ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ. 27ರಿಂದ ಮಹೀಂದ್ರಾ ಫುಟ್‌ಬಾಲ್ ಚಾಲೆಂಜ್

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಹೀಂದ್ರಾ ಯುವ ಫುಟ್‌ಬಾಲ್ ಚಾಲೆಂಜ್‌ನ ಮೂರನೇ ಆವೃತ್ತಿಯ ಟೂರ್ನಿ ಬೆಂಗಳೂರಿನಲ್ಲಿ ಅಕ್ಟೋಬರ್ 27 ರಂದು ಆರಂಭವಾಗಲಿದೆ. ಯುವ ಪ್ರತಿಭೆಗಳನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಮಹೀಂದ್ರಾ ಆರಂಭಿಸಿರುವ ಈ ಟೂರ್ನಿಯ ಮೊದಲ ಎರಡು ಆವೃತ್ತಿಗಳು ಯಶಸ್ಸು ಕಂಡಿದ್ದವು.

14 ವರ್ಷ ವಯಸ್ಸಿನೊಳಗಿನವರ ಶಾಲಾ ಮಕ್ಕಳಿಗಾಗಿ ನಡೆಯುವ ಈ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಸ್ಕಾಟ್ಲೆಂಡ್‌ನ ಸೆಲ್ಟಿಕ್ ಫುಟ್‌ಬಾಲ್ ಕ್ಲಬ್‌ನಲ್ಲಿ ತರಬೇತಿ ಪಡೆಯುವ ಅವಕಾಶ ಲಭಿಸಲಿದೆ.

ಬೆಂಗಳೂರಿನಲ್ಲಿ ನಡೆಯುವ ಅಂತರ ಶಾಲಾ ಟೂರ್ನಿಯಲ್ಲಿ ಒಟ್ಟು 32 ತಂಡಗಳು ಪಾಲ್ಗೊಳ್ಳಲಿವೆ ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ಹಿರಿಯ ಉಪಾಧ್ಯಕ್ಷ ಎಂ. ಮೋಹನ್ ರಾಜ್ ನುಡಿದರು. ಪಂದ್ಯಗಳು ಬೆಂಗಳೂರು ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿವೆ.

ಇಲ್ಲಿ ಚಾಂಪಿಯನ್ ಆಗುವ ತಂಡ ಅಖಿಲ ಭಾರತ ಅಂತರ ನಗರ ಟೂರ್ನಿಗೆ ಆಯ್ಕೆಯಾಗಲಿದೆ. ಅಲ್ಲಿ ದೆಹಲಿ, ಕೋಲ್ಕತ್ತಾ, ಕೇರಳ, ಮುಂಬೈ ಮತ್ತು ಗೋವಾದ ವಿಜೇತ ಶಾಲಾ ತಂಡಗಳ ಜೊತೆ ಪೈಪೋಟಿ ನಡೆಸಲಿದೆ. ಅಂತರ ನಗರ ಟೂರ್ನಿಯ ತಾಣವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು.

ಅಂತರ ನಗರ ಟೂರ್ನಿಗೆ ಮುನ್ನ ಎಲ್ಲ ಆರು ನಗರಗಳ ವಿಜೇತ ತಂಡ ಹಾಗೂ ಕೋಚ್‌ಗಳಿಗೆ ಸೆಲ್ಟಿಕ್ ಫುಟ್‌ಬಾಲ್ ಕೋಚ್‌ಗಳ ಮಾರ್ಗದರ್ಶನದಲ್ಲಿ ತರಬೇತಿ ಶಿಬಿರ ನಡೆಯಲಿದೆ. ಮಹೀಂದ್ರಾ ಯುವ ಫುಟ್‌ಬಾಲ್ ಚಾಲೆಂಜ್ ಗೆಲ್ಲುವ ತಂಡಕ್ಕೆ 50 ಸಾವಿರ ರೂ. ನಗದು ಬಹುಮಾನ ಲಭಿಸಲಿದ್ದರೆ, `ರನ್ನರ್ ಅಪ್~ ತಂಡ 30 ಸಾವಿರ ರೂ. ಪಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT