ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ: 23 ಖಾಲಿ ಹುದ್ದೆ ಶೀಘ್ರ ಭರ್ತಿ

Last Updated 5 ಜನವರಿ 2012, 6:05 IST
ಅಕ್ಷರ ಗಾತ್ರ

ಮಡಿಕೇರಿ: ಸರ್ಕಾರದಿಂದ ಬಿಡುಗಡೆ ಆಗುವ ಹಣವನ್ನು ಸಕಾಲದಲ್ಲಿ ಬಳಸಿಕೊಳ್ಳದಿದ್ದಲ್ಲಿ ಆ ಹಣ ಸರ್ಕಾರಕ್ಕೆ ವಾಪಸಾಗುತ್ತದೆ. ಇದರಿಂದ ಯೋಜನೆಯ ಉದ್ದೇಶ ಸಾರ್ಥಕವಾಗುವುದಿಲ್ಲ ಎಂದು ತಾ.ಪಂ. ಅಧ್ಯಕ್ಷೆ ಕವಿತಾ ಪ್ರಭಾಕರ್ ಎಂದು ಹೇಳಿದರು.

ತಾ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ರಕ್ಷಾ ಸಮಿತಿಗಳನ್ನು ಕಡ್ಡಾಯವಾಗಿ ರಚಿಸಿ ಈ ಸಮಿತಿಗಳಿಗೆ ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ವಿನಿಯೋಗಿಸಲು ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನಲ್ಲಿ ಕೈಗೊಳ್ಳಲಾಗಿರುವ ಶಾಲಾ ಮುಖ್ಯ ಶಿಕ್ಷಕರ ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ 2010-11ರಲ್ಲಿ ಹಣ ಬಿಡುಗಡೆಯಾಗಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲವೇಕೆ? ಎಂದು ಸರ್ವಶಿಕ್ಷಣ ಅಭಿಯಾನ ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿ, ಈಗಾಗಲೇ 22 ಕೊಠಡಿಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ 10 ಕೊಠಡಿಗಳ ಕಾಮಗಾರಿ ಪೂರ್ಣವಾಗಿದೆ. ಉಳಿದ 11 ಕೊಠಡಿಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಅನುದಾನದ ಕೊರತೆಯಿಂದ ಅಪೂರ್ಣವಾಗಿವೆ ಎಂದರು.

ಸರ್ಕಾರಿ ಪ್ರೌಢಶಾಲೆಗಳಿಗೆ ಸಂಬಂಧಿಸಿದ ವೇತನದ ಬಾಬ್ತು ಹಾಗೂ ಪ್ರಗತಿ ವರದಿಯಲ್ಲಿ ನೀಡಿದ ಅಂಶಗಳು ಒಂದಕ್ಕೊಂದು ತಾಳೆಯಾಗುತ್ತಿರಲಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡಿದ ಅಂಕಿ ಅಂಶಗಳಲ್ಲಿ ವೇತನಕ್ಕಾಗಿ ಬಿಡುಗಡೆಯಾದ ಹಣ 28 ಲಕ್ಷ ರೂಪಾಯಿಗಳಾಗಿದ್ದರೆ, ಖರ್ಚಾದದ್ದು 27. 93 ಲಕ್ಷ ರೂಪಾಯಿ ಎಂದು ಉಲ್ಲೆೀಖವಾಗಿತ್ತು.

ಕ್ಷೇತ್ರ ಶಿಕ್ಷಣಾಧಿಕಾರಿ ಇದನ್ನು ಗಮನಿಸದೆ ಸಹಿ ಹಾಕಿರುವ ಬಗ್ಗೆ ಅಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಾ.ಪಂ. ಇಓ ಸತ್ಯನಾರಾಯಣ್, ಅಧಿಕಾರಿಗಳು ನೀಡುತ್ತಿರುವ ಪ್ರಗತಿ ವರದಿಗೂ, ವಸ್ತುಸ್ಥಿತಿಗೂ ತಾಳೆಯಾಗುತ್ತಿಲ್ಲ ಎಂದು ಹೇಳಿದರು.

ಕರಿಕೆಯ ವಿಎಸ್‌ಎಸ್‌ಎನ್‌ನ ಪಡಿತರ ಎಪಿಎಲ್, ಬಿಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿ ಮೇಲೆ ಸಾಗಣೆ ವೆಚ್ಚವೆಂದು 1.50 ರೂಪಾಯಿ, ಮತ್ತಿತರ ಪಡಿತರ ವಸ್ತುಗಳ ಮೇಲೆ ವಿವಿಧ ದರಗಳನ್ನು ಹೆಚ್ಚುವರಿಯಾಗಿ ವಿಧಿಸಿ ಅವುಗಳನ್ನು ಗ್ರಾಹಕರ ಮೇಲೆ ಹೇರಲಾಗುತ್ತಿದೆ ಎಂದು ಅಧ್ಯಕ್ಷರು ಪಡಿತರ ಇಲಾಖಾಧಿಕಾರಿಗಳನ್ನು ಪ್ರಶ್ನಿಸಿದರು.
ಹೀಗೆ ದರದ ಹೊರೆ ಹಾಕುವುದಾದರೆ ಗ್ರಾಹಕರು ಮುಕ್ತ ಮಾರುಕಟ್ಟೆಗೆ ಹೋಗಬಹುದು. ಈ ದರವನ್ನು ಕಡಿಮೆ ಮಾಡಿ ಬಿಪಿಎಲ್ ಪಡಿತರ ಚೀಟಿದಾರರಿಗೆ ವಿಧಿಸುವ ದರವನ್ನೇ ಎಪಿಎಲ್ ಪಡಿತರ ಚೀಟಿದಾರರಗೂ ವಿಧಿಸುವಂತೆ ತಿಳಿಸಿ, ಈ ಬಗ್ಗೆ 15 ದಿನಗಳ ಒಳಗೆ ವರದಿ ನೀಡುವಂತೆ ಸೂಚಿಸಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತೀಜಾ ಮಾತನಾಡಿ, ತಾಪರಿಕಾಡು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಕಾಲಕ್ಕೆ ಕಾರ್ಯಕರ್ತೆ ರಜೆಯನ್ನೂ ಹಾಕದೆ ಕರ್ತವ್ಯದಿಂದ ಬೇಗನೆ ನಿರ್ಗಮಿಸಿದ್ದರು.

ಸಹಾಯಕಿಯನ್ನು ಕೇಳಿದರೆ ಆಕೆಗೆ ಮಾಹಿತಿಯೇ ಇರಲಿಲ್ಲ. ಈ ರೀತಿ ತೆರಳಲು ನಿಯಮವೇನೂ ಇಲ್ಲವೇ? ಎಂದ ಅವರು, ಹಾಗೆಯೇ ಕೊಳಕೇರಿ ಕೂವೆಲೆಕಾಡು ಅಂಗನವಾಡಿ ಕೇಂದ್ರದ ಸಹಾಯಕಿ ರಜೆಯಲ್ಲಿ ತೆರಳಿದ್ದು, ಅಲ್ಲಿ ಪ್ರಸ್ತುತ ಯಾರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲಿ ಯಾರೂ ಇಲ್ಲದಿದ್ದರೆ ಮಕ್ಕಳ ಸ್ಥಿತಿ ಏನು? ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಸಾಮಾನ್ಯವಾಗಿ ಕಾರ್ಯಕರ್ತೆ ರಜೆಯಲ್ಲಿ ತೆರಳಿದಾಗ, ಪಕ್ಕದ ಕೇಂದ್ರದವರಿಗೆ ಪ್ರಭಾರ ಅಧಿಕಾರ ವಹಿಸಿಕೊಟ್ಟು ತೆರಳಬೇಕು. ಅಲ್ಲಿ ಏನಾಗಿದೆ ಎಂದು ಪರಿಶೀಲಿಸಿ ವಿವರಣೆ ನೀಡುವುದಾಗಿ ತಿಳಿಸಿದರು.

ತಾಲ್ಲೂಕಿನಲ್ಲಿ 7 ಕಾರ್ಯಕರ್ತೆಯರ ಹುದ್ದೆ ಹಾಗೂ 16 ಸಹಾಯಕಿಯರ ಹುದ್ದೆ ಖಾಲಿ ಇರುವ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಈ ಹುದ್ದೆಗಳ ಕೊರತೆ ತುಂಬಲು ಪ್ರಕಟಣೆ ನೀಡಿ, ಸ್ಥಳೀಯ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸುವ ಮಾನದಂಡ ಅನುಸರಿಸಲಾಗುವುದು ಎಂದರು.

ತಾಂ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಜಾ ಅಚ್ಚಪ್ಪ ಅವರು ನಾಪೋಕ್ಲುವಿನ ಸರ್ಕಾರಿ ಆರೋಗ್ಯ ಕೇಂದ್ರದ ನರ್ಸ್ ಗಳ ಕಾರ್ಯ ವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  

ಕರಿಕೆ ಆಶ್ರಮ ಶಾಲೆಯ ಮಕ್ಕಳು ಕಜ್ಜಿಯಿಂದ ಬಳಲುತ್ತಿದ್ದು, ನರ್ಸ್‌ಗಳು ಸಮರ್ಪಕವಾಗಿ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಈ ಸಂದರ್ಭ ನಾಪೋಕ್ಲು ಆಸ್ಪತ್ರೆಯ ವೈದ್ಯಾಧಿಕಾರಿಗಳೂ ಆದ ತಾಲ್ಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ. ರವೀಂದ್ರ ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷೆ  ರೇಣುಕಾ ಚೆನ್ನಿಗಯ್ಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT