ಭಾನುವಾರ, ಮಾರ್ಚ್ 7, 2021
28 °C

e–ಪುಸ್ತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

e–ಪುಸ್ತಕ

ಕನ್ನಡದಲ್ಲಿ ಶಾಸ್ತ್ರಗ್ರಂಥಗಳಿಲ್ಲ ಎಂಬ ಕೊರಗು ಈಗಿನದ್ದೇನೂ ಅಲ್ಲ. ಆದರೆ ಆರೇಳು ದಶಕಗಳ ಹಿಂದೆ ಇಲ್ಲ ಎನ್ನುವ ಕೊರತೆಯನ್ನು ತುಂಬಿಸುವುದಕ್ಕೆ ಅನೇಕರು ತಮ್ಮದೇ ರೀತಿಯಲ್ಲಿ ಪ್ರಯತ್ನಗಳನ್ನು ನಡೆಸುತ್ತಿದ್ದರು.ಈ ಮನೋಭಾವಕ್ಕೆ ಉತ್ತಮ ಉದಾಹರಣೆ ಎನ್ನಬಹುದಾದ ಪುಸ್ತಕ 1955ರಲ್ಲಿ ಪ್ರಕಟವಾಗಿದೆ. ‘ಚಿಕಿತ್ಸಾತತ್ವದೀಪಿಕಾ’ ಎಂಬ ಈ ಕೃತಿಯ ಕರ್ತೃ ಆಯುರ್ವೇದ ವಿದ್ವಾನ್ ಮೋಟಗಾನಹಳ್ಳಿ ಮಹಾದೇವಶಾಸ್ತ್ರಿ. ಮೈಸೂರಿನ ಸರ್ಕಾರಿ ಆಯುರ್ವೇದ ಮತ್ತು ಯುನಾನಿ ಕಾಲೇಜಿನಲ್ಲಿ ಶಿಕ್ಷಕರಾಗಿದ್ದ ಮಹಾದೇವಶಾಸ್ತ್ರಿಗಳು ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಚಿಕಿತ್ಸಾಶಾಸ್ತ್ರದ ಕುರಿತ ಗ್ರಂಥ ರಚಿಸಿದ್ದಾರೆ.ಈ ಗ್ರಂಥ ರಚನೆಗೆ ಪ್ರೇರಣೆಯಾದ ಅಂಶಗಳನ್ನು ಅವರು ಬಹಳ ಚೆನ್ನಾಗಿ ‘ಗ್ರಂಥಕರ್ತರ ನುಡಿ’ಯಲ್ಲಿ ವಿವರಿಸಿದ್ದಾರೆ. ಈ ಕೃತಿ ರಚನೆಗೆ ಅವರಿಗೆ ಪ್ರೇರಣೆಯಾದದ್ದು ಆಯುರ್ವೇದ ವಿದ್ಯಾರ್ಥಿಗಳು ಅಧ್ಯಯನ ಮಾಡಲೇಬೇಕಾದ ‘ಅಷ್ಟಾಂಗಹೃದಯ’ದ ಭಾಷೆ. ವೈದ್ಯಶಾಸ್ತ್ರವನ್ನು ಕಲಿಯುವುದಕ್ಕೆ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಪಾಂಡಿತ್ಯವನ್ನೂ ಪಡೆಯಲೇಬೇಕಾದ ಅನಿವಾರ್ಯತೆ ಇತ್ತು. ಇದನ್ನು ಸಾಧಿಸುವುದಕ್ಕೆ ಎಲ್ಲರಿಗೂ ಆಗುತ್ತಿರಲಿಲ್ಲ.ಸಾಲದ್ದಕ್ಕೆ ಆಯುರ್ವೇದ ಚಿಕಿತ್ಸಾ ವಿಧಾನಗಳನ್ನು ವಿವರಿಸುವ ಅನೇಕ ಗ್ರಂಥಗಳಿದ್ದು, ಅವುಗಳೆಲ್ಲವನ್ನೂ ಹುಡುಕಿ ಓದುವುದು ಮತ್ತೊಂದು ಸಮಸ್ಯೆ. ಇವೆರಡನ್ನೂ ನಿವಾರಿಸುವ ಉದ್ದೇಶದಿಂದ ಈ ಗ್ರಂಥ ರಚನೆಯಾಗಿದೆ. 276 ಪುಟಗಳ ಈ ಗ್ರಂಥ ಅಷ್ಟಾಂಗ ಹೃದಯದಲ್ಲಿರುವ ಅಂಶಗಳಷ್ಟೇ ಅಲ್ಲದೇ ಅದರಾಚೆಗೆ ಇರುವ ಆಯುರ್ವೇದ ಚಿಕಿತ್ಸೆಯ ಆಕರ ಗ್ರಂಥಗಳಲ್ಲಿರುವ ಮಾಹಿತಿಯನ್ನೂ ಒಳಗೊಂಡಿದೆ.ಈ ದೃಷ್ಟಿಯಲ್ಲಿ ಇದು ಜನಸಾಮಾನ್ಯರಿಗೆ ಬರೆದ ಗ್ರಂಥವಲ್ಲ. ಇದು ಆಯುರ್ವೇದ ಅಧ್ಯಯನ ಮಾಡುವ ವಿದ್ಯಾರ್ಥಿಗಳನ್ನೇ ಗಮನದಲ್ಲಿಟ್ಟುಕೊಂಡು ಬರೆದದ್ದು. ಆದರೆ ಇದೊಂದು ಆಧುನಿಕ ಗ್ರಂಥವಾಗುವಂತೆ ಮಾಡಿರುವುದು ಲೇಖಕರ ಆಧುನಿಕ ಮನಸ್ಸು. ವಿವಿಧ ಔಷಧಿಗಳ ಪ್ರಮಾಣಗಳನ್ನು ನೀಡುವಾಗ ತಮ್ಮ ಕಾಲದ ಮಾನಗಳನ್ನು ಬಳಸಿದ್ದಾರೆ.ಔನ್ಸ್ ಇತ್ಯಾದಿಗಳನ್ನು ಬಳಸುವ ಮೂಲಕ ಇದನ್ನು ವಿದ್ಯಾರ್ಥಿಗಳು ವಿಷಯವನ್ನು ತಮ್ಮ ಕಾಲದಲ್ಲಿ ನಿಂತೇ ಅರ್ಥ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಈ ಪುಸ್ತಕಕ್ಕೆ ತಮ್ಮ ಅಧ್ಯಯನವನ್ನು ಸೀಮಿತಗೊಳಿಸಬಾರದೆಂಬ ಉದ್ದೇಶದಿಂದ ಮೂಲ ಶ್ಲೋಕಗಳನ್ನು ಪೂರ್ಣರೂಪದಲ್ಲಿಯೇ ಉಲ್ಲೇಖಿಸಿದ್ದಾರೆ. ಈ ಕೃತಿ ಪ್ರಕಟವಾಗಿ ಆರು ದಶಕಗಳೇ ಕಳೆದರೂ ಇದರ ಮಹತ್ವವೇನೂ ಕಡಿಮೆಯಾಗಿಲ್ಲ.ಆಯುರ್ವೇದ ವಿದ್ಯಾರ್ಥಿಗಳಿಗೆ ಇದು ಆಕರ ಗ್ರಂಥ. ಭಾಷೆ ಮತ್ತು ಇತಿಹಾಸದ ಕುರಿತು ಕೆಲಸ ಮಾಡುವವರು ಪರಿಶೀಲಿಸಬೇಕಾದ ಗ್ರಂಥ. ಈ ಕೃತಿ ಆರ್ಕೈವ್ ತಾಣದಲ್ಲಿ ಲಭ್ಯ. https://goo.gl/2z1jb3 ಕೊಂಡಿ ಬಳಸಿ ಡೌನ್ ಲೋಡ್ ಮಾಡಿಕೊಳ್ಳಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.