ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9ರಂದು ಗೋಕಾಕ ಬಂದ್‌ಗೆ ಕರೆ

Last Updated 7 ಜನವರಿ 2012, 9:20 IST
ಅಕ್ಷರ ಗಾತ್ರ

ಗೋಕಾಕ: ಗೋಕಾಕನ್ನು ನ್ಯಾಯಾಂಗ ಜಿಲ್ಲೆಯನ್ನಾಗಿ ಘೋಷಿಸುವುದು ಹಾಗೂ  ಎಲ್ಲ ಇಲಾಖೆಗಳ ಕಾರ್ಯಾಲಯ ಸ್ಥಾಪನೆಗೆ ಆಗ್ರಹಿಸಿ ಗೋಕಾಕ ಜಿಲ್ಲಾ ಚಾಲನಾ ಸಮಿತಿ ಇದೇ 9 ರಂದು  ಗೋಕಾಕ ಬಂದ್‌ಗೆ ಕರೆ ನೀಡಿದೆ.

ಶುಕ್ರವಾರ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ  ಸಂಘದ ಅಧ್ಯಕ್ಷ ಎಸ್.ವಿ.ದೇಮಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಚಾಲನಾ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಸಭೆಯನ್ನು ಉದ್ದೇಶಿಸಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಪೂಜೇರಿ ಮಾತನಾಡಿ, ಶನಿವಾರ ಜ. 7ರಂದು ಮುಂಜಾನೆ 11ರಿಂದ 12 ಗಂಟೆಯವರೆಗೆ ರಸ್ತಾ ರೋಕೊ, 12ರಿಂದ 3 ಗಂಟೆಯವರೆಗೆ  ಬಸವೇಶ್ವರ ವೃತ್ತದಲ್ಲಿ ಧರಣಿ ಸತ್ಯಾಗ್ರಹ  ನಡೆಸಲಾಗುವುದು. ಮಧ್ಯಾಹ್ನ  4 ಗಂಟೆಗೆ ನಗರಸಭೆ ಸಮುದಾಯ ಭವನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದರು.

ಪೂರ್ವಭಾವಿ ಸಭೆಯಲ್ಲಿ ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವ ಸಂಬಂಧ ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವುದು ಹಾಗೂ ಸೋಮವಾರ ಕರೆ ನೀಡಲಾಗಿರುವ ಬಂದ್‌ನ ರೂಪರೇಷೆಗಳನ್ನು ನಿರ್ಧರಿಸಲಾಗುವುದು ಎಂದು  ಹೇಳಿದರು.

ಅಶೋಕ ಓಸ್ವಾಲ್, ಶಂಕರ ಮಗೆನ್ನವರ, ಸೋಮಶೇಖರ ಮಗದುಮ್ಮ,  ಯಲ್ಲಪ್ಪ ಮಾದರ, ಎಸ್.ಎ.ಕೋತವಾಲ್, ಬಸವರಾಜ ಖಾನಪ್ಪನವರ, ಕಿರಣ ಡಮಾಮಗರ, ಸಿದ್ಲಿಂಗ ದಳವಾಯಿ, ಡಾ. ರಾಜೇಂದ್ರ ಸಣ್ಣಕ್ಕಿ, ಶಂಕರ ಮಗೆನ್ನವರ, ವಕೀಲ ಬೂದಿಗೊಪ್ಪ ಸಭೆಯಲ್ಲಿ ಮಾತನಾಡಿ, ಜಿಲ್ಲಾ ಪುನರ್ವಿಂಗಡನಾ ಸಮಿತಿಗಳ ಶಿಫಾರಸ್ಸಿನ  ಅನ್ವಯದಂತೆ ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು. ಚಿಕ್ಕೋಡಿಯನ್ನು ನ್ಯಾಯಾಂಗ ಜಿಲ್ಲೆಯನ್ನಾಗಿ  ಘೋಷಣೆ ಮಾಡಲು ಮುಂದಾಗಿರುವ ಕ್ರಮವನ್ನು ಖಂಡಿಸಿದರು.

ಚಿಕ್ಕೋಡಿಯನ್ನು ಶೈಕ್ಷಣಿಕ ಜಿಲ್ಲೆಯನ್ನಾಗಿ  ಘೋಷಿಸಿರುವ ಸರ್ಕಾರ, ಬಹುತೇಕ ಎಲ್ಲ ಇಲಾಖೆಗಳ ಕಚೇರಿಗಳನ್ನು ನೀಡುವುದರ ಮೂಲಕ ಚಿಕ್ಕೋಡಿಗೆ ಜಿಲ್ಲಾ ಕೇಂದ್ರದ ಸ್ಥಾನ ನೀಡಲು ಮುಂದಾಗಿದೆ ಎಂಬ ಅನುಮಾನ ಮೂಡಿದೆ ಎಂದರು.

ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವವರೆಗೆ ನಿರಂತರ ಹೋರಾಟ ಹಮ್ಮಿಕೊಳ್ಳುವ ಅಗತ್ಯವಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಗೋಕಾಕ ಜಿಲ್ಲಾ ಕೇಂದ್ರ ಸ್ಥಾನ ಪಡೆದುಕೊಳ್ಳುವಲ್ಲಿ ಸಾಧ್ಯವಾಗಿಲ್ಲ. ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಹಾಗೂ ಗಣ್ಯ ನಾಗರಿಕರ ಸಲಹೆ ಪಡೆದುಕೊಂಡು ಮುಂದಿನ ಹೋರಾಟ ನಿರ್ಧರಿಸಬೇಕಾಗಿದೆ ಎಂದರು.

ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಸರ್ವಪಕ್ಷಗಳ ನಿಯೋಗವನ್ನು ಬೆಂಗಳೂರಿಗೆ ಕೊಂಡೊಯ್ದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಗೋಕಾಕನ್ನು ನ್ಯಾಯಾಂಗ ಜಿಲ್ಲೆಯನ್ನಾಗಿ ಘೋಷಿಸುವಂತೆ  ಆಗ್ರಹಿಸುವ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ  ವಕೀಲರ ಸಂಘದ ಅಧ್ಯಕ್ಷ ಎಸ್.ವಿ.ದೇಮಶೆಟ್ಟಿ ಮಾತನಾಡಿ, ಮುಂದಿನವಾರ  ಇಲ್ಲಿಯ ವಕೀಲರು ರಾಜ್ಯ  ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಕಂಡು ಗೋಕಾಕದಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆ ಮಾಡುವಂತೆ ಆಗ್ರಹಿಸುವರು ಎಂದು ಹೇಳಿದರು.

ಸಭೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಕೊಣ್ಣೂರ, ಅಶೋಕ ಭಜಂತ್ರಿ, ಚನ್ನಬಸು ರುದ್ರಾಪೂರ, ವಕೀಲ ಬಿ.ಆರ್.ಕೊಪ್ಪ ಹಾಗೂ ವಕೀಲರ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT