ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಿತಕ್ಕೆ ಭಾರದ್ವಾಜ್ ನಕಾರ

ಪೌರಸಂಸ್ಥೆ: `ಸುಪ್ರೀಂ' ತಾಕೀತು * ಇಕ್ಕಟ್ಟಿನಲ್ಲಿ ಶೆಟ್ಟರ್ ಸರ್ಕಾರ
Last Updated 13 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ನಗರ ಪಾಲಿಕೆಗಳು, ನಗರ ಮತ್ತು ಪುರಸಭೆಗಳು ಹಾಗೂ ಪಟ್ಟಣ ಪಂಚಾಯತಿಗಳ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಪೂರ್ಣ ಸಹಕಾರ ನೀಡುವಂತೆ ಸುಪ್ರೀಂ ಕೋರ್ಟ್ ಬುಧವಾರ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ. ಇದರ ನಡುವೆಯೇ ಮಹತ್ವದ ಬೆಳವಣಿಗೆಯೊಂದರಲ್ಲಿ, ರಾಜ್ಯ ಸರ್ಕಾರದ ಸಮ್ಮತಿ ಪಡೆದೇ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದನ್ನು ಕಡ್ಡಾಯಗೊಳಿಸಿ ವಿಧಾನಮಂಡಲದ ಎರಡೂ ಸದನಗಳು ತರಾತುರಿಯಲ್ಲಿ ಅಂಗೀಕರಿಸಿದ್ದ ಮಸೂದೆಗೆ ಸಹಿ ಹಾಕಲು ರಾಜ್ಯಪಾಲ ಹಂಸರಾಜ ಭಾರದ್ವಾಜ್ ನಿರಾಕರಿಸಿದ್ದಾರೆ.

ಹೀಗಾಗಿ ಚುನಾವಣೆಯನ್ನು ಮುಂದೂಡಲು ಶತಾಯುಗತಾಯ ಪ್ರಯತ್ನ ನಡೆಸಿದ್ದ ರಾಜ್ಯ ಸರ್ಕಾರ ಮತ್ತು ವಿವಿಧ ರಾಜಕೀಯ ಪಕ್ಷಗಳಿಗೆ ತೀವ್ರ ಮುಖಭಂಗವಾದಂತಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ಆದೇಶವನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಅಧೀನ ಅಧಿಕಾರಿಗಳು ರಾಜ್ಯ ಚುನಾವಣಾ ಆಯೋಗಕ್ಕೆ ಪೂರ್ಣ ಸಹಕಾರ ನೀಡಬೇಕು. ಈ ನಿರ್ದೇಶನವನ್ನು ಗುರುವಾರದ ಒಳಗಾಗಿ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ತಲುಪಿಸಬೇಕು ಎಂದು ನ್ಯಾ.ಜಿ.ಎಸ್. ಸಿಂಘ್ವಿ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ತಿಳಿಸಿದೆ.

ಚುನಾವಣೆ ಪ್ರಕ್ರಿಯೆಗೆ ಅಡ್ಡಿ ಮಾಡಲು ಯಾವುದೇ ಅಧಿಕಾರಿಗಳು ಪ್ರಯತ್ನ ಮಾಡಬಾರದು ಎಂದು ಪೀಠ ಕಟ್ಟುನಿಟ್ಟಾಗಿ ಹೇಳಿದೆ. ಅಲ್ಲದೆ, ಚುನಾವಣೆ ಮುಂದೂಡಿಕೆ ಕೋರಿ `ದಲಿತ ಸಂಘರ್ಷ ಸಮಿತಿ' ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ(ಪಿಐಎಲ್) ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿ, ಅರ್ಜಿ ಹಿಂದಕ್ಕೆ ಪಡೆಯಲು ಅನುಮತಿ ನೀಡಿದೆ.

`ದಲಿತ ಸಂಘರ್ಷ ಸಮಿತಿ ಸಲ್ಲಿಸಿರುವ ಅರ್ಜಿ ರಾಜ್ಯ ಸರ್ಕಾರದ ವಿರುದ್ಧ ಯಾವುದೇ ಆರೋಪ ಮಾಡದೆ ಇರುವುದನ್ನು ಗಮನಿಸಿದರೆ ಅದು ಮುಸುಕಿನ ಗುದ್ದಾಟ ನಡೆಸುತ್ತಿರುವಂತೆ ಕಾಣುತ್ತಿದೆ' ಎಂದು ವಿಚಾರಣೆ ವೇಳೆ ಪೀಠ ಅಭಿಪ್ರಾಯಪಟ್ಟಿದೆ. `ರಾಜ್ಯ ಸರ್ಕಾರದ ನಡೆಯಲ್ಲಿ ನಿಮಗೆ ದೋಷ ಕಾಣುತ್ತಿಲ್ಲ. ಆದರೆ, ರಾಜ್ಯ ಚುನಾವಣಾ ಆಯೋಗದ ನಡೆಯಲ್ಲಿ ಲೋಪ ಹುಡುಕುತ್ತಿದ್ದೀರಿ. ಸುಪ್ರೀಂ ಕೋರ್ಟ್‌ಗೆ ಬರುವುದು ತಮಾಷೆ ವಿಷಯವಲ್ಲ. ಇದರ ಹಿಂದೆ ಮುಸುಕಿನ ಗುದ್ದಾಟ ಇರುವಂತೆ ಕಾಣುತ್ತಿದೆ' ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಿಂದಕ್ಕೆ ಪಡೆಯಲು `ದಸಂಸ' ಅನುಮತಿ ಕೇಳಿದಾಗ ನ್ಯಾಯಮೂರ್ತಿಗಳು ಅಸಮಾಧಾನದಿಂದಲೇ ಹೇಳಿದರು.

2011ರ ಪರಿಷ್ಕೃತ ಜನಗಣತಿ ಹಾಗೂ ಮೀಸಲು ಪಟ್ಟಿ ಆಧಾರದ ಮೇಲೆ ಚುನಾವಣೆ ನಡೆಸಬೇಕು ಎಂದು ಮನವಿ ಮಾಡಿ ವಿಜಾಪುರದ ನಿವಾಸಿ ರಾಜು ಚವಾಣ್ ಸಲ್ಲಿಸಿದ ಅರ್ಜಿಯನ್ನು ಇದಕ್ಕೂ ಮುನ್ನ ಕೋರ್ಟ್ ವಜಾ ಮಾಡಿತ್ತು. `ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಯಾವುದೇ ತಡೆ ಇಲ್ಲ' ಎಂದು ನ್ಯಾಯಪೀಠ ತಿಳಿಸಿತು. 2007ರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು 2001ರ ಜನಗಣತಿ ಹಾಗೂ ಮೀಸಲು ಪಟ್ಟಿ ಆಧಾರದ ಮೇಲೆ ನಡೆಸಲಾಗಿತ್ತು. ಆದರೆ ಈ ಸಲವೂ ಇದನ್ನೇ ಆಧರಿಸಿ ಚುನಾವಣೆ ನಡೆಸುವ ಆಯೋಗದ ಪ್ರಯತ್ನವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನೂ ಕೋರ್ಟ್ ತಳ್ಳಿ ಹಾಕಿತ್ತು.

ಮಸೂದೆ ತಿರಸ್ಕರಿಸಿದ ರಾಜ್ಯಪಾಲರು (ಬೆಂಗಳೂರು ವರದಿ): ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ದಿನಾಂಕ ನಿಗದಿ ಸಂಬಂಧ ಸರ್ಕಾರದ ಸಮ್ಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ವಿಧಾನಮಂಡಲ ತರಾತುರಿಯಲ್ಲಿ ಅಂಗೀಕರಿಸಿರುವ `ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ'ಗೆ ಅಂಕಿತ ಹಾಕಲು ರಾಜ್ಯಪಾಲರು ನಿರಾಕರಿಸಿದ್ದಾರೆ. ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಗಳವಾರ ಈ ಮಸೂದೆ ಅಂಗೀಕಾರವಾಗಿತ್ತು. ಬುಧವಾರ ಬೆಳಿಗ್ಗೆ 11.30ಕ್ಕೆ ಈ ಮಸೂದೆಯನ್ನು ರಾಜ್ಯಪಾಲರ ಒಪ್ಪಿಗೆಗಾಗಿರಾಜಭವನಕ್ಕೆ ಕಳುಹಿಸಲಾಯಿತು.

ಮಧ್ಯಾಹ್ನ ಕಡತ ನೋಡಿದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಮಸೂದೆಗೆ ಅಂಕಿತ ಹಾಕಲು ನಿರಾಕರಿಸಿದರು ಎನ್ನಲಾಗಿದೆ. `ಇದು ಅಂಗೀಕರಿಸಲು ಯೋಗ್ಯವಾದ ಮಸೂದೆ ಅಲ್ಲ. ಹೀಗಾಗಿ ಇದನ್ನು ತಿರಸ್ಕರಿಸಲಾಗಿದೆ' ಎಂದು ಕಡತದಲ್ಲಿ ಉಲ್ಲೇಖಿಸಿದ್ದಾರೆ ಎಂದು ಗೊತ್ತಾಗಿದೆ. ಕಡತವನ್ನು ಅವರು ಸರ್ಕಾರಕ್ಕೆ ವಾಪಸ್ ಕಳುಹಿಸಿಲ್ಲ. ತಿರಸ್ಕರಿಸಿರುವ ಬಗ್ಗೆ ಸರ್ಕಾರಕ್ಕೆ ಅಧಿಕೃತವಾಗಿ ಇನ್ನೂ ತಿಳಿಸಿಲ್ಲ. ಆದರೆ, ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೆ ಈ ಕುರಿತು ಮೌಖಿಕವಾಗಿ ವಿವರಿಸುವ ಸಾಧ್ಯತೆ ಇದೆ. ಗುರುವಾರ ನೂತನ ಲೋಕಾಯುಕ್ತರು ಅಧಿಕಾರ ವಹಿಸಿಕೊಳ್ಳಲಿದ್ದು, ಅಲ್ಲಿ ಈ ವಿಷಯ ತಿಳಿಸಲಿದ್ದಾರೆ ಎಂದು ಗೊತ್ತಾಗಿದೆ.

ಕಾಂಗ್ರೆಸ್ ನಿಯೋಗ: ಈ ನಡುವೆ ವಿಧಾನಸಭೆ ವಿರೋಧಪಕ್ಷದ ಉಪ ನಾಯಕ ಟಿ.ಬಿ.ಜಯಚಂದ್ರ, ಮುಖಂಡರಾದ ಡಿ.ಕೆ.ಶಿವಕುಮಾರ್, ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಕಾಂಗ್ರೆಸ್‌ನ 15ಕ್ಕೂ ಹೆಚ್ಚು ಮಂದಿ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ಮಸೂದೆಗೆ ಸಹಿ ಹಾಕುವಂತೆ ಮನವಿ ಮಾಡಿದರು.

ಇದನ್ನು ತೀವ್ರವಾಗಿ ವಿರೋಧಿಸಿದ ರಾಜ್ಯಪಾಲರು, ಸಹಿ ಹಾಕಲು ನಿರಾಕರಿಸಿದರು ಎನ್ನಲಾಗಿದೆ. `ಸುಪ್ರಿಂಕೋರ್ಟ್ ತೀರ್ಪಿಗೆ ವಿರುದ್ಧವಾಗಿರುವ ಮಸೂದೆಗಳಿಗೆ ಸಹಿ ಹಾಕುವುದು ಸರಿಯಲ್ಲ' ಎಂದು ಕಾಂಗ್ರೆಸ್ ಮುಖಂಡರಿಗೆ ಕಿವಿಮಾತು ಹೇಳಿದರು ಎಂದು ಗೊತ್ತಾಗಿದೆ. `ನಗರ ಸ್ಥಳೀಯ ಸಂಸ್ಥೆಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸದೆ ರಾಜ್ಯ ಸರ್ಕಾರ ತಪ್ಪು ಮಾಡಿದೆ. ಸಹಿ ಮಾಡುವ ಮೂಲಕ ನಾನ್ಯಾಕೆ ತಪ್ಪು ಮಾಡಲಿ. ಇದು ಸೂಕ್ಷ್ಮ ವಿಷಯ. ಚುನಾವಣೆಗೆ ಸಿದ್ಧರಾಗಬೇಕು' ಎಂದು ಬುದ್ಧಿ ಹೇಳಿ ಕಳುಹಿಸಿದರು ಎನ್ನಲಾಗಿದೆ.

`ಚುನಾವಣೆ ಎದುರಿಸಲು ಎದುರಾಳಿಗಳ ಜತೆ ಹೋರಾಟಕ್ಕೆ ಇಳಿಯಬೇಕು. ಅದು ಬಿಟ್ಟು ಎದುರಾಳಿಗಳ ಜತೆ ಸೇರಿಕೊಂಡು ಚುನಾವಣೆ ಬೇಡ ಅಂದರೆ ಹೇಗೆ? ಹೋಗಿ ಮೊದಲು ಚುನಾವಣೆ ಎದುರಿಸಿ' ಎಂದು ತೀಕ್ಷ್ಣವಾಗಿ ಹೇಳಿದರು ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT