವುದು. ವರದಿಯನ್ನು ಕೃಷಿ ಮತ್ತು ಹಣಕಾಸು ಇಲಾಖೆಗಳು ಪರಿಶೀಲಿಸಿ ಪರಿಹಾರದ ಬಗ್ಗೆ ನಿರ್ಧಾರ ಮಾಡಲಿವೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಸಂಸದ ಜಿ.ಎಸ್‌.ಬಸವರಾಜು, ಶಾಸಕರಾದ ಸುಧಾಕರ್‌ಲಾಲ್‌, ಡಾ.ಎಂ.ಆರ್‌.ಹುಲಿನಾಯ್ಕರ್‌, ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ, ಉಪ ವಿಭಾಗಾಧಿಕಾರಿ ನಕುಲ್‌ ಭಾಗವಹಿಸಿದ್ದರು.

98 ತಾಲ್ಲೂಕುಗಳಲ್ಲಿ ಬರ
ತುಮಕೂರು: ರಾಜ್ಯದ 176 ತಾಲ್ಲೂಕುಗಳಲ್ಲಿ 98 ತಾಲ್ಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಜಿಲ್ಲೆಯ 9 ತಾಲ್ಲೂಕುಗಳು ಬರ ಪೀಡಿತವಾಗಿದ್ದು ಉಳಿದಂತೆ ತಿಪಟೂರು ತಾಲ್ಲೂಕನ್ನೂ ಬರಪೀಡಿತ ಪಟ್ಟಿಗೆ ಸೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು. ರಾಜ್ಯಕ್ಕೆ ವಿಶೇಷ ಬರ ಪರಿಹಾರ ಪ್ಯಾಕೇಜ್‌ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿತ್ತು. ಹೀಗಾಗಿ ಬರ ಅಧ್ಯಯನಕ್ಕೆ ಕೇಂದ್ರ 4 ತಂಡಗಳನ್ನು ಕಳುಹಿಸಿದೆ. ಕೇಂದ್ರದಿಂದ ಬರ ಪರಿಹಾರ ಸಿಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ಸಂಸದ ಜಿಎಸ್‌ಬಿ ಮನವಿ
ಜಿಲ್ಲೆಯಲ್ಲಿ ಕಳೆದ 4 ವರ್ಷದಿಂದ ಬರದ ಸ್ಥಿತಿ ಇದ್ದು, ಈ ವರ್ಷ ಶೇ 70ರಷ್ಟು ಬೆಳೆ ನಾಶವಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸಮಸ್ಯೆ ಇದೆ. ಜಿಲ್ಲೆಗೆ ಒಂದು ಸಾವಿರ ಕೋಟಿ ಅನುದಾನ ನೀಡಬೇಕೆಂದು ಸಂಸದ ಜಿ.ಎಸ್‌­.­ಬಸವರಾಜು ತಂಡದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT