ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಕಾರ್ಯಕರ್ತೆಯರ ಧರಣಿ

Last Updated 11 ಜೂನ್ 2011, 6:05 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣದ ಸಿಡಿಪಿಒ ಕಚೇರಿ ಮುಂಭಾಗ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಶುಕ್ರವಾರವೂ ಮುಂದುವರೆಯಿತು.

ತಾಲ್ಲೂಕಿನ ಚಿಂತಮಾಕಲದಿನ್ನೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ಸರ್ಕಾರದ ಸುತ್ತೋಲೆಯಂತೆ, ಪಟ್ಟಣದ 2ನೇ ವಾರ್ಡ್‌ನ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆಗೆ ಅವಕಾಶ ಮಾಡಿಕೊಡುವಂತೆ ಆಗ್ರಹಿಸಿ  ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ನೇತೃತ್ವದಲ್ಲಿ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಸಿಡಿಪಿಒ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿದರು.

ತಾಲ್ಲೂಕಿನಲ್ಲಿ ಸುಮಾರು ವರ್ಷಗಳಿಂದ ಕೆಲ ಗ್ರಾಮಗಳಲ್ಲಿ ಸೇವೆ ಸಲ್ಲಿಸಿ ವಿವಿಧ ಅಂಗನವಾಡಿ ಕೇಂದ್ರಗಳಿಗೆ ವರ್ಗಾವಣೆ ನೀಡುವಂತೆ ಆಗ್ರಹಿಸಿ ಗುರುವಾರ ಸಿಐಟಿಯು ಸಿಡಿಪಿಒ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು.

 ಪ್ರತಿಭಟನೆ ಸಂಧರ್ಭದಲ್ಲಿ ಸಿಡಿಪಿಒ ಅಧಿಕಾರಿ ಲಕ್ಷ್ಮದೇವಮ್ಮ ಹಿರಿಯ ಅಧಿಕಾರಿಗಳ ಸಭೆಗೆ ಹಾಜರಿದ್ದ ನಿಮಿತ್ತ ಸ್ಥಳಕ್ಕೆ ಆಗಮಿಸಿರಲಿಲ್ಲ. ಪ್ರತಿಭಟನಾಕಾರರ ಸಮಸ್ಯೆ ಬಗೆಹರಿಯದೆ ಇರುವುದರಿಂದ ಪ್ರತಿಭಟನಾ ಸತ್ಯಾಗ್ರಹ ಶುಕ್ರವಾರವೂ ಮುಂದುವರೆದಿತ್ತು.

ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಕೆ.ರತ್ನಮ್ಮ ಮಾತನಾಡಿ, ಚಿಂತಮಾಕಲದಿನ್ನೆ ಗ್ರಾಮದ ವೆಂಕಟರೋಣಮ್ಮ ಎಂಬ ಅಂಗನವಾಡಿ ಕಾರ್ಯಕರ್ತೆ ಸುಮಾರು ವರ್ಷ ಗಳಿಂದ ಸ್ವಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು.

 ಇದೀಗ ಪಟ್ಟಣದ 2 ನೇ ವಾರ್ಡ್‌ಗೆ ಮದುವೆಯಾಗಿರುವುದರಿಂದ 2ನೇ ವಾರ್ಡ್‌ನ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆ ಸಲ್ಲಿಸಲಾಗಿದೆ.

ವಿವಿಧ ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸಿದ ಕಾರ್ಯಕರ್ತೆಯರಿಗೆ ವರ್ಗಾವಣೆಗೆ ಮೊದಲು ಆದ್ಯತೆ ನೀಡಬೇಕಾಗಿದೆ.

ಕೆಲ ಸಾರ್ವಜನಿಕರು ದುರುದ್ದೇಶದಿಂದ ಪಟ್ಟಣದ 2ನೇ ವಾರ್ಡ್‌ನ ನೂತನ ಅಂಗನವಾಡಿ ಕೇಂದ್ರಕ್ಕೆ ಮತ್ತೊಬ್ಬರನ್ನು ನೇಮಕ ಮಾಡುವಂತೆ ಪ್ರತಿಭಟಿಸಿರುವುದು ಖಂಡನಾರ್ಹವಾಗಿದೆ ಎಂದರು.

ಪ್ರತಿಭಟನಾ ನಿರತ ಸ್ಥಳಕ್ಕೆ ಜಿಲ್ಲಾ ಯೋಜನಾಧಿಕಾರಿ ಗೋಪಾಲಕೃಷ್ಣ ಆಗಮಿಸಿ ಪ್ರತಿಭಟನಾಕಾರರ ಸಮಸ್ಯೆಗಳ ಬಗ್ಗೆ ಆಲಿಸಿದರು. ತದ ನಂತರದಲ್ಲಿ ಪ್ರತಿಕ್ರಿಯಿಸಿ ವರ್ಗಾವಣೆಗಳ ಸಂಬಂಧ ಹಾಗೂ ವಿವಿಧ ಕಾರ್ಯ ಯೋಜನೆಗಳ ಸಂಬಂಧ ಜೂನ್ 15ರಂದು ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ, ಜನಪ್ರತಿನಿಧಿ, ಸಮಿತಿ ಪದಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿದೆ.

ಸಭೆಯಲ್ಲಿ ಸರ್ಕಾರದ ಸುತ್ತೋಲೆಯಂತೆ ವರ್ಗಾವಣೆ ಬಗ್ಗೆ ಚರ್ಚಿಸಲಾಗುವುದು. ಭಾಗ್ಯಲಕ್ಷ್ಮೀ ಯೋಜನೆ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ವಿತರಿಸಲು ಈಗಾಗಲೇ ಸಂಬಂಧಪಟ್ಟ ಸಿಡಿಪಿಒ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲಾಗಿದೆ. ಭಾಗ್ಯಲಕ್ಷ್ಮೀ ಸೀರೆ ಬಹಳ ಕಳಪೆ ಮಟ್ಟದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕರ್ತೆ ಸಮಸ್ಯೆ ಬಗ್ಗೆ ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದಾಗ ಪ್ರತಿಭಟನಾಕಾರರು ಪ್ರತಿಭಟನೆ ವಾಪಸ್ ಪಡೆದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷೆ ಭಾಗ್ಯಮ್ಮ, ಕಾರ್ಯದರ್ಶಿ ಲಕ್ಷ್ಮೀದೇವಮ್ಮ, ತಾಲ್ಲೂಕು ಅಧ್ಯಕ್ಷ ಸಿ.ವೆಂಕಟಲಕ್ಷ್ಮಮ್ಮ, ಡಿವೈಎಫ್‌ಐ ಜಿಲ್ಲಾ ಘಟಕ ಅಧ್ಯಕ್ಷ ಚನ್ನರಾಯಪ್ಪ, ಗ್ರಾ.ಪಂ.ನೌಕರರ ಸಂಘದ ಗೌರವಾಧ್ಯಕ್ಷ ವೆಂಕಟೇಶ್‌ಬಾಬು, ಸಿಐಟಿಯು ಮುಖಂಡ ಮುಸ್ತಾಫ, ಗೀತಮ್ಮ, ಅನ್ನಪೂರ್ಣಮ್ಮ, ನಾಗರತ್ನಮ್ಮ, ಕ್ರಿಕೆಟ್‌ಮೂರ್ತಿ, ಕಂಚುಕೋಟೆ ಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ            ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT