ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕ, ಮೀಸಲಾತಿ ಮನಬಂದಂತೆ ಬದಲಿಸಬಹುದು!

Last Updated 13 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ಬೇರೆ ಬೇರೆ ಹುದ್ದೆಗಳ ನೇಮಕಾತಿಗೆ ಪರೀಕ್ಷೆಗಳು ನಡೆದರೆ ಅಭ್ಯರ್ಥಿಗಳ ಅಂಕ ಮತ್ತು ಮೀಸಲಾತಿ ಯಾವುದೇ ಸಂದರ್ಭದಲ್ಲಿಯೂ ಬದಲಾಗಬಹುದು!

ಕೆಪಿಎಸ್‌ಸಿ ನಿಯಮಾವಳಿಯ ಪ್ರಕಾರ ಯಾವುದೇ ಹುದ್ದೆಗೆ ಮೀಸಲಾತಿ ಸೌಲಭ್ಯ ಪಡೆಯುವವರು ಮೀಸಲಾತಿ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಿರಬೇಕು. ಮೀಸಲಾತಿ ಪ್ರಮಾಣ ಪತ್ರವನ್ನು ತಹಶೀಲ್ದಾರ್ ಅಥವಾ ಅದಕ್ಕಿಂತ ಮೇಲು ದರ್ಜೆಯ ಕಂದಾಯ ಅಧಿಕಾರಿಗಳಿಂದ ನೇಮಕಾತಿ ಅಧಿಸೂಚನೆ ಹೊರಡಿಸಿದ ದಿನಾಂಕದ ನಂತರ ಹಾಗೂ ಅರ್ಜಿ ಸಲ್ಲಿಕೆಯ ದಿನಾಂಕದ ಒಳಗೆ ಪಡೆದಿರಬೇಕು.

ಈ ನಿಯಮ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, 2ಎ, 2ಬಿ, 3ಎ, 3ಬಿ ಸೇರಿದಂತೆ ಎಲ್ಲ ವರ್ಗಗಳ ಮೀಸಲಾತಿಗೂ ಅನ್ವಯವಾಗುತ್ತದೆ. ಆದರೆ ನಿಯಮ ಮೀರಿ ನೇಮಕಾತಿಗಳು ನಡೆಯುವುದು ಇಲ್ಲಿ ಅಚ್ಚರಿಯ ವಿಷಯ ಏನಲ್ಲ.1998ರಲ್ಲಿ ಗೆಜೆಟೆಡ್ ಪ್ರೊಬೇಷನರ್ಸ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ಆಶಾ ಪರ್ವೀನ್ ಅವರು ನೀಡಿದ ಜಾತಿ ಪ್ರಮಾಣಪತ್ರ ತಿರಸ್ಕರಿಸಲಾಗಿತ್ತು.ಅವರು 1996ರಲ್ಲಿ ಪಡೆದ ಮೀಸಲಾತಿ ಪ್ರಮಾಣಪತ್ರ ನೀಡಿದ್ದರು. ಹೀಗೆ ಜಾತಿ ಪ್ರಮಾಣಪತ್ರ ತಿರಸ್ಕಾರಗೊಂಡರೆ ಅವರನ್ನು ಸಾಮಾನ್ಯ ವರ್ಗದ ಅಭ್ಯರ್ಥಿ ಎಂದು ಪರಿಗಣಿಸಲು ಅವಕಾಶವಿದೆ.

ಅದರಂತೆ ಆಶಾ ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಗಳನ್ನು ಸಾಮಾನ್ಯ ವರ್ಗದ ಅಡಿಯಲ್ಲಿ ಬರೆದರು. ಆದರೆ ಸಂದರ್ಶನದ ಸಂದರ್ಭದಲ್ಲಿ ಅವರು ಜಾತಿ ಪ್ರಮಾಣಪತ್ರವನ್ನು ಸಲ್ಲಿಸಿದ್ದರಿಂದ ಅವರನ್ನು 2ಬಿ ಮಹಿಳೆ ಮೀಸಲಾತಿ ವರ್ಗಕ್ಕೆ ಸೇರಿಸಲಾಯಿತು. ಇದು ನಿಯಮ ಬಾಹಿರ ವಾಗಿದ್ದರೂ ಅವರಿಗೆ 2ಬಿ ಮೀಸಲಾತಿಯಲ್ಲಿ ತಹಶೀಲ್ದಾರ್ ಹುದ್ದೆಯನ್ನು ನೀಡಲಾಯಿತು ಎಂದು 1998, 1999 ಮತ್ತು 2004ರ ನೇಮಕಾತಿಗಳ ಬಗ್ಗೆ ತನಿಖೆ ನಡೆಸಿದ ಸಿಐಡಿ ಪೊಲೀಸರಿಗೆ ಆಗಿನ ಕೆಪಿಎಸ್‌ಸಿ ಸದಸ್ಯರು ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಗಿನ ಕೆಪಿಎಸ್‌ಸಿ ಸದಸ್ಯರಾದ ಲಿಲಿಯನ್ ಝೇವಿಯರ್, ವೆಂಕಟಸ್ವಾಮಿ, ಡಾ.ಎಚ್.ಎಸ್. ಪಾಟೀಲ್, ದಾಸಯ್ಯ ಮುಂತಾದವರು ಸಿಐಡಿಗೆ ಹೇಳಿಕೆ ನೀಡಿ, ಆಶಾ ಅವರನ್ನು ತಾವು ಸಂದರ್ಶನದ ಸಂದರ್ಭದಲ್ಲಿಯೂ `ಸಾಮಾನ್ಯ ವರ್ಗ' ಎಂದೇ ಪರಿಗಣಿಸ್ದ್ದಿದರೂ, ಅಧ್ಯಕ್ಷ ಡಾ.ಎಚ್.ಎನ್. ಕೃಷ್ಣ ಅವರು ಮಾತ್ರ ಈ ಅಭ್ಯರ್ಥಿಯನ್ನು `2ಬಿ' ಮಹಿಳೆ ಎಂದು ಪರಿಗಣಿಸಿ ಉದ್ಯೋಗ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಹನುಮಂತೇಗೌಡ ಎಂಬ ಅಭ್ಯರ್ಥಿ ಅರ್ಜಿಯ ಜೊತೆಗೆ 3ಎ ಮೀಸಲಾತಿ ಪ್ರಮಾಣ ಪತ್ರ ಸಲ್ಲಿಸಿದ್ದರು. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆಯಲ್ಲಿಯೂ ಅವರನ್ನು 3ಎ ಮೀಸಲಾತಿ ಅಡಿಯಲ್ಲಿಯೇ ಗುರುತಿಸಲಾಗಿತ್ತು. ಅಧ್ಯಕ್ಷ ಡಾ.ಕೃಷ್ಣ ಅವರನ್ನು ಬಿಟ್ಟು ಉಳಿದ ಎಲ್ಲ ಸದಸ್ಯರೂ ಅವರನ್ನು ಸಂದರ್ಶನದ ಸಂದರ್ಭ ದಲ್ಲಿಯೂ 3ಎ ಎಂದೇ ಪರಿಗಣಿಸಿದ್ದರು.

ಅವರಿಗೆ ಒಟ್ಟು 1,147 ಅಂಕ ಲಭಿಸಿತ್ತು. ಆದರೆ ಕೃಷ್ಣ ಅವರು ಈ ಅಭ್ಯರ್ಥಿಯ ಮೀಸಲಾತಿ 3ಎ ಎಂದು ಇರುವುದನ್ನು ಹೊಡೆದು ಹಾಕಿ ಸಾಮಾನ್ಯ ವರ್ಗ ಎಂದು ನಮೂದಿಸಿದರು. ಸಾಮಾನ್ಯ ವರ್ಗದಲ್ಲಿ ಅವರಿಗೆ ಅಸಿಸ್ಟಂಟ್ ಕಂಟ್ರೋಲರ್ ಹುದ್ದೆಯನ್ನು ನೀಡಲಾಯಿತು. ಈ ಅಭ್ಯರ್ಥಿಯನ್ನು 3ಎ ವರ್ಗದಲ್ಲಿಯೇ ಪರಿಗಣಿಸಿದ್ದರೆ ಅವರಿಗೆ ಉಪ ವಿಭಾಗಾಧಿಕಾರಿ ಹುದ್ದೆ ಲಭ್ಯವಾಗುತ್ತಿತ್ತು. ಆದರೆ 3ಎ ವರ್ಗಕ್ಕೆ ಒಂದು ಉಪ ವಿಭಾಗಾಧಿಕಾರಿ ಹುದ್ದೆ ಮಾತ್ರ ಮೀಸಲಿತ್ತು. ಈ ಹುದ್ದೆಗೆ 1087 ಅಂಕವನ್ನು ಪಡೆದ ಕರೀಗೌಡ ಅವರನ್ನು ಆಯ್ಕೆ ಮಾಡಲಾಯಿತು.

ಕರೀಗೌಡ ಅವರು ಈಗ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರ ಸ್ವಾಮಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದಾರೆ.
ಅದೇ ರೀತಿ ಎಚ್.ಜಿ. ಪ್ರಭಾಕರ ಅವರು 3ಎ ಮೀಸಲಾತಿ ವರ್ಗದಲ್ಲಿ ಬರುತ್ತಿದ್ದರೂ ಅವರನ್ನು ಸಾಮಾನ್ಯ ವರ್ಗ ಎಂದು ಪರಿಗಣಿಸಿ ಜಿಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ಧಿ ಅಧಿಕಾರಿ ಯನ್ನಾಗಿ ನೇಮಿಸಲಾಯಿತು. ಅವರಿಗಿಂತ ಕಡಿಮೆ ಅಂಕ ಪಡೆದ ಪ್ರಕಾಶ ಗೌಡ ಅವರನ್ನು ಡಿವೈಎಸ್‌ಪಿ ಹುದ್ದೆಗೆ ಆಯ್ಕೆ ಮಾಡಲಾಯಿತು. 3ಎ ಮೀಸಲಾತಿ ಅಡಿ ಡಿವೈಎಸ್‌ಪಿ ಹುದ್ದೆ ಕೂಡ ಒಂದೇ ಇತ್ತು.

ಅಂಕಗಳನ್ನು ತಿದ್ದಿರುವ ಪ್ರಕರಣಗಳೂ ಸಾಕಷ್ಟು ನಡೆದಿವೆ. ಸಂದರ್ಶನದಲ್ಲಿ ಮೊದಲು 155 ಅಂಕ ಎಂದು ಬರೆದು ಅದನ್ನು 50 ಎಂದು ತಿದ್ದಿದ ಪ್ರಕರಣ ಕೂಡ ಇದೆ. ತಾವು ಅಂಕವನ್ನು ತಿದ್ದಿ ಅಧಿಕೃತ ಸಹಿ ಮಾಡಿದ್ದಾಗಿ  ಸದಸ್ಯ ದಾಸಯ್ಯ ಅವರು ಸಿಐಡಿ ಪೊಲೀಸರಿಗೆ ತಿಳಿಸಿದ್ದಾರೆ. ದರ್ಶನಲ್ಲಿ ಅಭ್ಯರ್ಥಿಯೊಬ್ಬರಿಗೆ ಅಂಕವನ್ನೇ ನೀಡದಿರುವ ಪ್ರಕರಣಗಳೂ ಇವೆ. ಸಂದರ್ಶನದಲ್ಲಿ ಕೆಲವು ಸದಸ್ಯರು ಅಭ್ಯರ್ಥಿ ಯೊಬ್ಬನನ್ನು `ಅನರ್ಹ' ಎಂದು ಬರೆದು ರುಜು ಮಾಡಿದ್ದರೂ, ಆ ಅಭ್ಯರ್ಥಿ ಕೆಲಸ ಗಿಟ್ಟಿಸಿಕೊಂಡ ಉದಾಹರಣೆ ಇದೆ.

1998, 1999 ಮತ್ತು 2004ರಲ್ಲಿ ಕೆಪಿಎಸ್‌ಸಿ ನಡೆಸಿದ ನೇಮಕಾತಿಯಲ್ಲಿ ಅವ್ಯವ ಹಾರ ನಡೆದಿದೆ ಎಂದು ಖಲೀಲ್ ಅಹ್ಮದ್ ಮತ್ತು ಇತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಸೂಚನೆಯಂತೆ ಸಿಐಡಿ ತನಿಖೆ ನಡೆಸಿ ವರದಿಯನ್ನು ಕೋರ್ಟ್‌ಗೆ ನೀಡಿದೆ.1998, 1999 ಮತ್ತು 2004ರಲ್ಲಿ ಒಟ್ಟಾರೆ 734 ಹುದ್ದೆಗಳಿಗೆ ನೇಮಕಾತಿ ನಡೆಸಲಾಗಿತ್ತು.

ಕೆಪಿಎಸ್‌ಸಿ ಸದಸ್ಯರು ಸಿಐಡಿ ಪೊಲೀಸರಿಗೆ ನೀಡಿದ ಹೇಳಿಕೆ ಮತ್ತು ಸಿಐಡಿ ವರದಿಯನ್ನು ಆಧರಿಸಿ `311 ಮಂದಿಯನ್ನು ಅಕ್ರಮವಾಗಿ ನೇಮಕ ಮಾಡಲಾಗಿದೆ' ಎಂದು ಖಲೀಲ್ ಅಹ್ಮದ್ ಮತ್ತು ಇತರರು ಹೈಕೋರ್ಟ್‌ಗೆ ಪಟ್ಟಿಯನ್ನು ನೀಡಿದ್ದಾರೆ. ಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದು ಜುಲೈ 16ರಂದು ಅದು ಮತ್ತೆ ವಿಚಾರಣೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT