ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗದಾನ ಜೀವ ಉಳಿಸಿ

ವಾರದ ವೈದ್ಯ
ಅಕ್ಷರ ಗಾತ್ರ

`ಆಗಸ್ಟ್ 6, ಅಂಗದಾನ ದಿನ'. ಅಂಗದಾನ ಮಾಡಿದರೆ ಜೀವದಾನ ಮಾಡಿದಂತೆ. ಒಂದು ಜೀವ ಉಳಿಸಿದರೆ ಒಂದಿಡೀ ಕುಟುಂಬವನ್ನು ಉಳಿಸಿದಂತೆ. ಸಾವಿನ ನಂತರ ಅಂಗಗಳು ಮಣ್ಣಿನಲ್ಲಿ ಬೆರೆತು ಹೋಗುವ ಬದಲು ಮತ್ತೊಬ್ಬರ ಬಾಳಿಗೆ ಬೆಳಕಾಗಲಿ ಎಂಬುದು ಅಂಗದಾನ ದಿನಾಚರಣೆಯ ಆಶಯ...

*ಅಂಗ ಕಸಿ ಎಂದರೇನು? ಅಂಗ ದಾನದ ಮಹತ್ವ ತಿಳಿಸಿ.
ಒಬ್ಬ ಜೀವಂತ ವ್ಯಕ್ತಿಯಿಂದ ಅಥವಾ ಮೃತ ದೇಹದಿಂದ ಜೀವಂತ ಅಂಗಗಳನ್ನು ಅಥವಾ ಕೋಶಗಳನ್ನು ತೆಗೆದು ಮತ್ತೊಬ್ಬ ವ್ಯಕ್ತಿಗೆ ಅಳವಡಿಸುವ ಕ್ರಿಯೆಯೇ ಅಂಗ ಕಸಿ. ಯಾವ ವ್ಯಕ್ತಿಯ ಅಂಗ ನಿಷ್ಕ್ರಿಯಗೊಳ್ಳುತ್ತದೋ, ಗುಣಪಡಿಸಲಾಗದ ಹಾನಿಗೆ ಒಳಗಾಗುತ್ತದೋ, ಯಾವುದೇ ಔಷಧ ಅಥವಾ ಚಿಕಿತ್ಸೆಯಿಂದ ಅದನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲವೋ ಅಂತಹ ವ್ಯಕ್ತಿಗೆ ಮಾತ್ರ `ಅಂಗ ಕಸಿ' ಮಾಡಲಾಗುತ್ತದೆ.

ಪ್ರತಿ ವರ್ಷ ಲಕ್ಷಾಂತರ ಜನರು ಅಂಗ ವೈಫಲ್ಯದಿಂದ ಸಾವನ್ನಪ್ಪುತ್ತಿದ್ದಾರೆ. ಆದರೆ ಭಾರತದಲ್ಲಿ ನೆಲೆಯೂರಿರುವ ತಪ್ಪು ಗ್ರಹಿಕೆಗಳು, ನಂಬಿಕೆಗಳಿಂದ ಅಗತ್ಯಕ್ಕೆ ತಕ್ಕಷ್ಟು ಅಂಗಗಳನ್ನು ನೀಡಲು ದಾನಿಗಳು ಮನಸ್ಸು ಮಾಡುತ್ತಿಲ್ಲ.

*ಅಂಗಾಂಗ ದಾನವನ್ನು ಯಾರು ಬೇಕಾದರೂ ಮಾಡಬಹುದೇ?
ಹೌದು, 18 ವರ್ಷ ಮೇಲ್ಪಟ್ಟ ಯಾರಾದರೂ ಅಂಗ ದಾನ ಮಾಡಬಹುದು. 18 ವರ್ಷದ ಒಳಗಿನವರಿಗೆ ಪಾಲಕರ ಅಥವಾ ಪೋಷಕರ ಸಮ್ಮತಿ ಬೇಕಾಗುತ್ತದೆ. ಅಂಗಗಳನ್ನು ಪಡೆಯುವಾಗ ವೈದ್ಯರು ದಾನಿಯ ಆರೋಗ್ಯ, ಅಂಗಗಳ ಆರೋಗ್ಯ ಮುಂತಾದ ಅಂಶಗಳನ್ನು ಪರೀಕ್ಷಿಸಿ ಖಚಿತಪಡಿಸಿಕೊಳ್ಳುತ್ತಾರೆ.

*ಅಂಗ ದಾನ ಕಾನೂನು ಪ್ರಕಾರ ಸಿಂಧುವೇ?
ಹೌದು, ಅಂಗ ದಾನವನ್ನು ಕಾನೂನು ಸಹ ಉತ್ತೇಜಿಸುತ್ತದೆ. ಆದರೆ ಅಂಗದ ಅಕ್ರಮ ಮಾರಾಟ ಕಾನೂನು ಪ್ರಕಾರ ಅಪರಾಧ.

*ಯಾವ ಯಾವ ಕೋಶಗಳನ್ನು ಅಥವಾ ಅಂಗಗಳನ್ನು ದಾನ ಮಾಡಬಹುದು?
ಮೂತ್ರಪಿಂಡ, ಯಕೃತ್ತು, ಶ್ವಾಸಕೋಶ, ಹೃದಯ, ಕಣ್ಣು (ಕಾರ್ನಿಯ) ಹಾಗೂ ಮೇದೋಜೀರಕ ಗ್ರಂಥಿಯನ್ನು ದಾನ ಮಾಡಬಹುದು.

*ಜೀವಂತ ಇರುವಾಗ ಅಂಗ ಅಥವಾ ಕೋಶಗಳನ್ನು ದಾನ ಮಾಡಬಹುದೇ?
ಖಂಡಿತಾ, ಜೀವಂತ ವ್ಯಕ್ತಿ ಎರಡು ಮೂತ್ರಪಿಂಡಗಳಲ್ಲಿ ಒಂದನ್ನು ದಾನ ಮಾಡಬಹುದು. ಅಲ್ಲದೆ, ಯಕೃತ್ತಿನ ಒಂದು ಭಾಗವನ್ನು ದಾನ ಮಾಡಬಹುದು. ದಾನ ಮಾಡಿದ ಕೆಲವು ವಾರಗಳಲ್ಲಿ ಯಕೃತ್ತು ಮತ್ತೆ ತನ್ನ ಮೊದಲಿನ ರೂಪಕ್ಕೆ ತಿರುಗುತ್ತದೆ.

*ಅಂಗಗಳನ್ನು ಯಾರಿಂದ, ಯಾರಿಗೆ ಅಳವಡಿಸಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಬಹುದೇ?
ಯಾವ ದಾನಿಗಳಿಂದ ಪಡೆದ ಅಂಗಗಳನ್ನು ಯಾರಿಗೆ ಕಸಿ ಮಾಡಲಾಗುತ್ತದೆ ಎಂಬ ಸಂಗತಿಯನ್ನು ಬಹಿರಂಗ ಪಡಿಸಲಾಗುವುದಿಲ್ಲ (ದಾನಿಗಳ ಕುಟುಂಬಕ್ಕೆ ಸಹ). ಹಾಗೆಯೇ ತಮ್ಮ ಅಂಗಗಳ ದಾನಿಗಳ ಬಗ್ಗೆ ರೋಗಿಗಳಿಗೂ ತಿಳಿಸುವುದಿಲ್ಲ. ಈ ಎಲ್ಲ ಮಾಹಿತಿಯಲ್ಲೂ ರಹಸ್ಯ ಕಾಪಾಡಿಕೊಳ್ಳಲಾಗುತ್ತದೆ.

*ಅಂಗ ದಾನಿಗಳು ತಮ್ಮ ಅಂಗಾಂಗಗಳನ್ನು ಯಾರಿಗೆ ಅಳವಡಿಸಬೇಕು ಎಂಬುದನ್ನು ನಿರ್ಧರಿಸಬಹುದೇ?
ಹೌದು, ಅದಕ್ಕೆ ಅವಕಾಶ ಇರುತ್ತದೆ.

*ಅಂಗ ದಾನಕ್ಕೆ ಏನಾದರೂ ಶುಲ್ಕ ಇದೆಯೇ?
ಅಂಗ ದಾನ ಮಾಡುವವರಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಆದರೆ ಆ ಅಂಗಗಳನ್ನು ಕಸಿ ಮಾಡುವವರಿಗೆ ಶುಲ್ಕ ಇರುತ್ತದೆ.

*ದಾನಿಯು ತನ್ನ ಕುಟುಂಬಕ್ಕೆ ತಿಳಿಸದೇ ತನ್ನ ಅಂಗದಾನ ಮಾಡಬಹುದೇ?
ದಾನಿ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದವರಾಗಿದ್ದರೆ ಕುಟುಂಬಕ್ಕೆ ತಿಳಿಸದೇ ದಾನ ಮಾಡಬಹುದು.

*ಮೃತರ ಅಂಗ ದಾನ ಮಾಡುವುದರಿಂದ ಅಂತ್ಯ ಸಂಸ್ಕಾರಕ್ಕೆ ವಿಳಂಬ
ಆಗುತ್ತದೆಯೇ?
ಇಲ್ಲ, ಇದರಿಂದ ಅಂತ್ಯ ಸಂಸ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಅಥವಾ ವಿಳಂಬ ಉಂಟಾಗುವುದಿಲ್ಲ.

*ದಾನಿಗಳಿಂದ ಪಡೆಯುವ ಅಂಗಗಳು ಎಷ್ಟು ಸುರಕ್ಷಿತ ಎಂದು ಹೇಗೆ ತಿಳಿಯುವುದು?
ಅಂಗಗಳನ್ನು ನುರಿತ ತಜ್ಞ ವೈದ್ಯರು ವಿವಿಧ ಪರೀಕ್ಷೆಗೆ ಒಳಪಡಿಸಿದ ನಂತರವೇ ಕಸಿ ಮಾಡುತ್ತಾರೆ. ವೈದ್ಯಕೀಯ ಇತಿಹಾಸ, ರಕ್ತ ಪರೀಕ್ಷೆ ಸೇರಿದಂತೆ ಅಗತ್ಯ ತಪಾಸಣೆಯ ನಂತರ ಅಂಗಗಳನ್ನು ಕಸಿ ಮಾಡಲಾಗುತ್ತದೆ.

ಅಂಗದಾನದ ಹೊಂದಾಣಿಕೆಯನ್ನು ಪರೀಕ್ಷಿಸಲು ಅಂಗ ದಾನಿ ಹಾಗೂ ಆ ಅಂಗವನ್ನು ಕಸಿ ಮಾಡುವ ವ್ಯಕ್ತಿಯ ರಕ್ತವನ್ನು `ಲಿಂಫೋಸೈಟ್ ಕ್ರಾಸ್ ಮ್ಯಾಚ್' ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಇವೆರಡೂ ಒಂದಕ್ಕೊಂದು ಸರಿಹೊಂದದಿದ್ದರೆ ಆ ಅಂಗವನ್ನು ಆ ರೋಗಿಗೆ ಕಸಿ ಮಾಡಲು ಸಾಧ್ಯವಿಲ್ಲ.

ಕಸಿ ಶಸ್ತ್ರಚಿಕಿತ್ಸೆ ನಿರ್ವಹಿಸುವ ಮುನ್ನ ನಿರಾಕರಣೆಯ (rejection) ಅವಕಾಶವನ್ನು ತಗ್ಗಿಸಲು ಒಂದು ವಿಶೇಷ ಚುಚ್ಚುಮದ್ದು ನೀಡಲಾಗುತ್ತದೆ.

*ಅಂಗ ದಾನದಿಂದ ಉಂಟಾಗುವ ಸಾಮಾಜಿಕ ಹಾಗೂ ಧಾರ್ಮಿಕ ಅಡ್ಡಿ-ಆತಂಕಗಳ ಬಗ್ಗೆ ತಿಳಿಸಿ.
ಸಾಮಾಜಿಕ ಅಥವಾ ಧಾರ್ಮಿಕ ಅಡ್ಡಿಗಳು ನಮ್ಮ ಮನಸ್ಸಿನಲ್ಲಿಯೇ ಇವೆ. ಅವುಗಳನ್ನು ಕಿತ್ತೊಗೆಯಬೇಕಷ್ಟೆ. ಅಂಗದಾನವನ್ನು ಬಹತೇಕ ಎಲ್ಲಾ ಧರ್ಮಗಳೂ ಪ್ರೋತ್ಸಾಹಿಸುತ್ತವೆ. ಅಂಗಗಳನ್ನು ದಾನ ಮಾಡುವ ಮೂಲಕ ಇನ್ನೊಬ್ಬರಿಗೆ ಜೀವ ದಾನ ಮಾಡುವುದು ಪುಣ್ಯದ ಕೆಲಸ. ಇದರಿಂದ ನಷ್ಟವಂತೂ ಖಂಡಿತಾ ಯಾರಿಗೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT