ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

facebook ಟೂರಿಸಂ

Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

‘ಫೇಸ್‌ಬುಕ್‌ನಲ್ಲಿದ್ದ  ಹಂಪಿಯ ಮಲ್ಯವಂತ ಪರ್ವತದ ಸೂರ್ಯೋದಯ -ಮಾತಂಗ ಪರ್ವತದ ಸೂರ್ಯಾಸ್ತದ ಚಿತ್ರಗಳು ಉತ್ತರ ಭಾರತದ ಬಹುದೊಡ್ಡ ಗೆಳೆಯರನ್ನು ತಿಂಗಳ ಕೊನೆಗೆ ಹಂಪಿಗೆ ಆಹ್ವಾನಿಸಿವೆ. ಅವರು ಹಂಪಿ ಸುತ್ತಾಡಲು ಒಂದು ವಾರ ಮೀಸಲಿಟ್ಟಿದ್ದಾರೆ..’

ಹೊಸಪೇಟೆಯ ಛಾಯಾಗ್ರಾಹಕ ಶಿವಶಂಕರ್ ಬಣಗಾರ್ ‘ಫೇಸ್‌ಬುಕ್ ಪ್ರವಾಸೋದ್ಯಮ ಪ್ರಚಾರ’ ಕುರಿತು ಹೀಗೆ ಬೆರಗಿನಿಂದ ವಿವರಿಸಿದರು. ಎರಡು ವರ್ಷಗಳಿಂದ ಹಂಪಿ – ಹೊಸಪೇಟೆ ಸುತ್ತಲಿನ ಪ್ರವಾಸಿ ತಾಣದ ವೈವಿಧ್ಯಮಯ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುತ್ತಿರುವ ಶಿವಶಂಕರ್, ಚಿತ್ರಗಳ ಮೂಲಕವೇ ದೇಶದ ಮೂಲೆ ಮೂಲೆಗಳಲ್ಲಿರುವ ಪ್ರವಾಸಿಗರನ್ನು ಹಂಪಿಯತ್ತ ಆಕರ್ಷಿಸುತ್ತಿದ್ದಾರೆ.

ಬರವಣಿಗೆ, ಛಾಯಾಗ್ರಹಣವನ್ನು ವೃತ್ತಿ-ಪ್ರವೃತ್ತಿಯನ್ನಾಗಿಸಿಕೊಂಡಿರುವ ಅವರು, ತಮ್ಮೂರಿನ ಪ್ರವಾಸಿ ತಾಣಗಳ ಪರಿಚಯಕ್ಕಾಗಿ ಈ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡಿದ್ದಾರೆ. ನಿತ್ಯ ಮುಂಜಾನೆ ಮತ್ತು ಸಂಜೆ ಹೊಸಪೇಟೆಯಿಂದ ಹನ್ನೊಂದು ಕಿ.ಮೀ ದೂರದ ಹಂಪಿಗೆ ತೆರಳಿ, ‘ಸೂರಪ್ಪನ ಪ್ರಭೆ’ಯಲ್ಲಿ ಅಂದವಾಗಿ ಕಾಣುವ ಹಂಪಿಯ ವಿವಿಧ ತಾಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾರೆ. ‘ನೆರಳು – ಬೆಳಕಿನ’ ಸರಸದ ನಡುವೆ ಕಾಣುವ ಹಂಪಿಯ ಕಲಾ ವೈಭವಕ್ಕೆ ಹೊಂದುವ ಚುಟುಕು ಸಾಲುಗಳನ್ನು ಬರೆದು, ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುತ್ತಾರೆ.

‘ಹಂಪಿಯ ಚಿತ್ರಗಳ ಮೂಲಕವೇ ಉತ್ತರ ಭಾರತ, ಕೋಲ್ಕತ್ತಾ ಹಾಗೂ ಒಡಿಶಾದ ಕೆಲವರು ಪರಿಚಯವಾಗಿದ್ದಾರೆ. ಮುಂಜಾನೆಯ ಸೂರ್ಯನ ಕಿರಣಗಳ ರಾಶಿಯಲ್ಲಿ ಕಾಣುವ ಹಂಪಿಯ ಬಗ್ಗೆ ಅವರಿಗೆ ಎಲ್ಲಿಲ್ಲದ ಕುತೂಹಲ. ಆ ಚಿತ್ರಗಳನ್ನೇ ಹಿಡಿದುಕೊಂಡು ಈಗ ಹಂಪಿಗೆ ಹೊರಟಿದ್ದಾರೆ’ ಎಂದು ಫೇಸ್ ಬುಕ್ ಚಿತ್ರಗಳ ಪರಿಣಾಮದ ಬಗ್ಗೆ ಶಿವಶಂಕರ್ ವಿವರಿಸುತ್ತಾರೆ.

‘ಪ್ರಾಗೈತಿಕ ಸಂಶೋಧನೆ, ಇತಿಹಾಸ ಹಾಗೂ ಜಾನಪದ ದೃಷ್ಟಿಕೋನಗಳಿಂದ ಹಂಪಿಯನ್ನು ನೋಡಬಹುದು’ ಎನ್ನುವ ಶಿವಶಂಕರ್, ಈ ಮೂರು ದೃಷ್ಟಿಕೋನಗಳಿಂದಲೂ ಚಿತ್ರಗಳನ್ನು ತೆಗೆದು ಪೋಸ್ಟ್ ಮಾಡುತ್ತಿದ್ದಾರೆ. ಹಂಪಿ ಕುರಿತ ಜಾನಪದ ಕಥೆಗಳು, ಇತಿಹಾಸಕಾರರು ತೆರೆದಿಡುವ ದಾಖಲೆಗಳು, ಸಂಶೋಧಕರು ಉತ್ಖನನ ಮಾಡಿ ಅನಾವರಣಗೊಳಿಸಿರುವ ಅಂಶಗಳನ್ನು ಚಿತ್ರಗಳ ಮೂಲಕ ಹಂಚಿಕೊಂಡಿದ್ದಾರೆ.

ವಿಭಿನ್ನ ತಾಣಗಳ ದರ್ಶನ
ಹಂಪಿಯಲ್ಲಿ ‘ಸಾಸಿವೆ ಕಾಳು ಗಣಪ’ ಬಹಳ ಖ್ಯಾತಿ ಪಡೆದ ಜಾಗ. ಆದರೆ ಅದರ ಪಕ್ಕದಲ್ಲೇ ಇರುವ ವಿಶೇಷ ಗಣಪನ ಚಿತ್ರವನ್ನು ನೋಡಬೇಕು. ‘ಹೇಮಕೂಟ’ ಮತ್ತೊಂದು ಜನಪ್ರಿಯ ತಾಣ.

ಅದರ ದಂಡೆಯಲ್ಲಿರುವ ಮಂಟಪಗಳು ಮತ್ತೊಂದು ಇತಿಹಾಸವನ್ನು ಬಿಚ್ಚಿಡುತ್ತವೆ. ಅಚ್ಯುತ ದೇಗುಲ ನೋಡಿ ಬರುವವರು, ಅದರ ಹಿಂದಿನ ಸೂರಿಲ್ಲದ ಮಂಟಪಗಳು, ಕಂಬ ಸಾಲುಗಳನ್ನು ನೋಡಲೇಬೇಕು ಎನ್ನುತ್ತಲೇ, ಹಂಪಿಯ ಜನಪ್ರಿಯ ತಾಣಗಳ ಪಕ್ಕದಲ್ಲೇ ಇರುವ ಅಪರೂಪದ ಜನಪರ ತಾಣಗಳನ್ನು ಶಿವಶಂಕರ್ ಚಿತ್ರಗಳ ಮೂಲಕವೇ ಪರಿಚಯಿಸುತ್ತಾರೆ.

ಪುರಂದರ ದಾಸರ ನೆಲೆ ಎಂದೇ ಹೇಳುವ ಹಂಪಿಯಲ್ಲಿ ಕನಕದಾಸರ ಚಿತ್ರಗಳಿರುವ ಬಂಡೆ ಇದೆ. ಅಂಥ ಸ್ಮಾರಕಗಳ ರಕ್ಷಣೆಯಾಗಬೇಕೆಂದು ಒತ್ತಾಯವನ್ನು ಚಿತ್ರಗಳ ಮೂಲಕವೇ ಮಾಡುತ್ತಾರೆ.

facebook ಟೂರಿಸಂನ ಇನ್ನಷ್ಟು ಸುದ್ದಿಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT